ಒನ್‌ಪ್ಲಸ್ ಮಾರಾಟಕ್ಕಿಲ್ಲ ಅಡ್ಡಿ, ಸಂಘಟಿತ ಚಿಲ್ಲರೆ ವ್ಯಾಪಾರಿಗಳ ಸಂಘದ ಜತೆೆ ವ್ಯಾಪಾರ ಸಂಬಂಧ ಪುನರಾರಂಭ
ಭಾರತದಲ್ಲಿ ಒನ್‌ಪ್ಲಸ್ ಸಾಧನಗಳ ಮಾರಾಟಕ್ಕಿದ್ದ ಅಡ್ಡಿ ಆತಂಕ ನಿವಾರಣೆಯಾಗಿದೆ. ಸಂಘಟಿತ ಚಿಲ್ಲರೆ ವ್ಯಾಪಾರಿಗಳ ಸಂಘವು ಒನ್‌ಪ್ಲಸ್ ಜತೆಗಿನ ತಕರಾರುಗಳನ್ನು ಬಗೆಹರಿಸಿಕೊಂಡಿರುವುದಾಗಿ ತಿಳಿಸಿದೆ. ಹಬ್ಬದ ಋತುವಿನಲ್ಲಿ ಒನ್‌ಪ್ಲಸ್ ಸಾಧನಗಳ ಮಾರಾಟಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ.
ಬೆಂಗಳೂರು: ಅಕ್ಟೋಬರ್ 1, 2024ರಿಂದ ಅನ್ವಯವಾಗುವಂತೆ ಒನ್‌ಪ್ಲಸ್ ಜತೆಗೆ ವ್ಯಾವಹಾರಿಕ ಸಂಬಂಧ ಮುಂದುವರೆಸುತ್ತಿದ್ದೇವೆ ಎಂದು ಆರ್ಗನೈಸ್ಡ್ ರಿಟೇಲರ್ಸ್ ಅಸೋಸಿಯೇಷನ್ (ಒಆರ್‌ಎ) ಘೋಷಿಸಿದೆ. ಭಾರತದಲ್ಲಿ ಒನ್ ಪ್ಲಸ್ ಉತ್ಪನ್ನಗಳ ಮಾರಾಟಕ್ಕೆ ಸಂಘಟಿತ ಚಿಲ್ಲರೆ ವ್ಯಾಪಾರಿಗಳ ಸಂಘದಿಂದ ಇದ್ದ ಅಡ್ಡಿ ನಿವಾರಣೆಯಾಗಿದೆ. ಈ ಹಬ್ಬದ ಋತುವಿನಲ್ಲಿ ದೇಶದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟ ಹೆಚ್ಚಿಸಲು ಒನ್‌ಪ್ಲಸ್‌ಗೆ ಇದು ನೆರವಾಗಲಿದೆ. ಈ ಕುರಿತು ಒಆರ್‌ಎ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
"ಸಂಘಟಿತ ಚಿಲ್ಲರೆ ವ್ಯಾಪಾರಿಗಳ ಸಂಘ (ಒಆರ್‌ಎ)ವಾದ ನಾವು ಒನ್‌ಪ್ಲಸಸ್‌ನೊಂದಿಗೆ ನಮ್ಮ ವ್ಯಾಪಾರ ಸಂಬಂಧವನ್ನು 1 ಅಕ್ಟೋಬರ್ 2024ರಿಂದ ಪುನರಾರಂಭಿಸಿದ್ದೇವೆ ಎಂದು ಘೋಷಿಸಲು ಸಂತೋಷವಾಗಿದೆ. ಸಾಷ್ಟು ಚರ್ಚೆಗಳು, ಸಹಕಾರದ ಬಳಿಕ ನಮ್ಮ ಸಂಘದ ಮೇಲೆ ತಾತ್ಕಾಲಿಕವಾಗಿ ಪರಿಣಾಮ ಬೀರಿದ ಬಾಕಿ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ" ಎಂದು ಸೌತ್ ಇಂಡಿಯನ್ ಆರ್ಗನೈಸ್ಡ್ ರಿಟೇಲರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಟಿಎಸ್ ಶ್ರೀಧರ್ ತಿಳಿಸಿದ್ದಾರೆ.
"ಈ ಹಬ್ಬದ ಋತುವಿನ ಸಮಯದಲ್ಲಿ ಇದು ನಡೆದಿರುವುದು ಖುಷಿಯ ವಿಚಾರ. ಹಬ್ಬದ ಋತುವಿನಲ್ಲಿ ಒಆರ್‌ಎ ಸದಸ್ಯರು ನಮ್ಮ ವಿಶ್ವಾಸಾರ್ಹ ಚಿಲ್ಲರೆ ನೆಟ್‌ವರ್ಕ್ ಮೂಲಕ ಒನ್‌ಪ್ಲಸ್ ಸಾಧನಗಳ ಮಾರಾಟ ಮುಂದುವರೆಸಲಿದ್ದಾರೆ. ಇದರಿಂದ ನಮ್ಮ ಪಾಲುದಾರರಿಗೆ ಹೆಚ್ಚಿನ ಪ್ರಯೋಜನ ದೊರಕುವ ವಿಶ್ವಾಸವಿದೆ" ಎಂದು ಅವರು ಹೇಳಿದ್ದಾರೆ.
"ನಮ್ಮ ಸದಸ್ಯರಿಗೆ ಮತ್ತು ನಾವು ಸೇವೆ ಸಲ್ಲಿಸುವ ಗ್ರಾಹಕರಿಗೆ ಉತ್ತಮ ಫಲಿತಾಂಶ ದೊರಕುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಒನ್‌ಪ್ಲಸ್ ಸೇರಿದಂತೆ ನಮ್ಮ ಎಲ್ಲಾ ಪಾಲುದಾರರ ಜತೆ ಸಂಬಂಧಗಳನ್ನು ಬಲಪಡಿಸಿಕೊಳ್ಳಲು ಒಆರ್‌ಎ ಬದ್ಧವಾಗಿದೆ" ಎಂದು ಟಿಎಸ್ ಶ್ರೀಧರ್ ತಿಳಿಸಿದ್ದಾರೆ.