ಮೋದಿ ಸಂಪುಟ 3.0: ಇನ್ನೂ 10 ಸ್ಥಾನಗಳು ಖಾಲಿ, ಮಿತ್ರ ಪಕ್ಷಗಳು, ಬಿಜೆಪಿಯವರಿಗೆ ಇನ್ನೊಂದು ಅವಕಾಶ ಸಾಧ್ಯತೆ
Modi Cabinet: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಚನೆಯಾದ ಸಂಪುಟದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಿಗೆ ಅವಕಾಶ ಸಿಕ್ಕಿದೆ. ಇನ್ನೂ ಕೆಲವು ಸ್ಥಾನ ಉಳಿದಿದ್ದು, ಸಂಪುಟ ವಿಸ್ತರಣೆಯೂ ಆಗಬಹುದು.ವರದಿ: ಎಚ್.ಮಾರುತಿ.ಬೆಂಗಳೂರು
ಬೆಂಗಳೂರು: ಜವಹರಲಾಲ್ ಅವರ ನಂತರ ನರೇಂದ್ರ ಮೋದಿ ಅವರು ಐತಿಹಾಸಿಕ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿ ಅವರೊಂದಿಗೆ 71 ಸಚಿವರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಲ್ಲಿ 30 ಮಂದಿ ಸಂಪುಟ ದರ್ಜೆ, 36 ಮಂದಿ ರಾಜ್ಯ ಸಚಿವ ಮತ್ತು ಉಳಿದವರು ಸ್ವತಂತ್ರ ಸಚಿವರಾಗಿದ್ದಾರೆ. ಈ ಸಂಪುಟವನ್ನು ಅವಲೋಕಿಸಿದರೆ ದೇಶದ 24 ರಾಜ್ಯಗಳು, ವಿವಿಧ ಸಮುದಾಯಗಳು ಮತ್ತು ಎಲ್ಲ ಸ್ತರಗಳಿದ ಆಯ್ಕೆ ಮಾಡಿರುವುದು ಕಂಡು ಬರುತ್ತಿದೆ.
ಮೋದಿ ಅವರ ಸಂಪುಟದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ 37 ಮಂದಿ, 15 ಮಂದಿ ಎಸ್ ಟಿ ಮತ್ತು ಎಸ್ ಟಿ ಮತ್ತು ಐವರು ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ್ದಾರೆ. ಇದಕ್ಕೂ ಮಿಗಿಲಾಗಿ ಎನ್ ಡಿ ಎ ಪಾಲುದಾರರಾದ ಟಿಡಿಪಿ, ಜೆಡಿಯು ಎಲ್ ಜೆಪಿ, ಶಿವಸೇನಾ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿದ 11 ಸಚಿವರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಮತ್ತೊಂದು ಕುತೂಹಲಕಾರಿ ಅಂಶ ಎಂದರೆ 71 ಸಚಿವರಲ್ಲಿ 43 ಮಂದಿ ಹಲವು ವರ್ಷಗಳ ಸಂಸತ್ ನಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದಾರೆ.
ಇನ್ನೂ 10 ಸ್ಥಾನಗಳು ಖಾಲಿ ಉಳಿದುಕೊಂಡಿದ್ದು, ಸಧ್ಯಕ್ಕೆ ಭರ್ತಿ ಮಾಡುವ ಸಾಧ್ಯತೆಗಳು ಇಲ್ಲ. ಭವಿಷ್ಯದಲ್ಲಿ ಮಿತ್ರಪಕ್ಷಗಳ ನಡೆಯನ್ನು ಆಧರಿಸಿ ಖಾಲಿ ಸ್ಥಾನಗಳನ್ನು ತುಂಬಲಿದೆ. ಕೆಲವು ಸ್ಥಾನಗಳನ್ನು ಉಳಿಸಿಕೊಳ್ಳುವುದು ರಾಜಕೀಯ ತಂತ್ರದ ಭಾಗವೂ ಹೌದು.
ಸಂಪುಟದಲ್ಲಿ 7 ಮಾಜಿ ಮುಖ್ಯಮಂತ್ರಿಗಳು
ಈ ಬಾರಿ ಉತ್ತರಪ್ರದೇಶದಿಂದ ಕೇವಲ 33 ಮಂದಿ ಆಯ್ಕೆಯಾಗಿದ್ದರೂ ಸಚಿವ ಸಂಪುಟದಲ್ಲಿ ಅವಕಾಶ ಮಾತ್ರ ಕಡಿಮೆಯಾಗಿಲ್ಲ. 9 ಮಂದಿ ಸಚಿವ ಸ್ಥಾನ ಗಿಟ್ಟಿಸಿದ್ದಾರೆ. 2014 ರಲ್ಲಿ 73 ಮತ್ತು 2019ರಲ್ಲಿ ರಲ್ಲಿ 64 ಸ್ಥಾನ ಗಳಿಸಿದ್ದಾಗಲೂ ಉತ್ತರಪ್ರದೇಶಕ್ಕೆ 9 ಸಚಿವ ಸ್ಥಾನ ನೀಡಲಾಗಿತ್ತು.
ಪ್ರಧಾನಿ ಮೋದಿ ಸಂಪುಟದಲ್ಲಿ 7 ಮಾಜಿ ಮುಖ್ಯಮಂತ್ರಿಗಳಿಗೆ ಅವಕಾಶ ಲಭ್ಯವಾಗಿದೆ. ಸ್ವತಃ ನರೇಂದ್ರ ಮೋದಿ ಅವರೂ 2014ರಲ್ಲಿ ಪ್ರಧಾನಿಯಾಗುವುದಕ್ಕೂ ಮುನ್ನ ಮೂರು ಅವಧಿಗೆ ಗುಜರಾತ್ ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ರಾಜನಾಥ ಸಿಂಗ್ (ಉತ್ತರ ಪ್ರದೇಶ), ಶಿವರಾಜ್ ಸಿಂಗ್ ಚೌಹಾಣ್ (ಮಧ್ಯ ಪ್ರದೇಶ), ಎಚ್.ಡಿ.ಕುಮಾರಸ್ವಾಮಿ (ಕರ್ನಾಟಕ), ಜಿತಿನ್ ರಾಂ ಮಾಂಝಿ (ಬಿಹಾರ), ಮನೋಹರ್ ಲಾಲ್ ಖಟ್ಟರ್ (ಹರಿಯಾಣ),ಸರ್ಬಾನಂದ ಸೋನೋವಾಲ್ (ಅಸ್ಸಾಂ), ಅವರೂ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಕುಮಾರಸ್ವಾಮಿ(ಜೆಡಿಎಸ್) ಮತ್ತು ಮಾಂಝಿ (ಹಿಂದೂಸ್ಥಾನಿ ಅವಂ) ಹೊರತುಪಡಿಸಿ ಉಳಿದವರೆಲ್ಲಾ ಬಿಜೆಪಿಯವರೇ ಆಗಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ತ್ರಿಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ, ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದಾಸ್, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಟಿ ಎಸ್ ರಾವತ್ ಅವರಿಗೆ ಸ್ಥಾನ ಸಿಕ್ಕಿಲ್ಲ.
ಶೆಟ್ಟರ್‌ಗೆ ಏಕೆ ಸಿಗಲಿಲ್ಲ
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲು ಕಡ ನಂತರ ದೆಹಲಿ ವರಿಷ್ಠರೊಂದಿಗೆ ಬೊಮ್ಮಾಯಿ ಅವರ ಸಂಬಂಧ ಅಷ್ಟಕ್ಕಷ್ಟೇ. ಶೆಟ್ಟರ್ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ನಂತರ ವಿಧಾನಪರಿಷತ್ ಸದಸ್ಯರಾಗಿ ರಾಜೀನಾಮೆ ನೀಡಿ ಮರಳಿ ಬಿಜೆಪಿ ಸೇರಿದ್ದೇ ಅವರಿಗೆ ಮುಳುವಾಗಿದೆ. ಒಂದು ವೇಳೆ ಅವರು ಬಿಜೆಪಿಯಲ್ಲೇ ಮುಂದುವರೆದಿದ್ದರೆ ಸೋಮಣ್ಣ ಅವರ ಸ್ಥಾನದಲ್ಲಿ ಶೆಟ್ಟರ್ ಅವರು ಇರುತ್ತಿದ್ದರು.
ಬಿಜೆಪಿಯ ಪ್ರಮುಖ ಪರಿಶಿಷ್ಟ ಜಾತಿ ಸಮುದಾಯದ ನಾಯಕ ಮಧ್ಯಪ್ರದೇಶದ ವೀರೇಂದ್ರಕುಮಾರ್, ಪಶ್ಚಿಮ ಬಂಗಾಳದ ಶಂತನು ಠಾಕೂರ್ ಅವರೂ ಸಂಪುಟ ಸೇರಿದ್ದಾರೆ. ಒರಿಸ್ಸಾದಿಂದ 6 ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಪಕ್ಷದ ಪ್ರಮುಖ ಬುಡಕಟ್ಟು ನಾಯಕ ಜೌಲ್ ಓರಾಂ, ಜಾರ್ಖಂಡ್ ನ ಹಿಂದುಳಿದ ವರ್ಗಗಳ ಮುಖಂಡ ಅನ್ನಪೂರ್ಣಾ ದೇವಿ ಅವರು ಪ್ರಮುಖ ಮುಖಂಡರಾಗಿದ್ದಾರೆ.
ಭೂಮಿಹಾರ್ ಸಮುದಾಯದ ಮುಖಂಡ ರಾಜೀವ್ ರಂಜನ್ ಸಿಂಗ್ ಅಕಾ ಲಲನ್ ಸಿಂಗ್, ಜೆಡಿಯು ಮಾಜಿ ಅಧ್ಯಕ್ಷ ರಾಮನಾಥ್ ಠಾಕೂರ್ ಅವರೂ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ. ರಾಮನಾಥ್ ಅವರು ಬಿಹಾರದ ಹಿಂದುಳಿದ ವರ್ಗಗಳ ಮುಖಂಡ ಕರ್ಪೂರಿ ಠಾಕೂರ್ ಅವರ ಪುತ್ರ. ಕರ್ಪೂರಿ ಠಾಕೂರ್ ಅವರಿಗೆ ಕಳೆದ ವರ್ಷ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿತ್ತು. ಬಿಜೆಪಿ ನೃತೃತ್ವದ ಎನ್ ಡಿಎ 293 ಸ್ಥಾನಗಳನ್ನು ಗಳಿಸಿದೆ. ಇದರಲ್ಲಿ ಬಿಜೆಪಿ 240 ಸ್ಥಾನಗಳಲ್ಲಿ ಜಯ ಗಳಿಸಿದೆ. 2019ರ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗಳಿಸಿತ್ತು.
(ವರದಿ: ಎಚ್.ಮಾರುತಿ.ಬೆಂಗಳೂರು)
ವಿಭಾಗ