Neet UG 2024: ನೀಟ್ ಪರೀಕ್ಷೆ ಅವಾಂತರ, 1,563 ವಿದ್ಯಾರ್ಥಿಗಳ ಫಲಿತಾಂಶ ರದ್ದು, ಜೂನ್ 23ಕ್ಕೆ ಮರು ಪರೀಕ್ಷೆ
Education News ನೀಟ್ ಯುಜಿ 2024 ಫಲಿತಾಂಶ ಗೊಂದಲ ಹಿನ್ನೆಲೆಯಲ್ಲಿ ಕೃಪಾಂಕ ಪಡೆದಿದ್ದ ವಿದ್ಯಾರ್ಥಿಗಳ ಫಲಿತಾಂಶ ರದ್ದುಪಡಿಸಿ ಮರು ಪರೀಕ್ಷೆ ಎದುರಿಸಲು ಆದೇಶಿಸಲಾಗಿದೆ.
ದೆಹಲಿ: ಯುಜಿ ನೀಟ್ 2024 ಪರೀಕ್ಷೆಯಲ್ಲಿ ಅವಾಂತರ ಆಗಿರುವ ಕುರಿತು ಸಾಕಷ್ಟು ಆರೋಪಗಳು ಬಂದ ನಂತರ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರವು ಗೊಂದಲಕ್ಕೆ ಕಾರಣವಾದ ಕೃಪಾಂಕ ಪಡೆದಿದ್ದ 1,563 ಅಭ್ಯರ್ಥಿಗಳ ಅಂಕಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಅಲ್ಲದೇ ಈ ಎಲ್ಲರೂ ಮರು ಪರೀಕ್ಷೆಯನ್ನು ಕಡ್ಡಾಯವಾಗಿ ಎದುರಿಸಲು ಆದೇಶಿಸಲಾಗಿದೆ. ರದ್ದಾಗಿರುವ ವಿದ್ಯಾರ್ಥಿಗಳು ಜೂನ್ 23ಕ್ಕೆ ನಡೆಯಲಿರುವ ನೀಟ್ ಪಿಜಿ ಪರೀಕ್ಷೆಯೊಂದಿಗೆ ಯುಜಿ ವಿದ್ಯಾರ್ಥಿಗಳು ಮರುಪರೀಕ್ಷೆ ಎದುರಿಸಲು ಅವಕಾಶ ಮಾಡಿ ಕೊಡಲಾಗಿದೆ. ಇದನ್ನು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪತ್ರದಲ್ಲಿ ಉಲ್ಲೇಖಿಸಿದೆ. ಇದನ್ನಾಧರಿಸಿ ಸುಪ್ರೀಂಕೋರ್ಟ್ ಕೃಪಾಂಕ ಪಡೆದಿರುವವರ ಫಲಿತಾಂಶ ರದ್ದಿಗೆ ಸೂಚನೆ ನೀಡಿತು.
ನೀಟ್ ಪರೀಕ್ಷೆ ಎದುರಿಸಿದ ಕೆಲವರಿಗೆ ತಪ್ಪು ಪ್ರಶ್ನೆ ನೀಡಿದ್ದರಿಂದ ಅವರಿಗೆ ಕೃಪಾಂಕ ನೀಡಲಾಗಿತ್ತು. ಇದು ನೀಟ್ ಪರೀಕ್ಷೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಗಂಭೀರ ಆರೋಪಕ್ಕೂ ಕಾರಣವಾಗಿತ್ತು. ತಮಗೆ ಬೇಕಾದವರಿಗೆ ಕೃಪಾಂಕ ನೀಡಿ ಇಡೀ ವ್ಯವಸ್ಥೆಯಲ್ಲೇ ಗೊಂದಲ ಮೂಡಿಸಲಾಗಿದೆ. ಈ ಕುರಿತು ಮರು ಪರೀಕ್ಷೆ ನಡೆಸಬೇಕು ಎಂದು ದೇಶಾದ್ಯಂತ ವಿದ್ಯಾರ್ಥಿಗಳು, ನಾನಾ ಸಂಘಟನೆಗಳು ಹೋರಾಟ ಮಾಡಿದ್ದವು. ಈ ಕಾರಣದಿಂದ ಕೇಂದ್ರ ಸರ್ಕಾರವು ಕೃಪಾಂಕ ಪಡೆದಿದ್ದ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ರದ್ದುಪಡಿಸಿದ್ದು ಮರು ಪರೀಕ್ಷೆ ಎದುರಿಸಲು ಗುರುವಾರ ಆದೇಶಿಸಿದೆ. ಈ ಮೂಲಕ ಇಡೀ ದೇಶಾದ್ಯಂತ ಸದ್ಯವೇ ಆರಂಭವಾಗಬೇಕಾಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಲಾಗಿದೆ.
ಸುಪ್ರೀಂಕೋರ್ಟ್ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿಯೂ ಕೇಂದ್ರ ಸರ್ಕಾರ ತನ್ನ ಪ್ರಮಾಣ ಸಲ್ಲಿಸುವ ಮೂಲಕ ಸ್ಪಷ್ಟವಾಗಿ ಹೇಳಿತ್ತು.
ಇದೇ ವಿಚಾರವಾಗಿ ಕೆಲವು ವಿದ್ಯಾರ್ಥಿಗಳು ಹಾಗೂ ಪೋಷಕರು ಸುಪ್ರೀಂಕೋರ್ಟ್‌ಗೂ ಮೊರೆ ಹೋಗಿದ್ದರು. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಹಾಗೂ ನೀಟ್ ಪರೀಕ್ಷೆ ಆಯೋಜಿಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ( NTA) ಗೆ ನೊಟೀಸ್ ಜಾರಿ ಮಾಡಲಾಗಿತ್ತು. ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಗುರುವಾರ ಬಂದ ಉತ್ತರ ಆಧರಿಸಿ ಕೃಪಾಂಕ ನೀಡಿದವರ ಫಲಿತಾಂಶವನ್ನು ಸುಪ್ರೀಂಕೋರ್ಟ್ ರದ್ದಿಗೆ ನಿರ್ದೇಶನ ನೀಡಿತ್ತು. ಕೃಪಾಂಕ ರದ್ದು, ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಆಯೋಜಿಸಿ ಹಿಂದಿನ ಫಲಿತಾಂಶ ಹಾಗೂ ಹೊಸ ಫಲಿತಾಂಶದ ವಿವರಗಳೊಂದಿಗೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಅನ್ನು ಸಲ್ಲಿಸಬೇಕು. ಜುಲೈ 8 ರಂದು ಇದೇ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಾಗುತ್ತದೆ ಎನ್ನುವ ಮಾಹಿತಿಯನ್ನು ಸುಪ್ರೀಂಕೋರ್ಟ್ ನೀಡಿದೆ.
ಸುಮಾರು 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಈಗಾಗಲೇ ವೈದ್ಯಕೀಯ ಶಿಕ್ಷಣಕ್ಕೆ ತೆಗೆದುಕೊಂಡಿದ್ದರು. ಮೇ 5ರಂದು ಪರೀಕ್ಷೆ ನಡೆಸಿ ಜೂನ್ 14 ರಂದು ಫಲಿತಾಂಶ ಪ್ರಕಟವಾಗಬೇಕಿತ್ತು. ಇದಕ್ಕೂ ಮೊದಲೇ ಅಂದರೆ ಜೂನ್ 4 ರಂದೇ ಫಲಿತಾಂಶ ಪ್ರಕಟಿಸಲಾಗಿತ್ತು. ಇದರಲ್ಲಿ ಕೆಲವೇ ವಿದ್ಯಾರ್ಥಿಗಳ ಪ್ರಶ್ನೆಗಳ ಗೊಂದಲ ಹಾಗೂ ಕೃಪಾಂಕ ನಡೆದು ಅವರಿಗೆ ಹೆಚ್ಚಿನ ಅಂಕ ಸಿಗುವಂತೆ ಮಾಡಿದ ಆರೋಪಗಳು ಕೇಳಿ ಬಂದಿದ್ದವು. ಕೆಲವರಿಗೆ 720 ಕ್ಕೆ 720 ಅಂಕಗಳು ಬಂದಿದ್ದು ಹಲವರ ಹುಬ್ಬೇರಿಸುವಂತೆ ಮಾಡಿತ್ತು.