Haryana Elections: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಆಗಿದ್ದು ಏಕೆ, ಬಿಜೆಪಿಗೆ ಮತ್ತೆ ಗದ್ದುಗೆ ಏರಲು ಕಾರಣಗಳೇನು; 5 ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Haryana Elections: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಆಗಿದ್ದು ಏಕೆ, ಬಿಜೆಪಿಗೆ ಮತ್ತೆ ಗದ್ದುಗೆ ಏರಲು ಕಾರಣಗಳೇನು; 5 ಅಂಶಗಳು

Haryana Elections: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಆಗಿದ್ದು ಏಕೆ, ಬಿಜೆಪಿಗೆ ಮತ್ತೆ ಗದ್ದುಗೆ ಏರಲು ಕಾರಣಗಳೇನು; 5 ಅಂಶಗಳು

Haryana Assembly Elections ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಿತು. ಕಾಂಗ್ರೆಸ್‌ ಕೊನೆ ಕ್ಷಣದಲ್ಲಿ ಮುಗ್ಗರಿಸಿತು. ಇದಕ್ಕೆ ಕಾರಣಗಳು ಇಲ್ಲಿವೆ.

ಹರಿಯಾಣದಲ್ಲಿ ಕಾಂಗ್ರೆಸ್‌ ಸೋತಿದ್ದೇಕೆ. ಬಿಜೆಪಿಗೆ ಗೆದ್ದಿದ್ದು ಹೇಗೆ..
ಹರಿಯಾಣದಲ್ಲಿ ಕಾಂಗ್ರೆಸ್‌ ಸೋತಿದ್ದೇಕೆ. ಬಿಜೆಪಿಗೆ ಗೆದ್ದಿದ್ದು ಹೇಗೆ..

ಚಂಡೀಗಢ: ಎಲ್ಲಾ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಲೆಕ್ಕಾಚಾರಗಳನ್ನು ಹಿಂದಿಕ್ಕಿ ಹರಿಯಾಣದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸತತ ಮೂರನೇ ಬಾರಿಗೆ ಇಲ್ಲಿ ಕಮಲ ಅರಳಿದೆ. ಈ ಬಾರಿ ಪ್ರತ್ಯೇಕವಾಗಿ ಕಣಕ್ಕಿಳಿದೆ ಬಿಜೆಪಿ ಗೆದ್ದು ಬಂದಿದೆ. ಆದರೆ ಅಧಿಕಾರ ಹಿಡಿದೇ ಬಿಟ್ಟಿತು ಎನ್ನುವ ಹಂತಕ್ಕೂ ಹೋಗಿ ಅದೇ ಉಮೇದಿನಲ್ಲಿದ್ದ ಕಾಂಗ್ರೆಸ್‌ ಮುಗ್ಗರಿಸಿತು. ಎಲ್ಲಾ ಎಕ್ಸಿಲ್‌ ಪೋಲ್‌ಗಳ ಲೆಕ್ಕಾಚಾರದೊಂದಿಗೆ ಸಿಎಂ ಯಾರು ಎನ್ನುವ ಕುರಿತಾಗಿ ಕಾಂಗ್ರೆಸ್‌ನಲ್ಲಿ ಜೋರು ಚರ್ಚೆಗಳು ನಡೆದಿದ್ದವಾದರೂ ಅಲ್ಲಿನ ಫಲಿತಾಂಶ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಉಂಟು ಮಾಡಿದೆ. ದೆಹಲಿ ನಂತರ ಪಂಜಾಬ್‌ನಲ್ಲಿ ಅಧಿಕಾರ ಹಿಡಿದು ಹರಿಯಾಣಕ್ಕೂ ವಿಸ್ತರಿಸುವ ಲೆಕ್ಕಾಚಾರದಲ್ಲಿದ್ದ ಆಮ್‌ ಆದ್ಮಿ ಪಕ್ಷ ಮುಗ್ಗರಿಸಿದೆ. ಬಿಜೆಪಿ ಮೈತ್ರಿ ಪಕ್ಷವಾಗಿ ನಂತರ ಹೊರ ಬಂದ ಜನನಾಯಕ ಜನತಾ ಪಾರ್ಟಿ ಮುಗ್ಗರಿಸಿದೆ. ಹರಿಯಾಣದಲ್ಲಿ ಬಿಜೆಪಿಗೆ ಸದ್ದಿಲ್ಲದೇ ಅಧಿಕಾರ ಹಿಡಿಯಲು, ಉಮೇದಿನಲ್ಲಿದ್ದ ಕಾಂಗ್ರೆಸ್‌ ಅವಕಾಶ ಕಳೆದುಕೊಳ್ಳಲು ಕಾರಣಗಳು ಇಲ್ಲಿವೆ.

ಕಾಂಗ್ರೆಸ್‌ ಹಿನ್ನೆಡೆಗೆ ಏನು ಕಾರಣ

  • ಕಾಂಗ್ರೆಸ್‌ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಯಿತು. ಚುನಾವಣೆ ಮೊದಲಿನಿಂದಲೂ ಸಿಎಂ ಹುದ್ದೆಯ ಮೇಲೆ ಹಲವರು ಕಣ್ಣಿಟ್ಟಿದ್ದರು. ಇಲ್ಲಿ ಜಾತಿ ಸಮೀಕರಣವೂ ಕೆಲಸ ಮಾಡಿತ್ತು. ಇದು ಭಾರೀ ಹೊಡೆತ ನೀಡಿದೆ. ಭೂಪಿಂದರ್‌ ಹೂಡಾ, ಕುಮಾರಿ ಸೆಲ್ಜಾ, ರಣದೀಪ್‌ ಸಿಂಗ್‌ ಸುರ್ಜೇವಾಲ ಸಹಿತ ಹಲವು ಬಣಗಳು ಇಲ್ಲಿ ಭಿನ್ನವಾಗಿ ಕೆಲಸ ಮಾಡಿದ್ದು ಹಿನ್ನಡೆಗೆ ದಾರಿ ಮಾಡಿಕೊಟ್ಟಿದೆ.
  • ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ಕೆಲವು ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಕಡಿಮೆಯೇ ಇದೆ. ಕಾಂಗ್ರೆಸ್‌ ಈ ರೀತಿ ಇಪ್ಪತ್ತಕ್ಕೂ ಅಧಿಕ ಕ್ಷೇತ್ರಗಳಲ್ಲ ಕಡಿಮೆ ಅಂತರಗಳಲ್ಲಿ ಸೋತು ಅಧಿಕಾರ ಕಳೆದುಕೊಂಡಿದೆ.
  • ಹರಿಯಾಣ ಜಾಟ್‌ ಸಮುದಾಯ ಪ್ರಭಾವ ಇರುವ ರಾಜ್ಯ. ಕಾಂಗ್ರೆಸ್‌ ನಾಯಕ ಭೂಪೆಂದರ್‌ ಹೂಡಾ ನೇತೃತ್ವದ ಕಾಂಗ್ರೆಸ್ ಜಾಟ್ ಮತಗಳ ಮೇಲೆ ಕೇಂದ್ರೀಕರಿಸಿತ್ತು. ಪಕ್ಷದಲ್ಲಿನ ನಾಯಕತ್ವ ಗೊಂದಲಗಳು ಈ ಸಮುದಾಯದ ಮತ ಹೆಚ್ಚು ಕಾಂಗ್ರೆಸ್‌ ಬಾರದಂತೆ ನೋಡಿಕೊಂಡಿರುವ ಸಾಧ್ಯತೆಗಳೂ ಇವೆ.
  • ಕಾಂಗ್ರೆಸ್‌ ಅತಿಯಾದ ಆತ್ಮವಿಶ್ವಾಸದಲ್ಲಿತ್ತು. ಗೆದ್ದೇ ಗೆಲ್ಲುತ್ತೇವೆ ಎನ್ನುವ ಉತ್ಸಾಹದಲ್ಲಿತ್ತು. ಹರಿಯಾಣದಲ್ಲಿ ಸರ್ಕಾರಿ ವಿರೋಧಿ ಅಲೆ ಇದೆ. ಬಿಜೆಪಿಗೆ ಹಿನ್ನಡೆಯಾಗಬಹುದು ಎನ್ನುವ ಅಂಶದೊಂದಿಗೆ ಪ್ರಚಾರ ನಡೆಸಿದರೂ ಅದು ಪರಿಣಾಮಕಾರಿಯಾಗಿ ಇರಲಿಲ್ಲ.
  • ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಏನು ಕಾರ್ಯಕ್ರಮ ನೀಡುತ್ತೇವೆ. ಮುಖ್ಯವಾಗಿ ಉದ್ಯೋಗ ಆಧರಿತ ಚಟುವಟಿಕೆ, ಆರ್ಥಿಕ ಬಲವರ್ಧನೆಯ ಕಾರ್ಯಕ್ರಮಗಳ ವಿವರ ನೀಡಲು ವಿಫಲವಾಯಿತು. ಬಿಜೆಪಿ ಸರ್ಕಾರದ ಆಡಳಿತದ ವಿರುದ್ದ ಹೆಚ್ಚು ಮಾತನಾಡಿದ್ದು ಮುಳುವಾಯಿತು.

ಬಿಜೆಪಿಗೆ ವರವಾಗಿದ್ದು ಹೇಗೆ

  • ಬಿಜೆಪಿ ಆರು ತಿಂಗಳ ಮುಂಚೆಯೇ ಮುಖ್ಯಮಂತ್ರಿ ಬದಲಿಸಿತು. ಎರಡು ಅವಧಿಯಿಂದ ಸಿಎಂ ಆಗಿದ್ದ ಮನೋಹರ ಲಾಲ್‌ ಖಟ್ಟರ್‌ ಅವರನ್ನು ಬದಲಿಸಿ ನಯಾಬ್‌ ಸಿಂಗ್‌ ಸೈನಿ ಅವರನ್ನು ನೇಮಿಸಿತು. ಇದೂ ಕೆಲಸ ಮಾಡಿದೆ.
  • ಬಿಜೆಪಿ ಜಾಟೇತರ ಮತಗಳ ಕ್ರೋಡಿಕರಣಕ್ಕೆ ಇನ್ನಿಲ್ಲದ ಒತ್ತು ನೀಡಿತು. ಜಾಟ್‌ ಅಲ್ಲದ ಹೆಚ್ಚು ಅಭ್ಯರ್ಥಿಗಳನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿ ತಂತ್ರ ರೂಪಿಸಿತು. ಇದರಿಂದ ಕಾಂಗ್ರೆಸ್‌ಗಿಂತ ಹೆಚ್ಚಿನ ಮತ ಗಳಿಕೆ ಬಿಜೆಪಿಗೆ ಸಾಧ್ಯವಾಗಿದೆ.
  • ಆಡಳಿತ ವಿರೋಧಿ ಅಲೆ ಇದ್ದರೂ ಅದನ್ನು ಸಮೀಕರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸಹಿತ ಹಲವರು ಯಶಸ್ವಿಯಾದರು.
  • ಬಿಜೆಪಿ ಈ ಬಾರಿ ಚುನಾವಣೆ ಪ್ರಚಾರವನ್ನು ವ್ಯವಸ್ಥಿತವಾಗಿ ಮಾಡಿತು. ಎಲ್ಲಿಯೂ ವಿವಾದಕ್ಕೆ ಆಸ್ಪದ ನೀಡದೇ, ಜಾತಿ ಗೊಂದಲ, ಸಂವಿಧಾನ ವಿರೋಧಿ ಹೇಳಿಕೆಗೆ ಒತ್ತು ನೀಡಲಿಲ್ಲ. ಕೆಳ ಹಂತದ ಕಾರ್ಯಕರ್ತರನ್ನು ಬಳಸಿಕೊಂಡು ಪ್ರಚಾರ ಕೈಗೊಂಡಿದ್ದು ಮತ್ತೆ ಅಧಿಕಾರ ಹಿಡಿಯಲು ದಾರಿ ಮಾಡಿಕೊಟ್ಟಿತು
  • ಬಿಜೆಪಿ ಮೊದಲಿನಿಂದಲೂ ನಗರ ಕೇಂದ್ರಿತ ಪಕ್ಷವಾಗಿ ಗುರುತಿಸಿಕೊಂಡಿದೆ. ಕಳೆದ ದಶಕದಲ್ಲಿ, ಹರಿಯಾಣದ ನಗರ ಪ್ರದೇಶಗಳಾದ ಗುರ್ಗಾಂವ್ ಮತ್ತು ಫರಿದಾಬಾದ್‌ನಲ್ಲಿ ಬಿಜೆಪಿ ಬೆಂಬಲವನ್ನು ಗಟ್ಟಿ ಮಾಡಿಕೊಂಡಿದೆ. ಈ ಬಾರಿ ಇದೇ ಅಂಶ ಹೆಚ್ಚು ಕೆಲಸ ಮಾಡಿದಂತಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.