Modi 100 days Target: ಮೋದಿ3.0, ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲ 100 ದಿನ ಗುರಿ ಏನಾಗಿರಬಹುದು
Modi 3.0 100 days ಪ್ರಧಾನಿ ನರೇಂದ್ರ ಮೋದಿ ಎರಡು ಅವಧಿಯಲ್ಲಿ ಅಧಿಕಾರಕ್ಕೆ ಬಂದಾಗಲೂ 100 ದಿನಗಳ ಗುರಿ ಇಟ್ಟೇ ಕೆಲಸ ಮಾಡಿದವರು. ಮೂರನೇ ಬಾರಿಗೆ ಬಂದರೂ ಈ 100 ದಿನದ ಗುರಿ ಇರಲಿದೆ. ಇದರಲ್ಲಿ ಯಾವ ವಿಷಯಗಳು ಇರಬಹುದು ಎನ್ನುವ ಚರ್ಚೆಗಳು ನಡೆದಿವೆ.
ದೆಹಲಿ: ಭಾರತದ ಲೋಕಸಭೆ ಚುನಾವಣೆಗಳು ಮುಗಿದಿವೆ. ಚುನಾವಣೆ ಫಲಿತಾಂಶ ಹೇಗಿರಬಹುದು ಎನ್ನುವ ದಿಕ್ಸೂಚಿಯೂ ಸಿಕ್ಕಿದೆ. ಅದರಲ್ಲೂ ಕೊನೆ ಹಂತದ ಮತದಾನ ಮುಗಿದ ಕ್ಷಣದಿಂದಲೇ ಮಾಧ್ಯಮಗಳಲ್ಲಿ ಪ್ರಕಟವಾದ ಚುನಾವಣೆ ಮತಗಟ್ಟೆ ಸಮೀಕ್ಷೆಗಳು ಬಹುತೇಕ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎನ್ನುವ ಭವಿಷ್ಯವನ್ನು ನುಡಿದಿವೆ. ಅದರಲ್ಲೂ ಮೋದಿ ಅವರೇ ಮತ್ತೆ ಪ್ರಧಾನಿಯಾಗಬಹುದು ಎನ್ನುವ ಚರ್ಚೆಗಳೇ ಜೋರಾಗಿವೆ. ಈಗಾಗಲೇ ಎರಡು ಅವಧಿಯಲ್ಲಿ ದೇಶದ ನಿರ್ದಿಷ್ಟ ಪ್ರಗತಿಗೆ ಯೋಜನೆಗಳನ್ನು ಹಾಕಿಕೊಂಡು ಅದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಿರುವ ಮೋದಿ ಹಾಗೂ ಅವರ ತಂಡದ ಮೂರನೇ ಅವಧಿ ಆಡಳಿತ ಹೇಗಿರಬಹುದು. ಅದಕ್ಕಿಂತಲೂ ಮೂರನೇ ಮೊದಲ ನೂರು ದಿನಕ್ಕ ಮೋದಿ ಏನೇನೂ ಯೋಜಿಸಿಕೊಂಡಿರಬಹುದು ಎನ್ನುವ ಚರ್ಚೆಗಳು ಬರೀ ರಾಜಕೀಯ ವಲಯದಲ್ಲಿ ಮಾತ್ರವಲ್ಲ. ಎಲ್ಲಾ ವಲಯದಲ್ಲೂ ನಡೆದಿವೆ. ಏಕೆಂದರೆ ಹಿಂದಿನ ಎರಡು ಅವಧಿಯಲ್ಲಿ ಗೆದ್ದಾಗಲೂ ಮೋದಿ ಅವರು ತಮ್ಮ ತಂಡದ ಮೂಲಕ ನೂರು ದಿನಗಳ ಗುರಿ ಹಾಗೂ ಜಾರಿಯ ಪ್ರಯತ್ನ ಮಾಡಿದ್ದರು. ಈಗಲೂ ಅದೇ ದಿಕ್ಕಿನಲ್ಲಿ ಪ್ರಯತ್ನಗಳು ನಡೆದಿವೆ.
ಈಗಾಗಲೇ ಚುನಾವಣೆಗೆ ಹೋಗುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ವಿಕಸಿತ ಭಾರತ 2047ಕ್ಕಾಗಿ ಯೋಜನೆ ರೂಪಿಲಿದೆ ಎಂದು ಹೇಳಿದ್ದರು. ಅಂದರೆ ಭಾರತದ ಶತಮಾನೋತ್ಸವದ ಹೊತ್ತಿಗೆ ಏನೇನೂ ಯೋಜನೆಗಳು ಜಾರಿಯಾಗಬೇಕು ಎನ್ನುವುದನ್ನೂ ಉಲ್ಲೇಖಿಸಿದ್ದರು. ಇದಾದ ಚುನಾವಣೆ ನಂತರವೂ ಹಲವಾರು ಭಾಗಗಳಲ್ಲಿ ಇದೇ ವಿಚಾರವನ್ನು ಮೋದಿ ಪ್ರಸ್ತಾಪಿಸಿದ್ದರು.
ಮೊದಲ ಎರಡು ಅವಧಿಯಲ್ಲೂ ಮೋದಿ ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಆಗಬೇಕಾಗಿರುವ ಆದ್ಯತೆ ಯೋಜನೆಗಳಿಗೆ ಸಚಿವರು, ಅಧಿಕಾರಿಗಳಿಗೆ ಮೋದಿ ಗುರಿ ನಿಗದಿಪಡಿಸಿದ್ದರು. ಮೂರನೇ ಅವಧಿಗೂ ಇದೇ ರೀತಿಯ ಯೋಜನೆಗಳು ಜುಲೈನಲ್ಲಿ ಆರಂಭಿಸುವ ನಿಟ್ಟಿನಲ್ಲಿ ತಯಾರಿಗಳು ಶುರುವಾಗಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.
ಅಧಿಕಾರಿಗಳ ಸಭೆ
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಅಧಿಕಾರಿಗಳು ಹಾಗೂ ಪ್ರಮುಖರದೊಂದಿಗೆ ಭಾನುವಾರ ಚರ್ಚೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಮೊದಲ ನೂರು ದಿನದಲ್ಲಿ ಏನೇನು ಮಾಡಬಹುದು. ಅದಕ್ಕೆ ಸಿದ್ದತೆ ಹೇಗಿರಬೇಕು. ತಂಡದಲ್ಲಿ ಯಾರು ಇರಬೇಕು. ದಿಕ್ಸೂಚಿ ಹಾಗೂ ತಯಾರಿಯ ಯೋಜನೆಗಳನ್ನು ಮಾಡಿಕೊಳ್ಳುವಂತೆ ಮೋದಿ ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹತ್ತು ಗುಂಪುಗಳನ್ನು ರಚಿಸಬೇಕು. ಪ್ರತಿ ಗುಂಪಿಗೆ ಕಾರ್ಯದರ್ಶಿ ದರ್ಜೆ ಅಧಿಕಾರಿ ಇರಲಿದೆ. ಅವರು ಸಂಯೋಜಕರಗಿ ಕೆಲಸ ಮಾಡಲಿ. ಹಾಕಿಕೊಂಡಿರುವ ವಿಷಯಾಧಾರಿತ ಗುರಿಗಳನ್ನು ನೂರು ದಿನಗಳ ಒಳಗೆ ಮುಗಿಸಲು ಕಾರ್ಯಯೋಜನೆಯನ್ನು ಹಾಕಿಕೊಳ್ಳಬೇಕು. ಜುಲೈ 1ರಿಂದಲಾದರೂ ನೂರು ದಿನದ ಗುರಿ ನಿಗದಿತ ಕಾರ್ಯಕ್ರಮಗಳನ್ನು ಆರಂಭಿಸಬೇಕು ಎಂದು ತಿಳಿಸಿದ್ದಾರೆ ಎನ್ನುವ ಸೂಚನೆಯನ್ನು ಮೋದಿ ನೀಡಿದ್ದಾರೆ ಎನ್ನಲಾಗಿದೆ.
ನೂರು ದಿನದ ಅಜೆಂಡಾ ಏನಿರಬಹುದು
- ಯುಪಿಎಸ್‌ಸಿ ಫೌಂಡೇಷನ್ ಕೋರ್ಸ್‌ಗಳನ್ನು ಬದಲು ಮಾಡುವುದು. ಹಲವಾರು ವರ್ಷಗಳಿಂದ ಹಿಂದಿನ ರೀತಿಯಲ್ಲಿಯೇ ಪರೀಕ್ಷೆಗಳು ನಡೆಯುತ್ತಿದ್ದು., ಇದನ್ನು ಮರು ಪರಿಶೀಲಿಸುವುದು ಸೇರಿದೆ
- ಭಾರತದಲ್ಲಿ ಐಎಎಸ್, ಐಪಿಎಸ್, ಐಎಫ್ ಎಸ್ ಸಹಿತ ಪ್ರಮುಖ ನಾಗರೀಕ ಸೇವಾ ಅಧಿಕಾರಿಗಳ ಆಡಳಿತ, ಕಾರ್ಯಶೈಲಿಯ ರೇಟಿಂಗ್ ಇಲ್ಲ. ಇದಕ್ಕೊಂದು ರೂಪ ನೀಡಿ ಅಧಿಕಾರಿಗಳ ಕಾರ್ಯಕ್ಷಮತೆ ವೃದ್ದಿಸುವ ಯೋಜನೆಯೂ ಸೇರ್ಪಡೆಯಾಗಬಹುದು
- ದೇಶದಲ್ಲಿ ಒಂದು ದೇಶ ಒಂದು ಚುನಾವಣೆಯಡಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಇರಾದೆ ಬಿಜೆಪಿಗೆ ಇದೆ. ಇದನ್ನು ಹೇಳುತ್ತಾ ಬಂದರೂ ಅದಕ್ಕೊಂದು ರೂಪ ಸಿಕ್ಕಿಲ್ಲ. ಈ ಕುರಿತು ಯೋಜನೆ ರೂಪಿಸುವ ಸಾಧ್ಯತೆಗಳು ಇವೆ.
- ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಗೊಳಿಸುವುದು ಬಿಜೆಪಿಯ ಪ್ರಮುಖ ಅಜೆಂಡಾ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ಆಗಿದ್ದರೂ ಜಾರಿ ವಿಚಾರದಲ್ಲಿ ಸಾಕಷ್ಟು ನೀತಿ ನಿರೂಪಣೆಗಳು ಬಾಕಿ ಇವೆ. ಇದಕ್ಕೂ ಒತ್ತು ನೀಡಬಹುದು.