ತಾನೇ ಮುಂದೆ ನಿಂತು ಗಂಡನಿಗೆ ಎರಡನೇ ಮದುವೆ ಮಾಡಿಸಿದ ಪತ್ನಿ; ಕಾರಣ ಕೇಳಿದರೆ ನಿಮಗೂ ಅಚ್ಚರಿಯಾದೀತು
ತೆಲಂಗಾಣದ ಮೆಹಬೂಬಾಬಾದ್ ನಗರದಲ್ಲಿ ಪತ್ನಿಯೇ ಮುಂದೆ ನಿಂತು ತನ್ನ ಗಂಡನಿಗೆ ಎರಡನೇ ಮದುವೆ ಮಾಡಿಸಿದ್ದಾಳೆ. ಮದುವೆಯ ನಂತರವೂ ಪ್ರೀತಿಸುತ್ತಿದ್ದ ಗಂಡನಿಗೆ, ಪ್ರೇಯಸಿಯೊಂದಿಗೆ ಸಂಸಾರ ನಡೆಸುವ ಅವಕಾಶ ಮಾಡಿಕೊಟ್ಟಿದ್ದಾಳೆ.
ಪತ್ನಿಯಾದವಳು ತನ್ನ ಗಂಡನು ತನ್ನ ಹೊರತಾಗಿ ಬೇರೊಂದು ಹೆಣ್ಣನ್ನು ಕಣ್ಣೆತ್ತಿಯೂ ನೋಡಲು ಬಿಡುವುದಿಲ್ಲ ಎಂಬುದು ವಾಸ್ತವದಲ್ಲಿರುವ ಮಾತು. ಎಷ್ಟೋ ಪ್ರೇಮಿಗಳು ಹಾಗೂ ಗಂಪತಿಗಳು, ಇಂಥಾ ಕಾರಣದಿಂದಲೇ ಬೇರೆ ಬೇರಾಗಿದ್ದನ್ನು ನಾವು ನೋಡಿರುತ್ತೇವೆ. ಆದರೆ, ಕರ್ನಾಟಕದ ನೆರೆಯ ತೆಲಂಗಾಣದಲ್ಲಿ ಇದಕ್ಕಿಂತ ಭಿನ್ನ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಮದುವೆಯಾಗಿ ಹಲವು ವರ್ಷದಿಂದ ತನ್ನ ಗಂಡನೊಂದಿಗೆ ಸಂಸಾರ ನಡೆಸುತ್ತಿದ್ದ ಮಹಿಳೆಯೊಬ್ಬಳು, ತಾನೇ ಮುಂದು ನಿಂತು ತನ್ನ ಗಂಡನಿಗೆ ಬೇರೊಂದು ಮದುವೆ ಮಾಡಿಸಿದ್ದಾಳೆ. ಹೌದು, ನೀವು ಓದುತ್ತಿರುವುದು ವಾಸ್ತವದಲ್ಲಿ ನಡೆದಿರುವ ಘಟನೆಯನ್ನೇ.
ತೆಲಂಗಾಣದ ಮೆಹಬೂಬಾಬಾದ್ ನಗರದಲ್ಲಿ ಈ ಘಟನೆ ನಡೆದಿದೆ. ಪತ್ನಿಯೊಬ್ಬಳು ತಾನೇ ಮುಂದೆ ನಿಂತು ತನ್ನ ಗಂಡನ ಮದುವೆಯನ್ನು ಬೇರೊಬ್ಬ ಯುವತಿಯೊಂದಿಗೆ ಮಾಡಿದ್ದಾಳೆ. ಇದೀಗ ವಿವಾಹಿತ ಪುರುಷ ತನಗೆ ಇಷ್ಟವಾದ ಯುವತಿಯೊಂದಿಗೆ ಮತ್ತೊಮ್ಮೆ ಸಪ್ತಪದಿ ತುಳಿದಿದ್ದಾನೆ. ಮಹಬೂಬಾಬಾದ್ ಜಿಲ್ಲಾ ಕೇಂದ್ರದಲ್ಲಿರುವ ಭಕ್ತಮಾರ್ಕಂಡೇಯ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ.
ಏನಿದು ಘಟನೆ?
ಚಿನ್ನಗುಡೂರು ಮಂಡಲದ ಉಗ್ಗಂಪಲ್ಲಿ ಗ್ರಾಮದ ದಾಸರಿ ಸುರೇಶ್ ಹಾಗೂ ಸರಿತಾ ಎಂಬ ಯುವತಿಗೆ ಕೆಲ ವರ್ಷಗಳ ಹಿಂದೆಯೇ ವಿವಾಹವಾಗಿತ್ತು. ಇವರಿಗೆ ಈಗಾಗಲೇ ಒಬ್ಬ ಮಗ ಹಾಗೂ ಮಗಳು ಇದ್ದಾರೆ. ಇಬ್ಬರು ಮಕ್ಕಳಿರುವ ಸುಂದರ ಸಂಸಾರ ಇವರದ್ದು. ಈ ನಡುವೆ ಜಿಲ್ಲಾ ಕೇಂದ್ರದ ಭಕ್ತಮಾರ್ಕಂಡೇಯ ಗುಡಿ ಬೀದಿಯ ಪದ್ಮಾ ಹಾಗೂ ವೀರಸ್ವಾಮಿ ಎಂಬ ದಂಪತಿಯ ಪುತ್ರಿಯಾದ ಸಂಧ್ಯಾ ಹಾಗೂ ಸುರೇಶ್ ನಡುವೆ ಪ್ರೇಮಾಂಕುರವಾಗಿದೆ. ಸಂಧ್ಯಾ ಬುದ್ಧಿಮಾಂದ್ಯ ಯುವತಿ. ತನ್ನ ಪ್ರೀತಿ ಕುರಿತು ಪತ್ನಿ ಸರಿತಾಗೆ ಸುರೇಶ್ ಹೇಳಿಕೊಂಡಿದ್ದಾನೆ. ಇದನ್ನು ಕೇಳಿದ ಆಕೆ ಗಂಡನ ಪ್ರೀತಿಯನ್ನು ಗೌರವಿಸಿ ಎರಡನೇ ಮದುವೆಗೆ ಒಪ್ಪಿದ್ದಾಳೆ.
ಆಗಸ್ಟ್ 28ರ ಬುಧವಾರ ಎರಡೂ ಕುಟುಂಬಗಳ ಹಿರಿಯರು ಹಾಗೂ ಪತ್ನಿ ಸರಿತಾ ಅವರ ಸಮ್ಮುಖದಲ್ಲಿ ಪಟ್ಟಣದ ಭಕ್ತಮಾರ್ಕಂಡೇಯ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆದಿದೆ. ಖುದ್ದು ಪತ್ನಿಯೇ ಮುಂದೆ ನಿಂತು ತನ್ನ ಗಂಡನಿಗೆ ಎರಡನೇ ಮದುವೆ ಮಾಡಿಸಿದ್ದಾಳೆ. ಪತಿಯ ಎರಡನೇ ಮದುವೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಗಂಡನಿಗೆ ಎರಡನೇ ಮದುವೆ ಮಾಡಿಸಿದ ಕುರಿತು ಸರಿತಾ ಅವರ ಬಳಿ ಮಾಧ್ಯಮದವರು ವಿವರಣೆ ಕೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ತನ್ನ ಪತಿ ಸುರೇಶ್ ಸಂಧ್ಯಾಳನ್ನು ಇಷ್ಟ ಪಡುತ್ತಿದ್ದರು. ಸಂಧ್ಯಾ ಮಾನಸಿಕ ಅಸ್ವಸ್ಥಳು ಎಂದು ಹೇಳಿದ್ದಾರೆ. ಆಕೆಯದ್ದು ಮಗುವಿನ ಮನಸ್ಸು. ಹೀಗಾಗಿ ಆಕೆಯನ್ನು ತನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.