ಸಿಂಪಲ್ಲಾಗಿ ಹೀಗೆ ತಯಾರಿಸಿ ಕೊಬ್ಬರಿ ಚಟ್ನಿ ಪುಡಿ: ದೋಸೆ, ಇಡ್ಲಿ, ಅನ್ನಕ್ಕೂ ಸೂಪರ್ ಕಾಂಬಿನೇಷನ್
ಬೆಳಗಿನ ಉಪಾಹಾರಕ್ಕೆ ದೋಸೆ,ಇಡ್ಲಿ ತಯಾರಿಸಿದರೆ ಅದಕ್ಕೆ ಚಟ್ನಿ ಬೇಕೇ ಬೇಕು. ಬೆಳಿಗ್ಗೆ ಸಮಯವಿಲ್ಲದಿದ್ದಾಗ ಚಟ್ನಿ ತಯಾರಿಸುವುದು ಸ್ವಲ್ಪ ಕಷ್ಟವೇ ಸರಿ. ಅದಕ್ಕೆ ಚಟ್ನಿ ಪುಡಿ ತಯಾರಿಸಿಟ್ಟುಕೊಂಡರೆ ನಿಮ್ಮ ಕೆಲಸ ಸುಲಭವಾಗುತ್ತದೆ. ತಿಂಗಳುಗಟ್ಟಲೆ ಇಟ್ಟರೂ ಕೆಡದಂತಹ ಕೊಬ್ಬರಿ ಚಟ್ನಿ ಪುಡಿ ಮಾಡಿಟ್ಟುಕೊಳ್ಳಿ. ಬೆಳಗ್ಗಿನ ಚಟ್ನಿ ತಯಾರಿಸುವ ಚಿಂತೆಯಿಂದ ಮುಕ್ತರಾಗಿ.
ಬೆಳಗಿನ ಉಪಾಹಾರಗಳಾದ ದೋಸೆ, ಇಡ್ಲಿ ಮುಂತಾದವುಗಳಿಗೆ ಸಾಮಾನ್ಯವಾಗಿ ಚಟ್ನಿ ತಯಾರಿಸಲಾಗುತ್ತದೆ. ಚಟ್ನಿ ಇದ್ದರೂ ಕೂಡ ಪಕ್ಕದಲ್ಲಿ ಸ್ವಲ್ಪ ಚಟ್ನಿ ಪುಡಿ ಇದ್ದರೆ ರುಚಿ ದುಪ್ಪಟ್ಟಾಗಿರುತ್ತದೆ. ಅದೇ ರೀತಿ ಬಿಸಿ ಅನ್ನಕ್ಕೆ, ತುಪ್ಪ, ಚಟ್ನಿ ಪುಡಿ ಸೇರಿಸಿ ತಿಂದರೆ ಅದರ ರುಚಿಯೇ ಬೇರೆ. ಬಹಳಷ್ಟು ಬಗೆಯ ಚಟ್ನಿ ಪುಡಿಯನ್ನು ತಯಾರಿಸಲಾಗುತ್ತದೆ. ಆದರೆ, ಎಲ್ಲದಕ್ಕೂ ಹೊಂದಿಕೆಯಾಗುವ ಚಟ್ನಿ ಪುಡಿಯೆಂದರೆ ಅದು ಕೊಬ್ಬರಿ ಚಟ್ನಿ ಪುಡಿ. ಹದವಾಗಿ ಮಸಾಲೆಗಳನ್ನು ಬೆರೆಸಿ ತಯಾರಿಸಿದ ಕೊಬ್ಬರಿ ಚಟ್ನಿ ಪುಡಿ ತಿಂಗಳುಗಟ್ಟಲೆ ಫ್ರೆಶ್ ಆಗಿರುತ್ತದೆ. ಈ ಕೊಬ್ಬರಿ ಚಟ್ನಿ ಪುಡಿಯಿದ್ದರೆ ಪ್ರತಿದಿನ ಬೆಳಗ್ಗೆ ಚಟ್ನಿ ತಯಾರಿಸುವ ತಲೆಬಿಸಿಯೂ ಇರುವುದಿಲ್ಲ. ಗಡಿಬಿಡಿಯ ದಿನಗಳಲ್ಲಿ ತುಪ್ಪ ಅಥವಾ ಮೊಸರಿನ ಜತೆಗೆ ಈ ಪುಡಿಯನ್ನು ಸೇರಿಸಿ, ಉಪಾಹಾರಗಳನ್ನು ಸವಿಯಬಹುದು. ನಿಮ್ಮ ಕೆಲಸವನ್ನು ಸುಲಭಗೊಳಿಸುವ ಕೊಬ್ಬರಿ ಚಟ್ನಿ ಪುಡಿಯನ್ನು ಹೀಗೆ ತಯಾರಿಸಿ.
ಕೊಬ್ಬರಿ ಚಟ್ನಿ ಪುಡಿ ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು: ಕಡ್ಲೆಬೇಳೆ- ಎರಡು ಟೀ ಚಮಚ, ಉದ್ದಿನ ಬೇಳೆ- ಒಂದು ಟೀ ಚಮಚ, ಕೊತ್ತಂಬರಿ ಬೀಜ- ಒಂದು ಟೀ ಚಮಚ, ಜೀರಿಗೆ- ಅರ್ಧ ಟೀ ಚಮಚ, ಸಾಸಿವೆ- ಅರ್ಧ ಚಮಚ, ಮೆಂತ್ಯ - ಕಾಲು ಚಮಚ, ಒಣಮೆಣಸು - ಎಂಟರಿಂದ ಹತ್ತು, ಕರಿಬೇವು - ಒಂದು ಹಿಡಿ, ಉಪ್ಪು - ರುಚಿಗೆ ತಕ್ಕಷ್ಟು, ಒಣಕೊಬ್ಬರಿ- ಒಂದು ಕಪ್, ಬೆಳ್ಳುಳ್ಳಿ - ಐದು ಎಸಳು, ಇಂಗು - ಒಂದು ಚಿಟಿಕೆ, ಅರಿಶಿನ - ಅರ್ಧ ಚಮಚ, ಎಣ್ಣೆ - ಮೂರು ಚಮಚ.
ತಯಾರಿಸುವ ವಿಧಾನ: ಮೊದಲಿಗೆ ಹಸಿ ಕೊಬ್ಬರಿಯನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ.
- ಈಗ ಸ್ಟೌವ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಒಂದು ಚಮಚ ಎಣ್ಣೆಯನ್ನು ಹಾಕಿ.
- ಕಡಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ, ಜೀರಿಗೆ, ಸಾಸಿವೆ ಮತ್ತು ಒಣಮೆಣಸು ಇವಿಷ್ಟನ್ನು ಹಾಕಿ ಹುರಿದುಕೊಳ್ಳಿ.
- ಇವುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಒಮ್ಮೆ ತರಿತರಿಯಾಗಿ ರುಬ್ಬಿಕೊಳ್ಳಿ.
- ನಂತರ ಅದೇ ಮಿಕ್ಸಿ ಜಾರ್‌ಗೆ ಕತ್ತರಿಸಿಟ್ಟುಕೊಂಡ ಕೊಬ್ಬರಿ ತುಂಡುಗಳನ್ನು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
- ಈಗ ಬಾಣಲೆಯನ್ನು ಸ್ಟೌವ್ ಮೇಲೆ ಇಟ್ಟು ಎರಡು ಚಮಚ ಎಣ್ಣೆಯನ್ನು ಹಾಕಿ.
- ಆ ಎಣ್ಣೆಗೆ ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಉದ್ದಿನಬೇಳೆ, ಅರ್ಧ ಚಮಚ ಕಡಲೆಬೇಳೆ, ಕರಿಬೇವಿನ ಎಲೆ ಸ್ವಲ್ಪ ಮತ್ತು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ.
- ಸಾಸಿವೆ ಚಟಪಟ ಅಂದ ನಂತರ ಅರಿಶಿನ ಪುಡಿ ಸೇರಿಸಿ ಒಮ್ಮೆ ಮಿಕ್ಸ್ ಮಾಡಿಕೊಳ್ಳಿ.
- ಈಗ ರುಬ್ಬಿಟ್ಟುಕೊಂಡ ಕೊಬ್ಬರಿ ಪುಡಿಯನ್ನು ಅದಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಇನ್ನೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ
- ಸ್ಟೌವ್ ಆಫ್ ಮಾಡಿ. ಚಟ್ನಿ ಪುಡಿ ಸಂಪೂರ್ಣ ತಣ್ಣಗಾಗಲು ಬಿಡಿ. ನಂತರ ಅದನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ.
- ಇಡ್ಲಿ, ದೋಸೆ, ಬಿಸಿ ಅನ್ನ ಎಲ್ಲದಕ್ಕೂ ಹೊಂದಿಕೆಯಾಗುವ ಕೊಬ್ಬರಿ ಚಟ್ನಿ ಪುಡಿ ಸವಿಯಲು ಸಿದ್ಧ.
ಚಳಿಗಾಲದಲ್ಲಿ ಖಾರ ಖಾರವಾಗಿ ಊಟ ಮಾಡಬೇಕೆಂದಿದ್ದರೆ ಬಿಸಿ ಬಿಸಿ ಅನ್ನಕ್ಕೆ ಕೊಬ್ಬರಿ ಚಟ್ನಿ ಪುಡಿ ಮತ್ತು ತುಪ್ಪ ಸೇರಿಸಿ ತಿನ್ನಿ. ಇದು ನಾಲಿಗೆಯ ರುಚಿ ಹೆಚ್ಚಿಸುತ್ತದೆ. ಬೆಳಗ್ಗೆ ಚಟ್ನಿ ತಯಾರಿಸಲು ಸಮಯವಿಲ್ಲದಿದ್ದಾಗ ಇದನ್ನು ಮಾಡಬಹುದು. ಮಕ್ಕಳಿಗಾದರೆ ಖಾರ ಸ್ವಲ್ಪ ಕಡಿಮೆ ಹಾಕಿ ಕೊಬ್ಬರಿ ಚಟ್ನಿ ಪುಡಿ ತಯಾರಿಸಿಟ್ಟುಕೊಳ್ಳಿ. ನಿಮ್ಮ ಕೆಲಸ ಸುಲಭವಾಗುತ್ತದೆ.
ವಿಭಾಗ