ಪ್ರಪ್ರಥಮ ಬಾರಿಗೆ 85 ಸಾವಿರ ಗಡಿದಾಟಿದ ಸೆನ್ಸೆಕ್ಸ್‌; ಟಾಟಾ, ಜೆಎಸ್‌ಡಬ್ಲ್ಯು, ಎಚ್‌ಡಿಎಫ್‌ಸಿ ಷೇರುಗಳಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪ್ರಪ್ರಥಮ ಬಾರಿಗೆ 85 ಸಾವಿರ ಗಡಿದಾಟಿದ ಸೆನ್ಸೆಕ್ಸ್‌; ಟಾಟಾ, ಜೆಎಸ್‌ಡಬ್ಲ್ಯು, ಎಚ್‌ಡಿಎಫ್‌ಸಿ ಷೇರುಗಳಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

ಪ್ರಪ್ರಥಮ ಬಾರಿಗೆ 85 ಸಾವಿರ ಗಡಿದಾಟಿದ ಸೆನ್ಸೆಕ್ಸ್‌; ಟಾಟಾ, ಜೆಎಸ್‌ಡಬ್ಲ್ಯು, ಎಚ್‌ಡಿಎಫ್‌ಸಿ ಷೇರುಗಳಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

Stok Market Today: ಭಾರತೀಯ ಷೇರುಪೇಟೆ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಹೊಸ ಎತ್ತರ ತಲುಪಿದೆ. ವಹಿವಾಟಿನ ಮೊದಲ ಅವಧಿಯಲ್ಲಿ ಸೆನ್ಸೆಕ್ಸ್‌ ಇದೇ ಮೊದಲ ಬಾರಿಗೆ 85,000 ಗಡಿ ದಾಟಿದೆ. ಇದೇ ಸಮಯದಲ್ಲಿ ನಿಫ್ಟಿ 26,000 ಮಟ್ಟವನ್ನು ಸಮೀಪಿಸಿದೆ.

ಭಾರತೀಯ ಷೇರುಪೇಟೆ ಮುಂದೆ ಹೂಡಿಕೆದಾರ- ಸಂಗ್ರಹ ಚಿತ್ರ  (PTI Photo)
ಭಾರತೀಯ ಷೇರುಪೇಟೆ ಮುಂದೆ ಹೂಡಿಕೆದಾರ- ಸಂಗ್ರಹ ಚಿತ್ರ (PTI Photo) (PTI)

ಬೆಂಗಳೂರು: ಏಷ್ಯಾ ಮಾರುಕಟ್ಟೆಯ ತೀವ್ರ ಏರಿಕೆ ಮತ್ತು ಬ್ಲೂಚಿಪ್‌ ಷೇರುಗಳ ಖರೀದಿ ಭರಾಟೆ ನಡುವೆ ಭಾರತೀಯ ಷೇರುಪೇಟೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಹೊಸ ಎತ್ತರಕ್ಕೆ ತಲುಪಿದೆ. ಮಂಗಳವಾರ ವಹಿವಾಟಿನ ಮೊದಲ ಅವಧಿಯಲ್ಲಿ ಸೆನ್ಸೆಕ್ಸ್‌ ಇದೇ ಮೊದಲ ಬಾರಿಗೆ 85,000 ಗಡಿ ದಾಟಿದೆ. ಇದೇ ಸಮಯದಲ್ಲಿ ನಿಫ್ಟಿ 26,000 ಮಟ್ಟವನ್ನು ಸಮೀಪಿಸಿದೆ. ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 123.81 ಅಂಕ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 85,052.42 ಕ್ಕೆ ತಲುಪಿದೆ. ಇದೇ ಸಮಯದಲಿ ನಿಫ್ಟಿಯೂ ಐತಿಹಾಸಿಕ 26 ಸಾವಿರ ಗಡಿ ದಾಟುವ ಸನಿಹದಲ್ಲಿದೆ.

ಯಾವ ಷೇರುಗಳಿಗೆ ಡಿಮ್ಯಾಂಡ್‌?

ಸೆನ್ಸೆಕ್ಸ್ 30 ಷೇರುಗಳ ಪೈಕಿ ಟಾಟಾ ಸ್ಟೀಲ್, ಜೆಎಸ್ ಡಬ್ಲ್ಯೂ ಸ್ಟೀಲ್, ಪವರ್ ಗ್ರಿಡ್, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಮೋಟಾರ್ಸ್ ಮತ್ತು ಲಾರ್ಸನ್ ಅಂಡ್ ಟೂಬ್ರೊ ಅತಿ ಹೆಚ್ಚು ಲಾಭ ಗಳಿಸಿದವು. ಆದರೆ, ಇದೇ ಸಮಯದಲ್ಲಿ ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ನಷ್ಟ ಅನುಭವಿಸಿದ ಷೇರುಗಳಾಗಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಸೋಮವಾರ 404.42 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿದ್ದಾರೆ.

ಏರಿಕೆಗೆ ಏನು ಕಾರಣ?

ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ವಹಿವಾಟು ಸಕಾರಾತ್ಮಕವಾಗಿದೆ. ಶಾಂಘೈ ಮತ್ತು ಹಾಂಗ್ ಕಾಂಗ್ ಮಾರುಕಟ್ಟೆಗಳು ಗಮನಾರ್ಹವಾಗಿ ಏರಿಕೆ ಕಂಡಿವೆ. ಯುಎಸ್ ಮಾರುಕಟ್ಟೆಗಳು ಸೋಮವಾರ ಏರಿಕೆ ಕಂಡಿದ್ದವು. ಇವೆಲ್ಲ ಭಾರತೀಯ ಷೇರುಪೇಟೆಯ ವಹಿವಾಟಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ.

ಎಸ್ &ಪಿ ಗ್ಲೋಬಲ್ ರೇಟಿಂಗ್ಸ್ ಮಂಗಳವಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.8 ಕ್ಕೆ ಉಳಿಸಿಕೊಂಡಿದೆ. ಇದೇ ಸಮಯದಲ್ಲಿ ಆರ್‌ಬಿಐಯು ತನ್ನ ಅಕ್ಟೋಬರ್ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರಗಳನ್ನು ಕಡಿತಗೊಳಿಸುವ ನಿರೀಕ್ಷೆಗಳೂ ಮಾರುಕಟ್ಟೆ ಮೇಲೆ ಪ್ರಭಾವ ಬೀರಿವೆ.

ಜಾಗತಿಕ ತೈಲ ಬೆಂಚ್‌ಮಾರ್ಕ್‌ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.93 ರಷ್ಟು ಏರಿಕೆಯಾಗಿ ಬ್ಯಾರಲ್‌ಗೆ 74.59 ಡಾಲರ್‌ಗೆ ತಲುಪಿದೆ. ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 384.30 ಪಾಯಿಂಟ್ಸ್ ಅಥವಾ ಶೇಕಡಾ 0.45ರಷ್ಟು ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 84,928.61 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 436.22 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಏರಿಕೆಯಾಗಿ 84,980.53 ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ 148.10 ಪಾಯಿಂಟ್ಸ್ ಅಥವಾ ಶೇಕಡಾ 0.57 ರಷ್ಟು ಏರಿಕೆ ಕಂಡು 25,939.05 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 165.05 ಪಾಯಿಂಟ್ ಅಥವಾ ಶೇಕಡಾ 0.63 ರಷ್ಟು ಏರಿಕೆ ಕಂಡು 25,956 ಕ್ಕೆ ತಲುಪಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.