Kangana Ranaut: 'ಬಿಜೆಪಿಯಿಂದ ಟಿಕೆಟ್‌ ಸಿಕ್ಕರೆ ಖಂಡಿತಾ ಕಣಕ್ಕಿಳಿಯುವೆ', ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದ ಕಂಗನಾ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kangana Ranaut: 'ಬಿಜೆಪಿಯಿಂದ ಟಿಕೆಟ್‌ ಸಿಕ್ಕರೆ ಖಂಡಿತಾ ಕಣಕ್ಕಿಳಿಯುವೆ', ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದ ಕಂಗನಾ

Kangana Ranaut: 'ಬಿಜೆಪಿಯಿಂದ ಟಿಕೆಟ್‌ ಸಿಕ್ಕರೆ ಖಂಡಿತಾ ಕಣಕ್ಕಿಳಿಯುವೆ', ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದ ಕಂಗನಾ

“ಸರ್ಕಾರವು ನನ್ನ ಸ್ಪರ್ಧೆಯನ್ನು ಬಯಸಿದರೆ ನನ್ನ ರಾಜ್ಯಕ್ಕೆ ಖಂಡಿತವಾಗಿಯೂ ನಾನು ಕೊಡುಗೆಗಳನ್ನು ನೀಡುತ್ತೇನೆ. ನನ್ನ ರಾಜ್ಯಕ್ಕಾಗಿ ನಾನು ಯಾವುದೇ ರೀತಿಯ ಬೆಂಬಲ ನೀಡಲು ಸಿದ್ಧಳಿದ್ದೇನೆ. ಹಿಮಾಚಲ ಪ್ರದೇಶದ ಜನರಿಗೆ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕರೆ ನಾನು ನಿಜಕ್ಕೂ ಅದೃಷ್ಟಶಾಲಿ,” ಎಂದು ಕಂಗನಾ ಹೇಳಿದ್ದಾರೆ.

ಕಂಗನಾ ರಣಾವತ್
ಕಂಗನಾ ರಣಾವತ್

ಬಾಲಿವುಡ್‌ ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಧುಮುಕಲು ಸಿದ್ಧ ಎಂದು ಹೇಳಿದ್ದಾರೆ. ಈ ಹಿಂದೆ ರಾಜಕೀಯ ಪ್ರವೇಶ ಇಲ್ಲ ಎಂದು ಹೇಳಿಕೊಂಡಿದ್ದ ನಟಿ, ಈಗ ಮನಸು ಬದಲಿಸಿದ್ದಾರೆ. ತಾನು ರಾಜಕಾರಣಿಯಾಗಲು ಸಿದ್ಧ ಎಂದು ಖುದ್ದು ಅವರೇ ಒಪ್ಪಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಚುನಾವಣೆಯಲ್ಲಿ ಸ್ಪರ್ಧಿಸಿ, ತಮ್ಮ ತವರು ರಾಜ್ಯ ಹಿಮಾಚಲ ಪ್ರದೇಶದ ಜನರಿಗೆ ಸೇವೆ ಸಲ್ಲಿಸುವ ಇರಾದೆ ವ್ಯಕ್ತಪಡಿಸಿದ್ದಾರೆ.

ನವೆಂಬರ್ 12ರಂದು ಹಿಮಾಚಲ ಪ್ರದೇಶ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಶಿಮ್ಲಾದಲ್ಲಿ ನಡೆದ 'ಪಂಚಾಯತ್ ಆಜ್ತಕ್ ಹಿಮಾಚಲ ಪ್ರದೇಶ'ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಬಗ್ಗೆ ಮಾತನಾಡಿದರು. ಬಿಜೆಪಿಯಿಂದ ಚುನಾವಣಾ ಟಿಕೆಟ್ ಸಿಕ್ಕರೆ ಈ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.

“ಸರ್ಕಾರವು ನನ್ನ ಭಾಗವಹಿಸುವಿಕೆಯನ್ನು ಬಯಸಿದರೆ ನನ್ನ ರಾಜ್ಯಕ್ಕೆ ಖಂಡಿತವಾಗಿಯೂ ನಾನು ಕೊಡುಗೆಗಳನ್ನು ನೀಡುತ್ತೇನೆ. ನನ್ನ ರಾಜ್ಯಕ್ಕಾಗಿ ನಾನು ಯಾವುದೇ ರೀತಿಯ ಬೆಂಬಲ ನೀಡಲು ಸಿದ್ಧಳಿದ್ದೇನೆ. ಹಿಮಾಚಲ ಪ್ರದೇಶದ ಜನರಿಗೆ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕರೆ ನಾನು ನಿಜಕ್ಕೂ ಅದೃಷ್ಟಶಾಲಿ,” ಎಂದು ಅವರು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದ ಕಂಗನಾ, ತಮ್ಮ ಚಲನಚಿತ್ರ ವೃತ್ತಿಜೀವನದ ಮೇಲೆ ಗಮನ ಕೇಂದ್ರೀಕರಿಸಿರುವುದರಿಂದ ವೃತ್ತಿಪರವಾಗಿ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ತಮ್ಮ ನಿರ್ಧಾರ ಬದಲಿಸಿದ್ದಾರೆ.

ಈಗಾಗಾಲೇ ಹಲವು ಬಾರಿ ಬಿಜೆಪ ಪರ ತಮ್ಮ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಮೂಲಕ ಕಂಗನಾ ರಾಜಕೀಯ ವಲಯದಲ್ಲಿ ಭಾರಿ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದ್ದಾರೆ. ಇದರ ನಡುವೆ ಪಕ್ಷ ಸೇರಿಕೊಂಡು ಚುನಾವಣೆ ಎದುರಿಸಿದರೆ, ಎಡಪಂಥೀಯರಿಂದ ಮತ್ತಷ್ಟು ಟೀಕೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.

ಹಿಮಾಚಲ ಪ್ರದೇಶ ಚುನಾವಣೆಯು ನವೆಂಬರ್‌ 12ರಂದು ನಡೆಯಲಿದೆ. ಡಿಸೆಂಬರ್‌ 8 ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಈಗಾಗಲೇ ಚುನಾವಣಾ ಆಯೋಗ ತಿಳಿಸಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಕಾವು ಬಿಸಿಯೇರಿದೆ. ಸದ್ಯ ಇಲ್ಲಿ ಬಿಜೆಪಿ ಸರ್ಕಾರಾಡಳಿತ ವಹಿಸಿಕೊಂಡಿದ್ದು, ಕುರ್ಚಿ ಉಳಿಸಿಕೊಳ್ಳುವುದು ಪಕ್ಷಕ್ಕೆ ಮುಖ್ಯವಾಗಿದೆ. ಇನ್ನೊಂದೆಡೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಪ್ರತಿಪಕ್ಷಗಳು ಸಿದ್ಧವಾಗಿವೆ.

ಅಕ್ಟೋಬರ್‌ 17ರಂದು ಹಿಮಾಚಲ ಪ್ರದೇಶ ಚುನಾಚಣೆಯ ಗೆಜೆಟ್‌ ಅಧಿಸೂಚನೆ ಹೊರಡಿಸಲಾಗಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್‌ 25 ಕೊನೆಯ ದಿನಾಂಕವಾಗಿದೆ. ಅಕ್ಟೋಬರ್‌ 27ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.

ಹಿಮಾಚಲ ಪ್ರದೇಶದ 68 ವಿಧಾನಸಭಾ ಸ್ಥಾನಗಳಿಗೆ 55 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಇವರಲ್ಲಿ 1.86 ಲಕ್ಷ ಚೊಚ್ಚಲ ಮತದಾರರು, 80 ವರ್ಷ ಮೇಲ್ಪಟ್ಟ 1.22 ಲಕ್ಷ ಹಾಗೂ 100 ವರ್ಷ ಮೇಲ್ಪಟ್ಟ 1,184 ಮತದಾರರಿದ್ದಾರೆ. ಒಟ್ಟು ಮತದಾರರಲ್ಲಿ 67,000 ಸೇವಾ ಮತದಾರರು ಹಾಗೂ 56,000 ವಿಕಲಚೇತನರು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈ ಹಿಂದೆ ತಿಳಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.