Sabarimala Ayyappa temple: ತುಲಾ ತಿಂಗಳ ಪೂಜೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಓಪನ್, 5 ದಿನ ಪೂಜೆ ಮತ್ತು ಇತರೆ ಕಾರ್ಯಕ್ರಮ ವಿವರ
ಕೇರಳದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ತುಲಾ ತಿಂಗಳ ಪೂಜೆ ಸಡಗರ. ದೇವಸ್ಥಾನದ ಬಾಗಿಲು ಇಂದು (ಅ.17) ತೆರೆದಿದ್ದು, ತುಲಾ ತಿಂಗಳ ಮೊದಲ ದಿನ ವಿಶೇಷ ಕಾರ್ಯಕ್ರಮಗಳಿವೆ. ಇದರ ವಿವರ ಇಲ್ಲಿದೆ.
ತಿರುವನಂತಪುರ: ತುಲಾ ತಿಂಗಳ ಪೂಜೆಗಾಗಿ ಇಂದು (ಅ.17) ಸಂಜೆ 5 ಗಂಟೆಗೆ ಜಗತ್ಪ್ರಸಿದ್ದವಾಗಿರುವ ಕೇರಳದ ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ಕ್ಷೇತ್ರದ ಬಾಗಿಲು ತೆರೆಯಲಾಗಿದೆ.
ತಿರುವಾಂಕೂರು ದೇವಸ್ವಂ ಬೋರ್ಡ್ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ತುಲಾ ಸಂಕ್ರಮಣದ ದಿನವಾದ ಸಂಪ್ರದಾಯದಂತೆ ಶ್ರೀ ಧರ್ಮಶಾಸ್ತಾ ದೇವಾಲಯದ ಬಾಗಿಲನ್ನು ತಿಂಗಳ ಪೂಜೆಗೆ ತೆರೆಯಲಾಗಿದೆ.
ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಶಬರಿಮಲೆಯಲ್ಲಿ ತುಲಾ ತಿಂಗಳ ಪೂಜೆ ಯಾವಾಗ
ಕೇರಳದ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ತುಲಾ ಸಂಕ್ರಮಣ ಪೂಜೆ ಅಕ್ಟೋಬರ್ 17ರಂದು ಶುರುವಾಗಿ ಅಕ್ಟೋಬರ್ 22 ರ ತನಕ ನಡೆಯುತ್ತದೆ.
ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಶಬರಿಮಲೆಯಲ್ಲಿ ತುಲಾ ಸಂಕ್ರಮಣದ ದಿನ ಪೂಜೆ ಇದೆಯೇ
ಅಕ್ಟೋಬರ್ 17ರಂದು ತುಲಾ ಸಂಕ್ರಮಣ. ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಶಬರಿಮಲೆಯಲ್ಲಿ ತುಲಾ ಸಂಕ್ರಮಣದ ದಿನ ಇಂದು (ಅ.17) ವಿಶೇಷ ಪೂಜೆ ಇಲ್ಲ. ದೇವಸ್ಥಾನ ತೆರೆದು ದೀಪ ಬೆಳಗಿಸುವ ಕೆಲಸ ಮಾತ್ರ ಇರುತ್ತದೆ.
ದೇವಳದ ತಂತ್ರಿ ಕಾಂತಾರ ಮಹೇಶ್ ಮೋಹನ್ ನೇತೃತ್ವದಲ್ಲಿ ಕೆ.ಜಯರಾಮನ್ ನಂಬೂತಿರಿ ಶ್ರೀದೇವಾಲಯ ತೆರೆದು ದೀಪ ಬೆಳಗಿಸಿದರು. ಮಾಳಿಗಪ್ಪುರಂ ಮೇಲ್ಶಾಂತಿ ವಿ.ಹರಿಹರನ್ ನಂಬೂತಿರಿ ಅವರು ಮಾಳಿಗಪುರಂ ದೇವಾಲಯದ ಬಾಗಿಲು ತೆರೆದು ದೀಪ ಬೆಳಗಿದರು.
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ತುಲಾ ತಿಂಗಳ ಮೊದಲ ದಿನ ಅಕ್ಟೋಬರ್ 18 ರ ಕಾರ್ಯಕ್ರಮ ವಿವರ
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ತುಲಾ ತಿಂಗಳ ಮೊದಲ ದಿನ ಅಕ್ಟೋಬರ್ 18 ರಂದು ಬೆಳಿಗ್ಗೆ 5 ಗಂಟೆಗೆ ದೇವಾಲಯವನ್ನು ತೆರೆದ ನಂತರ ನಿರ್ಮಾಲ್ಯ ಮತ್ತು ನಿತ್ಯ ಅಭಿಷೇಕ ನಡೆಯಲಿದೆ.
ಬೆಳಗ್ಗೆ 5.30ಕ್ಕೆ ಮಂಟಪದಲ್ಲಿ ಮಹಾ ಗಣಪತಿ ಹೋಮ ನಡೆಯಲಿದೆ. ಬೆಳಗ್ಗೆ 5.30ಕ್ಕೆ ನೈ ಅಭಿಷೇಕ (ತುಪ್ಪ ಅಭಿಷೇಕ) ಆರಂಭವಾಗಲಿದೆ. ರಾತ್ರಿ 7.30ಕ್ಕೆ ಉಷಾಪೂಜೆ ನಡೆಯಲಿದೆ.
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ತುಲಾ ತಿಂಗಳಲ್ಲಿ ಎಷ್ಟು ದಿನ ತೆರೆದಿರುತ್ತದೆ
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ತುಲಾ ತಿಂಗಳಲ್ಲಿ ಅಕ್ಟೋಬರ್ 17ರಿಂದ 22ರ ತನಕ ಐದು ದಿನಗಳ ಕಾಲ ತೆರೆದಿರುತ್ತದೆ.
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಈಗಲೂ ವರ್ಚುವಲ್ ಕ್ಯೂ ನಲ್ಲಿ ಬುಕ್ ಮಾಡಬೇಕಾ
ವರ್ಚುವಲ್ ಕ್ಯೂ ಮೂಲಕ ಬುಕ್ ಮಾಡಿದ ಅಯ್ಯಪ್ಪ ಭಕ್ತರು ದರ್ಶನಕ್ಕಾಗಿ ದೇವಸ್ಥಾನಕ್ಕೆ ತಲುಪಬಹುದು. ನಿಲಕ್ಕಲ್ ಮತ್ತು ಪಂಪಾದಲ್ಲಿ ಭಕ್ತರಿಗೆ ಸ್ಪಾಟ್ ಬುಕಿಂಗ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ.
ಮುಂದಿನ ಮಂಡಲ ಪೂಜೆಯಿಂದ ಹಿಡಿದು ಒಂದು ವರ್ಷಕ್ಕೆ ಶಬರಿಮಲೆಗೆ ನೂತನ ಮೇಲ್ಶಾಂತಿ ಆಯ್ಕೆ
ತುಲಾ ತಿಂಗಳ ಮೊದಲ ದಿನ ಸಂಜೆ ಉಷಾ ಪೂಜೆಯ ನಂತರ ಶಬರಿಮಲೆ ಮತ್ತು ಮಾಳಿಗಪುರಂ ಕ್ಷೇತ್ರಗಳ ಮೇಲ್ಶಾಂತಿಗಳ (ಪ್ರಧಾನ ಅರ್ಚಕರ) ಆಯ್ಕೆ ನಡೆಯಲಿದೆ. ಮೊದಲು ಶಬರಿಮಲೆ ದೇವಸ್ಥಾನದ ಮೇಲ್ಶಾಂತಿ ಆಯ್ಕೆ ನಡೆಯಲಿದೆ. ಈ ಬಾರಿ ಶಬರಿಮಲೆ ಮೇಲ್ಶಾಂತಿ ಚುನಾವಣೆಯ ಅಂತಿಮ ಪಟ್ಟಿಯಲ್ಲಿ 17 ಮಂದಿ ಇದ್ದಾರೆ. ಅದಾಗಿ ಮಾಳಿಗಪುರಂ ಕ್ಷೇತ್ರದ ಮೇಲ್ಶಾಂತಿ ಆಯ್ಕೆ ನಡೆಯುತ್ತದೆ. ಈ ಸಲ ಮಾಳಿಗಪುರಂ ಕ್ಷೇತ್ರದ ಮೇಲ್ಶಾಂತಿ ಪಟ್ಟಿಯಲ್ಲಿ 12 ಮಂದಿ ಅರ್ಚಕರಿದ್ದಾರೆ.
ಶಬರಿಮಲೆಗೆ ತುಲಾ ತಿಂಗಳ ಪೂಜೆಗಾಗಿ ಕೇರಳ ಕೆಎಸ್‌ಆರ್‌ಟಿಸಿ ಬಸ್ ಸೇವೆ
ಶಬರಿಮಲೆಯ ತುಲಾ ಮಾಸಂ ಪೂಜೆಯ ಸಂದರ್ಭದಲ್ಲಿ ಅಕ್ಟೋಬರ್ 18-22 ರವರೆಗೆ ಕೇರಳ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಸೇವೆಗಳನ್ನು ನಡೆಸಲಿದೆ. ತಿರುವನಂತಪುರಂ, ಪತ್ತನಂತಿಟ್ಟ, ಕೊಟ್ಟಾರಕ್ಕರ, ಎರುಮೇಲಿ ಮತ್ತು ಚೆಂಗನ್ನೂರಿನಿಂದ ಪಂಪಾಕ್ಕೆ ವಿಶೇಷ ಬಸ್ ಸೇವೆಗಳು ಲಭ್ಯವಿರುತ್ತವೆ ಎಂದು ಏಷ್ಯಾನೆಟ್ ನ್ಯೂಸ್ ವರದಿ ತಿಳಿಸಿದೆ.