Kolkata: ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ನಡೆದಿದ್ದ ಆರ್‌ಜಿ ಕರ್ ಆಸ್ಪತ್ರೆ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅರೆಸ್ಟ್
ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದ ಕೋಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದ ಆರ್‌ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ವೈದ್ಯಕೀಯ ಸಂಸ್ಥೆಯಲ್ಲಿ ಆರ್ಥಿಕ ದುರ್ನಡತೆ ತೋರಿದ ಆರೋಪದ ಮೇಲೆ ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ಘೋಷ್ ಅವರ ಅಧಿಕಾರಾವಧಿಯಲ್ಲಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಎಫ್ಐಆರ್‌ನಲ್ಲಿ ಘೋಷ್ ಹೆಸರನ್ನು ಉಲ್ಲೇಖಿಸಿತ್ತು. ಅದಾದ ಕೆಲದೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಜಾಗತಿಕ ಮಟ್ಟದಲ್ಲಿ ಪ್ರಜ್ಞಾನಾವಂತ ನಾಗರಿಕರ ತಲೆ ತಗ್ಗಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಘೋಷ್ ಅವರನ್ನು ಸಿಬಿಐನ ಸಾಲ್ಟ್ ಲೇಕ್ ಕಚೇರಿಯಲ್ಲಿ ಸತತ 15ನೇ ದಿನ ವಿಚಾರಣೆ ನಡೆಸಲಾಯ್ತು. ಮಾಜಿ ಪ್ರಾಂಶುಪಾಲರನ್ನು ನಂತರ ಸಿಬಿಐನ ಭ್ರಷ್ಟಾಚಾರ ವಿರೋಧಿ ವಿಭಾಗ ಇರುವ ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್ ಕಚೇರಿಗೆ ಕರೆದೊಯ್ಯ್ದು ಪ್ರಶ್ನೆಗಳ ಸುರಿಮಳೆ ಹಾಕಲಾಯ್ತು. ಅಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಕಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ದಾಖಲಾದ ಎಫ್ಐಆರ್‌ನಲ್ಲಿ, ತನಿಖಾ ಸಂಸ್ಥೆ ಘೋಷ್ ಮತ್ತು ಕೋಲ್ಕತ್ತಾ ಮೂಲದ ಮೂರು ಖಾಸಗಿ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಅದುವೇ ಇಶಾನ್ ಕೆಫೆ ಆಫ್ 4/1, ಬೆಲ್ಗಾಚಿಯಾ ಮತ್ತು ಖಾಮಾ ಲೌಹಾ.
ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಆಗಸ್ಟ್ 25ರಂದು ಘೋಷ್ ಅವರ ಕೋಲ್ಕತ್ತಾದ ಬೆಲಿಯಾಘಾಟಾ ನಿವಾಸದಲ್ಲಿ ಒಂದು ದಿನದ ಶೋಧ ಕಾರ್ಯಾಚರಣೆ ನಡೆಸಿತ್ತು. ಆಗಸ್ಟ್ 9ರಂದು ಮುಂಜಾನೆ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ 31 ವರ್ಷದ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆಯ ಬಗ್ಗೆಯೂ ಸಂಸ್ಥೆ ತನಿಖೆ ನಡೆಸುತ್ತಿದೆ.
ಸದಸ್ಯತ್ವ ರದ್ದು
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲರು ಮತ್ತು ಇತರರ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳ ಬಗ್ಗೆ ತನಿಖೆ ನಡೆಸಲು, ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಘ ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ರದ್ದುಗೊಳಿಸಿತ್ತು.