ಇದು ಸೈನ್ಸ್ ಫಿಕ್ಷನ್ ಅಲ್ಲ; ಪೇಸ್ ಮೇಕರ್ ಮೂಲಕ ಯಾರಿಗೂ ತಿಳಿಯದಂತೆ ಕೊಲ್ಲುವ ಹೊಸ ಯುದ್ಧದ ರಿಯಲ್ ಸ್ಟೋರಿ -ರಂಗಸ್ವಾಮಿ ಮೂಕನಹಳ್ಳಿ ಬರಹ-this is not science fiction a real story of the new war pager blast rangaswamy mookanahalli write up smk ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇದು ಸೈನ್ಸ್ ಫಿಕ್ಷನ್ ಅಲ್ಲ; ಪೇಸ್ ಮೇಕರ್ ಮೂಲಕ ಯಾರಿಗೂ ತಿಳಿಯದಂತೆ ಕೊಲ್ಲುವ ಹೊಸ ಯುದ್ಧದ ರಿಯಲ್ ಸ್ಟೋರಿ -ರಂಗಸ್ವಾಮಿ ಮೂಕನಹಳ್ಳಿ ಬರಹ

ಇದು ಸೈನ್ಸ್ ಫಿಕ್ಷನ್ ಅಲ್ಲ; ಪೇಸ್ ಮೇಕರ್ ಮೂಲಕ ಯಾರಿಗೂ ತಿಳಿಯದಂತೆ ಕೊಲ್ಲುವ ಹೊಸ ಯುದ್ಧದ ರಿಯಲ್ ಸ್ಟೋರಿ -ರಂಗಸ್ವಾಮಿ ಮೂಕನಹಳ್ಳಿ ಬರಹ

ರಂಗಸ್ವಾಮಿ ಮೂಕನಹಳ್ಳಿ: ಲೆಬಾನ್‌ನ ಪೇಜರ್ ಸ್ಪೋಟ ಅಚ್ಚರಿಯೇನಲ್ಲ; ಆದರೆ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ನಾಳೆ ಅದು ನಮ್ಮ ಸಾವಿಗೂ ಕಾರಣವಾಗಬಹುದು. ರಕ್ಕಸ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಕೋಡ್‌ಗಳು ಜಗತ್ತನ್ನು ರಣರಂಗವನ್ನಾಗಿ ಮಾಡುತ್ತವೆ, ಸಂಶಯಬೇಡ

ರಂಗಸ್ವಾಮಿ ಮೂಕನಹಳ್ಳಿ ಬರಹ
ರಂಗಸ್ವಾಮಿ ಮೂಕನಹಳ್ಳಿ ಬರಹ

ಲೆಬನಾನ್ ಎಂಬ ದೇಶವನ್ನು ಇಡೀ ಜಗತ್ತು ತಿರುಗಿನೋಡಲು ಕಾರಣವಾಗಿದ್ದು ಪೇಜರ್‌ ಸ್ಫೋಟ! ಈ ಬೆನ್ನಲ್ಲೇ "ಯುದ್ಧದ ಹೊಸ ಹಂತ ಆರಂಭ" ಎಂದು ಇಸ್ರೇಲ್ ಹೇಳಿಕೆ ನೀಡಿದ ಸುಳಿವಿನ ವ್ಯಾಖ್ಯಾನದಲ್ಲಿ ಜಾಗತಿಕ ವಿದ್ಯಮಾನಗಳ ಪರಿಣಿತರು ಮುಳುಗಿದ್ದಾರೆ. ಈ ಸ್ಫೋಟದ ಕುರಿತು ಕನ್ನಡದ ಲೇಖಕರೋರ್ವರು ವರ್ಷದ ಹಿಂದೆಯೇ ಊಹಿಸಿದ್ದ ವಿಷಯವನ್ನು ಸ್ವತಃ ಲೇಖಕ ರಂಗಸ್ವಾಮಿ ಮೂಕನಹಳ್ಳಿಯವರೇ ಇಲ್ಲಿ ನೆನಪಿಸಿಕೊಂಡಿದ್ದಾರೆ. ಆ ಬರಹ ನಿಮಗೆಂದೇ ಇಲ್ಲಿದೆ.

ಪೇಜರ್ ಸ್ಫೋಟ ನನ್ನ ಮಟ್ಟಿಗಂತೂ ಅಚ್ಚರಿಯಲ್ಲ ! ವಾಹ್ ಅನ್ನಿಸಲಿಲ್ಲ. ಏಕೆಂದರೆ ವರ್ಷಗಳ ಕೆಳಗೆ ಹೀಗೆ ಆಗಬಹುದು ಎನ್ನುವುದನ್ನು ನನ್ನ ಪುಸ್ತಕ ‘ಹಣ ಏನಿದು ನಿನ್ನ ವಿಚಿತ್ರ ಗುಣ’ದಲ್ಲಿ ಕೆಳಗಿನ ಸನ್ನಿವೇಶಗಳ ಬಗ್ಗೆ ಬರೆದಿದ್ದೆ. ಅದನ್ನು ಮತ್ತೆ ಇಲ್ಲಿ ಅಂಟಿಸಿದ್ದೇನೆ.

ಮಕ್ಕಳು ತಮಗೆ ಗೊತ್ತಿಲ್ಲದೇ ತನ್ನ ಅಪ್ಪನನ್ನ ಮುಗಿಸಿ ಬಿಡುತ್ತಾರೆ!

ಒಬ್ಬ ವ್ಯಕ್ತಿಗೆ ಪೇಸ್ಮೇಕರ್ ಅಳವಡಿಸಿರುತ್ತಾರೆ . ಅವನ ಟೀನೇಜಿನ ಇಬ್ಬರು ಮಕ್ಕಳು ಕೈಯಲ್ಲಿ ರಿಮೋಟ್ ಹಿಡಿದು ದೊಡ್ಡ ಟಿವಿ ಪರದೆಯಲ್ಲಿ ಈವಿಲ್ ಸಂಹಾರದಲ್ಲಿ ತೊಡಗಿರುತ್ತಾರೆ. ಇಬ್ಬರ ಕೆಲಸವೂ ಆ ಈವಿಲ್ ಆಬ್ಜೆಕ್ಟ್ ಮುಗಿಸುವುದೇ ಆಗಿರುತ್ತದೆ. ಸಾಮಾನ್ಯವಾಗಿ ಆಟಗಾರರು ವಿರುದ್ದು ಹೋರಾಡುವುದು ಸಾಮಾನ್ಯ. ಆದರೆ ಇಲ್ಲಿ ಇಬ್ಬರೂ ಸೇರಿ ಕಾಮನ್ ಶತ್ರು ಸಂಹಾರದಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರೂ ಮಕ್ಕಳೂ ಖುಷಿಯಿಂದ ಶತ್ರುವಿನ ಮೇಲೆ ಹೊಡೆತ ಕೊಟ್ಟಂತೆಲ್ಲ ಅವರಿಂದ ಅನತಿ ದೂರದಲ್ಲಿ ಮಕ್ಕಳಾಟವನ್ನ ನೋಡುತ್ತಾ ಕುಳಿತ್ತಿದ್ದ ಅಪ್ಪ ,ಪೇಸ್ಮೇಕರ್ ಅವಳವಡಿಸಿದ್ದ ವ್ಯಕ್ತಿ ಕುಸಿಯುತ್ತಾ ಹೋಗುತ್ತಾನೆ. ಗೇಮ್‌ನಲ್ಲಿ ಶತ್ರುವಿನ ಸಂಹಾರವಾಯ್ತು ಎನ್ನುವಷ್ಟರಲ್ಲಿ ಇಲ್ಲಿ ಈತನ ಕಥೆಗೂ ಇತಿಶ್ರೀ ಬರೆದಾಗಿರುತ್ತದೆ ಅಂದರೆ ಗಮನಿಸಿ ಮೃತ ವ್ಯಕ್ತಿಯ ಮಕ್ಕಳು ತಮಗೆ ಗೊತ್ತಿಲ್ಲದೇ ತನ್ನ ಅಪ್ಪನನ್ನು ಮುಗಿಸಿ ಬಿಡುತ್ತಾರೆ. ಅವರಾಡಿದ್ದು ವಿಡಿಯೋ ಗೇಮ್ ಅಷ್ಟೇ !

ಪೇಸ್ಮೇಕರ್ ನೇರವಾಗಿ ಈವಿಲ್ ಆಬ್ಜೆಕ್ಟ್‌ಗೆ ಕನೆಕ್ಟ್ ಆಗುವಂತೆ ನೋಡಿಕೊಂಡರೆ ಸಾಕು, ವಿಡಿಯೋದಲ್ಲಿ ಬೀಳುವ ಪ್ರತಿ ಹೊಡೆತವೂ ನೇರವಾಗಿ ಹೃದಯಕ್ಕೆ ಬೀಳುತ್ತದೆ. ವ್ಯಕ್ತಿಯ ಕಥೆ ಖತಂ ಆಗಿರುತ್ತೆ. ಹೀಗಾಗಿ ಪುಟಾಣಿ ಮಕ್ಕಳು ಅಪ್ಪನನ್ನು ಕೊಲ್ಲುತ್ತಾರೆ. ಸತ್ತವನಿಗೆ, ಕೊಂದವರಿಗೆ ಇಬ್ಬರಿಗೂ ಇದರ ಅರಿವಿರುವುದಿಲ್ಲ.

ಸೈನ್ಸ್ ಫಿಕ್ಷನ್ ಕಥೆ ಅಲ್ಲ ಇದು ನಿಜ

ಏನಪ್ಪಾ ಸೈನ್ಸ್ ಫಿಕ್ಷನ್ ಕಥೆ ಇದ್ದಹಾಗಿದೆ ಎಂದಿರಾ? ಹಾಗೇನಿಲ್ಲ , ವೆಲ್ಕಮ್ ಟು ದಿ ನ್ಯೂ ವರ್ಲ್ಡ್! ತಂತ್ರಜ್ಞಾನವನ್ನ ಬಳಸಿಕೊಂಡು ಮದ್ದುಗುಂಡು ಹಾರಿಸದೆ ಯುದ್ಧ ಮಾಡುವ ಹೊಸ ಯುಗಕ್ಕೆ ಸ್ವಾಗತ. ಇನ್ನೊಂದು ಉದಾಹರಣೆ ನೋಡೋಣ .

ನೀವು ಕೆಲಸ ಮಾಡುವ ಕಛೇರಿಯಲ್ಲಿ ಕಾಫಿ ವೆಂಡಿಂಗ್ ಮಷೀನ್ ಇದೆ ಎಂದುಕೊಳ್ಳಿ , ನಿತ್ಯವೂ ನೀವು ಬೆಳಗಿನ 10 ಗಂಟೆ 12 ನಿಮಿಷಕ್ಕೆ ನೀವು ಕಾಫಿ ಕುಡಿಯುತ್ತಿರಿ ಎಂದುಕೊಳ್ಳಿ , ಅಥವಾ ನಿಮಿಷ ಅತ್ತಿತ್ತ ಆದರೂ ಅಡ್ಡಿಯಿಲ್ಲ , ಕಾಫಿ ತೆಗೆದುಕೊಳ್ಳುತ್ತಿರುವವರು ನೀವೇ ಎನ್ನುವುದನ್ನು ಮಷೀನ್‌ನಲ್ಲಿರುವ ನಿಮ್ಮ ಅರಿವಿಗೆ ಎಂದೂ ಬಾರದ ಪುಟಾಣಿ ಕ್ಯಾಮರಾದ ಮೂಲಕ ನಿಕ್ಕಿ ಮಾಡಿಕೊಳ್ಳಲಾಗುತ್ತದೆ. ನಿಮ್ಮ ಕಾಫಿಯಲ್ಲಿ ನಿಮ್ಮ ದೇಹಕ್ಕೆ ಒಗ್ಗದ ಅತಿ ವೇಗವಾಗಿ ಅಲರ್ಜಿ ಆಗುವ ಪದಾರ್ಥವನ್ನ ಸೇರಿಸಲಾಗುತ್ತದೆ. ಮಜಾ ಎಂದರೆ ನಿಮ್ಮ ದೇಹಕ್ಕೆ ಅದು ಒಗ್ಗುವುದಿಲ್ಲ ಎನ್ನುವುದು ಕೆಲವೊಮ್ಮೆ ನಿಮಗೂ ಗೊತ್ತಿರುವುದಿಲ್ಲ! ಹೀಗೆ ಸುಲಭವಾಗಿ ನಿಮ್ಮನ್ನ ಇಲ್ಲವಾಗಿಸಿ ಬಿಡುತ್ತಾರೆ. ಕೇಸು ಇಲ್ಲ , ತಪಾಸಣೆಯೂ ಇಲ್ಲ . ಅದೊಂದು ಸಹಜ ಸಾವು ಎಂದು ದಾಖಲಾಗಿ ಹೋಗುತ್ತದೆ. ನೀವ್ಯಾರಿಗೆ ಅಡ್ಡಿಯಾಗಿದ್ದೀರೋ ಆತ ದೂರದಲ್ಲೆಲ್ಲೂ ಕುಳಿತು ಇನ್ನೊಬ್ಬರ ಸಾವಿಗೆ ಸ್ಕೆಚ್ ಹಾಕುತ್ತಿರುತ್ತಾನೆ/ಳೆ .

ಡಯಾಬಿಟಿಸ್ ಎನ್ನುವುದು ಇವತ್ತು ತೀರಾ ಸಾಮಾನ್ಯ ಕಾಯಿಲೆ. ಅದು ಕಾಯಿಲೆ ಎನ್ನುವುದಕ್ಕಿಂತ ತಪ್ಪು ಜೀವನ ಶೈಲಿಯ ಬಳುವಳಿ ಎನ್ನಬಹುದು. ಅದೇನೆಂದರೆ ಸಣ್ಣ ಯಂತ್ರವೊಂದು ದಿನದ 24 ತಾಸು ಕೂಡ ರಕ್ತದಲ್ಲಿನ ಸಕ್ಕರೆಯ ಅಂಶವನ್ನ ಗಮನಿಸುತ್ತಿರುತ್ತದೆ. ರಕ್ತದ ಅಂಶ ಹೆಚ್ಚು ಅಥವಾ ಕಡಿಮೆ ಆಗದಂತೆ ಅದು ನಿಯಂತ್ರಣ ಕೂಡ ಮಾಡುತ್ತದೆ. ಜಗತ್ತಿನ ಎಲ್ಲಾ ಸಕ್ಕರೆ ಕಾಯಿಲೆ ಉಳ್ಳವರು ಇದನ್ನ ಉಪಯೋಗಿಸಲು ಶುರು ಮಾಡಿದರೆ ಏನಾಗಬಹುದು ? ನಿಮಗೆ ಗೊತ್ತೇ ಈ ಯಂತ್ರವನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಸಕ್ಕರೆ ಅಂಶವನ್ನ ತಪ್ಪು ತೋರಿಸಬಹುದು! ಅದನ್ನು ಸರಿಪಡಿಸಲು ಹೆಚ್ಚು ಇನ್ಸುಲಿನ್ ದೇಹಕ್ಕೆ ಚುಚ್ಚ ಬಹುದು ನೂರಾರು, ಸಾವಿರಾರು ಮೈಲಿ ದೂರದಲ್ಲಿ ಕುಳಿತು ನಿಮ್ಮ ಅನುಮತಿ ಇಲ್ಲದೆ, ಸದ್ದಿಲ್ಲದೇ ಪಕ್ಕದಲ್ಲಿ ಕುಳಿತವರಿಗೆ ಕೂಡ ಗೊತ್ತಾಗದೆ ನಿಮ್ಮನ್ನ ಮಟಾಷ್ ಮಾಡಿ ಬಿಡಬಹುದು ! ಇಂದು ಅಂತಹ ತಂತ್ರಜ್ಞಾನ ಸಿದ್ಧವಿದೆ. ಅಂದರೆ ಹೆಚ್ಚಿನ ಗಲಾಟೆ, ಗಲಭೆ ಸೃಷ್ಟಿಸದೆ ತಮಗೆ ಬೇಡವಾಗ ವ್ಯಕ್ತಿಯನ್ನ ದಾರಿಯಿಂದ ಹೊರಹಾಕಿ ಬಿಡಬಹುದು. ಹೀಗೆಯೇ ಸಮೂಹ ಗಲಭೆಗಳನ್ನ ಕೂಡ ಅತ್ಯಂತ ಸರಾಗವಾಗಿ ಸೃಷ್ಟಿಸುವುದು ತಂತ್ರಜ್ಞಾನದಿಂದ ಸಾಧ್ಯ.

ಅಂದರೆ ಟಾರ್ಗೆಟ್ ಮಾಡಿದ ವ್ಯಕ್ತಿಯನ್ನ ಮಾತ್ರ ಆತನ ಆರೋಗ್ಯದ (ಡಯಾಬಿಟಿಸ್ ಅಂತಲ್ಲ , ಅದೊಂದು ಉದಾಹರಣೆ ಮಾತ್ರ ) ಮೂಲಕ ಸದೆಬಡಿಯಬಹುದು, ಅಂತೆಯೇ ನಿಮ್ಮ ಮಾಹಿತಿಯನ್ನ, ನಿಮ್ಮ ನಿಲುವುಗಳನ್ನ ವಿರುದ್ಧ ನಿಲುವಿನ ವ್ಯಕ್ತಿಗೆ ನೀಡಿ ಕ್ಷಣ ಮಾತ್ರದಲ್ಲಿ ಸಮಾಜದಲ್ಲಿ ಗಲಭೆ ಸೃಷ್ಟಿಸಬಹುದು. ರಕ್ಕಸ ಆರ್ಟಿಫಿಸಿಯಲ್ ಇಂಟೆಲಿಜೆನ್ಸಿ ಕೋಡ್‌ಗಳು ಜಗತ್ತನ್ನ ರಣರಂಗವನ್ನಾಗಿ ಮಾಡುತ್ತವೆ ಸಂಶಯ ಬೇಡ.

ನಿಮ್ಮ ಮುಂದಿನ ಮೂವ್ ಏನು ಎನ್ನುವುದನ್ನು ನಿಮಗಿಂತ ಚೆನ್ನಾಗಿ ತಿಳಿದಿರುತ್ತದೆ

ನಿಮ್ಮ ಮಕ್ಕಳ ಕೈಲಿರುವ ಕಲಿಕೆಯ ಟ್ಯಾಬ್ , ಗೇಮ್ಸ್ ಆಡುವ ಟ್ಯಾಬ್ ಮೂಲಕ ಮನೆ ಮನೆಯಲ್ಲಿ ಹೊಡೆದಾಟ ಅವರು ಸೃಷ್ಟಿಸಬಲ್ಲರು. ವರ್ಷಾನುಗಟ್ಟಲೆ ನಿಮ್ಮೆಲ್ಲಾ ಗುಣಾವಗುಣಗಳನ್ನು ಅದು ಸ್ಟಡಿ ಮಾಡಿರುತ್ತದೆ. ನಿಮ್ಮ ಪ್ಯಾಟ್ರನ್ , ಪ್ರೊಫೈಲ್ ಸಿದ್ದ ಮಾಡಿಟ್ಟಿರುತ್ತದೆ. ನಿಮ್ಮ ಮುಂದಿನ ಮೂವ್ ಏನು ಎನ್ನುವುದನ್ನು ನಿಮಗಿಂತ ಚೆನ್ನಾಗಿ ಅದು ಊಹಿಸುತ್ತದೆ.

ಚೀನಾದ BYD ಕಾರುಕೊಳ್ಳುವ ಮುನ್ನ ಸ್ವಲ್ಪ ಹುಷಾರು!

ಇದರ ಜೊತೆಗೆ ಇವತ್ತಿನ ಮುಕ್ಕಾಲು ಪಾಲು ಕಾರುಗಳು ಸ್ಯಾಟಲೈಟ್ ಕನೆಕ್ಷನ್‌ಗೆ ಒಳಪಟ್ಟಿವೆ. ನೀವು ಚಲಾಯಿಸುತ್ತಿರುವ ಕಾರಿನ ನಿಯಂತ್ರಣವನ್ನು ನಿಮ್ಮಿಂದ ಕ್ಷಣ ಮಾತ್ರದಲ್ಲಿ ಅವರು ತೆಗೆದುಕೊಳ್ಳಬಹುದು. ಕ್ಷಣ ಮಾತ್ರದಲ್ಲಿ ನಿಮ್ಮನ್ನು ಮೇಲಕ್ಕೆ ಕಳುಹಿಸಬಹುದು. ಟೆಸ್ಲಾ , ಚೀನಾದ byd ಕಾರುಕೊಳ್ಳುವ ಮುನ್ನ ಸ್ವಲ್ಪ ಹುಷಾರು.

ಇಂದಿಗೆ ನಮ್ಮ ಬದುಕು , ಪ್ರೈವೆಸಿ , ನನ್ನ ಪ್ಲಾನ್ ಎನ್ನುವುದು ಏನೂ ಇಲ್ಲ. ನೀವು ಇಷ್ಟ ಪಟ್ಟು ಕೊಂಡ ಮನೆ , ಕಾರು ಇತ್ಯಾದಿಯೆಲ್ಲವೂ ನಿಮ್ಮ ಮೇಲೆ ಅವರು ನಿಮಗೆ ಗೊತ್ತಿಲ್ಲದೇ ಹೇರಲಾಗಿರುವ ಆಯ್ಕೆಗಳು !

ಪೇಜರ್ ಮೂಲಕ ಬೇಡವಾದವರನ್ನು ಕೊಂದಿದ್ದಾರೆ , ಅವರು ಬುದ್ದಿ ಇಲ್ಲದ ಭಯೋತ್ಪಾದಕರು ಎಂದು ನಗುತ್ತಿದ್ದರೆ ಸ್ವಲ್ಪ ನಿಧಾನಿಸಿ. ನೀವು , ನಾನು , ಬಹುತೇಕ ಎಲ್ಲರೂ ಇದರ ವಿಕ್ಟಿಮ್ಸ್ . ಸಾವು ಕೊನೆ ಎಂದು ನೋಡುವುದಾದರೆ ನಾವಿನ್ನೂ ಅದಕ್ಕೆ ಸಿಲುಕಿಲ್ಲ ಅಂತ ಬೇಕಾದರೆ ಖುಷಿ ಪಡಬಹುದು ಅಷ್ಟೇ.

ಹಲವರು ತಮ್ಮ ಅಭಿಪ್ರಾಯವನ್ನು ಈ ಪೋಸ್ಟ್‌ಗೆ ಈ ರೀತಿ ವ್ಯಕ್ತಪಡಿಸಿದ್ದಾರೆ

"ನಮ್ಮ ಸದ್ಯದ ಜೀವನಕ್ರಮ ಮತ್ತು ವಿಕಾಸದ ಒತ್ತಡಗಳು ನಮ್ಮನ್ನು ಎಲ್ಲಿಗೆ ಒಯ್ಯುತ್ತಿವೆಯೋ ಬಲ್ಲವರಾರು?" ಎಂಬುದಾಗಿ ಲಕ್ಷ್ಮೀ ಕಾಗಲವಾಡಿ ಕಾಮೆಂಟ್ ಮಾಡಿದ್ದಾರೆ.

“ಬೆಳಿಗ್ಗೆನೇ ಕೆಲಸ ಮಾಡೋದು ಬಿಟ್ಟು ಓದಿದೆ ಇಸ್ರೇಲ್ ದೇಶದ ಜನರ ದೇಶಾಭಿಮಾನ ನಮ್ಮ ಜನಕ್ಕೆ ಇದ್ದಿದ್ದರೆ.. ”ಎಂದು ಗೀತಾ ಬಜ್ಜಣ್ಣ ಕಾಮೆಂಟ್ ಮಾಡಿದ್ದಾರೆ (Geetha Bajjanna)

(ರಂಗಸ್ವಾಮಿ ಮೂಕನಹಳ್ಳಿಯವರ ಫೇಸ್ಬುಕ್ ಪೋಸ್ಟ್‌ಅನ್ನು ಇಲ್ಲಿ ಯತಾವತ್ತಾಗಿ ಪ್ರಕಟಿಸಲಾಗಿದೆ)

mysore-dasara_Entry_Point

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.