Bharat Jodo Yatra: ಶ್ರೀನಗರದಲ್ಲಿ ಭಾರೀ ಹಿಮಪಾತ: ಭಾರತ್ ಜೋಡೋ ಯಾತ್ರೆ ಸಮಾರೋಪ ಸಮಾರಂಭದ ಗತಿ ಏನು?
ಶ್ರೀನಗರದಲ್ಲಿ ಭಾರೀ ಹಿಮಪಾತ ಸಂಭವಿಸುತ್ತಿದ್ದು, 'ಭಾರತ್ ಜೋಡೋ ಯಾತ್ರೆ'ಯ ಸಮಾರೋಪ ಸಮಾರಂಭದ ಸಂಭ್ರಮಾಚರಣೆಯ ಉತ್ಸಾಹವನ್ನು ಕುಗ್ಗಿಸುವ ಸಾಧ್ಯತೆ ದಟ್ಟವಾಗಿದೆ. ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಮೆಗಾ ರ‍್ಯಾಲಿ ನಡೆಯುವ ಅನುಮಾನ ಮೂಡಿದೆ. ಈ ಕುರಿತು ಇಲ್ಲಿದೆ ಮಾಹಿತಿ..
ಶ್ರೀನಗರ: ಶ್ರೀನಗರದಲ್ಲಿ ಭಾರೀ ಹಿಮಪಾತ ಸಂಭವಿಸುತ್ತಿದ್ದು, 'ಭಾರತ್ ಜೋಡೋ ಯಾತ್ರೆ'ಯ ಸಮಾರೋಪ ಸಮಾರಂಭದ ಸಂಭ್ರಮಾಚರಣೆಯ ಉತ್ಸಾಹವನ್ನು ಕುಗ್ಗಿಸುವ ಸಾಧ್ಯತೆ ದಟ್ಟವಾಗಿದೆ. ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಮೆಗಾ ರ‍್ಯಾಲಿ ನಡೆಯುವ ಅನುಮಾನ ಮೂಡಿದೆ.
ಈ ಮೆಗಾ ರ‍್ಯಾಲಿಯಲ್ಲಿ ಕಾಂಗ್ರೆಸ್ ಉನ್ನತ ನಾಯಕತ್ವ ಮಾತ್ರವಲ್ಲದೇ, ವಿವಿಧ ಸಮಾನ ಮನಸ್ಕ ಹನ್ನೆರೆಡು ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ. ಆದರೆ ಭಾರೀ ಹಿಮಪಾತ ಈ ಸಮಾರಂಭಕ್ಕೆ ಅಡಚಣೆಯನ್ನುಂಟು ಮಾಡಬಹುದು ಎಂದು ಹೇಳಲಾಗುತ್ತಿದೆ.
ಭಾರೀ ಹಿಮಪಾತದ ಕಾರಣಕ್ಕೆ ಈಗಾಗಲೇ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ವಿಮಾನ ಸಂಚಾರಕ್ಕೂ ಕೂಡ ಅಸ್ತವ್ಯಸ್ತಗೊಂಡಿದ್ದು, ಭಾರತ್ ಜೋಡೋ ಸಮಾರೋಪ ಸಮಾರಂಭದಲ್ಲಿ ವಿವಿಧ ಪಕ್ಷಗಳ ನಾಯಕರು ಭಾಗವಹಿಸಲು ಸಾಧ್ಯವಾಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಡಿಮೆ ಗೋಚರತೆ ಮತ್ತು ನಿರಂತರ ಹಿಮಪಾತವು ಶ್ರೀನಗರಕ್ಕೆ ಎಲ್ಲಾ ವಿಮಾನಗಳನ್ನು ವಿಳಂಬಗೊಳಿಸಿದೆ ಎಂದು ಶ್ರೀನಗರದ ವಿಮಾನ ನಿಲ್ದಾಣದ ನಿರ್ದೇಶಕ ಕುಲದೀಪ್ ಸಿಂಗ್ ರಿಷಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ವಿಸ್ತಾರಾ ಏರ್‌ಲೈನ್ಸ್ ದೆಹಲಿಯಿಂದ ಶ್ರೀನಗರಕ್ಕೆ ಸಂಚರಿಸುವ ತನ್ನ ಎರಡೂ ವಿಮಾನಗಳನ್ನು ದಿನದ ಮಟ್ಟಿಗೆ ರದ್ದುಗೊಳಿಸಿದೆ.
ಸಮಾರೋಪ ಸಮಾರಂಭವು ಶ್ರೀನಗರದ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಲಿದ್ದು, ನಂತರ ಕ್ರೀಡಾಂಗಣದಲ್ಲಿ ರ‍್ಯಾಲಿ ನಡೆಯಲಿದೆ. ಆದರೆ ಹಿಮಪಾತ ಈ ರ‍್ಯಾಲಿಯನ್ನು ರದ್ದುಗೊಳಿಸುವ ಅನಿವಾರ್ಯತೆಯನ್ನು ಸೃಷ್ಟಿಸಲಿದೆ ಎಂಬ ಅನುಮಾನ ಕಾಂಗ್ರೆಸ್‌ನ್ನು ಕಾಡತೊಡಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ ಮತ್ತು ಭಾರತ್ ಜೋಡೋ ಯಾತ್ರೆಯ ಸ್ಮಾರಕವನ್ನು ಅನಾವರಣಗೊಳಿಸಲಿದ್ದಾರೆ. ಆದರೆ ಸಮಾರೋಪ ಸಮಾರಂಭ ಏನಾಗಲಿದೆ ಎಂಬುದರ ಕುರಿತು ಕಾಂಗ್ರೆಸ್ ಇದುವರೆಗೂ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ.
ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್), ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಸಿಪಿಐ(ಎಂ), ಸಿಪಿಐ, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಕೇರಳ ಕಾಂಗ್ರೆಸ್, ಫಾರೂಕ್ ಅಬ್ದುಲ್ಲಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ), ಮೆಹಬೂಬಾ ಮುಫ್ತಿ ಅವರ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಮತ್ತು ಶಿಬು ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಂಎಂಎಂ) ಭಾರತ್ ಜೋಡೋ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದಾಗಿ ಘೋಷಿಸಿವೆ.
ನಿನ್ನೆ(ಜ.30-ಭಾನುವಾರ) ಶ್ರೀನಗರದ ಲಾಲ್ ಚೌಕ್‌ನಲ್ಲಿ, ರಾಹುಲ್ ಗಾಂಧಿ ಅವರು ತ್ರಿವರ್ಣ ಧ್ವಜ ಹಾರಿಸುವ ಮೂಲಕ ಭಾರತ್ ಜೋಡೋ ಯಾತ್ರೆಯನ್ನು ಮುಕ್ತಾಯಗೊಳಿಸಿದ್ದರು.
ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆಯನ್ನು ತಮ್ಮ ಜೀವನದ ಅ ತ್ಯಂತ ಸಿಹಿ ಅನುಭವ ಎಂದು ಬಣ್ಣಿಸಿದ್ದರು. ದೇಶದ ಜನ ಸೌಹಾರ್ದಯುತವಾಗಿ ಬದುಕುವುದನ್ನು ಇಚ್ಛಿಸುತ್ತಾರೆ ಎಂಬ ಸತ್ಯವನ್ನು ನಾನು ಈ ಯಾತ್ರೆಯಿಂದ ಮನಗಂಡೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಯಾತ್ರೆಯದ್ದಕ್ಕೂ ದೇಶದ ಜನ ನನಗೆ ಅಪಾರ ಬೆಅಂಬಲ ಹಾಗೂ ಪ್ರೀತಿ ತೋರಿದರು. ಅವರ ಈ ಪ್ರೀತಿಗೆ ನಾನು ಸದಾಕಾಲ ಆಭಾರಿಯಾಗಿರುತ್ತೇನೆ. ಭಾರತ್ ಜೋಡೋ ಯಾತ್ರೆಯು ನನಗೆ ನೈಜ ಭಾರತದ ದರ್ಶನ ಮಾಡಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.