Opening Bell: ಫೆಡರಲ್ ಬ್ಯಾಂಕ್‌ನಿಂದ ಬಡ್ಡಿದರ ಕಡಿತದ ಸೂಚನೆ; ಇಂದು ಭಾರತದ ಷೇರುಪೇಟೆ ಪುಟಿದೇಳುವ ಸಾಧ್ಯತೆ, ಈ ಷೇರುಗಳನ್ನು ಗಮನಿಸಿ
ಭಾರತದ ಷೇರು ಮಾರುಕಟ್ಟೆಯು ಗುರುವಾರ (ಮಾರ್ಚ್ 21) ಕೂಡ ಉತ್ತಮ ಆರಂಭಕ್ಕೆ ಸಜ್ಜಾಗಿದೆ. ಕಳೆದ ಮೂರು ದಿನಗಳಿಂದ ಧನಾತ್ಮಕ ಆರಂಭ ಕಾಣುತ್ತಿದೆ ಪೇರುಷೇಟೆ. ಅಮೆರಿಕ ಕೇಂದ್ರಿಯ ಬ್ಯಾಂಕ್ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಹೂಡಿಕೆದಾರರಲ್ಲಿ ನೆಮ್ಮದಿ ಮೂಡಿಸಿದೆ. ಆ ಕಾರಣಕ್ಕೆ ಇಂದು ಲಾಭದ ವಹಿವಾಟು ನಡೆಯುವ ಸೂಚನೆ ಕಾಣುತ್ತಿದೆ.
ಬೆಂಗಳೂರು: ಅಮರಿಕೆ ಕೇಂದ್ರಿಯ ಬ್ಯಾಂಕ್ ನೀತಿ ನಿರ್ಧಾರವು ಷೇರುಪೇಟೆಯ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. ಇದೀಗ ಫೆಡರಲ್ ಬ್ಯಾಂಕ್ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಲುವಾಗಿ ಬಡ್ಡಿದರ ಕಡಿತ ಮಾಡುವ ಸೂಚನೆ ನೀಡಿದ್ದರೂ ಈ ಬಾರಿ ಬಡ್ಡಿದರವನ್ನು ಸ್ಥಿರವಾಗಿ ಇರಿಸಿದೆ. ಇದು ವಾಲ್‌ಸ್ಟ್ರೀಟ್ ಸೇರಿದಂತೆ ಭಾರತದ ಷೇರು ಮಾರುಕಟ್ಟೆಯಲ್ಲೂ ಸಂಚಲನಕ್ಕೆ ಕಾರಣವಾಗಿದೆ. ಕಳೆದ ಮೂರು ದಿನಗಳಿಂದ ಭಾರತದ ಷೇರುಪೇಟೆಯು ಉತ್ತಮ ಆರಂಭ ಕಂಡಿದ್ದರೂ ಚಂಚಲ ವಹಿವಾಟಿನ ಕಾರಣ ಮುಕ್ತಾಯದ ವೇಳೆಗೆ ನಷ್ಟ ಕಾಣುತ್ತಿತ್ತು. ಇಂದು (ಮಾರ್ಚ್ 21) ಜಾಗತಿಕ ಷೇರುಗಳ ಪಥದಲ್ಲಿ ಸಾಗಿರುವ ಭಾರತದ ಷೇರುಪೇಟೆಯು ಪುಟಿದೇಳುವ ಸಾಧ್ಯತೆ ಗೋಚರವಾಗುತ್ತಿದೆ.
ಭಾರತದ ಷೇರುಪೇಟೆಯ ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ಗಿಫ್ಟ್ ನಿಫ್ಟಿಯು 22,082 ರಲ್ಲಿ ವಹಿವಾಟು ಆರಂಭಿಸಲು ಸಿದ್ಧವಾಗಿದೆ. ನಿನ್ನೆ ಮುಕ್ತಾಯದ ವೇಳೆಗೆ 21,839.10 ಕ್ಕೆ ತಲುಪಿ ದಿನದ ವಹಿವಾಟು ಮುಗಿಸಿತ್ತು.
ವಾಲ್‌ಸ್ಟ್ರೀಟ್ ಸೂಚ್ಯಂಕಗಳು ರಾತ್ರೋರಾತ್ರಿ ಭಾರಿ ಲಾಭ ಗಳಿಸುವ ಮೂಲಕ ದಿನದ ವಹಿವಾಟು ಅಂತ್ಯಗೊಳಿಸಿದವು. ನಿರೀಕ್ಷೆಯಂತೆ ಈ ಬಾರಿಯು ಫೆಡ್ ತನ್ನ ದರವನ್ನು ಸ್ಥಿರವಾಗಿ ಇರಿಸಿದೆ. ಅಮೆರಿಕ ಕೇಂದ್ರೀಯ ಬ್ಯಾಂಕ್ ಈ ವರ್ಷ ಮೂರನೇ ಬಾರಿಗೆ ಬಡ್ಡಿದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ಇಂದು ಏಷ್ಯನ್ ಮಾರುಕಟ್ಟೆಗಳು ಕೂಡ ಧನಾತ್ಮಕ ಆರಂಭ ಕಂಡಿವೆ. ಎಮ್‌ಎಸ್‌ಸಿಐ ಏಷ್ಯಾ ಎಕ್ಸ್-ಜಪಾನ್ ಸೂಚ್ಯಂಕವು ಶೇ 1.6 ರಷ್ಟು ಲಾಭ ಗಳಿಸಿತು. ಬುಧವಾರ (ಮಾರ್ಚ್ 20) ಕೊಂಚ ಬದಲಾವಣೆಯೊಂದಿಗೆ ಭಾರತದ ಷೇರು ಮಾರುಕಟ್ಟೆಯು ವಹಿವಾಟು ಮುಗಿಸಿದೆ.
ವಿದೇಶಿ ಬಂಡವಾಳ ಹೂಡಿಕೆದಾರರು ಬುಧವಾರ ನಿವ್ವಳ ಆಧಾರದ ಮೇಲೆ ಸುಮಾರು 26 ಶತಕೋಟಿ ರೂಪಾಯಿ (ಸುಮಾರು 313 ಮಿಲಿಯನ್ ಡಾಲರ್) ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿವ್ವಳ 26.68 ಶತಕೋಟಿ ರೂಪಾಯಿ ಷೇರುಗಳನ್ನು ಖರೀದಿಸಿದರು.
ಇಂದು ಗಮನಿಸಬಹುದಾದ ಷೇರುಗಳು
* ವಿಪ್ರೊ
* ಟೊರೆಂಟ್ ಪವರ್
* ರೈಲ್ ವಿಕಾಸ್ ನಿಗಮ