Vijay Rupani: ಖರ್ಗೆ ಗೆಲುವನ್ನು ತಟ್ಟೆಯಲ್ಲಿ ಇಟ್ಟು ಕೊಟ್ಟಿದ್ದಾರೆ: ಮೋದಿ ವಿರುದ್ಧದ 'ರಾವಣ' ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Vijay Rupani: ಖರ್ಗೆ ಗೆಲುವನ್ನು ತಟ್ಟೆಯಲ್ಲಿ ಇಟ್ಟು ಕೊಟ್ಟಿದ್ದಾರೆ: ಮೋದಿ ವಿರುದ್ಧದ 'ರಾವಣ' ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ!

Vijay Rupani: ಖರ್ಗೆ ಗೆಲುವನ್ನು ತಟ್ಟೆಯಲ್ಲಿ ಇಟ್ಟು ಕೊಟ್ಟಿದ್ದಾರೆ: ಮೋದಿ ವಿರುದ್ಧದ 'ರಾವಣ' ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ!

ಗುಜರಾತ್‌ ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 'ರಾವಣ' ಎಂದು ಕರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಕೂಡಲೇ ಮೋದಿ ಮತ್ತು ಗುಜರಾತ್‌ ಜನತೆಯೆ ಕ್ಷಮೆ ಕೋರಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ. ಈ ಕುರಿತು ಮಾತನಾಡಿರುವ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ, ಖರ್ಗೆ ಹೇಳಿಕೆ ಕಾಂಗ್ರೆಸ್‌ಗೆ ಭಾರೀ ನಷ್ಟ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ)
ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ) (PTI)

ಅಹಮದಾಬಾದ್:‌ ಗುಜರಾತ್‌ ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 'ರಾವಣ' ಎಂದು ಕರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಕೂಡಲೇ ಮೋದಿ ಮತ್ತು ಗುಜರಾತ್‌ ಜನತೆಯೆ ಕ್ಷಮೆ ಕೋರಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.

ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರ ಅವಹೇಳನಕಾರಿ ಹೇಳಿಕೆಗೆ ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದ್ದು, ಖರ್ಗೆ ಅವರ ಈ ಹೇಳಿಕೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಫಲಿತಾಂಶಕ್ಕೆ ಧಕ್ಕೆ ಉಂಟುಮಾಡಲಿದೆ ಎಂದು ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ಅವರನ್ನು ರಾವಣನೊಂದಿಗೆ ಹೋಲಿಸಿರುವುದು, ಗುಜರಾತಿಗಳಿಗೆ ಮಾಡಿದ ಅವಮಾನವಾಗಿದೆ. ಗುಜರಾತ್ ಜನರು ಇದನ್ನು ಸಹಿಸುವುದಿಲ್ಲ. ಖರ್ಗೆ ಅವರ ಈ ಹೇಳಿಕೆಯ ಫಲವನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉಣ್ಣಲಿದೆ. ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು 'ರಾವಣ' ಎಂದು ಕರೆದು , ಗುಜರಾತ್‌ ಗೆಲವುನ್ನು ಬಿಜೆಪಿಗೆ ತಟ್ಟೆಯಲ್ಲಿ ಇಟ್ಟು ಕೊಟ್ಟಿದ್ದಾರೆ ಎಂದು ವಿಜಯ್‌ ರೂಪಾನಿ ಹೇಳಿದ್ದಾರೆ.

ಪ್ರತಿ ಬಾರಿ ಕಾಂಗ್ರೆಸ್ ತನಗಾಗಿ ಇಂತಹ ಕೆಸರು ಸೃಷ್ಟಿಸಿ ಅದರಲ್ಲಿ ಮುಳುಗುತ್ತದೆ. ಆ ಪಕ್ಷ ನಿಧಾನವಾಗಿ ಸಾಯುತ್ತಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು ಎಂದು ವಿಜಯ್‌ ರೂಪಾನಿ ಮಾರ್ಮಿಕವಾಗಿ ಹೇಳಿದರು.

ಅಹಮದಾಬಾದ್‌ನ ಬೆಹ್ರಾಂಪುರ ಪ್ರದೇಶದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯನ್ನು 'ರಾವಣ' ಎಂದು ಬಣ್ಣಿಸಿದರು. ಬಿಜೆಪಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಧಾನಿ ಮೋದಿ ತಮ್ಮ ಬಗ್ಗೆ ಮಾತ್ರ ಮಾತನಾಡುತ್ತಾರೆ. ‘ಬೇರೆ ಯಾರನ್ನೂ ನೋಡಬೇಡಿ, ಮೋದಿಯನ್ನು ನೋಡಿ ಮತ ಹಾಕಿ’ ಎಂದು ಹೇಳುತ್ತಾರೆ. ನಿಮ್ಮ ಮುಖವನ್ನು ಎಷ್ಟು ಬಾರಿ ನೋಡಬೇಕು? ನೀವು ಎಷ್ಟು ರೂಪಗಳನ್ನು ಹೊಂದಿದ್ದೀರಿ? ನಿಮಗೆ ರಾವಣನಂತೆ 100 ತಲೆಗಳಿವೆಯೇ?” ಎಂದು ಖರ್ಗೆ ಪ್ರಶ್ನಿಸಿದ್ದರು.

ಖರ್ಗೆ ಅವರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಈ ಕೂಡಲೇ ಅವರು ಪ್ರಧಾನಿ ಮೋದಿ ಮತ್ತು ಗುಜರಾತ್‌ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಖರ್ಗೆ ಹೇಳಿಕೆ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಭಾರೋಈ ಹೊಡೆತ ನೀಡಲಿದೆ ಎಂದು ರಹಲವು ರಾಜಕೀಯ ವಿಶ್ಲೇಷಕರೂ ಅಂದಾಜಿಸಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಆಮ್‌ ಆದ್ಮಿ ಪಕ್ಷ(ಆಪ್)‌ ಬೆಳವಣಿಗೆಯ ಬಗ್ಗೆ ಮಾತನಾಡಿದ ವಿಜಯ್ ರೂಪಾನಿ, ದೆಹಲಿ ಮತ್ತು ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಆಪ್‌ ಅಧಿಕಾರ ಪಡೆದುಕೊಂಡಿದೆ. ಈ ಗೆಲುವನ್ನು ಗುಜರಾತ್‌ನಲ್ಲಿ ಪುನರಾವರ್ತಿಸಲು ಆಪ್‌ ಬಯಿಸಿದೆ. ಆದರೆ ಇಲ್ಲಿ ಆಡಳಿತ ಪಕ್ಷ ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂಬುದನ್ನು ಆಪ್‌ ನಾಯಕರು ಮರೆಯಬಾರದು ಎಂದು ಎಚ್ಚರಿಸಿದರು.

ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಗುಜರಾತ್ ಚುನಾವಣೆಯಲ್ಲಿ 1,24,33,362 ಪುರುಷರು, 1,1,5,42,811 ಮಹಿಳೆಯರು ಮತ್ತು 497 ತೃತೀಯಲಿಂಗಿ ಸೇರಿದಂತೆ ಒಟ್ಟು 2,39,76,670 ಮತದಾರರು ಮತದಾನ ಮಾಡಲು ಅರ್ಹರಾಗಿದ್ದಾರೆ.

ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಇದೇ ದಿನ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಕೂಡ ಪ್ರಕಟವಾಗಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.