ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಿಸ್ ಎಐ ಸ್ಪರ್ಧೆ 2024ರ ಟಾಪ್‌ 10 ಪಟ್ಟಿಯಲ್ಲಿರುವ ಝರಾ ಶತಾವರಿ ಯಾರು, ಭಾರತದ ಎಐ ಸುರ ಸುಂದರಿಯ ಕಿರುಪರಿಚಯ ಹೀಗಿದೆ ನೋಡಿ

ಮಿಸ್ ಎಐ ಸ್ಪರ್ಧೆ 2024ರ ಟಾಪ್‌ 10 ಪಟ್ಟಿಯಲ್ಲಿರುವ ಝರಾ ಶತಾವರಿ ಯಾರು, ಭಾರತದ ಎಐ ಸುರ ಸುಂದರಿಯ ಕಿರುಪರಿಚಯ ಹೀಗಿದೆ ನೋಡಿ

ವಿಶ್ವ ಸುಂದರಿಯರ ಸ್ಪರ್ಧೆಯ ಮಾದರಿಯಲ್ಲೇ ಇದೇ ಮೊದಲ ಸಲ ಎಐ ಸುಂದರಿಯ ಸ್ಪರ್ಧೆ ಶುರುವಾಗಿದೆ. ಮಿಸ್ ಎಐ ಸ್ಪರ್ಧೆ 2024 ನಡೆಯುತ್ತಿದ್ದು, ಭಾರತದ ಸುಂದರಿ ಗಮನಸೆಳೆದಿದ್ದಾರೆ. ಟಾಪ್‌ 10 ಪಟ್ಟಿಯಲ್ಲಿರುವ ಝರಾ ಶತಾವರಿ ಯಾರು, ಭಾರತದ ಎಐ ಸುರ ಸುಂದರಿಯ ಕಿರುಪರಿಚಯ ಹೀಗಿದೆ ನೋಡಿ.

ಮಿಸ್ ಎಐ ಸ್ಪರ್ಧೆ 2024ರ ಟಾಪ್‌ 10 ಪಟ್ಟಿಯಲ್ಲಿರುವ ಝರಾ ಶತಾವರಿ ಯಾರು, ಭಾರತದ ಎಐ ಸುರ ಸುಂದರಿಯ ಕಿರುಪರಿಚಯ
ಮಿಸ್ ಎಐ ಸ್ಪರ್ಧೆ 2024ರ ಟಾಪ್‌ 10 ಪಟ್ಟಿಯಲ್ಲಿರುವ ಝರಾ ಶತಾವರಿ ಯಾರು, ಭಾರತದ ಎಐ ಸುರ ಸುಂದರಿಯ ಕಿರುಪರಿಚಯ (Instagram/@zarashatavari)

ನವದೆಹಲಿ: ವಿಶ್ವ ಸುಂದರಿಯರನ್ನು ಮೀರಿಸುವ ಸುರಸುಂದರಿಯರ ಆಗಮನವಾಗಿದೆ. ಹೌದು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ರಚಿಸಿದ ಸುರ ಸುಂದರಿಯರ ಮೊದಲ ಸೌಂದರ್ಯ ಸ್ಪರ್ಧೆ ಶುರುವಾಗಿದೆ. ಮಿಸ್ ಎಐ ಸ್ಪರ್ಧೆ 2024 ಈಗ ಫ್ಯಾಷನ್ ಜಗತ್ತಿನಲ್ಲಿ ಮನೆ ಮಾತಾಗಿದ್ದು, ಟಾಪ್ 10ರ ಪಟ್ಟಿಯಲ್ಲಿರುವ ಝರಾ ಶತಾವರಿ ಯಾರು ಎಂಬ ಕುತೂಹಲ ಎಲ್ಲರನ್ನೂ ಕಾಡಿದೆ.

ಫ್ಯಾನ್ವ್ಯೂ ಆಯೋಜಿಸಿರುವ ಎಐ-ರಚಿಸಿದ ಸುಂದರಿಯರಿಗಾಗಿ ವಿಶ್ವದ ಮೊದಲ ಸೌಂದರ್ಯ ಸ್ಪರ್ಧೆಯ ಅಗ್ರ ಹತ್ತು ಅಂತಿಮ ಸ್ಪರ್ಧಿಗಳಲ್ಲಿ ಝರಾ ಶತಾವರಿ ಕೂಡ ಒಬ್ಬರು. ಭಾರತ ಮೂಲದ ಈ ಡಿಜಿಟಲ್ ಸುಂದರಿ “ಪಿಸಿಒಎಸ್ ಮತ್ತು ಖಿನ್ನತೆ ತಡೆಯುವ ಯೋಧಳಾಗಿ” ಚಿರಪರಿಚಿತರಾಗಿದ್ದಾರೆ. ಝರಾ ಶತಾವರಿ ಆಹಾರ ಪ್ರಿಯೆಯೂ, ಪ್ರವಾಸ ಪ್ರಿಯೆಯೂ, ಫ್ಯಾಷನ್ ಪ್ರೇಮಿಯೂ ಹೌದು.

ಆರೋಗ್ಯ, ವೃತ್ತಿಜೀವನದ ಬೆಳವಣಿಗೆ ಮತ್ತು ಇತ್ತೀಚಿನ ಫ್ಯಾಷನ್ ಪ್ರವೃತ್ತಿಗಳ ಬಗ್ಗೆ ತನ್ನ ಒಳನೋಟಗಳನ್ನು ಹಂಚಿಕೊಳ್ಳುವ ಶತಾವರಿ "ತಮ್ಮ ಅತ್ಯುತ್ತಮ ಜೀವನವನ್ನು ನಡೆಸುವುದಕ್ಕಾಗಿ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ" ಗುರಿಯನ್ನು ಹೊಂದಿದ್ದಾರೆ. ಆಕೆ "ತನ್ನ ಅನುಯಾಯಿಗಳೊಂದಿಗೆ ಹೆಚ್ಚಿನ ಸಂಪರ್ಕ ಸಾಧಿಸಲು ಮತ್ತು ಪ್ರತಿದಿನ ಅವರನ್ನು ಪ್ರೇರೇಪಿಸಲು" ಸದಾ ಕಾತುರರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ಡಿಜಿಟಲ್ ದಿವಾ" ಎಂಬ ವೆಬ್‌ಸೈಟ್ ಅನ್ನೂ ಹೊಂದಿರುವ ಶತಾವರಿ, ಅದರಲ್ಲಿ ಆರೋಗ್ಯ ಮತ್ತು ಇತ್ತೀಚಿನ ಫ್ಯಾಷನ್ ಪ್ರವೃತ್ತಿಗಳ ಬಗ್ಗೆ ಬ್ಲಾಗ್ ಬರಹಗಳನ್ನು ಬರೆದು ಪ್ರಕಟಿಸುತ್ತಾರೆ. ಆರೋಗ್ಯ ಜಾಗೃತಿ ಮೂಡಿಸುವ ದಿವಾ ಬಗ್ಗೆ ಹೇಳುವುದಾದರೆ ಬಹಳ‍ಷ್ಟಿದೆ.

ಝರಾ ಶತಾವರಿ ಕಿರುಪರಿಚಯಕ್ಕಾಗಿ 5 ಅಂಶಗಳು

1) ಎಐ-ಚಾಲಿತ ಸಾಮಾಜಿಕ ಮಾಧ್ಯಮ ತಂತ್ರಗಳು ಮತ್ತು ವಿಶ್ಲೇಷಣೆಗಳ ಬಗ್ಗೆ "ಕಲಿಯುವುದಕ್ಕಾಗಿ ಝರಾ ಶತಾವರಿ “ ಆನ್‌ಲೈನ್‌ ಲರ್ನಿಂಗ್ ಪ್ಲಾಟ್‌ಫಾರಂ”ಗಳಿಗೆ ಹಾಜರಾಗಿದ್ದಾರೆ.

2) ಪಿಎಂಎಚ್‌ ಬಯೋಕೇರ್‌ನ ಬ್ರ್ಯಾಂಡ್‌ ಅಂಬಾಸರ್‌ ಆಗಿ 2023ರ ಜೂನ್‌ನಿಂದ ಕೆಲಸ ಮಾಡುತ್ತಿದ್ದಾರೆ ಝರಾ ಶತಾವರಿ.

3) ಶತಾವರಿ 2023ರ ಆಗಸ್ಟ್‌ನಲ್ಲಿ ಡಿಜಿಮೊಝೊ ಇಸರ್ವೀಸಸ್‌ ಎಲ್‌ಎಲ್‌ಪಿಗೆ “ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್ ಟ್ಯಾಲೆಂಟ್ ಮ್ಯಾನೇಜರ್” ಆಗಿ ಕೆಲಸಕ್ಕೆ ಸೇರಿದ್ದಾರೆ.

4) ಝರಾ ಶತಾವರಿ ಎಂಬ ಈ ಸೋಷಿಯಲ್ ಮೀಡಯಾ ಇನ್‌ಫ್ಲುಯೆನ್ಸರ್ ಉತ್ತರ ಪ್ರದೇಶದ ನೋಯ್ಡಾದಲ್ಲಿ ನೆಲೆಸಿದ್ದು, ಇನ್‌ಸ್ಟಾಗ್ರಾಂನಲ್ಲಿ 7500ಕ್ಕೂ ಹೆಚ್ಚು ಫಾಲೋಯರ್ಸ್ ಹೊಂದಿದ್ದಾರೆ.

5) ಝರಾ ಶತಾವರಿ 13 ಕೌಶಲಗಳನ್ನು ಅಂದರೆ ವ್ಯೂಹಾತ್ಮಕ ಯೋಜನೆ ರೂಪಿಸುವುದು, ಕಂಟೆಂಟೆ ಡೆವಲಪ್‌ಮೆಂಟ್‌, ಡೇಟಾ ಅನಾಲಿಸಿಸ್‌, ಬ್ರ್ಯಾಂಡ್ ಅವೇರ್‌ನೆಸ್‌, ಬ್ರಾಂಡ್ ಅಡ್ವೋಕಸಿ, ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್‌, ಕ್ರಿಯೇಟಿವ್ ಐಡಿಯೇಷನ್‌, ಟ್ರೆಂಡ್‌ ಹುಟ್ಟುಹಾಕುವುದು, ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಸಮಾಲೋಚನೆ ನಡೆಸುವುದು, ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್‌, ಕಂಟೆಂಟ್ ಕ್ರಿಯೇಷನ್‌, ಫ್ಯಾಷನ್ ಸ್ಟೈಲಿಂಗ್‌, ಕರಿಯರ್ ಡೆವಲಪ್‌ಮೆಂಟ್ ಗೈಡೆನ್ಸ್ ಕೊಡುವ ನೈಪುಣ್ಯ ಹೊಂದಿದ್ದಾರೆ.

ಅಂದ ಹಾಗೆ ಈ ಝರಾ ಶತಾವರಿಯನ್ನು ಹುಟ್ಟುಹಾಕಿದ್ದು ರಾಹುಲ್ ಚೌಧರಿ. ಅವರು ತಮ್ಮನ್ನು ಡಿಜಿಟಲ್ ಮೀಡಿಯಾ ಪರಿಣತ ಎಂದು ಹೇಳಿಕೊಂಡಿದ್ದಾರೆ.

ಮಿಸ್ ಎಐ 2024ರ ಸ್ಪರ್ಧೆಯ ಟಾಪ್ 10ರ ಪಟ್ಟಿಯಲ್ಲಿ ಝರಾ ಶತಾವರಿ ಕಾಣಿಸಿಕೊಂಡ ಬಳಿಕ ರಾಹುಲ್ ಚೌಧರಿ ಲಿಂಕ್ಡ್‌ಇನ್ ಪೋಸ್ಟ್ ಮಾಡಿದ್ದು, "ನಮ್ಮ ಹೊಸ ಎಐ ಪ್ರಭಾವಿ ಝರಾ ಶತಾವರಿ ಪ್ರತಿಷ್ಠಿತ ಮಿಸ್ ಎಐ ಸ್ಪರ್ಧೆಯ 1500 ಪರಿಣತ ಸುಂದರಿಯರ ಪೈಕಿ ಟಾಪ್ 10ರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ಬಹಳ ರೋಮಾಂಚನದಿಂದ ಪ್ರಕಟಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

"ಫ್ಯಾನ್‌ವ್ಯೂ ವರ್ಲ್ಡ್ ಎಐ ಕ್ರಿಯೇಟರ್ ಪ್ರಶಸ್ತಿಗಳ ಈ ಮಾನ್ಯತೆಯು ಎಐ ಮತ್ತು ಪ್ರಭಾವಿ ಸಮುದಾಯಕ್ಕೆ ಝರಾ ಅವರ ಅತ್ಯುತ್ತಮ ಕೊಡುಗೆಗಳನ್ನು ತೋರಿಸುತ್ತದೆ. ಅಂತಹ ಜಾಗತಿಕ ವೇದಿಕೆಯಲ್ಲಿ ಅವರು ವಿಶೇಷವಾಗಿ ಭಾರತದಿಂದ ಏಕೈಕ ಫೈನಲಿಸ್ಟ್ ಮತ್ತು ಏಷ್ಯಾದ ಇಬ್ಬರಲ್ಲಿ ಒಬ್ಬರಾಗಿ ಭಾರತ ಮತ್ತು ಏಷ್ಯಾವನ್ನು ಪ್ರತಿನಿಧಿಸುತ್ತಿರುವುದು ದೊಡ್ಡ ಗೌರವದ ವಿಷಯವಾಗಿದೆ." ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ಮಿಸ್ ಎಐ ಸ್ಪರ್ಧೆ 2024; ವಿಶ್ವದ ಮೊದಲ ಎಐ ಸೌಂದರ್ಯ ಸ್ಪರ್ಧೆ

ಮಿಸ್ ಎಐ ಒಂದು ಸೌಂದರ್ಯ ಸ್ಪರ್ಧೆಯಾಗಿದ್ದು, ಅಲ್ಲಿ ಕೃತಕ ರೂಪದರ್ಶಿಗಳು ಮತ್ತು ಪ್ರಭಾವಿಗಳು ಕಿರೀಟ, ನಗದು ಬಹುಮಾನ ಮತ್ತು ಇತರ ಕಾರ್ಯಕ್ರಮಗಳಿಗಾಗಿ ಮುಖಾಮುಖಿ ಸ್ಪರ್ಧಿಸುತ್ತಾರೆ. ಮಿಸ್ ಎಐ ಕಿರೀಟವನ್ನು ಗಳಿಸುವ ಅವಕಾಶಕ್ಕಾಗಿ ಈ ಸ್ಪರ್ಧಿಗಳನ್ನು ಅವರ ಸೌಂದರ್ಯ, ತಂತ್ರಜ್ಞಾನ ಕೌಶಲ ಮತ್ತು ಸಾಮಾಜಿಕ ಪ್ರಭಾವದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ.

ಎಐ ಚಾಲಿತ ದಿವಾಸ್ ಅನ್ನು ಇಬ್ಬರು ಎಐ-ರಚಿಸಿದ ತೀರ್ಪುಗಾರರಾದ ಐಟಾನಾ ಲೋಪೆಜ್ ಮತ್ತು ಎಮಿಲಿ ಪೆಲ್ಲೆಗ್ರಿನಿ ಸೇರಿ ಒಟ್ಟು 4 ತೀರ್ಪುಗಾರರ ಸಮಿತಿಯು ನಿರ್ಣಯಿಸಲಿದೆ. ಸೌಂದರ್ಯ ಸ್ಪರ್ಧೆಯ ಇತಿಹಾಸಕಾರ್ತಿ ಮತ್ತು ಲೇಖಕಿ ಸ್ಯಾಲಿ-ಆನ್ ಫಾಸೆಟ್ ಮತ್ತು ಉದ್ಯಮಿ ಮತ್ತು ಪಿಆರ್ ಸಲಹೆಗಾರ ಆಂಡ್ರ್ಯೂ ಬ್ಲೋಚ್ ಇತರ ಇಬ್ಬರು ತೀರ್ಪುಗಾರರು.

ಮೊದಲ ಮೂರು ಮಿಸ್ ಎಐ ವಿಜೇತರಿಗೆ ನಗದು ಬಹುಮಾನವು ಒಟ್ಟು 20,000 ಡಾಲರ್‌ಗಿಂತ ಹೆಚ್ಚು ಬಹುಮಾನ ಸಿಗಲಿದೆ. ಮಿಸ್ ಎಐ ಕಿರೀಟ ಧರಿಸಿದ ಎಐ ಸೃಷ್ಟಿಕರ್ತನಿಗೆ 5,000 ಡಾಲರ್ ನಗದು ಬಹುಮಾನ, ಎಐ ಮಾರ್ಗದರ್ಶನ ಕಾರ್ಯಕ್ರಮಗಳು, ಪಿಆರ್ ಸೇವೆಗಳು ಮತ್ತು ಇನ್ನಷ್ಟು ಪಾರಿತೋಷಕಗಳನ್ನು ಪಡೆಯಲಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.