ತೆರಿಗೆ ರಿಟರ್ನ್ ಸಲ್ಲಿಸುವುದಷ್ಟೇ ಅಲ್ಲ, ಪ್ಲಾನಿಂಗ್ ಕೂಡ ಬಹಳ ಮುಖ್ಯ: ಇನ್‌ಕಮ್ ಟ್ಯಾಕ್ಸ್ ಉಳಿಸುವ 7 ಐಡಿಯಾಗಳು ಇಲ್ಲಿವೆ
ತೆರಿಗೆ ಉಳಿತಾಯದ ಬಗ್ಗೆ ಮುಂಚಿತವಾಗಿ ಪ್ಲಾನ್ ಮಾಡಿದರೆ ಸಾಕಷ್ಟು ಅನುಕೂಲ ಇರುತ್ತದೆ. ಕೊನೆ ಗಳಿಗೆಯ ಗೊಂದಲ, ಹೊರೆಯಿಂದಲೂ ಪಾರಾಗಬಹುದು. ಪರ್ಸನಲ್ ಫೈನಾನ್ಸ್, ಇನ್‌ಕಮ್ ಟ್ಯಾಕ್ಸ್ ವಿವರ, ತೆರಿಗೆ ಉಳಿತಾಯ ಯೋಜನೆ, ಷೇರುಪೇಟೆಯ ತಾಜಾ ಮಾಹಿತಿ ‘ಎಚ್‌ಟಿ ಕನ್ನಡ’ ಜಾಲತಾಣದಲ್ಲಿ ಲಭ್ಯ.
ಪ್ರತಿ ವರ್ಷ ಜನವರಿ ಬರುವವರೆಗೆ ಹಲವರು ಆದಾಯ ತೆರಿಗೆ ಕಡೆಗೆ ಹೆಚ್ಚು ಯೋಚಿಸುವುದಿಲ್ಲ. ಡಿಸೆಂಬರ್ ಕೊನೆಯ ವಾರದಲ್ಲಿ ಕಂಪನಿಗಳು ಆದಾಯ ತೆರಿಗೆ ಉಳಿತಾಯಕ್ಕೆ ಸಂಬಂಧಿಸಿದ ಘೋಷಣೆ (ಡಿಕ್ಲರೇಶನ್) ಮತ್ತು ಹೂಡಿಕೆಯ ಮಾಹಿತಿ ನೀಡುವಂತೆ ಸೂಚಿಸಿ ಇಮೇಲ್‌ಗಳು ಕಳಿಸುತ್ತವೆ. ಇಂಥ ಇಮೇಲ್‌ಗಳನ್ನು ನೋಡಿದ ಮೇಲೆ ಜ್ಞಾನೋದಯವಾದಂತೆ ಹಲವರು ಆದಾಯ ತೆರಿಗೆ ಉಳಿತಾಯದ ದಾರಿಗಳನ್ನು ಹುಡುಕಲು ಶುರು ಮಾಡುತ್ತಾರೆ. ವಾಸ್ತವವಾಗಿ ಆದಾಯ ತೆರಿಗೆ ತುಂಬುವುದು ಹೇಗೆ ಬಾಧ್ಯತೆ (ಕರ್ತವ್ಯ) ಆಗುತ್ತದೆಯೋ, ತೆರಿಗೆ ಉಳಿಸುವುದ ಜನರ ಹಕ್ಕು ಆಗುತ್ತದೆ. ಆದಾಯ ತೆರಿಗೆ ಉಳಿಸಬೇಕು ಎಂದು ಸ್ವತಃ ಸರ್ಕಾರವೂ ಬಯಸುತ್ತದೆ. ಹೀಗಾಗಿಯೇ ತೆರಿಗೆ ಉಳಿಸಲು ಸಾಕಷ್ಟು ಅವಕಾಶಗಳನ್ನೂ ನೀಡಿದೆ. ನಾವು ಅದನ್ನು ಅರ್ಥ ಮಾಡಿಕೊಂಡು ಬಳಸಿಕೊಳ್ಳಬೇಕಷ್ಟೇ. ಉಳಿಸಲು ಇರುವ 10 ಅತ್ಯುತ್ತಮ ಅವಕಾಶಗಳನ್ನು ಇಲ್ಲಿ ವಿವರಿಸಲಾಗಿದೆ.
1) ಕೊನೇ ಗಳಿಗೆಗೆ ಕಾಯಬೇಡಿ: ತೆರಿಗೆ ಉಳಿತಾಯ ಅವಕಾಶಗಳ ಬಗ್ಗೆ ಮಾರ್ಚ್ ತಿಂಗಳಲ್ಲಿ ವ್ಯಾಪಕವಾಗಿ ಜಾಹೀರಾತುಗಳು ಪ್ರಕಟವಾಗುತ್ತವೆ. ನೀವು ತೆರಿಗೆ ಉಳಿತಾಯಕ್ಕಾಗಿ ಮಾರ್ಚ್‌ವರೆಗೆ ಕಾಯಬೇಕಿಲ್ಲ ಎನ್ನುವುದು ನೆನಪಿರಲಿ. ನಿಮ್ಮ ಒಟ್ಟು ಆದಾಯವನ್ನು ಕರಾರುವಕ್ಕಾಗಿ ಲೆಕ್ಕ ಹಾಕಿ ತೆರಿಗೆ ಉಳಿಸಲು ಅಗತ್ಯ ಯೋಜನೆಗಳನ್ನು ಮುಂಚಿತವಾಗಿ ರೂಪಿಸಿಕೊಳ್ಳಬೇಕು. ತರಾತುರಿಯಲ್ಲಿ ದೊಡ್ಡಮೊತ್ತವನ್ನು ಹೂಡಿಕೆ ಮಾಡುವುದಕ್ಕಿಂತಲೂ ನಿಯಮಿತವಾಗಿ ಸರಿಯಾದ ಮೊತ್ತವನ್ನು ವಿನಿಯೋಗಿಸುವುದು ಜಾಣತನವಾಗುತ್ತದೆ.
2) ಐಟಿ ಕಾಯ್ದೆಯ ಸೆಕ್ಷನ್ 80 ಸಿ: ಆದಾಯ ತೆರಿಗೆ ಕಾಯ್ದೆಯ 'ಸೆಕ್ಷನ್ 80ಸಿ' ಎಲ್ಲ ತೆರಿಗೆ ಪಾವತಿದಾರರಿಗೆ ದೊರೆತಿರುವ ಅತ್ಯುತ್ತಮ ಅವಕಾಶ. ನಿರ್ದಿಷ್ಟ ಯೋಜನೆಗಳಲ್ಲಿ ವಿನಿಯೋಗಿಸುವ ಮೂಲಕ ವರ್ಷಕ್ಕೆ 1.5 ಲಕ್ಷ ರೂಪಾಯಿಯಷ್ಟು ತೆರಿಗೆ ಉಳಿಸಬಹುದು. ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡಿದ್ದರೆ ಈ ಅವಕಾಶ ಸಿಗುವುದಿಲ್ಲ.
3) ಜನಪ್ರಿಯ ಉಳಿತಾಯ ಯೋಜನೆಗಳು: ಸೆಕ್ಷನ್ 80 ಸಿ ಅಡಿಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ (Employees' Provident Fund - EPF), ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund - PPF), 5 ವರ್ಷ ಅವಧಿಯ ಬ್ಯಾಂಕ್ ಎಫ್‌ಡಿ, ಜೀವವಿಮೆ ಪಾಲಿಸಿ, ಇಎಲ್‌ಎಸ್‌ಎಸ್ (Equity Linked Savinge Schemes - ELSS mutual funds), ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme - NPS) ಇತ್ಯಾದಿ ಯೋಜನೆಗಳು ಸೇರುತ್ತವೆ.
4) ಸಂಬಳವನ್ನು ಸರಿಯಾಗಿ ರೂಪಿಸಿಕೊಳ್ಳಿ: ಹಲವು ಕಂಪನಿಗಳು ತೆರಿಗೆ ಉಳಿತಾಯಕ್ಕಾಗಿ ಸಂಬಳವನ್ನು ಮರುಹೊಂದಾಣಿಕೆ ಮಾಡಿಕೊಡುತ್ತವೆ. ಪುಸ್ತಕ ಖರೀದಿ, ಬಟ್ಟೆ ಖರೀದಿ, ಸಮವಸ್ತ್ರ, ಕೋರ್ಸ್‌ಗಳಿಗಾಗಿ ಶುಲ್ಕ, ಪೆಟ್ರೋಲ್ ದರ, ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ವಿನಿಯೋಗಿಸುವ ಹಣವನ್ನು "ಮರುಪಾವತಿ" ಎಂದು ತೋರಿಸುವ ಮೂಲಕ ತೆರಿಗೆ ಉಳಿಸಲು ನೆರವಾಗುತ್ತವೆ. ಇಂಥ ಅವಕಾಶಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಸಂಬಳವನ್ನು ಮರು ಹೊಂದಾಣಿಕೆ ಮಾಡಿಕೊಡಲು ನಿಮ್ಮ ಕಂಪನಿಯ ವೇತನ ವಿಭಾಗದೊಂದಿಗೆ ಸಮಾಲೋಚನೆ ನಡೆಸಿ. ಇದರಿಂದ ಕಂಪನಿಗಳಿಗೂ ನಷ್ಟ ಏನೂ ಇರುವುದಿಲ್ಲ.
5) ವಿಪಿಎಫ್, ಎನ್‌ಪಿಎಸ್ ಬಗ್ಗೆ ಯೋಚಿಸಿ: ಕಂಪನಿಗಳು ಕಡ್ಡಾಯವಾಗಿ ಕಟಾವಣೆ (ಡಿಡಕ್ಷನ್) ಮಾಡಬೇಕಾದ ಇಪಿಎಫ್ ಮೊತ್ತದ ಜೊತೆಗೆ ಹೆಚ್ಚುವರಿಯಾಗಿ ಉದ್ಯೋಗಿಗಳೂ ವಿನಿಯೋಗಿಸಲು ಅವಕಾಶ ಇರುತ್ತದೆ. ಇದನ್ನೇ ವಿಪಿಎಫ್ (Voluntary Provident Fund -VPF) ಎನ್ನುತ್ತಾರೆ. ಇದು ನಿಮ್ಮ ಭವಿಷ್ಯಕ್ಕೆ ನೆರವಾಗುವ ಉತ್ತಮ ಯೋಜನೆ. ಇದರ ಜೊತೆಗೆ ಎನ್‌ಪಿಎಸ್ ಯೋಜನೆಯ ಮೂಲಕ ನೀವು ಪಿಂಚಣಿಗಾಗಿ ಹಣ ಉಳಿತಾಯ ಮಾಡುವುದಿದ್ದರೆ, ಅದನ್ನು ನಿಮ್ಮ ಪರವಾಗಿ ನಿಮ್ಮ ಕಂಪನಿಯೇ ಪಾವತಿಸಿದರೆ ಅದಕ್ಕೂ ತೆರಿಗೆ ವಿನಾಯ್ತಿ ಸಿಗುತ್ತದೆ.
6) ಮನೆ ಸಾಲ ಬಳಸಿಕೊಳ್ಳಿ: ಮನೆ ಸಾಲದ ಅಸಲು ಮತ್ತು ಬಡ್ಡಿ ಪಾವತಿಯ ಮೇಲೆ ತೆರಿಗೆ ವಿನಾಯ್ತಿ ಸಿಗುತ್ತದೆ. ಇದು 'ಸೆಕ್ಷನ್ 80ಸಿ' ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ನಿಮ್ಮ ಸ್ವಂತ ಮನೆಯ ಖರೀದಿಯೂ ನಿಮಗೆ ತೆರಿಗೆ ಉಳಿಸಲು ನೆರವಾಗಬಹುದು. ಇದು ಹಳೆಯ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಮಾತ್ರ ಸಿಗುವ ಸೌಲಭ್ಯ ಎನ್ನುವುದು ನೆನಪಿರಲಿ.
7) ಆರೋಗ್ಯ ವಿಮೆ ಖರೀದಿಸಿ: ನಿಮಗೆ, ನಿಮ್ಮ ಪೋಷಕರಿಗೆ ಖರೀದಿಸುವ ಆರೋಗ್ಯ ವಿಮೆಯಿಂದ ಸಾಕಷ್ಟು ಅನುಕೂಲಗಳಿವೆ. ಸ್ವತಃ ನಿಮಗೆ ಮತ್ತು ನಿಮ್ಮ ಮೊದಲ ಸುತ್ತಿನ ಕುಟುಂಬ ಸದಸ್ಯರಿಗೆ (ಸಂಗಾತಿ, ಮಕ್ಕಳು) ಖರೀದಿಸುವ ಆರೋಗ್ಯ ವಿಮೆಯ ಮೇಲೆ 25,000 ರೂ ಮತ್ತು ಪೋಷಕರಿಗೆ ಖರೀದಿಸುವ ಆರೋಗ್ಯ ವಿಮೆಯ ಮೇಲೆ 50,000 ರೂ ತೆರಿಗೆ ಉಳಿತಾಯ ಸಾಧ್ಯವಿದೆ. ಇದರ ಜೊತೆಗೆ ಒಂದು ವರ್ಷದಲ್ಲಿ ನೀವು ಖರ್ಚು ಮಾಡುವ 50,000 ಮೊತ್ತದವರೆಗಿನ ವೈದ್ಯಕೀಯ ವೆಚ್ಚಕ್ಕೂ ತೆರಿಗೆ ವಿನಾಯ್ತಿ ಸಿಗುತ್ತದೆ.
ತೆರಿಗೆ ಉಳಿತಾಯದ ಬಗ್ಗೆ ಮುಂಚಿತವಾಗಿ ಪ್ಲಾನ್ ಮಾಡಿದರೆ ಸಾಕಷ್ಟು ಅನುಕೂಲ ಇರುತ್ತದೆ. ಕೊನೆ ಗಳಿಗೆಯ ಗೊಂದಲ, ಹೊರೆಯಿಂದಲೂ ಪಾರಾಗಬಹುದು. ಇಂಥ ಇನ್ನಷ್ಟು ಲೇಖನಗಳನ್ನು kannada.hindustantimes.com ಜಾಲತಾಣದಲ್ಲಿ ಓದಬಹುದು.
(ಗಮನಿಸಿ: ಇಲ್ಲಿರುವ ಮಾಹಿತಿಯನ್ನು ಓದುಗರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮಾತ್ರವೇ ನೀಡಲಾಗಿದೆ. ಇದನ್ನು ಹೂಡಿಕೆ ಶಿಫಾರಸು ಎಂದು ಪರಿಗಣಿಸಬೇಕಿಲ್ಲ. ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಪ್ರಮಾಣೀಕೃತ ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚಿಸಿ.)