Oil Price: ಅಡುಗೆ ಎಣ್ಣೆ ದರ ಇಳಿಕೆ ಸನಿಹ, ಸೋಯಾ, ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಆಮದು ಸುಂಕ ಇಳಿಕೆ ಮಾಡಿದ ಕೇಂದ್ರ ಸರಕಾರ
Oil Price India: ಕೇಂದ್ರ ಸರಕಾರವು ಸಂಸ್ಕರಿತ ಸೋಯಾ ಆಯಿಲ್ ಮತ್ತು ಸನ್‌ಫ್ಲವರ್ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಶೇಕಡ 17.5ರಿಂದ ಶೇಕಡ 12.5ಕ್ಕೆ ನಿನ್ನೆ ಇಳಿಕೆ ಮಾಡಿತ್ತು. ಇದರಿಂದ ಭಾರತದಲ್ಲಿ ಅಡುಗೆ ಎಣ್ಣೆ ದರದಲ್ಲಿ ಇಳಿಕೆಯಾಗಲಿದೆ. ಸರಕಾರದ ಅಧಿಸೂಚನೆ ಪ್ರಕಾರ ನಿನ್ನೆಯಿಂದಲೇ ಆಮದು ಸುಂಕ ಇಳಿಕೆ ಜಾರಿಗೆ ಬರಲಿದೆ.
ನವದೆಹಲಿ: ಕೇಂದ್ರ ಸರಕಾರವು ಸಂಸ್ಕರಿತ ಸೋಯಾ ಆಯಿಲ್ ಮತ್ತು ಸನ್‌ಫ್ಲವರ್ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಶೇಕಡ 17.5ರಿಂದ ಶೇಕಡ 12.5ಕ್ಕೆ ನಿನ್ನೆ ಇಳಿಕೆ ಮಾಡಿತ್ತು. ಇದರಿಂದ ಭಾರತದಲ್ಲಿ ಅಡುಗೆ ಎಣ್ಣೆ ದರದಲ್ಲಿ ಇಳಿಕೆಯಾಗಲಿದೆ. ಸರಕಾರದ ಅಧಿಸೂಚನೆ ಪ್ರಕಾರ ನಿನ್ನೆಯಿಂದಲೇ ಆಮದು ಸುಂಕ ಇಳಿಕೆ ಜಾರಿಗೆ ಬರಲಿದೆ.
ಇದೇ ಸಮಯದಲ್ಲಿ ಈಗ ಎಲ್ಲಾ ಕಚ್ಚಾ ತೈಲಗಳು, ಅಂದ್ರೆ, ಕಚ್ಚಾ ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಸೋಯಾ ಎಣ್ಣೆಯ ಆಮದು ಸುಂಕ ಶೇಕಡ 5ರಷ್ಟು ಕಡಿಮೆಯಾದಂತಾಗಿದೆ. ಸಂಸ್ಕರಿಸಿದ ಖಾದ್ಯ ತೈಲವಾದರೆ ಆಮದು ಸುಂಕ ಶೇಕಡ 13.75ರಷ್ಟು ಇರಲಿದೆ. ಅಂದರೆ, ಸಂಸ್ಕರಿಸಿದ ತೈಲದ ಮೇಲೆ ಶೇಕಡ 12.5 ಆಮದು ಸುಂಕ ಮತ್ತು ಈ ಸುಂಕದ ಮೇಲೆ ಶೇಕಡ 10 ಸೆಸ್ ಇರುತ್ತದೆ.
ಖಾದ್ಯ ತೈಲದ ಬೆಲೆಯನ್ನು ನಿಯಂತ್ರಣದಲ್ಲಿಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರಿ ಪತ್ರಿಕೆ ದಿ ಮಿಂಟ್ ವರದಿ ಮಾಡಿದೆ. "ಕಚ್ಚಾ ಮತ್ತು ಸಂಸ್ಕರಿಸಿದ ಸೋಯಾ, ಸೂರ್ಯಕಾಂತಿ ಎಣ್ಣೆಗಳ ನಡುವೆ ಸುಂಕ ವ್ಯತ್ಯಾಸ ಕಡಿಮೆ ಇದ್ದರೂ, ಸೋಯಾ, ಸೂರ್ಯಕಾಂತಿ ಎಣ್ಣೆಯನ್ನು ವಾಣಿಜ್ಯವಾಗಿ ಆಮದು ಮಾಡಿಕೊಳ್ಳುವುದು ಕಾರ್ಯಸಾಧುವಲ್ಲ. ಆದರೆ, ಇದು ಮಾರುಕಟ್ಟೆಯ ಭಾವನೆ ಮೇಲೆ ಕೊಂಚ ಪರಿಣಾಮ ಬೀರುತ್ತದೆ." ಎಂದು ಭಾರತದ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್‌ನ ಎಕ್ಸಿಕ್ಯುಟಿವ್ ನಿರ್ದೇಶಕರಾದ ಬಿವಿ ಮೆಹ್ತಾ ಅವರು ಹೇಳಿದ್ದಾರೆ.
ನವೆಂಬರ್‌ನಿಂದ ಏಪ್ರಿಲ್ ತಿಂಗಳವರೆಗೆ ತಾಳೆ ಉತ್ಪನ್ನಗಳ ಆಮದು ಗಮನಾರ್ಹವಾಗಿ ಏರಿಕೆ ಕಂಡಿತ್ತು. ಇದಕ್ಕೂ ಹಿಂದಿನ ವರ್ಷದ ಇದೇ ಅವಧಿಯ 3.2 ದಶಲಕ್ಷ ಟನ್‌ಗೆ ಹೋಲಿಸಿದರೆ ಈ ಬಾರಿ ಇದು 4.9 ದಶಲಕ್ಷ ಟನ್‌ಗೆ ತಲುಪಿದೆ. ಆದರೆ, ಸಮಯದಲ್ಲಿ ಸಾಫ್ಟ್ ಎಣ್ಣೆಗಳ ಆಂದು ಕಡಿಮೆಯಾಗಿತ್ತು.
ಕಳೆದ ಎರಡು ತಿಂಗಳಲ್ಲಿ ಸೂರ್ಯಕಾಂತಿ ಮತ್ತು ಸೋಯಾಬಿನ್ ಎಣ್ಣೆಗಳ ಆಮದು ಕೊಂಚ ಹೆಚ್ಚಾಗಿತ್ತು. ಆದರೆ, ಈ ಸಮಯದಲ್ಲಿ ಸಾಫ್ಟ್ ಎಣ್ಣೆಗಳ ಆಮದು ಶೇಕಡ 51ರಿಂದ ಶೇಕಡ 39ಕ್ಕೆ ಕುಸಿದಿತ್ತು.
ಭಾರತದ ಏಪ್ರಿಲ್ ತಿಂಗಳಿನ ಸಸ್ಯಜನ್ಯ ಎಣ್ಣೆಗಳ(ಖಾದ್ಯ ಮತ್ತು ಖಾದ್ಯವಲ್ಲದ) ಆಮದು ಹಿಂದಿನ ತಿಂಗಳಿಗಿಂತ ಶೇಕಡ 10ರಷ್ಟು ಕಡಿಮೆಯಾಗಿದೆ. ತಾಳೆ ಎಣ್ಣೆ ಆಮದು ಶೇಕಡ 31ರಷ್ಟು ಕುಸಿದು 5,05,000 ಟನ್‌ಗಳಿಗೆ ತಲುಪಿದೆ.
ಕೇಂದ್ರ ಸರಕಾರವು ಕಚ್ಚಾ ತಾಳೆ, ಸೋಯಾಬೀನ್, ಸೂರ್ಯಕಾಂತಿ ಎಣ್ಣೆಗಳ ಆಮದು ಸಸುಂಕವನ್ನು ಕಳೆದ ವರ್ಷ ಸೆಪ್ಟೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕಡಿತ ಮಾಡಿತ್ತು. ಖಾದ್ಯ ತೈಲಗಳ ಮೇಲಿನ ಸುಂಕ ರಿಯಾಯಿತಿಯನ್ನು ಮುಂದಿನ ವರ್ಷ ಮಾರ್ಚ್ 31ರವರೆಗೆ ವಿಸ್ತರಿಸಿದೆ.
ಭಾರತವು ಸಸ್ಯಜನ್ಯ ಎಣ್ಣೆಗಳ ಖರೀದಿಯಲ್ಲಿ ಜಗತ್ತಿನ ಅತಿದೊಡ್ಡ ದೇಶ. ಭಾರತವು ವರ್ಷಕ್ಕೆ ಅನುಭೋಗಿಸುವ 24 ಮಿಲಿಯನ್ ಟನ್ ಆಯಿಲ್‌ನಲ್ಲಿ ಶೇಕಡ 60 ಭಾಗವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತವು ವಾರ್ಷಿಕವಾಗಿ ಒಟ್ಟು 14 ಮಿಲಿಯನ್ ಟನ್ ಖಾದ್ಯ ತೈಲ ಆಮದುಮಾಡಿಕೊಳ್ಳುತ್ತದೆ. ಇದರಲ್ಲಿ ಕಚ್ಚಾ ಮತ್ತು ಸಂಸ್ಕರಿತ ಎಣ್ಣೆಗಳ ಪಾಲು ಕ್ರಮವಾಗಿ ಶೇಕಡ 75 ಮತ್ತು ಶೇಕಡ 25 ಆಗಿದೆ.