ಮಹಾರಾಷ್ಟ್ರ ಫಲಿತಾಂಶ ಇಂದು: ಮತ ಎಣಿಕೆ ಬೆಳಗ್ಗೆ 8ಕ್ಕೆ ಶುರು, ಅದಕ್ಕೂ ಮುನ್ನ 5ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣಕ್ಕಾಗಿ 5 ಗ್ರಾಫ್‌ ನೋಡೋಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರ ಫಲಿತಾಂಶ ಇಂದು: ಮತ ಎಣಿಕೆ ಬೆಳಗ್ಗೆ 8ಕ್ಕೆ ಶುರು, ಅದಕ್ಕೂ ಮುನ್ನ 5ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣಕ್ಕಾಗಿ 5 ಗ್ರಾಫ್‌ ನೋಡೋಣ

ಮಹಾರಾಷ್ಟ್ರ ಫಲಿತಾಂಶ ಇಂದು: ಮತ ಎಣಿಕೆ ಬೆಳಗ್ಗೆ 8ಕ್ಕೆ ಶುರು, ಅದಕ್ಕೂ ಮುನ್ನ 5ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣಕ್ಕಾಗಿ 5 ಗ್ರಾಫ್‌ ನೋಡೋಣ

Maharashtra Election Result: ಮಹಾರಾಷ್ಟ್ರ ಫಲಿತಾಂಶ ಇಂದು. ಮತ ಎಣಿಕೆ ಬೆಳಗ್ಗೆ 8ಕ್ಕೆ ಶುರುವಾಗಲಿದೆ. ಅದಕ್ಕೂ ಮುನ್ನ ಕಳೆದ 5 ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣವನ್ನು ಗಮನಿಸುವುದು ಒಳಿತು. ಶಿವ ಸೇನಾ, ಎನ್‌ಸಿಪಿ ಪಕ್ಷಗಳು 2 ಹೋಳಾಗಿರುವ ಕಾರಣ, ಈ ಸಲ ರಾಜಕೀಯದ ರಂಗು ಬದಲಾಗಿದೆ. ಇದನ್ನು ಅರಿಯಲು ಈ 5 ಗ್ರಾಫ್‌ ಸಹಿತ ವಿವರಣೆ ಗಮನಿಸೋಣ.

ಮಹಾರಾಷ್ಟ್ರ ಫಲಿತಾಂಶ ಇಂದು: ಮತ ಎಣಿಕೆ ಬೆಳಗ್ಗೆ 8ಕ್ಕೆ ಶುರು, ಅದಕ್ಕೂ ಮುನ್ನ 5ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣ ಈ ವರದಿಯಲ್ಲಿದೆ. ಮಹಾರಾಷ್ಟ್ರದ ರಾಜಕೀಯ ನಾಯಕರಾದ ಅಜಿತ್ ಪವಾರ್, ಶರದ್ ಪವಾರ್‌, ದೇವೇಂದ್ರ ಫಡ್ನವೀಸ್, ಏಕನಾಥ ಶಿಂಧೆ, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.
ಮಹಾರಾಷ್ಟ್ರ ಫಲಿತಾಂಶ ಇಂದು: ಮತ ಎಣಿಕೆ ಬೆಳಗ್ಗೆ 8ಕ್ಕೆ ಶುರು, ಅದಕ್ಕೂ ಮುನ್ನ 5ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣ ಈ ವರದಿಯಲ್ಲಿದೆ. ಮಹಾರಾಷ್ಟ್ರದ ರಾಜಕೀಯ ನಾಯಕರಾದ ಅಜಿತ್ ಪವಾರ್, ಶರದ್ ಪವಾರ್‌, ದೇವೇಂದ್ರ ಫಡ್ನವೀಸ್, ಏಕನಾಥ ಶಿಂಧೆ, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.

Maharashtra Election Result: ಮಹರಾಷ್ಟ್ರ ವಿಧಾನಸಭಾ ಚುನಾವಣೆ ಅತ್ಯಂತ ನಿರ್ಣಾಯಕ ಘಟ್ಟ ತಲುಪಿದೆ. ಮಹಾರಾಷ್ಟ್ರ ಫಲಿತಾಂಶ ಇಂದು (ನವೆಂಬರ್ 23) ಪ್ರಕಟವಾಗುತ್ತಿದ್ದು, ಬೆಳಗ್ಗೆ 8ಕ್ಕೆ ಮತ ಎಣಿಕೆ ಶುರುವಾಗುತ್ತಿದೆ. ನವೆಂಬರ್ 20ಕ್ಕೆ ಮತದಾನ ಪೂರ್ಣಗೊಂಡಿದೆ. ಮತದಾನದ ದಿನ ಸಂಜೆ ಪ್ರಕಟವಾದ 6 ಮಹಾರಾಷ್ಟ್ರ ಎಕ್ಸಿಟ್ ಪೋಲ್‌ಗಳ ಪೈಕಿ 4ರಲ್ಲಿ ಮಹಾಯುತಿಗೆ ಸ್ಪಷ್ಟ ಗೆಲುವು ತೋರಿಸಿದರೆ ಇನ್ನೆರಡಲ್ಲಿ ಸಮಬಲದ ಸ್ಪರ್ಧೆ ಕಂಡುಬಂದಿತ್ತು. ಹೀಗಾಗಿ ಆಡಳಿತಾರೂಢ ಮಹಾಯುತಿ ಅಥವಾ ವಿಪಕ್ಷ ಮಹಾ ವಿಕಾಸ್ ಅಘಾಡಿ ಈ ಎರಡರ ಪೈಕಿ ಯಾರು ಅಧಿಕಾರಕ್ಕೆ ಬರಬಹುದು ಎಂಬ ಕುತೂಹಲ ಎಲ್ಲರೂ ಇದೆ. ಮಹಾರಾಷ್ಟ್ರದಲ್ಲಿ 2014 ರಿಂದೀಚೆಗೆ ಬಿಜೆಪಿ ಹೆಚ್ಚು ಪ್ರಭಾವಿ ಪಕ್ಷವಾಗಿದ್ದು, 2014 ಮತ್ತು 2019ರ ಚುನಾವಣೆಯಲ್ಲಿ 100 ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಲ್ಲಿ ಗೆಲುವು ದಾಖಲಿಸಿದೆ. ಆದಾಗ್ಯೂ ಮೈತ್ರಿ ರಾಜಕಾರಣ ಮುಂದುವರಿಸಿದೆ. ಇನ್ನುಳಿದಂತೆ ಶಿವ ಸೇನಾ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಹೆಚ್ಚು ಪ್ರಭಾವಿಗಳಾಗಿ ಬೆಳೆದವು. ಕಾಂಗ್ರೆಸ್ ಪ್ರಭಾವ ಈ ಅವಧಿಯಲ್ಲಿ ಕುಸಿದಿದ್ದು, ಮೈತ್ರಿ ರಾಜಕಾರಣಕ್ಕೆ ನೆಚ್ಚಿಕೊಂಡಿದೆ. ಈ ಸಲದ ಫಲಿತಾಂಶ ನೋಡುವ ಮೊದಲು ಕಳೆದ ಸಲದ ಫಲಿತಾಂಶ ಮತ್ತು ಅದರ ನಂತರ ಬದಲಾದ ರಾಜಕೀಯ ಚಿತ್ರಣವನ್ನು ಗಮನಿಸೋಣ.

ಮಹಾರಾಷ್ಟ್ರ ಚುನಾವಣೆ ಫಲಿತಾಂಶ 2019 ಹೀಗಿತ್ತು

ಮಹಾರಾಷ್ಟ್ರ ಚುನಾವಣೆ 2019ರಲ್ಲಿ ನಡೆದ ಬಳಿಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅಂದು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಹೀಗಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿ 122 ಮತ್ತು ಶಿವ ಸೇನಾ 63 ಸ್ಥಾನಗಳಲ್ಲಿ ಗೆಲುವು ದಾಖಲಿಸಿಕೊಂಡು ಸರ್ಕಾರ ರಚಿಸಿದ್ದವು. ಅಂದು ದೇವೇಂದ್ರ ಫಡ್ನಾವೀಸ್ ಮುಖ್ಯಮಂತ್ರಿಯಾಗಿದ್ದರು. 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಮತ್ತು ವಿಧಾನಸಭೆಯಲ್ಲಿ ಪಕ್ಷಗಳ ಸದಸ್ಯ ಬಲ ಹೀಗಿತ್ತು.

ಆದರೆ, ಈ ಬಾರಿ ಮುಖ್ಯಮಂತ್ರಿ ಸ್ಥಾನ ತನಗೇ ಬೇಕು ಎಂದು 56 ಸ್ಥಾನಗಳಲ್ಲಿ ಗೆದ್ದ ಶಿವ ಸೇನಾ ನಾಯಕ ಉದ್ಧವ್ ಠಾಕ್ರೆ ಪಟ್ಟು ಹಿಡಿದ ಕಾರಣ ಬಿಜೆಪಿ ನೇತೃತ್ವದ ಸರ್ಕಾರ 5 ದಿನಕ್ಕೆ ಮೊಟಕುಗೊಂಡಿತು. ಎನ್‌ಡಿಎ ಮೈತ್ರಿಯಿಂದ ಹೊರಬಿದ್ದ ಶಿವ ಸೇನಾ ನಂತರ ಕೈ ಜೋಡಿಸಿದ್ದು ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಗಳ ಜೊತೆಗೆ. ಹಾಗೆ ಮಹಾ ವಿಕಾಸ್ ಅಘಾಡಿ ಸರ್ಕಾರ 2019ರಲ್ಲಿ ರಚನೆಯಾಯಿತು.

ಮಹಾರಾಷ್ಟ್ರ ಚುನಾವಣೆ ಫಲಿತಾಂಶ: ಯಾವ ಪಕ್ಷಕ್ಕೆ ಎಷ್ಟು ಭದ್ರಕೋಟೆಯಂತಹ ಕ್ಷೇತ್ರಗಳಿವೆ

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವ ಪಕ್ಷಕ್ಕೆ ತನ್ನದೇ ಆದ ಭದ್ರಕೋಟೆಯಂತಹ ಕ್ಷೇತ್ರಗಳಿವೆ ಎಂಬುದನ್ನು ಗಮನಿಸೋಣ. ಇದಕ್ಕಾಗಿ 2009 ರ ಚುನಾವಣೆಯಿಂದೀಚೆಗೆ 2019ರ ಚುನಾವಣೆ ತನಕ ಪಕ್ಷವಾರು ಇಂತಹ ಕ್ಷೇತ್ರಗಳ ಕಡೆಗೆ ಒಮ್ಮೆ ನೋಟ ಬೀರೋಣ.

ಇದರಂತೆ ಒಂದೇ ಕ್ಷೇತ್ರದಲ್ಲಿ ಮೂರು ಸತತ ಗೆಲುವು ದಾಖಲಿಸಿದ ಕ್ಷೇತ್ರಗಳನ್ನು ಪಟ್ಟಿ ಮಾಡಿದಾಗ ಬಿಜೆಪಿಗೆ 24, ಕಾಂಗ್ರೆಸ್ ಪಕ್ಷಕ್ಕೆ 16, ಅವಿಭಜಿತ ಎನ್‌ಸಿಪಿ ಮತ್ತು ಶಿವ ಸೇನಾಗಳಿಗೆ ತಲಾ 12 ಕ್ಷೇತ್ರಗಳು ಭದ್ರಕೋಟೆಯಂತೆ ಇರುವುದು ಕಂಡುಬಂದಿದೆ. ಇನ್ನು 2009, 2014, 2019ರ ಚುನಾವಣೆಗಳಲ್ಲಿ ಒಂದೇ ಪಕ್ಷ ಗೆಲುವು ದಾಖಲಿಸಿದ ಕ್ಷೇತ್ರಗಳು 288ರ ಪೈಕಿ 70 ಮಾತ್ರ. ಎರಡು ಕ್ಷೇತ್ರಗಳ ಗೆಲುವನ್ನು ಗಮನಿಸುವುದಾದರೆ ಬಿಜೆಪಿ 77, ಶಿವ ಸೇನಾ 38, ಎನ್‌ಸಿಪಿ 28, ಕಾಂಗ್ರೆಸ್‌ 26 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ ಪ್ರಭಾವ ಉಳಿಸಿಕೊಂಡಿದೆ.

ಮಹಾರಾಷ್ಟ್ರ ಚುನಾವಣೆ 2024: ಸದ್ಯ ವಿಧಾನ ಸಭೆಯಲ್ಲಿ ಪಕ್ಷಗಳ ಬಲ

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ 2019ರ ನವೆಂಬರ್‌ನಿಂದ 2022ರ ಜೂನ್‌ವರೆಗೂ ಆಡಳಿತ ನಡೆಸಿದರು. ಈ ನಡುವೆ, ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಯ ಪ್ರಮುಖ ಮಿತ್ರ ಪಕ್ಷಗಳಾದ ನ್ಯಾಷನಲಿಸ್ಟ್‌ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯಲ್ಲಿ ಶರದ್ ಪವಾರ್ ಮತ್ತು ಅವರ ಅಳಿಯ ಅಜಿತ್‌ ಪವಾರ್ ನಡುವೆ ಭಿನ್ನಮತ ಉಲ್ಭಣಗೊಂಡಿತು. ಅಜಿತ್ ಪವಾರ್‌ ಮತ್ತು ಬೆಂಬಲಿಗರು ಪಕ್ಷ ಒಡೆದು ಹೊರಬರಲು ಸಜ್ಜಾದರು. ಇದೇ ರೀತಿ ಶಿವ ಸೇನಾದಲ್ಲೂ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ ಶಿಂಧೆ ಬೆಂಬಲಿಗರು ಬಂಡಾಯದ ಬಾವುಟ ಹಾರಿಸಿದರು. ಎರಡೂ ಪಕ್ಷಗಳ ಪ್ರಮುಖ ನಾಯಕರು ಅಂದರೆ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಭಿನ್ನಮತ ಶಮನಕ್ಕೆ ಪ್ರಯತ್ನಿಸಿದರು. ಈ ಸನ್ನಿವೇಶದಲ್ಲಿ ಮಹಾ ವಿಕಾಸ್ ಅಘಾಡಿಯ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ ನಾಯಕತ್ವಕ್ಕೆ ಈ ಒಳ ಜಗಳ ನಿಲ್ಲಿಸಲಾಗದೆ ಗಂಟಲಲ್ಲಿ ಸಿಕ್ಕ ಬಿಸಿ ತುಪ್ಪದಂತಾಗಿತ್ತು. 2022ರ ಜೂನ್‌ನಲ್ಲಿ ಎನ್‌ಸಿಪಿ ಎರಡು ಹೋಳಾಯಿತು, ಶಿವ ಸೇನಾ ಕೂಡ ಎರಡು ಹೋಳಾಯಿತು. ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವ ಸೇನಾದ 38 ಶಾಸಕರು, ಅಜಿತ್ ಪವಾರ್ ನೇತೃತ್ವದಲ್ಲಿ 41 ಎನ್‌ಸಿಪಿ ಶಾಸಕರು ಬಿಜೆಪಿ ನೇತೃತ್ವದ ಮಹಾಯುತಿ ಸೇರ್ಪಡೆಯಾದರು. ಹೀಗಾಗಿ ಮಹಾಯುತಿಯ ಸದಸ್ಯ ಬಲ ಹೆಚ್ಚಾಗಿ ಆಡಳಿತ ಚುಕ್ಕಾಣಿ ಸಹಜವಾಗಿಯೇ ಮಹಾಯುತಿಗೆ ಸಿಕ್ಕಿತು. ಮೈತ್ರಿಯಾದ ಕಾರಣ ಏಕನಾಥ ಶಿಂಧೆ ಮುಖ್ಯಮಂತ್ರಿಯಾದರು. ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನಾವಿಸ್ ಉಪಮುಖ್ಯಮಂತ್ರಿಗಳಾದರು. ಚುನಾವಣೆಗೆ ಮೊದಲು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪಕ್ಷಗಳ ಬಲ ಹೀಗಿತ್ತು

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2024: ಪ್ರಾಂತವಾರು ಪಕ್ಷಗಳ ಬಲ ಮತ್ತು ನೇರ ಸ್ಪರ್ಧೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2019ರ ಫಲಿತಾಂಶದ ಬಳಿಕ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಆಗಿದೆ. ಎರಡು ಪ್ರಮುಖ ಪಕ್ಷಗಳಾದ ಶಿವ ಸೇನಾ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಎರಡು ಹೋಳಾಗಿವೆ. ಈ ಎರಡೂ ಪಕ್ಷಗಳು ನಮ್ಮ ಕರ್ನಾಟಕದ ಜೆಡಿಎಸ್‌ನಂತೆ ಪ್ರಾದೇಶಿಕವಾಗಿ ಬಹಳ ಪ್ರಭಾವಿಯಾಗಿದ್ದ ಪಕ್ಷಗಳು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಶಿವ ಸೇನಾ ವರ್ಸಸ್ ಶಿವ ಸೇನಾ, ಎನ್‌ಸಿಪಿ ವರ್ಸಸ್ ಎನ್‌ಸಿಪಿ ಎಂಬಂತಹ ಕ್ಷೇತ್ರಗಳೂ ಇವೆ. ಈ ಬಾರಿ ಕೂಡ ಯಾವುದೇ ಒಂದು ಪಕ್ಷಕ್ಕೆ ಬಹುಮತ ಸಿಗುವುದು ಕಷ್ಟ. ಕೇರಳದಲ್ಲಿ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ವಿಭಜನೆಯಾಗಿ ನಾಯಕರಿಗೊಂದು ಪಕ್ಷವಾದಂತೆ, ಮಹಾರಾಷ್ಟ್ರದ ರಾಜಕಾರಣದಲ್ಲೂ ಅಂತಹ ಸನ್ನಿವೇಶ ಸೃಷ್ಟಿಯಾಗಿದೆ. ಹೀಗಾಗಿ, ಪ್ರಾಂತವಾರು ಪಕ್ಷಗಳ ಬಲ ಮತ್ತು ನೇರ ಸ್ಪರ್ಧೆ ಇರುವ ಕ್ಷೇತ್ರಗಳೆಷ್ಟು ಎಂಬುದನ್ನು ನೋಡೋಣ.

ಮಹಾರಾಷ್ಟ್ರವನ್ನು ವಿಧಾನಸಭಾ ಚುನಾವಣೆ ದೃಷ್ಟಿಯಿಂದ 5 ಪ್ರಾಂತ್ಯನ್ನಾಗಿ ಅಂದರೆ ಖಂದೇಶ್, ಕೊಂಕಣ, ಮರಾಠವಾಡ, ಪಶ್ಚಿಮ ಮಹಾರಾಷ್ಟ್ರ, ವಿದರ್ಭ ಎಂದು ಗಮನಿಸಬಹುದು. ಖಂದೇಶ ಪ್ರಾಂತ್ಯದಲ್ಲಿ ಉತ್ತರ ಮಹಾರಾಷ್ಟ್ರದ ಜಿಲ್ಲೆಗಳಾದ ಧುಲೆ, ನಂದುರ್‌ಬಾರ್‌, ಜಲಗಾಂವ್ ಹಾಗೂ ಅಹಮದನಗರ ಮತ್ತು ನಾಶಿಕ್ ಜಿಲ್ಲೆಗಳ ಕೆಲ ಭಾಗಗಳು ಸೇರಿಕೊಂಡಿವೆ. ಕೊಂಕಣ ಮತ್ತು ವಿದರ್ಭ ಅತಿದೊಡ್ಡ ಉಪ ವಲಯಗಳು . ಇಲ್ಲಿ ಅನುಕ್ರಮವಾಗಿ 75 ಮತ್ತು 62 ವಿಧಾನ ಸಭಾ ಕ್ಷೇತ್ರಗಳಿವೆ. ಖಂದೇಶ್‌ನಲ್ಲಿ 47, ಮರಾಠವಾಡದಲ್ಲಿ 46, ಪಶ್ಚಿಮ ಮಹಾರಾಷ್ಟ್ರದಲ್ಲಿ 58 ಕ್ಷೇತ್ರಗಳಿವೆ. ವಿದರ್ಭ ಪ್ರಾಂತ್ಯದಲ್ಲಿ ಕಾಂಗ್ರೆಸ್‌ ವರ್ಸಸ್ ಬಿಜೆಪಿ, ಕೊಂಕಣ ಮತ್ತು ಮರಾಠವಾಡಾದಲ್ಲಿ ಶಿವ ಸೇನಾ ವರ್ಸಸ್ ಶಿವ ಸೇನಾ, ಪಶ್ಚಿಮ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ವರ್ಸಸ್ ಎನ್‌ಸಿಪಿ ಸನ್ನಿವೇಶವಿದೆ.

ಮಹಾರಾಷ್ಟ್ರ ಚುನಾವಣೆ ಫಲಿತಾಂಶ; 2019ರಲ್ಲಿ ಯಾವ ಪಕ್ಷ ಎಷ್ಟರಲ್ಲಿ ಸ್ಪರ್ಧಿಸಿತ್ತು, ಗೆಲುವು ಎಷ್ಟು?

ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಗಮನಿಸುವುದಾದರೆ 2019ರ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆ ಪೈಕಿ ಎಷ್ಟರಲ್ಲಿ ಗೆಲುವು ದಾಖಲಿಸಿತ್ತು ಎಂಬುದು ಕೂಡ ಮುಖ್ಯವಾಗುತ್ತದೆ. ಈ ಬಾರಿ ಫಲಿತಾಂಶ ಬಂದ ಬಳಿಕ ಅಂತಹ ಲೆಕ್ಕಾಚಾರ ಸಿಗಬಹುದಾದರೂ, ಕಳೆದ ಸಲದ ಲೆಕ್ಕ ಗಮನಿಸಿದರೆ ಗೆಲುವಿನ ದರವನ್ನು ಅಂದಾಜಿಸಬಹುದು. ಅಂತಹ ಒಂದು ನೋಟ ಇಲ್ಲಿದೆ.

ಮಹಾರಾಷ್ಟ್ರ ಚುನಾವಣೆ 2019ರ ಕ್ಷೇತ್ರಗಳ ಸ್ಪರ್ಧೆಯನ್ನು ಗಮನಿಸುವುದಾದರೆ ನಾಲ್ಕನೇ ಒಂದಂಶದಷ್ಟು ಸ್ಪರ್ಧೆ ಇದ್ದದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಈ ಪೈಕಿ ಬಿಜೆಪಿ ಉತ್ತಮ ಗೆಲುವಿನ ದರವನ್ನು ಹೊಂದಿತ್ತು. ಆದರೆ ಸರಳ ಬಹುಮತದ 144 ಸ್ಥಾನ ದಾಟುವುದು ಸಾಧ್ಯವಾಗಲಿಲ್ಲ. 105 ಸ್ಥಾನಕ್ಕೆ ಬಿಜೆಪಿ ತೃಪ್ತಿ ಪಟ್ಟುಕೊಳ್ಳಬೇಕಾಯಿತು. 2014ರ 122 ಗೆಲುವಿಗೆ ಹೋಲಿಸಿದರೆ ಸ್ಥಾನಗಳ ಸಂಖ್ಯೆ ಕಡಿಮೆಯಾಗಿದೆ. ಬಿಜೆಪಿ 2019ರಲ್ಲಿ 152 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಬಿಜೆಪಿಯ ಗೆಲುವಿನ ಗರಿಷ್ಠ ಇದ್ದು 64 ದಾಖಲಾಗಿದೆ. ಇನ್ನು ಕಾಂಗ್ರೆಸ್ ಪಕ್ಷ 147 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಗೆಲುವಿನ ದರ 30, ಅದೇ ರೀತಿ ಶಿವ ಸೇನಾ 126ರಲ್ಲಿ ಸ್ಪರ್ಧಿಸಿದ್ದು ಗೆಲುವಿನ ದರ 44, ಎನ್‌ಸಿಪಿ 121ರಲ್ಲಿ ಸ್ಪರ್ಧಿಸಿದ್ದು ಗೆಲುವಿನ ದರ 45 ದಾಖಲಾಗಿದೆ.

ಮಹಾರಾಷ್ಟ್ರ ಚುನಾವಣೆ 2024ರಲ್ಲಿ ವಿಧಾನಸಭೆಯ 288 ಸ್ಥಾನಗಳ ಪೈಕಿ ಬಿಜೆಪಿ 149 ಸ್ಥಾನಗಳಲ್ಲಿ, ಶಿವ ಸೇನಾ 81ರಲ್ಲಿ ಎನ್‌ಸಿಪಿ 59ರಲ್ಲಿ ಸ್ಪರ್ಧಿಸಿವೆ. ಕಾಂಗ್ರೆಸ್ ಪಕ್ಷ 101, ಶಿವ ಸೇನಾ (ಯುಬಿಟಿ) 95, ಎನ್‌ಸಿಪಿ (ಎಸ್‌ಪಿ) 86 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದೇ ವೇಳೆ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) 237 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದಂತೆ ಪಕ್ಷೇತರ ಮತ್ತು ಇತರೆ ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಒಟ್ಟು 4136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 2086 ಸ್ವತಂತ್ರ ಅಭ್ಯರ್ಥಿಗಳು. ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಅಲ್ಲಿಗೆ ಎಲ್ಲವೂ ನಿಚ್ಚಳವಾಗಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.