ಪಾಕಿಸ್ತಾನದ ಅರ್ಥ ವ್ಯವಸ್ಥೆಗಿಂತಲೂ ದೊಡ್ಡದು ಟಾಟಾ ಗ್ರೂಪ್ ವ್ಯವಹಾರ, 365 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಲ್ಲಿ 10 ಲಕ್ಷ ಉದ್ಯೋಗಿಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಾಕಿಸ್ತಾನದ ಅರ್ಥ ವ್ಯವಸ್ಥೆಗಿಂತಲೂ ದೊಡ್ಡದು ಟಾಟಾ ಗ್ರೂಪ್ ವ್ಯವಹಾರ, 365 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಲ್ಲಿ 10 ಲಕ್ಷ ಉದ್ಯೋಗಿಗಳು

ಪಾಕಿಸ್ತಾನದ ಅರ್ಥ ವ್ಯವಸ್ಥೆಗಿಂತಲೂ ದೊಡ್ಡದು ಟಾಟಾ ಗ್ರೂಪ್ ವ್ಯವಹಾರ, 365 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಲ್ಲಿ 10 ಲಕ್ಷ ಉದ್ಯೋಗಿಗಳು

ಟಾಟಾ ಗ್ರೂಪ್‌ 30 ಕಂಪನಿಗಳ ದೊಡ್ಡ ಉದ್ಯಮ ಸಾಮ್ರಾಜ್ಯ. ಇದಲ್ಲದೆ, ಈ ಗ್ರೂಪ್‌ ಖರೀದಿಸಿರುವ ಕಂಪನಿಗಳು, ನವೋದ್ಯಮಗಳಲ್ಲಿ ಮಾಡಿರುವ ಹೂಡಿಕೆ ಬೇರೆಯೇ ಇದೆ. ಟಾಟಾ ಗ್ರೂಪ್‌ನ ಒಟ್ಟು ಮೌಲ್ಯ ನೆರೆ ರಾಷ್ಟ್ರ ಪಾಕಿಸ್ತಾನದ ಆರ್ಥಿಕತೆಗಿಂತಲೂ ದೊಡ್ಡದು. 365 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಲ್ಲಿ 10 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಇದರ ವಿವರ ಇಲ್ಲಿದೆ.

ಪಾಕಿಸ್ತಾನದ ಅರ್ಥ ವ್ಯವಸ್ಥೆಗಿಂತಲೂ ದೊಡ್ಡದು ಟಾಟಾ ಗ್ರೂಪ್ ವ್ಯವಹಾರ, 400 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ.
ಪಾಕಿಸ್ತಾನದ ಅರ್ಥ ವ್ಯವಸ್ಥೆಗಿಂತಲೂ ದೊಡ್ಡದು ಟಾಟಾ ಗ್ರೂಪ್ ವ್ಯವಹಾರ, 400 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ.

ಟಾಟಾ ಗ್ರೂಪ್ ಅನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಿದ ರತನ್ ಟಾಟಾ ಅವರು ಬುಧವಾರ (ಅಕ್ಟೋಬರ್ 9) ತಡರಾತ್ರಿ ನಿಧನರಾಗಿದ್ದಾರೆ. ಹೀಗಾಗಿ ಟಾಟಾ ಗ್ರೂಪ್ ವಿಚಾರ ದೇಶಾದ್ಯಂತ ಚರ್ಚೆಗೆ ಒಳಗಾಗಿದೆ. ಸಹಜವಾಗಿಯೇ, ಟಾಟಾ ಗ್ರೂಪ್ ಎಷ್ಟು ದೊಡ್ಡದು?, ಎಷ್ಟು ಕಂಪನಿಗಳಿವೆ, ಮಾರುಕಟ್ಟೆ ಮೌಲ್ಯ ಎಷ್ಟು, ಎಷ್ಟು ಉದ್ಯೋಗಿಗಳಿದ್ದಾರೆ, ಯಾವೆಲ್ಲ ಕ್ಷೇತ್ರದಲ್ಲಿ ಟಾಟಾ ಗ್ರೂಪ್ ಕಂಪನಿಗಳಿವೆ, ಯಾವ್ಯಾವ ದೇಶದಲ್ಲಿವೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಆ ಕುತೂಹಲವನ್ನು ತಣಿಸುವ ಪ್ರಯತ್ನ ನಮ್ಮದು. ಟಾಟಾ ಗ್ರೂಪ್‌ ಮಾರುಕಟ್ಟೆ ಮೌಲ್ಯ ಪಾಕಿಸ್ತಾನದ ಅರ್ಥ ವ್ಯವಸ್ಥೆಗಿಂತ ದೊಡ್ಡದು ಎಂಬ ಅಂಶ ಈಗ ಗಮನಸೆಳೆದಿದೆ. ಟಾಟಾ ಗ್ರೂಪ್‌ ಮನೆಯಲ್ಲಿ ನಿತ್ಯ ಬಳಕೆಯ ಉಪ್ಪು ಒದಗಿಸುವುದರಿಂದ ಹಿಡಿದು ವಿಮಾನ ಯಾನ ತನಕ 10 ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ.

ಟಾಟಾ ಗ್ರೂಪ್ ಎಷ್ಟು ದೊಡ್ಡದು? ಮಾರುಕಟ್ಟೆ ಮೌಲ್ಯ ಎಷ್ಟು

ಟಾಟಾ ಗ್ರೂಪ್ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಟಾಟಾ ಗ್ರೂಪ್‌ 30 ಕಂಪನಿಗಳನ್ನು ಹೊಂದಿದ್ದು, 365 ಶತಕೋಟಿ ಡಾಲರ್ ಮೌಲ್ಯದ ಕಂಪನಿಗಳ ಗುಂಪಾಗಿದೆ. ಈ ಕಂಪನಿಗಳ ಪೈಕಿ 26 ಲಿಸ್ಟೆಡ್ ಕಂಪನಿಗಳು ಅಂದರೆ ಷೇರುಪೇಟೆಯ ಮೂಲಕ ಬಂಡವಾಳ ಪಡೆದುಕೊಂಡಿರುವಂಥ ಕಂಪನಿಗಳಿವೆ. ಟಾಟಾ ಗ್ರೂಪ್‌ ಕಂಪನಿಗಳಲ್ಲಿ ಒಟ್ಟು 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇನ್ನು ಪಾಕಿಸ್ತಾನದ ಅರ್ಥ ವ್ಯವಸ್ಥೆಯಲ್ಲಿ ಅದರ ಮುನ್ನಂದಾಜಿನ ಜಿಡಿಪಿ ಮೊತ್ತ 347 ಶತಕೋಟಿ ಡಾಲರ್‌. ಟಾಟಾ ಗ್ರೂಪ್‌ನ ಮಾರುಕಟ್ಟೆ ಮೌಲ್ಯ 365 ಶತಕೋಟಿ ಡಾಲರ್‌ಗೆ ಹೋಲಿಸಿದರೆ ಕಡಿಮೆ. ಈ ಮಟ್ಟದ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ ಟಾಟಾ ಗ್ರೂಪ್‌.

ಟಾಟಾ ಗ್ರೂಪ್‌ನ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಜೆಮ್‌ಶೆಟ್ಜಿ ಟಾಟಾ ಅವರು 1868ರಲ್ಲಿ ಆರಂಭಿಸಿದ ಉದ್ಯಮ ಇದು. ಭಾರತ ಕೇಂದ್ರಿತವಾದ ಜಾಗತಿಕ ಉದ್ಯಮ ಇದಾಗಿದ್ದು, 10 ಕ್ಷೇತ್ರಗಳಲ್ಲಿ ಟಿಸಿಎಸ್‌, ಟಾಟಾ ಸ್ಟೀಲ್‌, ಟಾಟಾ ಮೋಟಾರ್ಸ್‌, ಟೈಟಾನ್ ಸೇರಿ 30 ಕಂಪನಿಗಳು ಕೆಲಸ ಮಾಡುತ್ತಿವೆ. ಆರು ಖಂಡಗಳ 100 ಕ್ಕೂ ಹೆಚ್ಚು ದೇಶಗಳಲ್ಲಿ ಟಾಟಾ ಗ್ರೂಪ್ ವಹಿವಾಟು ಇದೆ.

ಟಾಟಾ ಗ್ರೂಪ್‌ನಲ್ಲಿರುವ ಕಂಪನಿಗಳು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌), ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್, ಟಾಟಾ ಇಂಟರ್‌ನ್ಯಾಷನಲ್ ಗ್ರೂಪ್‌, ಟಾಟಾ ಎಲ್‌ಕ್ಸಿ, ಟಾಟಾ ಸ್ಟೀಲ್‌, ವೋಲ್ಟಾಸ್‌, ಟಾಟಾ ಪವರ್, ಟಾಟಾ ಪ್ರಾಜೆಕ್ಟ್ಸ್, ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್, ಟಾಟಾ ಹೌಸಿಂಗ್, ಟಾಟಾ ರಿಯಲ್ಟಿ ಆಂಡ್ ಇನ್‌ಫ್ರಾಸ್ಟ್ರಕ್ಚರ್‌, ಟಾಟಾ ಮೋಟಾರ್ಸ್‌, ಟಾಟಾ ಆಟೋಕಾಂಪ್‌ ಸಿಸ್ಟಮ್ಸ್, ಟಾಟಾ ಇಂಟರ್‌ನ್ಯಾಷನಲ್‌ ವೆಹಿಕಲ್ ಅಪ್ಲಿಕೇಶನ್ಸ್‌, ಟಾಟಾ ಕೆಮಿಕಲ್ಸ್, ಟ್ರೆಂಟ್‌, ಟಾಟಾ ಡಿಜಿಟಲ್‌, ಟೈಟಾನ್‌, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಟಾಟಾ ಕ್ಯಾಪಿಟಲ್‌, ಟಾಟಾ ಅಸೆಟ್ ಮ್ಯಾನೇಜ್‌ಮೆಂಟ್‌, ಟಾಟಾ ಎಐಜಿ, ಟಾಟಾ ಎಐಎ ಲೈಫ್‌, ಟಾಟಾ ಇನ್‌ವೆಸ್ಟ್‌ಮೆಂಟ್ ಕಾರ್ಪೊರೇಶನ್‌, ಇಂಡಿಯನ್ ಹೋಟೆಲ್ ಕಂಪನಿ, ತಾಜ್ ಏರ್‌, ಏರ್ ಇಂಡಿಯಾ ಲಿಮಿಟೆಡ್‌, ಟಾಟಾ ಕಮ್ಯೂನಿಕೇಶನ್ಸ್, ಟಾಟಾ ಟೆಲಿಸರ್ವೀಸಸ್, ಟಾಟಾ ಪ್ಲೇ, ಪನಟೋನ್ ಫಿನ್‌ವೆಸ್ಟ್‌, ಟಾಟಾ ಮೆಡಿಕಲ್ ಆಂಡ್ ಡಯಾಗ್ನೋಸ್ಟಿಕ್ಸ್, ಇವಿಷ್ಟೂ ಅಲ್ಲದೆ, ಇನ್ನೂ ಕೆಲವು ಕಂಪನಿಗಳನ್ನು ಟಾಟಾ ಗ್ರೂಪ್ ಖರೀದಿಸಿದೆ.

ಟಾಟಾ ಗ್ರೂಪ್‌ ಮಾಲೀಕತ್ವದಲ್ಲಿ ಟಾಟಾ ಸನ್ಸ್ ಪಾಲು ಹೆಚ್ಚು

ಟಾಟಾ ಗ್ರೂಪ್ ಅನ್ನು ಅರ್ಥ ಮಾಡಿಕೊಳ್ಳೋಣ. ಟಾಟಾ ಗ್ರೂಪ್‌ನ ವ್ಯವಸ್ಥೆ ಸ್ವಲ್ಪ ಭಿನ್ನವಾದುದು. ಏಕ ವ್ಯಕ್ತಿ ನಾಯಕತ್ವಕ್ಕಿಂತ ಸಾಮೂಹಿಕ ಅಥವಾ ಸಾಂಸ್ಥಿಕ ನಾಯಕತ್ವಕ್ಕೆ ಮಹತ್ವ ನೀಡಲಾಗಿದೆ. ಟಾಟಾ ಗ್ರೂಪ್‌ ಕಂಪನಿಗಳ ಪ್ರಮುಖ ಹೂಡಿಕೆದಾರ ಕಂಪನಿ ಟಾಟಾ ಸನ್ಸ್‌. ಟಾಟಾ ಗ್ರೂಪ್‌ ಕಂಪನಿಗಳ ಶೇಕಡ 66 ಪಾಲು ಟಾಟಾ ಸನ್ಸ್ ಬಳಿ ಇದೆ. ಟಾಟಾ ಸನ್ಸ್ ಬಳಿ ಇರು ಶೇಕಡ 66 ಪಾಲು ಹಂಚಿಕೆಯಾಗಿರುವುದು ಹೀಗೆ - ದೊರಾಬ್ಜಿ ಟಾಟಾ ಟ್ರಸ್ಟ್‌ ಶೇಕಡ 28, ರತನ್ ಟಾಟಾ ಟ್ರಸ್ಟ್‌ ಶೇಕಡ 24 ಮತ್ತು ಉಳಿದ ಪಾಲು ಇನ್ನು ಕೆಲವು ಲಿಸ್ಟೆಡ್ ಕಂಪನಿಗಳ ಬಳಿ ಇದೆ. ಈ ಲಿಸ್ಟೆಡ್ ಕಂಪನಿಗಳ ಪೈಕಿ ಟಾಟಾ ಕೆಮಿಕಲ್ಸ್ ಮತ್ತು ಟಾಟಾ ಮೋಟಾರ್ಸ್ ಬಳಿ ಶೇಕಡ 3, ಟಾಟಾ ಪವರ್ ಬಳಿ ಶೇಕಡ 2 ಮತ್ತು ಇಂಡಿಯನ್‌ ಹೋಟೆಲ್ಸ್ ಬಳಿ ಶೇಕಡ 1 ಇದೆ.

ಟಾಟಾ ಗ್ರೂಪ್‌ನ ಮಾರುಕಟ್ಟೆ ಬಂಡವಾಳ 2024ರ ಮಾರ್ಚ್ 31ರ ಅಂತ್ಯಕ್ಕೆ 365 ಶತಕೋಟಿ ಡಾಲರ್‌. ಆದಾಯ 165 ಶತಕೋಟಿ ಡಾಲರ್‌ಗೂ ಹೆಚ್ಚು. 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಈ ಪೈಕಿ ಟಿಸಿಎಸ್‌ ಕಂಪನಿ ಒಂದರಲ್ಲೇ 6.5 ಲಕ್ಷ ಉದ್ಯೋಗಿಗಳಿದ್ದಾರೆ.

ರತನ್ ಟಾಟಾ ನಾಯಕತ್ವದ ಕಾಲಘಟ್ಟದಲ್ಲೇ (1991-2012) ಟಾಟಾ ಗ್ರೂಪ್‌ ತನ್ನ ಮಾರುಕಟ್ಟೆ ಬಂಡವಾಳವನ್ನು ಹಿಗ್ಗಿಸಿ 5 ಲಕ್ಷ ಕೋಟಿ ರೂಪಾಯಿಗೆ ಏರಿಸಿದ್ದು. ಅಷ್ಟೇ ಅಲ್ಲ, 10ಕ್ಕೂ ಹೆಚ್ಚು ಕ್ಷೇತ್ರಗಳಿಗೆ ತನ್ನ ವಹಿವಾಟನ್ನು ವಿಸ್ತರಿಸಿದ್ದು. ಈ ಅವಧಿಯಲ್ಲಿ ಟಾಟಾ ಗ್ರೂಪ್‌ನ ಆದಾಯ 18,000 ಕೋಟಿ ರೂಪಾಯಿಯಿಂದ 5.5 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಯಿತು. ಮಾರುಕಟ್ಟೆ ಬಂಡವಾಳ 30,000 ಕೋಟಿ ರೂಪಾಯಿಯಿಂದ 5 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಯಿತು ಎಂದು 2012ರ ಡಿಸೆಂಬರ್‌ನಲ್ಲಿ ಐಐಎಂ ಬೆಂಗಳೂರಿನಲ್ಲಿ ಪ್ರಶಿಕ್ಷಣಾರ್ಥಿಯೊಬ್ಬರು ಸಲ್ಲಿಸಿದ ಅಧ್ಯಯನ ವರದಿ ವಿವರಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.