Crime News: ಹಣಕ್ಕಾಗಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅಪಹರಣ, ಕೊಲೆ; ಸಹಪಾಠಿ ಸಹಿತ ಮೂವರಿಂದ ಕೃತ್ಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Crime News: ಹಣಕ್ಕಾಗಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅಪಹರಣ, ಕೊಲೆ; ಸಹಪಾಠಿ ಸಹಿತ ಮೂವರಿಂದ ಕೃತ್ಯ

Crime News: ಹಣಕ್ಕಾಗಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅಪಹರಣ, ಕೊಲೆ; ಸಹಪಾಠಿ ಸಹಿತ ಮೂವರಿಂದ ಕೃತ್ಯ

ಜತೆಯಲ್ಲಿ ಓದುತ್ತಿದ್ದ ಗೆಳೆಯ ತನ್ನ ಸ್ನೇಹಿತರ ಸಹಕಾರದಿಂದ ಸಹಪಾಠಿಯನ್ನು ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಎಂಜಿನಿಯರಿಂಗ್‌ ವಿದ್ಯಾರ್ಥಿನಿಯನ್ನು ಹಣಕ್ಕಾಗಿ ಕೊಲೆ ಮಾಡಲಾಗಿದೆ.
ಎಂಜಿನಿಯರಿಂಗ್‌ ವಿದ್ಯಾರ್ಥಿನಿಯನ್ನು ಹಣಕ್ಕಾಗಿ ಕೊಲೆ ಮಾಡಲಾಗಿದೆ.

ಪುಣೆ: ಎಂಜಿನಿಯರಿಂಗ್‌ ವಿದ್ಯಾರ್ಥಿನಿಯನ್ನು ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಿರುವ ಘಟನೆಯಿದು. ಇದರಲ್ಲಿ ಸಹಪಾಠಿಯೂ ಒಬ್ಬನಿದ್ದು ಆತನ ಇಬ್ಬರು ಸ್ನೇಹಿತರು ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ. ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆ ಹಾಗೂ ಅಹಮದ್‌ ನಗರದಲ್ಲಿ. ಘಟನೆಗೆ ಸಂಬಂಧಿಸಿದಂತೆ ಮುವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಕತ್ತು ಹಿಸುಕಿ ಕೊಲೆಯಾಗಿದ್ದ ಯುವತಿಯ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಯಲ್ಲಿ ಇನ್ನಾರದ್ದಾರೂ ಪಾತ್ರ ಇದೆಯಾ ಎನ್ನುವುದು ಸೇರಿದಂತೆ ಎಲ್ಲಾ ಆಯಾಮದಲ್ಲೂ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಆಕೆಯ ಹೆಸರು ಭಾಗ್ಯಶ್ರೀ ಸೂರ್ಯಕಾಂತ್‌ ಸಿಡೆ. ಪುಣೆಯ ವಾಗೋಲಿ ಪ್ರದೇಶದಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಾರ್ಚ್‌ 29ರಂದು ಆಕೆಯನ್ನು ಸಹಪಾಠಿ ಹಾಗೂ ಮತ್ತಿಬ್ಬರು ಹಾಸ್ಟೆಲ್‌ಗೆ ಬಿಟ್ಟು ಬಂದಿದ್ದರು. ಮರು ದಿನ ಭಾಗ್ಯಶ್ರೀ ಪುಣೆಯ ವಿಮಾನ ನಗರದಲ್ಲಿರುವ ಫ್ಯುಯನೆಕ್ಸ್‌ ಮಾಲ್‌ಗೆ ತೆರಳಿದ್ದಳು. ಆದರೆ ಸಂಜೆಯಾದರೂ ವಾಪಾಸ್‌ ಬಂದಿರಲಿಲ್ಲ. ಕರೆ ಮಾಡದೇ ಇದ್ದಾಗ ಪೋಷಕರು ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆಕೆಯ ಫೋನ್‌ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮರು ದಿನವೇ ಕಾಲೇಜಿಗೆ ಆಗಮಿಸಿದ ಪೋಷಕರು ಆಕೆಯ ಕಾಣೆಯಾಗಿರುವ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಆನಂತರ ಪುಣೆಯ ಪೊಲೀಸ್‌ ಠಾಣೆಯಲ್ಲೂ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ಮೊಬೈಲ್‌ ಆಧರಿಸಿ ತನಿಖೆ ಚುರುಕುಗೊಳಿಸಿದ್ದರು.

ಇದೇ ವೇಳೆ ಆಕೆಯ ಮೊಬೈಲ್‌ನಿಂದಲೇ ಕರೆ ಮಾಡಿದ್ದ ವ್ಯಕ್ತಿಯೊಬ್ಬ ನಿಮ್ಮ ಮಗಳು ನಮ್ಮ ಬಳಿ ಇದ್ದಾಳೆ. ಆಕೆಯನ್ನು ಬಿಡುಗಡೆ ಮಾಡಬೇಕು ಎಂದು 9 ಲಕ್ಷ ರೂ. ಹಣ ನೀಡಬೇಕು. ಪೊಲೀಸರಿಗೆ ಮಾಹಿತಿ ನೀಡಬಾರದು. ಇಲ್ಲದೇ ಇದ್ದರೆ ನಿಮ್ಮ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಆದರೂ ಪೊಲೀಸರಿಗೆ ತಮ್ಮ ಮಗಳನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಾಹಿತಿಯನ್ನು ಪೋಷಕರು ನೀಡಿದ್ದರು.

ಮೊಬೈಲ್‌ ಟವರ್‌ ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಅದು ಅಹಮದ್‌ ನಗರದಲ್ಲಿರುವ ಮಾಹಿತಿ ನೀಡಿತ್ತು. ಕೂಡಲೇ ಅಲ್ಲಿನ ಪೊಲೀಸರ ಸಹಕಾರದಿಂದ ಭಾಗ್ಯಶ್ರೀ ಅಪಹರಿಸಿ ಇರಿಸಿದ್ದ ಜಾಗ ಪತ್ತೆ ಮಾಡಲು ಮುಂದಾಗಿದ್ದರು.

ಈ ವಿಚಾರ ಪೊಲೀಸರಿಗೆ ತಿಳಿದಿದೆ. ನಮ್ಮನ್ನು ಹಿಡಿಯಲಿದ್ದಾರೆ ಎನ್ನುವ ಆತಂಕದಲ್ಲಿ ಅಪಹರಣದ ಪ್ರಮುಖ ರೂವಾರಿಯಾಗಿದ್ದ ಆಕೆಯ ಸಹಪಾಠಿ ಶಿವಂ ಫುಲ್‌ವಾಲೆ ಹಾಗೂ ಆತನ ಸ್ನೇಹಿತರಾದ ಸಾಗರ್‌ ಜಾಧವ್‌. ಸುರೇಶ್‌ ಇಂದೂರೆ ಭಾಗ್ಯಶ್ರಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಅಹಮದ್‌ ನಗರದಲ್ಲಿಯೇ ಅಂತ್ಯಕ್ರಿಯೆ ನಡೆಸಿ ಪರಾರಿಯಾಗಿದ್ದರು.

ಮೂವರು ಭಾಗ್ಯಶ್ರೀಯ ಬ್ಯಾಂಕ್‌ ಒಂದರಲ್ಲಿ ವಹಿವಾಟು ನಡೆಸಿದ ಮಾಹಿತಿ ಆಧರಿಸಿ ಪೊಲೀಸರು ಪತ್ತೆ ಚುರುಕುಗೊಳಿಸಿದ್ದರು. ಅಹಮದ್‌ನಗರದಲ್ಲಿಯೇ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.

ಈ ವೇಳೆ ಹಣಕ್ಕಾಗಿ ಕೊಲೆ ಮಾಡಿದ್ಧಾಗಿ, ಅಂತ್ಯಕ್ರಿಯೆಯನ್ನು ಮುಗಿಸಿದ್ಧಾಗಿ ಆರೋಪಿಗಳು ಒಪ್ಪಿಕೊಂಡಿದ್ದರು. ತುರ್ತಾಗಿ ಹಣ ಬೇಕಿತ್ತು. ಸಾಲ ಮಾಡಿಕೊಂಡಿದ್ದೆವು. ಇದಕ್ಕಾಗಿ ಭಾಗ್ಯಶ್ರೀಯನ್ನು ಅಪಹರಿಸಿದ್ದು, ಇದಕ್ಕೆ ತನ್ನಿಬ್ಬರು ಸ್ನೇಹಿತರು ಸಹಾಯ ಮಾಡಿದಾಗ ಶಿವಂ ಬಾಯಿ ಬಿಟ್ಟಿದ್ದ. ಪೊಲೀಸರು ಆರೋಪಿಗಳು ಭಾಗ್ಯಶ್ರೀಯನ್ನು ಅಪಹರಿಸಿದ ಜಾಗ, ಇರಿಸಿದ್ದ ಸ್ಥಳ, ಕೊಲೆ ಮಾಡಿದ್ದು, ಅಂತ್ಯಕ್ರಿಯೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ.

ಭಾಗ್ಯಶ್ರೀ ಜತೆಗೆ ಓದುತ್ತಿದ್ದ ಶಿವಂ ಎಂಬಾತ ಹಣಕ್ಕಾಗಿ ಈ ಕೃತ್ಯ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ. ಜತೆಗಿದ್ದವರ ಮಾತಿಗೆ ನಂಬಿ ಹೀಗೆ ಸಿಲುಕುಕೊಳ್ಳುವುದು ಇದೆ ಎಂದು ಪುಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.