Credit Score: ಕ್ರೆಡಿಟ್ ಸ್ಕೋರ್ ಕುರಿತ ಈ 6 ಮಿಥ್ಯೆಗಳ ಬಗ್ಗೆ ಇರಲಿ ಎಚ್ಚರ; ದುಬಾರಿ ಬಡ್ಡಿ, ಸಾಲ ಸಿಗಲ್ಲ ಅನ್ನೋ ಭೀತಿ ಬೇಡ
ಕ್ರೆಡಿಟ್ ಸ್ಕೋರ್ ದಾಖಲೆಗಳ ಕೊರತೆಯಿಂದಾಗಿ ಕ್ರೆಡಿಟ್ ಸ್ಕೋರ್ ಸರಿಯಿಲ್ಲ ಎಂದು ಹಲವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ ಬಹಳಷ್ಟು ಜನರಿಗೆ ಕ್ರೆಡಿಟ್ ಸ್ಕೋರ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕ್ರೆಡಿಟ್ ಸ್ಕೋರ್ ಕುರಿತ 6 ಜನಪ್ರಿಯ ಮಿಥ್ಯೆಗಳ ವಿವರ ಇಲ್ಲಿದೆ. ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಿಕೊಳ್ಳಲು ಏನು ಮಾಡಬಹುದು? -ಈ ಲೇಖನ ಓದಿ, ಗೊತ್ತಾಗುತ್ತೆ.
ಪ್ರೇರಣಾ ಜೂನಿಯರ್ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡಿದ ಮೊದಲ ವರ್ಷದಲ್ಲಿ, 5 ಲಕ್ಷ ರೂಪಾಯಿ ಮಿತಿಯ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದರು. ಆದರೆ ಕ್ರೆಡಿಟ್ ಇತಿಹಾಸದ (ಕ್ರೆಡಿಟ್ ಹಿಸ್ಟರಿ) ಕೊರತೆಯಿಂದಾಗಿ ಕಡಿಮೆ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ತನ್ನ ಗೆಳೆಯರು ಮತ್ತು ಹಿರಿಯರೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಅವಳು ಸರ್ವಶಕ್ತ ಕ್ರೆಡಿಟ್ ಸ್ಕೋರ್ ಬಗ್ಗೆ ವಿವಿಧ ವಿಚಾರಗಳನ್ನು ತಿಳಿದುಕೊಂಡರು. ಕಡಿಮೆ ಸಂಬಳ, ಕ್ರೆಡಿಟ್ ಹಿಸ್ಟರಿಯ ಕೊರತೆಯು ಅವರ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಿರುವುದು ನಿಜ. ಇದೇ ಕಾರಣಕ್ಕೆ ಅವರಿಗೆ ಉತ್ತಮ ಸೌಲಭ್ಯಗಳಿರುವ ಪ್ರೀಮಿಯಂ ಕ್ರೆಡಿಟ್ ಕಾರ್ಡ್ ಸಿಗುತ್ತಿಲ್ಲ ಎನ್ನುವುದು ಅರಿವಾಯಿತು. ನಂತರ ಕ್ರೆಡಿಟ್ ಸ್ಕೋರ್ ಸುಧಾರಿಸಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಸಂಗ್ರಹಿಸಲು ಪ್ರೇರಣಾ ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಅವರಿಗೆ ಜನಪ್ರಿಯವಾಗಿರುವ 6 ಮಿಥ್ಯೆಗಳ ಬಗ್ಗೆಯೂ ಅರಿವಾಯಿತು.
ಮಿಥ್ಯೆ-1: ನಿಮ್ಮ ಆದಾಯವು ಮುಖ್ಯವಾಗುತ್ತೆ; ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿಮ್ಮ ಕ್ರೆಡಿಟ್ ವರದಿಯಲ್ಲಿನ ವಿವರಗಳಿಂದ ನಿರ್ಧರಿಸಲಾಗುತ್ತದೆ. ಇದಕ್ಕೂ ನಿಮ್ಮ ಆದಾಯಕ್ಕೆ ನೇರವಾಗಿ ಯಾವುದೇ ಸಂಬಂಧವಿಲ್ಲ. ನಿಮಗೆ ವರ್ಷಕ್ಕೆ 15 ಲಕ್ಷ ರೂಪಾಯಿ ಸಂಬಳವಿದ್ದರೂ, ಸಾಲ ನಿರ್ವಹಣೆಯ ವಿಚಾರದಲ್ಲಿ ನಿಮ್ಮದು ನಿರ್ಲಕ್ಷ್ಯದ ಸ್ವಭಾವವಾಗಿದ್ದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಕಡಿಮೆ ಆದಾಯ ಹೊಂದಿರುವ ಯಾರಾದರೂ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸುವುದು ಮತ್ತು ಸಾಲದ ಸರಿಯಾದ ಬಳಕೆ, ನಿರ್ವಹಣೆಯ ಶಿಸ್ತು ಅನುಸರಿಸುತ್ತಿದ್ದರೆ ಅಂಥವರ ಕ್ರೆಡಿಟ್ ಹಿಸ್ಟರಿ ಚೆನ್ನಾಗಿಯೇ ಇರುತ್ತದೆ. ಆದಾಯದ ಮಟ್ಟವು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಖಂಡಿತ ನೇರ ಪರಿಣಾಮ ಬೀರುವುದಿಲ್ಲ.
ಮಿಥ್ಯೆ-2: ನಿಮ್ಮ ಕ್ರೆಡಿಟ್ ಕಾರ್ಡ್ ಸಾಲವನ್ನು ಬಾಕಿ ಉಳಿಸುವುದು: ನಿಮ್ಮ ಕ್ರೆಡಿಟ್ ಕಾರ್ಡ್ ಖಾತೆಯಲ್ಲಿ ಮರುಪಾವತಿ ಮಾಡಬೇಕಾದ ಮೊತ್ತವನ್ನು ದೀರ್ಘಾವಧಿಗೆ ಬಾಕಿ ಉಳಿಸಿಕೊಂಡರೆ, ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಬಹುದು. ಹೀಗೆ ಬಾಕಿ ಉಳಿಸಿಕೊಳ್ಳುವದರಿಂದ ಕ್ರೆಡಿಟ್ ಸ್ಕೋರ್ ಸುಧಾರಿಸುತ್ತದೆ ಎನ್ನುವುದು ಮಿಥ್ಯೆ. ಇದರ ಜೊತೆಗೆ ನೀವು ಬಡ್ಡಿ ಪಾವತಿಸುವುದನ್ನು ಮುಂದುವರಿಸುತ್ತೀರಿ, ಆರ್ಥಿಕವಾಗಿಯೂ ಅದರಿಂದ ನಷ್ಟ ಅನುಭವಿಸುತ್ತೀರಿ. ಬಾಕಿ ಉಳಿಸಿಕೊಂಡ ಕ್ರೆಡಿಟ್ ಕಾರ್ಡ್ ಸಾಲವು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಖಂಡಿತ ಪರಿಣಾಮ ಬೀರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ. ಕ್ರೆಡಿಟ್ ಕಾರ್ಡ್ ಬಳಸಿ ಪಡೆದ ಸಾಲವನ್ನು (ಖರೀದಿ ಇತ್ಯಾದಿ) ಆಯಾ ಗಡುವಿನೊಳಗೆ ಚುಕ್ತ ಮಾಡುವುದು ಮರೆಯದಿರಿ.
ಮಿಥ್ಯೆ-3: ಎಜುಕೇಶನ್ ಲೋನ್ ಬಗ್ಗೆ ಚಿಂತೆ ಬೇಕಿಲ್ಲ: ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೇವಲ ನಿಮ್ಮ ಕ್ರೆಡಿಟ್ ಕಾರ್ಡ್ ನಿರ್ವಹಣೆಯಷ್ಟೇ ಪರಿಣಾಮ ಬೀರುವುದಿಲ್ಲ. ನಿಮ್ಮ ಇತರ ಸಾಲಗಳ ವಿಚಾರವನ್ನೂ ಇದು ಒಳಗೊಳ್ಳುತ್ತದೆ. ಎಜುಕೇಶನ್ ಲೋನ್, ಅಡಮಾನ ಸಾಲ (ಮಾರ್ಟ್‌ಗೇಜ್ ಲೋನ್) ಮತ್ತು ವೈದ್ಯಕೀಯ ಬಿಲ್ ಪಾವತಿಯ ವಿಚಾರವೂ ಇದರಲ್ಲಿ ಸೇರುತ್ತದೆ. ಎಜುಕೇಶನ್ ಲೋನ್ ಎಂದರೆ ಅದು ದೇಣಿಗೆ ಅಥವಾ ದಾನ ಅಲ್ಲ. ಅದೂ ಸಹ ಒಂದು ಸಾಲವೇ ಎನ್ನುವುದು ಗಮನದಲ್ಲಿ ಇರಲಿ. ಎಂದಿಗೂ ಅದನ್ನು ಬಾಕಿ ಉಳಿಸಿಕೊಳ್ಳಬೇಡಿ.
ಮಿಥ್ಯೆ-4: ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಸಾಧ್ಯವಿಲ್ಲ; ಕ್ರೆಡಿಟ್ ಸ್ಕೋರ್ ನಿಮ್ಮ ಆರ್ಥಿಕ ನಡವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ಕಡಿಮೆ ಸ್ಕೋರ್ ಶಾಶ್ವತವಲ್ಲ. ಸಾಲದ ವಿಚಾರದಲ್ಲಿ ನೀವು ಶಿಸ್ತು ಕಾಪಾಡಿಕೊಂಡರೆ, ಉತ್ತಮ ಕ್ರೆಡಿಟ್ ಅಭ್ಯಾಸಗಳನ್ನು ರೂಢಿಸಿಕೊಂಡರೆ ಖಂಡಿತ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸುತ್ತದೆ. ಯಾವುದೇ ವಹಿವಾಟು ನಿಮ್ಮ ಕ್ರೆಡಿಟ್ ವರದಿಯಲ್ಲಿ (ಸಾಮಾನ್ಯವಾಗಿ) ಮೂರು ವರ್ಷಗಳವರೆಗೆ ಉಳಿಯುತ್ತವೆ. ಆದರೆ ದಿವಾಳಿ ಮತ್ತು ಸಾಲದ ಕಂತು ಪಾವತಿಸುವಲ್ಲಿ ವಿಫಲವಾದ ವಿವರಗಳು ಸುಮಾರು 10 ವರ್ಷಗಳವರೆಗೆ ಉಳಿಯಬಹುದು. ಈ ಅಂಶ ನಿಮ್ಮ ಗಮನದಲ್ಲಿರಲಿ. ನಿರಂತರ ಪ್ರಯತ್ನದಿಂದ ಖಂಡಿತ ಕ್ರೆಡಿಟ್ ಸ್ಕೋರ್ ಸುಧಾರಿಸಲು ಸಾಧ್ಯವಿದೆ.
ಮಿಥ್ಯೆ-5: ಹಳೆಯ ಅಕೌಂಟ್ ಕ್ಲೋಸ್ ಮಾಡಿದ್ರೆ ಕ್ರೆಡಿಟ್ ಸ್ಕೋರ್ ಸರಿಯಾಗುತ್ತೆ; ಹಳೆಯ ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಿದರೆ ಕ್ರೆಡಿಟ್ ಸ್ಕೋರ್ ಸುಧಾರಿಸುತ್ತದೆ ಎನ್ನುವುದು ಚಾಲ್ತಿಯಲ್ಲಿರುವ ಮತ್ತೊಂದು ಜನಪ್ರಿಯ ಮಿಥ್ಯೆ. ಸಾಲ ಬಾಕಿ ಇರುವಂತೆಯೇ ಯಾವುದಾದರೂ ಕ್ರೆಡಿಟ್ ಕಾರ್ಡ್ ಖಾತೆ ಮುಚ್ಚಿದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಕ್ರೆಡಿಟ್ ಕಾರ್ಡ್‌ನ ಹಳೆಯ ದಾಖಲೆಗಳು ಸಮರ್ಪಕವಾಗಿ ಸಿಕ್ಕರೆ ಸಾಲದಾತರಿಗೆ ನಿಮ್ಮ ಹಣಕಾಸು ನಡವಳಿಕೆಯ ಸ್ಪಷ್ಟ ಚಿತ್ರಣ ಸಿಗುತ್ತದೆ. ದೀರ್ಘಕಾಲದಿಂದ ಉಳಿದಿರುವ, ಕ್ರೆಡಿಟ್ ಹಿಸ್ಟರಿ ಸಮರ್ಪಕವಾಗಿರುವ ಖಾತೆಗಳು ನಿಮಗೆ ಅನುಕೂಲವನ್ನೇ ನೀಡುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ಸಕಾರಾತ್ಮಕ ಚಿತ್ರಣ ಕೊಡುತ್ತದೆ.
ಮಿಥ್ಯೆ 6: ಹೊಸ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ: ನೀವು ಹೆಚ್ಚುವರಿ ಲಾಭಗಳನ್ನು ಗಮನದಲ್ಲಿರಿಸಿಕೊಂಡು ಹೊಸ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಯೋಚಿಸುತ್ತಿದ್ದರೆ, ಧೈರ್ಯವಾಗಿ ಮುಂದುವರಿಯಿರಿ. ಅದರಿಂದ ನಿಮ್ಮ ಪ್ರಸ್ತುತ ಕ್ರೆಡಿಟ್ ಸ್ಕೋರ್ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಆದರೆ ಒಮ್ಮೆಲೆ ಅಥವಾ ಅತ್ಯಂತ ಕಡಿಮೆ ಅವಧಿಯಲ್ಲಿ ಹಲವು ಬ್ಯಾಂಕ್‌ಗಳಿಗೆ (ಕ್ರೆಡಿಟ್ ಕಾರ್ಡ್ ಸೇವಾ ಕಂಪನಿಗಳು) ಅರ್ಜಿ ಸಲ್ಲಿಸಬೇಡಿ. ಏಕೆಂದರೆ ಪ್ರತಿ ಬಾರಿ ನೀವು ಅರ್ಜಿ ಸಲ್ಲಿಸಿದಾಗಲೂ ನಿಮ್ಮ ಕ್ರೆಡಿಟ್ ರಿಪೋರ್ಟ್‌ಗಳನ್ನು ಹಣಕಾಸು ಸಂಸ್ಥೆಗಳು ಪಡೆದುಕೊಳ್ಳುತ್ತವೆ. ಅಲ್ಪಾವಧಿಯಲ್ಲಿ ಹಲವು ಬಾರಿ ವಿಚಾರಣೆ ನಡೆದರೆ ಅದು ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗಬಹುದು.
ಏನು ಮಾಡಿದಳು ಪ್ರೇರಣಾ?
ಈ ಲೇಖನದಲ್ಲಿ ಆರಂಭದಲ್ಲಿ ಉಲ್ಲೇಖಿಸಿದ್ದ ಪ್ರೇರಣಾ ಬಗ್ಗೆ ನಿಮಗೆ ನೆನಪಿರಬಹುದು. ಆಕೆಯನ್ನೂ ಇಂಥ ಹಲವು ಮಿಥ್ಯೆಗಳು ಕಾಡಿದ್ದವು. ಕ್ರೆಡಿಟ್ ಸ್ಕೋರ್‌ಗೆ ಸಂಬಂಧಿಸಿದ ಮಿಥ್ಯೆಗಳನ್ನು ಅವಳು ಅರ್ಥಮಾಡಿಕೊಂಡ ನಂತರ, ಅವರು 1 ಲಕ್ಷ ರೂಪಾಯಿಗಳ ಕಡಿಮೆ ಮಿತಿಯ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರು. ಕ್ರೆಡಿಟ್ ಕಾರ್ಡ್ ಮಿತಿಯ ಶೇ 30 ರಷ್ಟನ್ನು ಮಾತ್ರವೇ ಬಳಸಿಕೊಂಡು ಹಲವು ವರ್ಷಗಳ ಅವಧಿಯಲ್ಲಿ ಉತ್ತಮ ಕ್ರೆಡಿಟ್ ಸ್ಕೋರ್ ರೂಪಿಸಿಕೊಂಡರು. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚುವರಿ ಸಾಲದ ಮಿತಿಯ ಕ್ರೆಡಿಟ್ ಕಾರ್ಡ್ ಪಡೆಯಲು ಸಾಧ್ಯವಾಯಿತು.
ಮೂಲ ಬರಹ: ಪದ್ಮಜಾ ಚೌಧರಿ, ಹಣಕಾಸು ವಿಷಯಗಳ ಬರಹಗಾರ್ತಿ. ವೈಯಕ್ತಿಕ ಹಣಕಾಸು ಕ್ಷೇತ್ರದಲ್ಲಿ ಸುಮಾರು ಆರು ವರ್ಷಗಳ ಅನುಭವ ಇದೆ. ಮ್ಯೂಚುವಲ್ ಫಂಡ್ ಮತ್ತು ವೈಯಕ್ತಿಕ ಹಣಕಾಸು ಅವರ ಆದ್ಯತೆಯ ಕ್ಷೇತ್ರಗಳಾಗಿವೆ.
ವಿಭಾಗ