ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇವಿಎಂ ಹ್ಯಾಕ್‌ ಆರೋಪ; ರಾಹುಲ್ ಗಾಂಧಿಯಿಂದ ಎಲಾನ್ ಮಸ್ಕ್ ತನಕ ಯಾರು ಏನು ಹೇಳಿದ್ರು, ಇಲ್ಲಿದೆ 10 ಹೇಳಿಕೆಗಳು

ಇವಿಎಂ ಹ್ಯಾಕ್‌ ಆರೋಪ; ರಾಹುಲ್ ಗಾಂಧಿಯಿಂದ ಎಲಾನ್ ಮಸ್ಕ್ ತನಕ ಯಾರು ಏನು ಹೇಳಿದ್ರು, ಇಲ್ಲಿದೆ 10 ಹೇಳಿಕೆಗಳು

ಮುಂಬಯಿ ವಾಯವ್ಯ ಕ್ಷೇತ್ರದ ಇವಿಎಂ ಅನ್‌ಲಾಕ್‌ ವಿವಾದವು ಇವಿಎಂ ಹ್ಯಾಕ್‌ ಆರೋಪವನ್ನು ಮುನ್ನೆಲೆಗೆ ತಂದು ನಿಲ್ಲಿದೆ. ರಾಹುಲ್ ಗಾಂಧಿ ಅವರಿಂದ ಹಿಡಿದು ಉದ್ಯಮಿ ಎಲಾನ್ ಮಸ್ಕ್‌ ತನಕ ಹಲವರು ನೀಡಿದ ಹೇಳಿಕೆಗಳು ಚರ್ಚೆಗೆ ಒಳಗಾಗಿವೆ. ಹೀಗಾಗಿ, ರಾಹುಲ್ ಗಾಂಧಿಯಿಂದ ಎಲಾನ್ ಮಸ್ಕ್ ತನಕ ಯಾರು ಏನು ಹೇಳಿದ್ರು ಎಂಬ ಕುತೂಹಲ ತಣಿಸುವ 10 ಹೇಳಿಕೆಗಳ ಕಿರುನೋಟ ಇಲ್ಲಿದೆ.

ಇವಿಎಂ ಹ್ಯಾಕ್‌ ಆರೋಪ; ರಾಹುಲ್ ಗಾಂಧಿಯಿಂದ ಎಲಾನ್ ಮಸ್ಕ್ ತನಕ ಯಾರು ಏನು ಹೇಳಿದ್ರು, ಇಲ್ಲಿದೆ 10 ಹೇಳಿಕೆಗಳು (ಸಾಂಕೇತಿಕ ಚಿತ್ರ)
ಇವಿಎಂ ಹ್ಯಾಕ್‌ ಆರೋಪ; ರಾಹುಲ್ ಗಾಂಧಿಯಿಂದ ಎಲಾನ್ ಮಸ್ಕ್ ತನಕ ಯಾರು ಏನು ಹೇಳಿದ್ರು, ಇಲ್ಲಿದೆ 10 ಹೇಳಿಕೆಗಳು (ಸಾಂಕೇತಿಕ ಚಿತ್ರ) (PTI)

ನವದೆಹಲಿ: ವಿದ್ಯುನ್ಮಾನ ಮತಯಂತ್ರ (ಇವಿಎಂ) ಹ್ಯಾಕ್ ಮಾಡುವ ವಿಚಾರ ಬಹಳಷ್ಟು ಚರ್ಚೆಗೆ ಒಳಗಾಗಿದೆ. ಮುಂಬಯಿ ವಾಯವ್ಯ ಕ್ಷೇತ್ರದ ಇವಿಎಂ ಅನ್‌ಲಾಕ್‌ ವಿವಾದ ಈ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದು ನಿಲ್ಲಿಸಿದೆ. ವಾಯವ್ಯ ಮುಂಬಯಿ ಲೋಕಸಭಾ ಕ್ಷೇತ್ರದಲ್ಲಿ ಶಿಂಧೆ ಬಣದ ಶಿವಸೇನಾ ಅಭ್ಯರ್ಥಿ ಮಂಗೇಶ್ ಪಂಡ್ಲಿಕರ್‌ ಅವರ ಅಲ್ಪ ಅಂತರದ (48 ಮತಗಳು) ಗೆಲುವಿನ ನಂತರ ಇದೆಲ್ಲ ಶುರುವಾಗಿದೆ. ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲು ಭಾರತೀಯ ಚುನಾವಣಾ ಆಯೋಗಕ್ಕೆ ಧೈರ್ಯವಿಲ್ಲ ಎಂದು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹೇಳಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಜೂನ್ 4 ರಂದು ವಿಜೇತ ಅಭ್ಯರ್ಥಿಯ ಸಂಬಂಧಿಯೊಬ್ಬರು ಮೊಬೈಲ್ ಬಳಸಿದ್ದಾರೆ ಎಂದು ವರದಿಗಳನ್ನು ಉಲ್ಲೇಖಿಸಿ ಆದಿತ್ಯ ಠಾಕ್ರೆ ಈ ಹೇಳಿಕೆ ನೀಡಿದ್ದರು. ಇದಾದ ಬೆನ್ನಿಗೆ ರಾಹುಲ್ ಗಾಂಧಿ ಅವರಿಂದ ಹಿಡಿದು ಉದ್ಯಮಿ ಎಲಾನ್ ಮಸ್ಕ್‌ ತನಕ ಹಲವರು ನೀಡಿದ ಹೇಳಿಕೆಗಳು ಚರ್ಚೆಗೆ ಒಳಗಾಗಿವೆ.

ಇವಿಎಂ ಹ್ಯಾಕ್ ಆರೋಪ; ಯಾರು ಏನು ಹೇಳಿದರು?

1) "ಭಾರತದಲ್ಲಿ ಇವಿಎಂಗಳು ಕಪ್ಪು ಪೆಟ್ಟಿಗೆಯಾಗಿವೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅವಕಾಶವಿಲ್ಲ. ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಬಗ್ಗೆ ಗಂಭೀರ ಕಳವಳಗಳು ಉಂಟಾಗುತ್ತಿವೆ. ಚುನಾವಣಾ ಸಂಸ್ಥೆಗಳು ಹೊಣೆಗಾರಿಕೆಯ ಕೊರತೆಯಿಂದಾಗಿ ಪ್ರಜಾಪ್ರಭುತ್ವ ಕೇವಲ ನೆಪಕ್ಕಷ್ಟೇ ಉಳಿದುಕೊಂಡಿದೆ. ವಂಚನೆ ಹೆಚ್ಚಾಗಿದೆ" ಎಂದು ರಾಹುಲ್ ಗಾಂಧಿ ಎಕ್ಸ್‌ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

2) ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ತಡೆಹಿಡಿಯಬೇಕು. ಚುನಾವಣಾ ಆಯೋಗವು ಸರ್ವಪಕ್ಷಗಳ ಸಭೆ ಕರೆದು ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸಬೇಕು. ಮೊಬೈಲ್ ಫೋನ್ ಅನ್ನು ಅನಧಿಕೃತವಾಗಿ ಬಳಸಿರುವ ಬಗ್ಗೆ ತನಿಖೆ ನಡೆಯಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಹೇಳಿದ್ದಾರೆ.

3) ಚುನಾವಣಾ ಆಯೋಗದ ಅಧಿಕಾರಿಯ ಮೊಬೈಲ್ ಫೋನ್‌ ಅನ್ನು ರವೀಂದ್ರ ವೈಕರ್ ಅವರು ಬಳಸಿದ್ದು ವಿವಾದಕ್ಕೆ ಕಾರಣ. ಮತ ಎಣಿಕೆ ಪ್ರಕ್ರಿಯೆಯ ಡೇಟಾ ಎಂಟ್ರಿಗೆ ಒಟಿಪಿ ಬೇಕು ಎಂದು ಚುನಾವಣಾ ಮತಗಟ್ಟೆ ಅಧಿಕಾರಿ ಹೇಳಿದ್ದಾರೆ. ಅದು ವೈಕರ್ ಸಂಬಂಧಿಕರಿಗೆ ಮಾತ್ರ ಸಿಗುತ್ತದೆ ಎಂಬುದು ಗಂಭೀರ ವಿಚಾರ. ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಬೇಕು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್ಚಂದ್ರ ಪವಾರ್) ವಕ್ತಾರ ಕ್ಲೈಡ್ ಕ್ರಾಸ್ಟೊ ಹೇಳಿದ್ದಾರೆ.

4) "ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುವ ಬಗ್ಗೆ ನಮಗೆ ಯಾವಾಗಲೂ ಅನುಮಾನಗಳಿವೆ. ಎಲೋನ್ ಮಸ್ಕ್ ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಯಾವುದನ್ನು ಬೇಕಾದರೂ ಹ್ಯಾಕ್ ಮಾಡಬಹುದು ಎಂದು ಅವರು ಹೇಳಿದ್ದಾರೆ. ಹಲವಾರು ಮನವಿಗಳ ಹೊರತಾಗಿಯೂ, ಚುನಾವಣಾ ಆಯೋಗವು ಮತ ​​ಎಣಿಕೆಯ ದಿನದ ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡುವ ಧೈರ್ಯವನ್ನು ತೋರಿಸಿಲ್ಲ. ನಮ್ಮ ಹಕ್ಕುಗಳನ್ನು ಬೆಂಬಲಿಸಿ" ಎಂದು ಶಿವಸೇನಾ (ಉದ್ಧವ್ ಠಾಕ್ರೆ) ನಾಯಕ ಆದಿತ್ಯ ಠಾಕ್ರೆ ಹೇಳಿಕೊಂಡಿದ್ದಾರೆ.

5) “ಎಫ್‌ಐಆರ್ ದಾಖಲಿಸಲು ಹತ್ತು ದಿನಗಳು ಏಕೆ ಬೇಕಾಯಿತು? ಈ ಸುದ್ದಿಯನ್ನು ಮುಂಬೈ ಪೊಲೀಸರು ಇನ್ನೂ ನಿರಾಕರಿಸಿಲ್ಲವೇ? ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಅಥವಾ ಅಭ್ಯರ್ಥಿಗಳೊಂದಿಗೆ ಏಕೆ ಹಂಚಿಕೊಳ್ಳುತ್ತಿಲ್ಲ? ಚುನಾವಣಾ ಆಯೋಗದ ಡೇಟಾ ಎಂಟ್ರಿ ಆಪರೇಟರ್ ಹೊಂದಿರುವ ಫೋನ್ ಅಭ್ಯರ್ಥಿಯ ಸಂಬಂಧಿಕರ ಬಳಿ ಏಕೆ ಕಂಡುಬಂತು? ಎನ್‌ಕೋರ್‌ ಪೋರ್ಟಲ್ (ಚುನಾವಣಾ ಆಯೋಗದ ಡೇಟಾ ಪೋರ್ಟಲ್) ಪ್ರವೇಶಿಸಲು ಆ ಫೋನ್‌ನಲ್ಲಿ ಒಟಿಪಿ ಸ್ವೀಕರಿಸಲಾಗಿದೆ ಎಂದು ರಿಟರ್ನಿಂಗ್ ಆಫೀಸರ್‌ ಸ್ವತಃ ಹೇಳಿದ್ದಾರೆ. ಪೊಲೀಸ್ ತನಿಖೆಯನ್ನು ನಿರಾಕರಿಸಿ, ಪಾರದರ್ಶಕ ಸಾರ್ವಜನಿಕ ತನಿಖೆಗೆ ಆಯೋಗ ಆದೇಶ ನೀಡಲಿ ಎಂದು ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಆಗ್ರಹಿಸಿದ್ದಾರೆ.

6) “ಭಾರತದ ಸರ್ವೋಚ್ಚ ನ್ಯಾಯಾಲಯವು ನಾವು ನಮ್ಮ ಯಂತ್ರಗಳನ್ನು ನಂಬಬೇಕು ಎಂದು ಹೇಳಿದಾಗ ಮತ್ತು ನಾವು ಭಾರತದ ಚುನಾವಣಾ ಆಯೋಗವನ್ನು ನಂಬಬೇಕು ಎಂದು ಸುಪ್ರೀಂ ಕೋರ್ಟ್ ಸ್ವತಃ ನಂಬುತ್ತಿದ್ದರೆ, ನಾನು ಅವರ ಬಗ್ಗೆ ಏಕೆ ಪ್ರತಿಕ್ರಿಯಿಸಬೇಕು? ನಾವು ಸರ್ಕಾರ ಮತ್ತು ಯಂತ್ರಗಳನ್ನು ನಂಬಲು ಪ್ರಾರಂಭಿಸಿದರೆ, ಎಲ್ಲಾ ಕೆಲಸಗಳು ಯಂತ್ರಗಳ ಮೂಲಕ ನಡೆಯಬೇಕು. ಹಾಗಾದರೆ ನ್ಯಾಯಾಲಯಗಳು ಏಕೆ ಅಸ್ತಿತ್ವದಲ್ಲಿವೆ? ನಾವು ಸರ್ಕಾರವನ್ನು ನಂಬಲು ಪ್ರಾರಂಭಿಸಿದರೆ, ತೀರ್ಪುಗಳನ್ನು ನೀಡುವುದರಿಂದ ಏನು ಪ್ರಯೋಜನ? ಇದು ದೊಡ್ಡ ಸಮಸ್ಯೆ; ನಾನು ಅದರ ಬಗ್ಗೆ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ತಿಳಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.

7) “ತಂತ್ರಜ್ಞಾನವು ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶವನ್ನು ಹೊಂದಿದೆ, ಅದು ಸಮಸ್ಯೆಗಳಿಗೆ ಕಾರಣವಾದರೆ ಅದರ ಬಳಕೆಯನ್ನು ನಿಲ್ಲಿಸಬೇಕು. ಇಂದು ಜಗತ್ತಿನ ಹಲವು ಚುನಾವಣೆಗಳಲ್ಲಿ ಇವಿಎಂ ಟ್ಯಾಂಪರಿಂಗ್ ಆಗುವ ಆತಂಕ ವ್ಯಕ್ತವಾಗುತ್ತಿದ್ದು, ಇವಿಎಂ ಟ್ಯಾಂಪರಿಂಗ್ ಅಪಾಯದ ಬಗ್ಗೆ ವಿಶ್ವದ ಖ್ಯಾತ ತಂತ್ರಜ್ಞಾನ ತಜ್ಞರು ಬಹಿರಂಗವಾಗಿಯೇ ಬರೆಯುತ್ತಿರುವಾಗ ಇವಿಎಂ ಬಳಕೆಗೆ ಆಗ್ರಹದ ಹಿಂದಿನ ಕಾರಣವೇನು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು. ಭವಿಷ್ಯದ ಎಲ್ಲಾ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಬಳಸಿ ನಡೆಸಬೇಕೆಂಬ ನಮ್ಮ ಬೇಡಿಕೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಅಖಿಲೇಶ್ ಯಾದವ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

8) “ನಾವು ವಿದ್ಯುನ್ಮಾನ ಮತಯಂತ್ರಗಳನ್ನು ತೊಡೆದುಹಾಕಬೇಕು. ಮಾನವರು ಅಥವಾ AI ನಿಂದ ಹ್ಯಾಕ್ ಆಗುವ ಅಪಾಯವು ಚಿಕ್ಕದಾಗಿದ್ದರೂ, ಇನ್ನೂ ತುಂಬಾ ಹೆಚ್ಚು ಅಪಾಯಕಾರಿ" ಎಂದು ಉದ್ಯಮಿ ಎಲಾನ್‌ ಮಸ್ಕ್ ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

9) "ಎಲಾನ್ ಮಸ್ಕ್‌ ಅವರ ಹೇಳಿಕೆ ಜಾಗತಿಕ ಸ್ತರದ ಸಾಮಾನ್ಯ ಹೇಳಿಕೆಯಾಗಿದ್ದು, ಯಾರೂ ಸುರಕ್ಷಿತ ಡಿಜಿಟಲ್ ಯಂತ್ರಾಂಶವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ. ಅಂತಹ ದೃಷ್ಟಿಕೋನವು "ಯುಎಸ್ ಮತ್ತು ಇತರ ಸ್ಥಳಗಳಿಗೆ ಅನ್ವಯಿಸಬಹುದೇ ಹೊರತು ನಿರ್ದಿಷ್ಟವಾಗಿ ಭಾರತಕ್ಕೆ ಅನ್ವಯಿಸುವುದು ತಪ್ಪು. ಅಲ್ಲಿ ಅವರು ಇಂಟರ್ನೆಟ್ ಸಂಪರ್ಕಿತ ಮತ ಯಂತ್ರಗಳನ್ನು ನಿರ್ಮಿಸಲು ನಿಯಮಿತ ಕಂಪ್ಯೂಟ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಾರೆ. ಭಾರತೀಯ ಇವಿಎಂಗಳು ಸುರಕ್ಷಿತವಾಗಿರುತ್ತವೆ ಮತ್ತು ಯಾವುದೇ ಇಂಟರ್‌ನೆಟ್ ನೆಟ್‌ವರ್ಕ್‌ ಜೊತೆಗೆ ಜೋಡಿಕೊಂಡಿಲ್ಲ, ಅವು ಪ್ರತ್ಯೇಕವಾಗಿವೆ ಎಂದು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಪಾದಿಸಿದ್ದಾರೆ.

10) ಕಪ್ಪು ಪೆಟ್ಟಿಗೆಯ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ಅವರು ತಮ್ಮ ಕಪ್ಪು ಕೃತ್ಯಗಳನ್ನು ಮರೆಮಾಡಲು ಬಯಸುತ್ತಾರೆ ಮತ್ತು ಆದ್ದರಿಂದ, ಅವರು ತಮ್ಮ ಸುಳ್ಳು ಮತ್ತು ನಕಲಿ ಕಥೆಯನ್ನು ಅರೆಬೆಂದ ಕಥೆಯನ್ನು ಬಳಸಲು ಬಯಸುತ್ತಾರೆ. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡಿರುವ ಕರ್ನಾಟಕದ ಕರಾಳ ಪತ್ರಗಳನ್ನು ಮರೆಮಾಚಲು ಅವರು ಸುಳ್ಳು ಕಥೆಯನ್ನು ಹರಿಬಿಟ್ಟು ಅರ್ಧಸತ್ಯ ಮತ್ತು ಪೂರ್ಣ ಸುಳ್ಳನ್ನು ಹೇಳುತ್ತಿದ್ದಾರೆ, ಇವಿಎಂಗಳನ್ನು ಅನ್ಲಾಕ್ ಮಾಡಲು ಒಟಿಪಿ ಅಗತ್ಯವಿದೆ ಎಂಬ ಕಥೆಯನ್ನು ರಾಹುಲ್ ಗಾಂಧಿ ಮುಂದಿಟ್ಟಿದ್ದಾರೆ. ಅವರನ್ನು ಬೆಂಬಲಿಸುವ ಜನರಷ್ಟೇ ಇದನ್ನು ಹೇಳಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಎಎನ್‌ಐಗೆ ತಿಳಿಸಿದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.