Rajasthan: ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್; ವ್ಯಕ್ತಿಯ ಶಿರಚ್ಛೇದ, ಮೋದಿಗೂ ಕೊಲೆ ಬೆದರಿಕೆ!
ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ಮಾಹಿತಿಯ ಪ್ರಕಾರ, ಹಂತಕರು ಶಿರಚ್ಛೇದನ ಮಾಡಿರುವ ವಿಡಿಯೋವನ್ನು ಕೂಡಾ ಶೇರ್ ಮಾಡಿದ್ದಾರೆ. ಅಲ್ಲದೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೀವ ತೆಗೆಯುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಉದಯಪುರ (ರಾಜಸ್ಥಾನ): ಇಲ್ಲಿನ ಮಾಲ್ದಾಸ್ ರಸ್ತೆಯಲ್ಲಿ ಇಂದು ಇಬ್ಬರು ದುಷ್ಕರ್ಮಿಗಳು ಯುವಕನೊಬ್ಬನ ತಲೆಕಡಿದು ಕೊಂದು ಹಾಕಿದ್ದಾರೆ. ಘಟನೆಯಿಂದಾಗಿ ಉದಯಪುರ ಪ್ರಕ್ಷುಬ್ಧವಾಗಿದ್ದು, ಪೊಲೀಸರು ಎಚ್ಚರವಹಿಸಿದ್ದಾರೆ.
ಕೊಲೆಯಾದ ವ್ಯಕ್ತಿ, ಕೆಲ ದಿನಗಳ ಹಿಂದೆ ಬಿಜೆಪಿಯಿಂದ ಅಮಾನತುಗೊಂಡ ನೂಪುರ್ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಇದನ್ನು ವಿರೋಧಿಸಿರುವ ದುಷ್ಕರ್ಮಿಗಳು ಯುವಕನ ಶಿರಚ್ಛೇದ ಮಾಡಿ ಕೊಂದುಹಾಕಿದ್ದಾರೆ.
ಪ್ರಧಾನಿ ಮೋದಿಗೂ ಕೊಲೆ ಬೆದರಿಕೆ
ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ಮಾಹಿತಿಯ ಪ್ರಕಾರ, ಹಂತಕರು ಶಿರಚ್ಛೇದನ ಮಾಡಿರುವ ವಿಡಿಯೋವನ್ನು ಕೂಡಾ ಶೇರ್ ಮಾಡಿದ್ದಾರೆ. ಅಲ್ಲದೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೀವ ತೆಗೆಯುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇಂಟರ್ನೆಟ್ ಸೇವೆಯನ್ನು ಸ್ಥಗಿತ
ಘಟನೆಯಿಂದಾಗಿ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವಾರಣ ನಿರ್ಮಾಣವಾಗಿದ್ದು, ಸ್ಥಳೀಯರು ಯುವಕನ ಕೊಲೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಘಟನೆಯಿಂದಾಗಿ ಪ್ರದೇಶದಲ್ಲಿರುವ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ, ಯಾವುದೇ ಹಂತದಲ್ಲೂ ಕೈಮೀರಿ ಹೋಗಬಾರದು ಎಂದು ಜಿಲ್ಲೆಯಲ್ಲಿ ಮುಂದಿನ 24 ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ರಾಜ್ಯಾದ್ಯಂತ ಕಟ್ಟೆಚ್ಚರ
ಘಟನೆಯಿಂದಾಗಿ ಪೊಲೀಸ್ ಇಲಾಖೆ ರಾಜ್ಯಾದ್ಯಂತ ಹದ್ದಿನ ಕಣ್ಣಿಟ್ಟಿದೆ. ಜನರು ಉದ್ರಿಕ್ತರಾಗಿ ಅಹಿತಕರ ಘಟನೆ ನಡೆಯುವ ಸಂಭವ ಹೆಚ್ಚಿರುವುದರಿಂದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡಲಾಗಿದೆ. ಘಟನೆ ಬಗ್ಗೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಕಾನೂನು ಮತ್ತು ಸುವ್ಯವಸ್ಥೆಯನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ ಎಂದು ಎಡಿಜಿ ತಿಳಿಸಿದ್ದಾರೆ.
ತಪ್ಪಿತಸ್ಥರನ್ನು ಬಿಡುವುದಿಲ್ಲ -ಸಿಎಂ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ರಾಜ್ಯದ ಜನರು ಶಾಂತಿ ಕಾಪಾಡುವಂತೆ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ವಿಡಿಯೋಗಳನ್ನು ಹಂಚಿಕೊಳ್ಳದಂತೆ ಜನರಲ್ಲಿ ಮನವಿ ಮಾಡಿದ್ದಾರೆ. “ಇದು ಅತ್ಯಂತ ದುಃಖಕರ ಘಟನೆ. ಸಣ್ಣ ಘಟನೆಯಂತೂ ಅಲ್ಲವೇ ಅಲ್ಲ. ನಡೆದಿರುವುದು ಯಾರ ಊಹೆಗೂ ನಿಲುಕದ್ದು. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ” ಎಂದು ಭರವಸೆ ನೀಡಿದ್ದಾರೆ.
‘ಆರೋಪಿಗಳನ್ನು ಗುರುತಿಸಿದ್ದೇವೆ’
ಕೊಲೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಕೆಲವು ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರ ತಂಡಗಳನ್ನು ರಚಿಸಲಾಗಿದೆ. ಈ ಕೃತ್ಯ ಎಸಗಿರುವುದಾಗಿ ಖುದ್ದು ಹೇಳಿಕೊಂಡಿರುವ ದುಷ್ಕರ್ಮಿಗಳ ವಿಡಿಯೋ ಆಧಾರದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಉದಯಪುರದ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಸಂತ್ರಸ್ತನ ಕುಟುಂಬಕ್ಕೆ ನೆರವು
ಇನ್ನೊಂದೆಡೆ, ಸಂತ್ರಸ್ತನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ನೆರವು ನೀಡಲಾಗುವುದು ಎಂದು ಉದಯ್‌ಪುರ ಜಿಲ್ಲಾಧಿಕಾರಿ ತಿಳಿಸಿದ್ದಾರೆ. “ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿ ಹೇಳಿದ್ದಾರೆ.
ಘಟನೆ ಹಿಂದೆ ಸಂಘಟನೆಯ ಕೈವಾಡ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ, “ಘಟನೆ ಕುರಿತು ಸಿಎಂ ಜತೆ ಮಾತನಾಡಿದ್ದೇನೆ. ಸಂಬಂಧಿಸಿದವರನ್ನು ಬಂಧಿಸಿ ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದೇನೆ. ಈ ದುಷ್ಕೃತ್ಯ ಯಾವುದೋ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಇದರ ಹಿಂದೆ ಯಾವುದೋ ಸಂಘಟನೆಯ ಕೈವಾಡ ಇರಬಹುದು. ಇದು ಆಡಳಿತದ ಭಾರಿ ದೊಡ್ಡ ವೈಫಲ್ಯ” ಎಂದು ಆರೋಪಿಸಿದ್ದಾರೆ.
ವಿಭಾಗ