Madurai Train Fire: ತಮಿಳುನಾಡಿನ ಮಧುರೈನಲ್ಲಿ ರೈಲಿಗೆ ಬೆಂಕಿ; 8 ಪ್ರಯಾಣಿಕರು ಸಾವು VIDEO
Tamil Nadu Train Fire: ತಮಿಳುನಾಡಿನ ಮಧುರೈನಲ್ಲಿ ಐಆರ್‌ಸಿಟಿಸಿ ವಿಶೇಷ ರೈಲಿಗೆ ಬೆಂಕಿ ಹೊತ್ತಿಕೊಂಡು 8 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಮಧುರೈ (ತಮಿಳುನಾಡು): ರೈಲಿಗೆ ಬೆಂಕಿ ಹೊತ್ತಿಕೊಂಡು 8 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ಇಂದು (ಆಗಸ್ಟ್ 26, ಶನಿವಾರ) ಮುಂಜಾನೆ ನಡೆದಿದೆ.
ಐಆರ್‌ಸಿಟಿಸಿ ವಿಶೇಷ ರೈಲಿನ ಎರಡು ಬೋಗಿಗಳಿಗೆ ಬೆಂಕಿ ತಗುಲಿದ್ದು, ಉತ್ತರ ಪ್ರದೇಶದ ಎಂಟು ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಧುರೈ ನಗರದ ರೈಲ್ವೇ ಕಾಲೋನಿ ಆವರಣದಲ್ಲಿರುವ ರೈಲ್ವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವೇಳೆ ಉತ್ತರ ಪ್ರದೇಶದ ಲಖನೌದಿಂದ ಬಂದ ಭಾರತ್ ಗೌರವ್ ಪ್ರವಾಸಿ ರೈಲಿಗೆ ಮಧುರೈ ರೈಲ್ವೆ ಜಂಕ್ಷನ್‌ನಿಂದ ಒಂದು ಕಿಲೋಮೀಟರ್ ದೂರದಲ್ಲಿ ನಿಂತಿತ್ತು. ಬೆಳಗ್ಗೆ 6.30ರ ಸುಮಾರಿಗೆ ಮಧುರೈ ರೈಲ್ವೇ ಜಂಕ್ಷನ್‌ನ ತುರ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ರೈಲಿನಲ್ಲಿ ಗ್ಯಾಸ್ ಸಿಲಿಂಡರ್ ಬಳಸಿದ್ದ ಪ್ರಯಾಣಿಕರು
ರೈಲಿನ ಒಂದು ಬೋಗಿಯಲ್ಲಿ ಪ್ರಯಾಣಿಕರು ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಬೆಂಕಿ ಅವಘಡಕ್ಕೆ ಇದೇ ಕಾರಣ ಎಂದು ಹೇಳಲಾಗಿದೆ. ಮೊದಲು ಒಂದು ಕೋಚ್ಗೆ ಹೊತ್ತಿಕೊಂಡ ಬೆಂಕಿ ನಂತರ ಮತ್ತೊಂದು ಬೋಗಿಗೆ ಆವರಿಸಿದೆ. ಅನೇಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ವಯಸ್ಸಾದ ಪ್ರಯಾಣಿಕರು ಸಕಾಲದಲ್ಲಿ ನಿರ್ಗಮಿಸಲು ಸಾಧ್ಯವಾಗದೆ ಬೆಂಕಿಗೆ ತುತ್ತಾಗಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ
ರೈಲಿನ ಬೋಗಿಯೊಳಗೆ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌ ಹೇಗೆ ಬಂತು? ಯಾತ್ರಿಕರು ಕುಕ್ಕರ್ ಕೂಗಿಸುತ್ತಿದ್ದರೂ ಟ್ರೇನ್ ಸಹಾಯಕರು, ಸಿಬ್ಬಂದಿ ಗಮನಿಸಲಿಲ್ಲವೇ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ರೈಲ್ವೆ ಇಲಾಖೆ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರಿದಾಡುತ್ತಿದೆ ಸುಳ್ಳುಸುದ್ದಿ
ಬೋಗಿಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂಬ ಸುಳ್ಳು ಸುದ್ದಿ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. "ಹಿಂದಿ ಭಾಷಿಕರ ಬಗ್ಗೆ ತಮಿಳರಿಗೆ ಇರುವ ಆಕ್ರೋಶ ಈ ಅನಾಹುತಕ್ಕೆ ಕಾರಣ" ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಆದರೆ 'ಟೈಮ್ಸ್ ಆಫ್ ಇಂಡಿಯಾ' ವರದಿಯು ಇಂಥ ಆರೋಪಗಳನ್ನು ಅಲ್ಲಗಳೆದಿದೆ. ಬೋಗಿಯೊಳಗೆ ಗ್ಯಾಸ್ ಸಿಲಿಂಡರ್ ಬಳಕೆ ಅಗ್ನಿ ಅನಾಹುತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.