ಮಹಾರಾಷ್ಟ್ರ ಚುನಾವಣೆ: ಮಹಾಯುತಿಯೋ ಮಹಾ ವಿಕಾಸ ಅಘಾಡಿಯೋ, ಮತದಾರರ ಒಲವು ಯಾರ ಕಡೆಗೋ, 288 ಶಾಸಕರ ಆಯ್ಕೆಗೆ ಮತದಾನ ಇಂದು
Maharashtra assembly election 2024: ಮಹಾರಾಷ್ಟ್ರ ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 288 ಶಾಸಕರ ಆಯ್ಕೆ ಮತದಾನ ಇಂದು (ನವೆಂಬರ್ 20) ನಡೆಯುತ್ತಿದೆ. ಸರ್ಕಾರ ರಚನೆ ಮಾಡುವುದು ಮಹಾಯುತಿಯೋ ಮಹಾ ವಿಕಾಸ ಅಘಾಡಿಯೋ, ಮತದಾರರ ಒಲವು ಯಾರ ಕಡೆಗೆ ಇದೆ ಎಂಬುದು ಶನಿವಾರ (ನವೆಂಬರ್ 23) ಬಹಿರಂಗವಾಗಲಿದೆ.
Maharashtra election 2024: ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಲುವಾಗಿ ಇಂದು (ನವೆಂಬರ್ 20) ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಸಂಜೆ 6 ಗಂಟೆ ತನಕ ಮತದಾನಕ್ಕೆ ಅವಕಾಶ ಇದೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ಮಹಾಯುತಿ ಮತ್ತೊಂದು ಅವಧಿಗೆ ಆಡಳಿತ ಚುಕ್ಕಾಣಿ ಹಿಡಿಯಲು ಬಯಸುತ್ತಿದ್ದರೆ, ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎ) ಪುನಃ ಅಧಿಕಾರಕ್ಕೇರಲು ಬಯಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಂತಹ ಉನ್ನತ ನಾಯಕರನ್ನು ಒಳಗೊಂಡ ದೊಡ್ಡ ಪ್ರಮಾಣದ ಪ್ರಚಾರಗಳನ್ನು ಈ ಚುನಾವಣೆಯಲ್ಲಿ ಗಮನಸೆಳೆದಿದ್ದವು. ಇಂದು ಸಂಜೆ ಮತದಾನ ಮುಗಿದ ಬಳಿಕ ಯಾರ ಸರ್ಕಾರ ರಚನೆಯಾಗಬಹುದು ಎಂಬ ಚಿತ್ರಣ ನೀಡಬಲ್ಲ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಲಿದೆ. ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಶಿವ ಸೇನಾ ಮತ್ತು ಎನ್‌ಸಿಪಿ ವಿಭಜನೆ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ
ಮಹಾರಾಷ್ಟ್ರದ ರಾಜಕಾರಣದಲ್ಲಿ ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಶಿವ ಸೇನಾ ಮತ್ತು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ವಿಭಜನೆಯಾದ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದು. ಶಿವ ಸೇನಾ ಉದ್ಧವ್ ಠಾಕ್ರೆ ಮತ್ತು ಶಿವ ಸೇನಾ ಏಕನಾಥ ಶಿಂಧೆ ಎಂದು ಎರಡು ಹೋಳಾದರೆ, ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಶರದ್ ಪವಾರ್ ಮತ್ತು ಅಜಿತ್ ಪವಾರ್ ಎಂಬ ಎರಡು ಪಕ್ಷಗಳಾಗಿ ಹೋಳಾಗಿವೆ. ಈ ಪೈಕಿ ಏಕನಾಥ ಶಿಂಧೆಯ ಶಿವ ಸೇನಾ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಪಕ್ಷಗಳು ಬಿಜೆಪಿ ಜತೆಗೆ ಕೈ ಜೋಡಿಸಿಕೊಂಡು ಮಹಾಯುತಿ ಎಂಬ ಹೊಸ ಮೈತ್ರಿ ಸರ್ಕಾರ ರಚನೆ ಮಾಡಿದ್ದವು. ಇದಕ್ಕೂ ಮೊದಲು ಕಾಂಗ್ರೆಸ್ ಜೊತೆ ಸೇರಿಕೊಂಡು ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆ ಮಾಡಿದ್ದ ಶಿವ ಸೇನಾ ಮತ್ತು ಎನ್‌ಸಿಪಿ ಪಕ್ಷಗಳು ಈಗ ಶಿವ ಸೇನಾ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಆಗಿ ಅದೇ ಮೈತ್ರಿಯಲ್ಲಿ ಉಳಿದುಕೊಂಡಿವೆ.
ಬಿಜೆಪಿ 149 ಸ್ಥಾನಗಳಲ್ಲಿ, ಶಿವ ಸೇನಾ 81ರಲ್ಲಿ ಎನ್‌ಸಿಪಿ 59 ಸ್ಪರ್ಧಿಸುತ್ತಿವೆ. ಕಾಂಗ್ರೆಸ್ ಪಕ್ಷ 101, ಶಿವ ಸೇನಾ (ಯುಬಿಟಿ) 95, ಎನ್‌ಸಿಪಿ (ಎಸ್‌ಪಿ) 86 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದೇ ವೇಳೆ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) 237 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಮುಖ್ಯ ಮಂತ್ರಿ ಏಕನಾಥ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಅಜಿತ್ ಪವಾರ್, ಆದಿತ್ಯ ಠಾಕ್ರೆ, ಮಿಲಿಂದ್ ದೇವೂರಾ, ನಾನಾ ಪಟೋಲ್ ಮುಂತಾದವರು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖರು.
288 ಸ್ಥಾನಗಳಿಗೆ 4136 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ 9.7 ಕೋಟಿ ಮತದಾರರು
ಮಹಾರಾಷ್ಟ್ರ ಚುನಾವಣೆಯಲ್ಲಿ 288 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು 4136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 2086 ಸ್ವತಂತ್ರ ಅಭ್ಯರ್ಥಿಗಳು. 9.7 ಕೋಟಿ ಅರ್ಹ ಮತದಾರರು ಇದ್ದು, ಈ ಪೈಕಿ 6101 ತೃತೀಯ ಲಿಂಗಿಗಳು, 6.41 ಲಕ್ಷ ಅಂಗವೈಕಲ್ಯ ಇರುವ ಮತದಾರರು ಇದ್ದಾರೆ. ಚುನಾವಣಾ ಆಯೋಗವು 1,00,186 ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. 6 ಲಕ್ಷ ಸರ್ಕಾರಿ ಉದ್ಯೋಗಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾವಹಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಚುನಾವಣೆ ಘೋಷಣೆಯಾದ ಕೂಡಲೇ ಅಂದರೆ ಅಕ್ಟೋಬರ್ 15 ರಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅಲ್ಲಿಂದೀಚೆಗೆ ನೀತಿ ಜಾರಿ ಸಂಸ್ಥೆಗಳು 252.42 ಕೋಟಿ ರೂಪಾಯಿ ಮೌಲ್ಯದ ನಗದು, ಮದ್ಯ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿವೆ. ಇದರಲ್ಲಿ 83.12 ಕೋಟಿ ಬೆಲೆಬಾಳುವ ಚಿನ್ನಾಭರಣ ಮತ್ತು 32.67 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳು ಕೂಡ ಸೇರಿಕೊಂಡಿವೆ ಎಂದು ಪಿಟಿಐ ವರದಿ ಮಾಡಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿ ಸಿವಿಜಿಲ್ ಆಪ್ ಮೂಲಕ ಚುನಾವಣಾ ಆಯೋಗವು 2,469 ದೂರುಗಳನ್ನು ಸ್ವೀಕರಿಸಿದ್ದು ಶೇಕಡ 99.31 ಅನ್ನು ಸರಿಯಾಗಿ ಸ್ಪಂದಿಸಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.