ಶ್ರಾವಣದಲ್ಲಿ ಮಟನ್ ಮಾಡಿದ ಜನಿವಾರಧಾರಿ ಬ್ರಾಹ್ಮಣ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ VIDEO
Rahul Gandhi: ಈ ವಿಡಿಯೋದಲ್ಲಿ ಲಾಲು ಪ್ರಸಾದ್ ಯಾದವ್ ಅವರು ಕುರಿ ಮಾಂಸದಿಂದ ಮಾಡುವ ರೆಸಿಪಿಯೊಂದರ ಬಗ್ಗೆ ರಾಹುಲ್ ಗಾಂಧಿಗೆ ವಿವರಿಸುತ್ತಾ ಅಡುಗೆ ಮಾಡುತ್ತಾರೆ. ರಾಹುಲ್ ಗಾಂಧಿ ಅವರೂ ಕಲಿತುಕೊಳ್ಳುತ್ತಾ ತಾವೂ ಅಡುಗೆ ಮಾಡಲು ಸಹಾಯ ಮಾಡುತ್ತಾರೆ. ಆದರೆ ಅವರು ಅದನ್ನು ಸೇವಿಸುವುದು ಈ ವಿಡಿಯೋದಲ್ಲಿ ಕಂಡುಬರುವುದಿಲ್ಲ.
ರಾಷ್ಟ್ರೀಯ ಜನತಾದಳದ ( ಆರ್ಜೆಡಿ ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಜೊತೆಯಲ್ಲಿ ಸೇರಿ ಕಾಂಗ್ರೆಸ್ ನಾಯಕ, ಜನಿವಾರಧಾರಿ ಬ್ರಾಹ್ಮಣ ರಾಹುಲ್ ಗಾಂಧಿ ಅವರು ಶ್ರಾವಣ ಮಾಸದಲ್ಲಿ ಕುರಿ ಮಾಂಸದ ಅಡುಗೆ ಮಾಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ನಿನ್ನೆಯಷ್ಟೇ (ಸೆಪ್ಟೆಂಬರ್ 2,ಶನಿವಾರ) ರಾಹುಲ್ ಗಾಂಧಿ ತಮ್ಮ ಯೂಟ್ಯೂಬ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ 'ಇಂಡಿಯಾ' ಮೈತ್ರಿಕೂಟದ ನಾಯಕರಾದ ರಾಹುಲ್ ಗಾಂಧಿ ಮತ್ತು ಲಾಲು ಪ್ರಸಾದ್ ಯಾದವ್ ಅವರ ನಡುವಿನ ಒಡನಾಟವನ್ನು ಕಾಣಬಹುದಾಗಿದೆ.
ಈ ವಿಡಿಯೋದಲ್ಲಿ ಲಾಲು ಪ್ರಸಾದ್ ಯಾದವ್ ಅವರು ಕುರಿ ಮಾಂಸದಿಂದ ಮಾಡುವ ರೆಸಿಪಿಯೊಂದರ ಬಗ್ಗೆ ರಾಹುಲ್ ಗಾಂಧಿಗೆ ವಿವರಿಸುತ್ತಾ ಅಡುಗೆ ಮಾಡುತ್ತಾರೆ. ರಾಹುಲ್ ಗಾಂಧಿ ಅವರೂ ಕಲಿತುಕೊಳ್ಳುತ್ತಾ ತಾವೂ ಅಡುಗೆ ಮಾಡಲು ಸಹಾಯ ಮಾಡುತ್ತಾರೆ. ಆದರೆ ಅವರು ಅದನ್ನು ಸೇವಿಸುವುದು ಈ ವಿಡಿಯೋದಲ್ಲಿ ಕಂಡುಬರುವುದಿಲ್ಲ.
ವಿಡಿಯೋ ತುಣುಕನ್ನು ಹಂಚಿಕೊಂಡು ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, "ರಾಹುಲ್ ಗಾಂಧಿ ಮತ್ತು ಲಾಲು ಪ್ರಸಾದ್ ಯಾದವ್ ತಮ್ಮ ಪಾಕಶಾಲೆಯ ಕೌಶಲ್ಯಗಳನ್ನು ತೋರಿಸಲು ಶ್ರಾವಣ ಮುಗಿಯುವುದನ್ನು ಕಾಯುತ್ತಿದ್ದರು. ದೇವಾಧಿದೇವ ಮಹಾದೇವನ ಅತ್ಯಂತ ಪ್ರೀತಿಯ ಮಾಸವಾದ ಶ್ರಾವಣದಲ್ಲಿ ಶಿವಭಕ್ತ ಎಂದು ಕರೆಯಲ್ಪಡುವ ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ನೆನಪಿರಲಿ, ದೇಶದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ" ಎಂದಿದ್ದಾರೆ.
ಉತ್ತರ ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಶ್ರಾವಣ ಮಾಸ ಬಂದಿತ್ತು. ಈ ವಿಡಿಯೋವನ್ನು ಸೆಪ್ಟೆಂಬರ್ 2ರಂದು ಹಂಚಿಕೊಳ್ಳಲಾಗಿದೆಯಾದರೂ ಸಂಬಿತ್ ಪಾತ್ರಾ ಅವರು ಇದು ಆಗಸ್ಟ್ 4 ರ ವಿಡಿಯೋ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತೊಬ್ಬ ವಕ್ತಾರ ಶೆಜಾದ್ ಪೂನವಾಲ ಅವರು, "ಶ್ರಾವಣ ಮಾಸದಲ್ಲಿ ಮಾಂಸಾಹಾರ ತಿನ್ನುವ ಬಗ್ಗೆ ಯಾವುದೇ ಸನಾತನಿಗಳು ಯೋಚಿಸುವುದಿಲ್ಲ. ಕೆಲವರು ಶಿವ-ಭಕ್ತರಂತೆ ನಟಿಸುತ್ತಾರೆ, ಅವರು ಚಂದ್ರನ ಮೇಲಿನ ಶಿವಶಕ್ತಿ ಪಾಯಿಂಟ್ ಹೆಸರನ್ನು ವಿರೋಧಿಸುತ್ತಾರೆ" ಎಂದು ಹೇಳಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಮಲೇರಿಯಾ ಮತ್ತು ಡೆಂಗ್ಯೂ ರೀತಿಯಲ್ಲಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು" ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ ಬೆನ್ನಲ್ಲೇ ರಾಹುಲ್ ಗಾಂಧಿ ಅವರ ವಿಡಿಯೋ ಹಾಗೂ ಸಂಬಿತ್ ಪಾತ್ರಾ ಅವರ ಟ್ವೀಟ್ ವೈರಲ್ ಆಗಿದೆ.