ಕನ್ನಡ ಸುದ್ದಿ  /  Nation And-world  /  India News Pm Modi Siddaramaiah Amit Shah Mallikarjun Kharge Congratulate Isro Aditya L1 Solar Mission Launch Mgb

Aditya L1: ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ತಿಳಿಯುವ ಪ್ರಯತ್ನ ಮುಂದುವರೆಯುತ್ತೆ; ಇಸ್ರೋಗೆ ಮೋದಿ ಅಭಿನಂದನೆ

ಯಶಸ್ವಿಯಾಗಿ ಆದಿತ್ಯ-ಎಲ್ 1 ಸೋಲಾರ್ ಮಿಷನ್ ಅನ್ನು ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಮೋದಿ, ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇಸ್ರೋಗೆ ಮೋದಿ ಅಭಿನಂದನೆ
ಇಸ್ರೋಗೆ ಮೋದಿ ಅಭಿನಂದನೆ

ನವದೆಹಲಿ: ಆದಿತ್ಯ-ಎಲ್ 1 ಸೋಲಾರ್ ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ

ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಚಂದ್ರಯಾನ-3 ಯಶಸ್ಸಿನ ನಂತರ ಭಾರತ ತನ್ನ ಬಾಹ್ಯಾಕಾಶ ಯಾನವನ್ನು ಮುಂದುವರೆಸಿದೆ. ಭಾರತದ ಮೊದಲ ಸೌರ ಮಿಷನ್, ಆದಿತ್ಯ -L1 ನ ಯಶಸ್ವಿ ಉಡಾವಣೆಗಾಗಿ ನಮ್ಮ ಇಸ್ರೋ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು. ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಮಿತ್​ ಶಾ

ಮತ್ತೆ ನಮ್ಮ ವಿಜ್ಞಾನಿಗಳು ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಭಾರತದ ಮೊದಲ ಸೌರ ಮಿಷನ್ ಆದಿತ್ಯ L1 ನ ಯಶಸ್ವಿ ಉಡಾವಣೆಯ ಬಗ್ಗೆ ರಾಷ್ಟ್ರವು ಹೆಮ್ಮೆ ಮತ್ತು ಸಂತೋಷವನ್ನು ಹೊಂದಿದೆ. ಅಪ್ರತಿಮ ಸಾಧನೆಗಾಗಿ ಇಸ್ರೋ ತಂಡಕ್ಕೆ ಅಭಿನಂದನೆಗಳು. ಈ ಅಮೃತ ಕಾಲದ ಸಮಯದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ವಿಷನ್​ ಅನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇದೊಂದು ದೈತ್ಯ ದಾಪುಗಾಲು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಟ್ವೀಟ್​ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ

ಸೂರ್ಯನ ಅಧ್ಯಯನ ನಡೆಸುವ ಆದಿತ್ಯ ಎಲ್1 ಉಪಗ್ರಹದ ಯಶಸ್ವಿ ಉಡಾವಣೆಗೈದಿರುವ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ತುಂಬುಹೃದಯದ ಅಭಿನಂದನೆಗಳು. ಇದರೊಂದಿಗೆ ಸೂರ್ಯನ ಅಧ್ಯಯನ ನಡೆಸುವ ಇಸ್ರೋ ವಿಜ್ಞಾನಿಗಳ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರೆತಿದ್ದು, ಈ ಯೋಜನೆಯ ಮುಂದಿನ ಎಲ್ಲಾ ಹಂತಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ

ಇಸ್ರೋಗೆ ಅಭಿನಂದನೆ ಸಲ್ಲಿಸಿರುವ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮಸೋ ಮಾ ಜ್ಯೋತಿರ್ಗಮಯ (ನನ್ನನ್ನು ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು) ಎಂದು ಹೇಳುತ್ತಾ ತಮ್ಮ ಟ್ವೀಟ್​ ಆರಂಭಿಸಿದ್ದಾರೆ. ಇಸ್ರೋ ಆದಿತ್ಯ ಎಲ್​1 ಸೌರ ಮಿಷನ್‌ನ ಯಶಸ್ವಿ ಉಡಾವಣೆಗಾಗಿ ನಮ್ಮ ವಿಜ್ಞಾನಿಗಳು, ಬಾಹ್ಯಾಕಾಶ ಎಂಜಿನಿಯರ್‌ಗಳು, ಸಂಶೋಧಕರು ಮತ್ತು ನಮ್ಮ ಕಠಿಣ ಪರಿಶ್ರಮದ ಸಿಬ್ಬಂದಿಗೆ ನಾವು ಋಣಿಯಾಗಿದ್ದೇವೆ ಮತ್ತು ಕೃತಜ್ಞರಾಗಿರುತ್ತೇವೆ. ನಾವೆಲ್ಲರು ಒಟ್ಟಾಗಿ ಅವರ ಯಶಸ್ಸನ್ನು ಆಚರಿಸುತ್ತೇವೆ ಮತ್ತು ನಮ್ಮ ಕೃತಜ್ಞತೆಯಿಂದ ಅವರನ್ನು ಗೌರವಿಸುತ್ತೇವೆ ಎಂದಿದ್ದಾರೆ.