ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lob Sabha Election Result 2024: ಚುನಾವಣೆ ಫಲಿತಾಂಶದಿಂದ ಷೇರು ಮಾರುಕಟ್ಟೆಯಲ್ಲಿ ಏನಾಗುತ್ತೆ; ರಂಗಸ್ವಾಮಿ ಮೂಕನಹಳ್ಳಿ ಬರಹ

Lob Sabha Election Result 2024: ಚುನಾವಣೆ ಫಲಿತಾಂಶದಿಂದ ಷೇರು ಮಾರುಕಟ್ಟೆಯಲ್ಲಿ ಏನಾಗುತ್ತೆ; ರಂಗಸ್ವಾಮಿ ಮೂಕನಹಳ್ಳಿ ಬರಹ

ಜೂನ್‌ 4, ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಎನ್‌ಡಿಎ ಒಕ್ಕೂಟ ಒಕ್ಕೂಟ 350/360 ಸೀಟು ಗಳಿಸಬಹುದು ಎಂದು ಹೇಳುತ್ತಿದೆ. ಒಂದು ವೇಳೆ ಈ ಬಾರಿ ಕೂಡಾ ಮೋದಿ ಪ್ರಧಾನಿ ಆದರೆ ಷೇರು ಮಾರುಕಟ್ಟೆ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು ಎಂದು ರಂಗಸ್ವಾಮಿ ಮೂಕನಹಳ್ಳಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚುನಾವಣೆ ಫಲಿತಾಂಶದಿಂದ ಷೇರು ಮಾರುಕಟ್ಟೆಯಲ್ಲಿ ಏನಾಗುತ್ತೆ; ರಂಗಸ್ವಾಮಿ ಮೂಕನಹಳ್ಳಿ ಬರಹ
ಚುನಾವಣೆ ಫಲಿತಾಂಶದಿಂದ ಷೇರು ಮಾರುಕಟ್ಟೆಯಲ್ಲಿ ಏನಾಗುತ್ತೆ; ರಂಗಸ್ವಾಮಿ ಮೂಕನಹಳ್ಳಿ ಬರಹ

ಮುಂದಿನ 5 ವರ್ಷದಲ್ಲಿ ಭಾರತೀಯ ಷೇರು ಮಾರುಕಟ್ಟೆ ಏರಬಹುದಾದ ಎತ್ತರವನ್ನು ನೆನದರೆ ಪುಳಕವಾಗುತ್ತಾದೆ. ಭಾರತೀಯ ಷೇರು ಮಾರುಕಟ್ಟೆ ಕಳೆದೆರೆಡು ವರ್ಷದಿಂದ ಉಚ್ಛ್ರಾಯ ಸ್ಥಿತಿಯಲ್ಲಿದೆ. ಅದು ಇನ್ನಷ್ಟು ಅಭಿವೃದ್ಧಿ ಹೊಂದಿ ಸ್ವರ್ಣಯುಗಕ್ಕೆ ಕಾಲಿಡುವುದರಲ್ಲಿ ಅನುಮಾನವಿಲ್ಲ.

ಟ್ರೆಂಡಿಂಗ್​ ಸುದ್ದಿ

ಆರ್ಥಿಕವಾಗಿ ದುಡಿಸಿಕೊಳ್ಳುವ ಶಕ್ತಿ ಮತ್ತು ಬುದ್ದಿ ಹೊಂದಿರುವರಿಗೆ ಖಂಡಿತ ಅಚ್ಚೆ ದಿನಗಳು ಮುಂದಿವೆ. ಇಲ್ಲಿಯವರೆಗಿನ ಪ್ರಯಾಣ ಒಂದು ತೂಕವಾದರೆ ಮುಂದಿನದ್ದು ಇನ್ನೊಂದು ತೂಕ ಸಂಶಯ ಬೇಡ. ಮುಂದಿನ ಕನಿಷ್ಠ ಎರಡು ದಶಕ ಭಾರತಕ್ಕೆ ಸೇರಿದ್ದು.

ಹೌದು ಮೇಲೆ ಹೇಳಿದ ಮಾತುಗಳು ಸಾಕಾರವಾಗುವುದರಲ್ಲಿ ನನಗಂತೂ ಎಳ್ಳಷ್ಟೂ ಅನುಮಾನವಿಲ್ಲ. ಆದರೆ ಮುಂದಿನ ವಾರದಲ್ಲಿ ಏನಾಗುತ್ತದೆ ಎನ್ನುವುದರಲ್ಲಿ ಜನರಿಗೆ ಹೆಚ್ಚು ಆಸಕ್ತಿ. ಹೀಗಾಗಿ ಗಮನಿಸಿ ಭಾರತೀಯ ಜನತಾಪಕ್ಷ ಬಹುಮತದೊಂದಿಗೆ ಆರಿಸಿ ಬಂದರೆ ಷೇರು ಮಾರುಕಟ್ಟೆ ತಕ್ಷಣ ಮೇಲೇರುವುದನ್ನು ನೀವು ಕಾಣಬಹುದಾಗಿದೆ. ಈ ಬಾರಿಯ ಚುನಾವಣೆ ಫಲಿತಾಂಶವನ್ನು ನಾವು ಮೂರು ರೀತಿಯಲ್ಲಿ ನೋಡೋಣ . ಬಿಜೆಪಿ ಗೆಲ್ಲುವುದು ಗ್ಯಾರಂಟಿ ಎನ್ನುವ ನೋಟದೊಂದಿಗೆ ಮೂರು ವಿಭಿನ್ನ ಸನ್ನಿವೇಶಗಳನ್ನು ಅವಲೋಕಿಸೋಣ .

ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾದರೆ…

ಸನ್ನಿವೇಶ 1 : ಭಾರತೀಯ ಜನತಾಪಕ್ಷಕ್ಕೆ 250 ರ ಆಸುಪಾಸಿನಲ್ಲಿ ಗೆಲುವು ಸಿಕ್ಕರೆ ಮತ್ತು ಒಟ್ಟಾರೆ ಎನ್‌ಡಿಎ ಒಕ್ಕೂಟ 300ರ ಆಸುಪಾಸಿನಲ್ಲಿ ಗೆಲುವು ಕಂಡು ಅಧಿಕಾರ ವಹಿಸಿಕೊಂಡರೆ ಷೇರು ಮಾರುಕಟ್ಟೆ ಕುಸಿತ ಕಾಣುತ್ತದೆ. ಹೌದು ಸರಿಯಾಗಿ ಓದಿದಿರಿ. ಬಿಜೆಪಿ ಒಕ್ಕೂಟ 300 ರ ಆಸುಪಾಸು ಸೀಟುಗಳನ್ನು ಗೆದ್ದು ನರೇಂದ್ರ ಮೋದಿಯವರೇ ಪ್ರಧಾನಿಯಾದರೂ ತಾತ್ಕಾಲಿಕವಾಗಿ ಷೇರು ಮಾರುಕಟ್ಟೆ ಕುಸಿತವನ್ನು ಕಾಣುತ್ತದೆ. ಇದಕ್ಕೆ ಕಾರಣ ನಿರೀಕ್ಷೆ. ಅಥವಾ ಅತಿಯಾದ ನಿರೀಕ್ಷೆ. ಅಲ್ಲದೆ ಗಮನಿಸಿ ನೋಡಿ ಷೇರು ಮಾರುಕಟ್ಟೆ ನಿಂತಿರುವುದೇ ಭಾವನೆಗಳ ಮೇಲೆ ! ಷೇರು ಮಾರುಕಟ್ಟೆಯನ್ನು ಪ್ರಮುಖವಾಗಿ ನಡೆಸುವುದು ಭಯ ಮತ್ತು ಅತಿಯಾಸೆ ! ನಾವು ಫಂಡಮೆಂಟಲ್ ಅನಾಲಿಸಿಸ್ , ಟೆಕ್ನಿಕಲ್ ಅನಾಲಿಸಿಸ್ ಬಗ್ಗೆ ಮಾತನಾಡುತ್ತೇವೆ. ಹೌದು ಇದು ಬೇಕು. ಆದರೆ ಇವೆಲ್ಲವೂ ಸಾಮಾನ್ಯ ದಿನದಲ್ಲಿ ಕೆಲಸ ಮಾಡುತ್ತದೆ. ಅಸಾಮಾನ್ಯ ದಿನಗಳಲ್ಲಿ ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಆಗ ಕೆಲಸ ಮಾಡುವುದು ಸೆಂಟಿಮೆಂಟ್ ಅರ್ಥಾತ್ ಭಾವನೆ. ಹೀಗಾಗಿ ಸೆಂಟಿಮೆಂಟಲ್ ಅನಾಲಿಸಿಸ್ ಕೂಡ ಬಹಳ ಮುಖ್ಯ.

ಸನ್ನಿವೇಶ 2 : ಬಿಜೆಪಿ ಪಕ್ಷ ಸ್ವಂತ ಬಲದಿಂದ 280 ಅಥವಾ 300 ರ ಸಮೀಪ ಬಂದು , ಸಮೀಕ್ಷೆಗಳು ಹೇಳುವ ಪ್ರಕಾರ ಒಟ್ಟಾರೆ ಒಕ್ಕೂಟ 350/360 ರ ಆಸುಪಾಸಿನಲ್ಲಿ ವಿಜಯ ಸಾಧಿಸಿದರೆ ಆಗ ಮಾರುಕಟ್ಟೆ ಖಂಡಿತ ಏರುಗತಿಯನ್ನು ಕಾಣುತ್ತದೆ. ಈಗಾಗಲೇ ಎಕ್ಸಿಟ್ ಪೋಲ್ ವರದಿಗಳು 350 ಪ್ಲಸ್ ಸಿಗುತ್ತದೆ ಎಂದು ಹೇಳಿರುವುದರಿಂದ , ಅಷ್ಟು ಬಂದರೆ ನಿರೀಕ್ಷಿತ ಫಲಿತಾಂಶ ಸಿಕ್ಕ ಖುಷಿಯಲ್ಲಿ ಮಾರುಕಟ್ಟೆ ಧನಾತ್ಮಕವಾಗಿ ವರ್ತಿಸುತ್ತದೆ. ಮತ್ತೆ ಇಲ್ಲಿ ಕೆಲಸ ಮಾಡುವುದು ಸೆಂಟಿಮೆಂಟ್.

ಸನ್ನಿವೇಶ 3 : ಬಿಜೆಪಿ ಒಕ್ಕೂಟ ನಿರೀಕ್ಷಿತ 350 ಕ್ಕೂ ಹೆಚ್ಚು ಸ್ಥಾನಗಳಲ್ಲಿ ವಿಜಯ ಸಾಧಿಸಿದರೆ , ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟವನ್ನು ತಡೆಯುವುದು ಅಸಾಧ್ಯ. ಎಲ್ಲಾ ಮಾರುಕಟ್ಟೆಯಂತೆ ಇಲ್ಲಿ ಕೂಡ ಕೆಲವೊಂದು ಷೇರುಗಳ ಆಂತರಿಕ ಮೌಲ್ಯವನ್ನು ಮೀರಿದ ಬೆಲೆಗಳು ಮಾರುಕಟ್ಟೆಯಲ್ಲಿ ನೆಲೆಯಾಗಿವೆ. ಈ ರೀತಿಯ ಅಭೂತಪೂರ್ವ ಜಯ ಇಂತಹ ಸಣ್ಣಪುಟ್ಟ ತಪ್ಪುಗಳನ್ನು ಕೂಡ ಮುಚ್ಚಿಹಾಕಿ ಬಿಡುತ್ತದೆ, ಮತ್ತು ಅದೇ ಸ್ಟ್ಯಾಂಡರ್ಡ್ ಆಗುತ್ತದೆ. ಜೊತೆಗೆ ಹೊಸ ಬೆಂಚ್ ಮಾರ್ಕ್ ಕಡೆಗೆ ಮಾರುಕಟ್ಟೆ ಸಾಗುತ್ತದೆ.

ಷೇರು ಮಾರುಕಟ್ಟೆಯಲ್ಲಿ ಹೊಸ ಅಲೆ

ಒಟ್ಟಾರೆ ಮಾರುಕಟ್ಟೆಯಲ್ಲಿ ದೀರ್ಘಾವಧಿಯಲ್ಲಿ ಬೆಳವಣಿಗೆ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ನಿಮಗೆಲ್ಲಾ ಗೊತ್ತಿರಲಿ ಭಾರತೀಯ ಷೇರು ಮಾರುಕಟ್ಟೆಯಿಂದ ಪ್ರತಿ ದಿನವೂ ಸಾವಿರಾರು ಕೋಟಿ ರೂಪಾಯಿ ವಿದೇಶಿ ಹೂಡಿಕೆಯನ್ನು ಹಿಂತೆಗೆದುಕೊಂಡು ತಮ್ಮ ದೇಶಗಳಿಗೆ ಹೂಡಿಕೆದಾರರು ಕಳಿಸುತ್ತಿದ್ದಾರೆ. ಈ ಕ್ರಿಯೆ ಯಾವಾಗಲು ನಡೆಯುತ್ತಲೇ ಇರುತ್ತದೆ. ಹೊಸತಲ್ಲ , ಆದರೆ ಕಳೆದ ಎರಡು ಮೂರು ತಿಂಗಳಿಂದ ಹಿಂಪಡೆಯುವಿಕೆ ವೇಗ ಪಡೆದುಕೊಂಡಿತ್ತು. ಅಮೇರಿಕಾದಲ್ಲಿ ಫೆಡರಲ್ ಬಡ್ಡಿದರ ಏರಿಕೆಯಾಗಬಹುದು ಎನ್ನುವ ಊಹೆ ಕೂಡ ಇದಕ್ಕೆ ಕಾರಣವಾಗಿತ್ತು. ಆದರೂ ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಾಣಲಿಲ್ಲ. ಅಲ್ಪಸ್ವಲ್ಪ ತಿದ್ದುಪಡಿಗೆ ಒಳಗಾಯ್ತು. ಹೀಗೇಕೆ ಎನ್ನುವುದಕ್ಕೆ ಉತ್ತರ ಡೊಮೆಸ್ಟಿಕ್ , ಸ್ಥಳೀಯ ಹೂಡಿಕೆದಾರರ ನಂಬಿಕೆ ಮತ್ತು ಬಂಡವಾಳ ಹರಿದು ಬರುವಿಕೆ.

ಜೂನ್ 4ರ ಫಲಿತಾಂಶದಲ್ಲಿ ಬಿಜೆಪಿ ಒಕ್ಕೂಟ 350 ಪ್ಲಸ್ ಅಥಾವ 400 ಸ್ಥಾನ ಗಳಿಸಿದರೆ ಹಾರಿಹೋಗಿದ್ದ ವಿದೇಶಿ ಹೂಡಿಕೆದಾರ ಪಾರಿವಾಳಗಳು ಮರಳಿ ಭಾರತಕ್ಕೆ ಹೂಡಿಕೆ ಮಾಡಲು ಸಾಲಿನಲ್ಲಿ ನಿಲ್ಲುತ್ತವೆ. ಇದರ ಜೊತೆಗೆ ಸ್ಥಳೀಯ ಹೂಡಿಕೆದಾರರಲ್ಲಿ ಹೆಚ್ಚಿದ ಆತ್ಮವಿಶ್ವಾಸದ ಕಾರಣ ಷೇರು ಮಾರುಕಟ್ಟೆ ಹಣದ ಹರಿವಿನಿಂದ ಕೊಚ್ಚಿ ಹೋಗಲಿದೆ. ಹೊಸ ಎತ್ತರವನ್ನು ತಲುಪಲಿದೆ.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

ಷೇರು ಮಾರುಕಟ್ಟೆ ಮೇಲೆ ಚುನಾವಣೆ ಫಲಿತಾಂಶ ಎಫೆಕ್ಟ್‌: ರಂಗಸ್ವಾಮಿ ಮೂಕನಹಳ್ಳಿ ಬರಹ
ಷೇರು ಮಾರುಕಟ್ಟೆ ಮೇಲೆ ಚುನಾವಣೆ ಫಲಿತಾಂಶ ಎಫೆಕ್ಟ್‌: ರಂಗಸ್ವಾಮಿ ಮೂಕನಹಳ್ಳಿ ಬರಹ

ಟಿ20 ವರ್ಲ್ಡ್‌ಕಪ್ 2024