Friendship Day: ಗೆಳೆತನದೊಂದಿಗೆ ಹಣಕಾಸು ನಿರ್ವಹಣೆಯನ್ನೂ ಅರಿತರೆ ಬದುಕು ಬಂಗಾರ, ನಿಮ್ಮ ಫ್ರೆಂಡ್ಸ್‌ಗೆ ಕೊಡಬಹುದಾದ ಬೆಸ್ಟ್‌ ಗಿಫ್ಟ್ ಇದು-business news friendship day 2024 how to help your friend to navigate his challenges in life through financial planning ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Friendship Day: ಗೆಳೆತನದೊಂದಿಗೆ ಹಣಕಾಸು ನಿರ್ವಹಣೆಯನ್ನೂ ಅರಿತರೆ ಬದುಕು ಬಂಗಾರ, ನಿಮ್ಮ ಫ್ರೆಂಡ್ಸ್‌ಗೆ ಕೊಡಬಹುದಾದ ಬೆಸ್ಟ್‌ ಗಿಫ್ಟ್ ಇದು

Friendship Day: ಗೆಳೆತನದೊಂದಿಗೆ ಹಣಕಾಸು ನಿರ್ವಹಣೆಯನ್ನೂ ಅರಿತರೆ ಬದುಕು ಬಂಗಾರ, ನಿಮ್ಮ ಫ್ರೆಂಡ್ಸ್‌ಗೆ ಕೊಡಬಹುದಾದ ಬೆಸ್ಟ್‌ ಗಿಫ್ಟ್ ಇದು

ರಾಜೇಗೌಡ ನಿಧಾನವಾಗಿ ಒಂದೊಂದಾಗಿ ಹಣಕಾಸಿನ ಒಗಟುಗಳನ್ನು ಬಿಡಿಸಿಕೊಳ್ಳಲು ಆ ಕುಟುಂಬಕ್ಕೆ ನೆರವಾದ. ಆ ಮೂಲಕ, “ಸ್ನೇಹಿತ ಸತ್ತರೂ, ಸ್ನೇಹ ಮಾತ್ರ ಸಾಯದು” ಎಂಬುದನ್ನು ನಿರೂಪಿಸಿದ. ಅಂದು ಅವನು ಕಂಡುಕೊಂಡ ಸತ್ಯ, ಅನುಭವಿಸಿದ ಪಾಪಪ್ರಜ್ಞೆಯನ್ನು ಒಂದು ಪಾಠವಾಗಿ ಆಪ್ತರೊಂದಿಗೆ ಹಂಚಿಕೊಂಡ. ಗೆಳೆಯರು, ಗೆಳೆತನದ ವಿಚಾರದಲ್ಲಿ ಎಲ್ಲರೂ ತಿಳಿದುಕೊಳ್ಳಲೇಬೇಕಾದ ಪಾಠ ಇಲ್ಲಿದೆ.

ಗೆಳೆತನದೊಂದಿಗೆ ಹಣಕಾಸು ನಿರ್ವಹಣೆಯನ್ನೂ ಅರಿತರೆ ಬದುಕು ಬಂಗಾರ, ನಿಮ್ಮ ಫ್ರೆಂಡ್ಸ್‌ಗೆ ಕೊಡಬಹುದಾದ ಬೆಸ್ಟ್‌ ಗಿಫ್ಟ್ ಇದು
ಗೆಳೆತನದೊಂದಿಗೆ ಹಣಕಾಸು ನಿರ್ವಹಣೆಯನ್ನೂ ಅರಿತರೆ ಬದುಕು ಬಂಗಾರ, ನಿಮ್ಮ ಫ್ರೆಂಡ್ಸ್‌ಗೆ ಕೊಡಬಹುದಾದ ಬೆಸ್ಟ್‌ ಗಿಫ್ಟ್ ಇದು

ಅಲ್ಲಿ ದುಃಖ ಮಡುಗಟ್ಟಿತ್ತು. ಯಾರು ಯಾರಿಗೂ ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗುತ್ತೆ ಯಾರೂ ಅಂದಾಜಿಸಿಯೂ ಇರಲಿಲ್ಲ. ಅವನಿಗೆ ಇನ್ನೂ 40 ವರ್ಷವೂ ದಾಟಿರಲಿಲ್ಲ. ಕೈತುಂಬ ಸಂಬಳ ಬರುತ್ತಿದ್ದ ಕೆಲಸ, ಮನಸ್ಸು ಅರಿತು ನಡೆಯುವ ಹೆಂಡತಿ, ಚಿನ್ನದಂಥ ಇಬ್ಬರು ಮಕ್ಕಳು, ಚಿಕ್ಕವಳು ಇನ್ನೂ 1 ನೇ ತರಗತಿ ಓದುತ್ತಿದ್ದಳು ಅಷ್ಟೇ. ಅಷ್ಟರಲ್ಲಿ ಅವನು ಎಲ್ಲರನ್ನೂ ಬಿಟ್ಟು ನಡೆದಿದ್ದ. ಆಗಿದ್ದು ಒಂದು ಅಪಘಾತ, ತಲೆಗೆ ಬಿದ್ದಿತ್ತು ಏಟು. ದುಃಖ ಒಂದು ಹಂತಕ್ಕೆ ಮಾಯುವ ಹಂತಕ್ಕೆ ಬಂದ ಮೇಲೆ ಕುಟುಂಬದ ಸದಸ್ಯರು ಅವನು ಇತ್ಯೋಪರಿ ವಿಚಾರಿಸಲು ಶುರು ಮಾಡಿದರು.

ಮೃತನ ಹೆಸರು ರಂಗನಾಥ. ಅವನ ಹೆಂಡತಿ ಗೃಹಿಣಿ. ಮನೆಯೇ ಮಂತ್ರಾಲಯ ಎಂದುಕೊಂಡಿದ್ದವಳು. ಹೊರಗಿನ ಓಡಾಟ, ಒಡನಾಟ ಕಡಿಮೆ. ‘ಗಂಡನಿಗೆಷ್ಟು ಸಂಬಳ ಬರುತ್ತೆ’ ಅಂತ ಕೇಳಬಾರದು ಎನ್ನುವ ಜಾಯಮಾನದವಳು. ಅವಳಿಗೆ ಗಂಡನ ಸಂಬಳ ಎಷ್ಟು ಎನ್ನುವುದು ಮಾತ್ರವಲ್ಲ ಸಂಸಾರ ನಡೆಯಲು ತಿಳಿದುಕೊಳ್ಳಬೇಕಿದ್ದ ಅಂಥ ಎಷ್ಟೋ ವಿವರಗಳು ಗೊತ್ತಿರಲಿಲ್ಲ. ಗಂಡನ ಸಂಬಳ ಯಾವ ಬ್ಯಾಂಕಿನಲ್ಲಿ ಜಮಾ ಆಗುತ್ತಿದೆ? ಅವನು ಯಾವೆಲ್ಲಾ ವಿಮಾ ಪಾಲಿಸಿ ಖರೀದಿಸಿದ್ದಾನೆ? ಯಾರನ್ನು ನಾಮಿನಿ ಮಾಡಿದ್ದಾನೆ? ಡಿಮ್ಯಾಟ್ ಅಕೌಂಟ್ ಎಲ್ಲಿದೆ? ಮ್ಯೂಚುವಲ್ ಫಂಡ್ ಹೂಡಿಕೆಗಳು ಎಷ್ಟಿವೆ? ಇವನ ಇನ್‌ಕಮ್ ಟ್ಯಾಕ್ಸ್ ಫೈಲ್ ಮಾಡುತ್ತಿದ್ದ ಅಕೌಂಟೆಂಟ್ ಯಾರು? ಇಂಥ ಯಾವ ಪ್ರಶ್ನೆಗಳನ್ನು ಆಕೆ ರಂಗನಾಥ ಬದುಕಿದ್ದಾಗ ಕೇಳಿರಲಿಲ್ಲ. ಈಗ ಕೇಳುವ ಅವಕಾಶವೂ ಇರಲಿಲ್ಲ.

ತುಸು ಲೋಕಜ್ಞಾನ ಇದ್ದ ರಂಗನಾಥನ ತಂದೆಗೆ ಮಗನನ್ನು ಕಳೆದುಕೊಂಡ ದುಃಖದ ಜೊತೆಗೆ ಸೊಸೆಯ ಮುಗ್ಧತೆ ಕಂಡು ಹೇಗೆ ನಿಭಾಯಿಸಬೇಕು ಎನ್ನುವ ಗೊಂದಲ. ಅವರು ಅವಳನ್ನು ಕೈಬಿಡುವಂತಿಲ್ಲ, ಆಕೆಗೆ ಸ್ವತಂತ್ರವಾಗಿ ಬದುಕುವ ಛಾತಿಯೂ ಇಲ್ಲ. ಅವಳ ತವರು ಮನೆಯವರೂ ಅರ್ಥಿಕವಾಗಿ ಅಷ್ಟಕ್ಕಷ್ಟೇ. ಮಗ ಎಲ್ಲವನ್ನೂ ಪ್ಲಾನ್ ಮಾಡಿರ್ತಾನೆ ಎಂಬ ಖಾತ್ರಿಯೇನೋ ಅವರಿಗೆ ಇತ್ತು. ಆದರೆ ಎಲ್ಲಿ ಏನು ಮಾಡಿದ್ದಾನೆ ಎನ್ನುವುದು ತಿಳಿಯದೆ ಕಣ್ಣುಕಟ್ಟಿ ಕಾಡಿಗೆ ಬಿಟ್ಟಂತೆ ಆಗಿದ್ದರು.

ಪಾಪಪ್ರಜ್ಞೆ ಅನುಭವಿಸಿದ್ದ ಜೀವದ ಗೆಳೆಯ

ಶಾಲಾ ದಿನಗಳಿಂದಲೂ ಮಗನ ಜೊತೆಗೆ ಒಡನಾಡುತ್ತಿದ್ದ ರಾಜೇಗೌಡನನ್ನು ಮನೆಗೆ ಕರೆದರು. ಅವನು ಬಂದ ಮೇಲೆ ವಿಷಯ ಹೀಗೆ ಎಂದು ಪ್ರಸ್ತಾಪಿಸಿದರು. ರಾಜೇಗೌಡ ತನಗೆ ಗೊತ್ತಿದ್ದ ಒಂದಷ್ಟು ಸಾಲದ ವಿವರ ಹೇಳಿದ. ಇಂಥ ಬ್ಯಾಂಕಿಗೆ ರಂಗನಾಥ ಓಡಾಡುತ್ತಿದ್ದ ಎಂದ. ಅಷ್ಟು ಮೀರಿದ ವಿವರ ಅವನಿಗೂ ಗೊತ್ತಿರಲಿಲ್ಲ. “ಏನೋ ನೀನು ಅವನಿಗೆ ಅಷ್ಟೊಂದು ಫ್ರೆಂಡು. ಅವನ ಇನ್ಷುರೆನ್ಸ್ ಇನ್‌ಫರ್ಮೇಶನ್ ಆದ್ರೂ ತಿಳ್ಕೊಬೇಕಿತ್ತು ಅಲ್ವಾ. ನಿಮ್ಮಪ್ಪನ ಎಲ್ಲ ವಿಷ್ಯ ನನಗೆ ಗೊತ್ತಿದೆ, ಆದರೆ ನೀವು ಈ ಕಾಲದವರು ಸೋತ್ರಿ” ಅಂದಾಗ ರಾಜೇಗೌಡನಿಗೆ ಅಕ್ಷರಶಃ ಪಾಪಪ್ರಜ್ಞೆ ಕಾಡಿತ್ತು. ಅವನಿಗೆ ಅವೆಲ್ಲ ತಿಳಿದುಕೊಳ್ಳಬೇಕಾದ ವಿಷಯ ಅಂತ್ಲೇ ಅನ್ನಿಸಿರಲಿಲ್ಲ. ಒಂದು ವೇಳೆ ಕೇಳಿದ್ದರೆ ರಂಗನಾಥ ಹೇಳಿಯೇ ಇರುತ್ತಿದ್ದ. ಅಷ್ಟೊಂದು ಕುಚಿಕು ದೋಸ್ತ್‌ಗಳು ಅವರಿಬ್ಬರು.

ಇದು ಕಟ್ಟುಕಥೆ ಅಲ್ಲ. ಇಲ್ಲಿರುವ ಪಾತ್ರಗಳ ಹೆಸರು ಬದಲಿಸಲಾಗಿದೆ ಎನ್ನುವುದು ಬಿಟ್ಟರೆ ಉಳಿದದ್ದೆಲ್ಲವೂ ಸತ್ಯ. ತುಮಕೂರು ಜಿಲ್ಲೆಯ ಕೊರಟಗೆರೆಯ ಒಂದು ಕುಟುಂಬ ಈ ರೀತಿಯ ಸಂಕಷ್ಟಕ್ಕೆ ಸಿಲುಕಿತ್ತು. ರಾಜೇಗೌಡ ನಿಧಾನವಾಗಿ ಒಂದೊಂದಾಗಿ ಹಣಕಾಸಿನ ಒಗಟುಗಳನ್ನು ಬಿಡಿಸಿಕೊಳ್ಳಲು ಆ ಕುಟುಂಬಕ್ಕೆ ನೆರವಾದ. ಆ ಮೂಲಕ, “ಸ್ನೇಹಿತ ಸತ್ತರೂ, ಸ್ನೇಹ ಮಾತ್ರ ಸಾಯದು” ಎಂಬುದನ್ನು ನಿರೂಪಿಸಿದ. ಅಂದು ಅವನು ಕಂಡುಕೊಂಡ ಸತ್ಯ, ಅನುಭವಿಸಿದ ಪಾಪಪ್ರಜ್ಞೆಯನ್ನು ಒಂದು ಪಾಠವಾಗಿ ಆಪ್ತರೊಂದಿಗೆ ಹಂಚಿಕೊಂಡ. ಇಂದು ಹೇಗೂ “ಸ್ನೇಹಿತರ ದಿನ”. ಈ ಅನುಭವ ದಾಖಲಿಸಲು ಇದಕ್ಕಿಂತಲೂ ಒಳ್ಳೆಯ ದಿನ ಉಂಟೇ?

ಸುತ್ತಲೂ ಇರುವವರ ನೆಮ್ಮದಿ ಮುಖ್ಯ

'ನೀವು ಯಾವಾಗ ಖುಷಿಯಾಗಿರುತ್ತೀರಿ' -ಯಾರಿಗಾದರೂ ಈ ಪ್ರಶ್ನೆ ಕೇಳಿನೋಡಿ. ಅವರಿಂದ ಏನೆಲ್ಲಾ ಉತ್ತರಗಳು ಬರಬಹುದು ಯೋಚಿಸಿ. 'ನನ್ನ ಗಂಡ ಖುಷಿಯಾಗಿದ್ದಾಗ, ಒಬ್ಬಟ್ಟು ತಿನ್ನುವಾಗ, ಮಕ್ಕಳೊಂದಿಗೆ ಆಡುವಾಗ, ಇಷ್ಟದ ನಟಿಯ ಸಿನಿಮಾ ನೋಡುವಾಗ, ಕೈತುಂಬಾ ದುಡ್ಡಿದ್ದಾಗ...' ಇತ್ಯಾದಿ ಇತ್ಯಾದಿ ಅಂಶಗಳ ಪಟ್ಟಿ ಬೆಳೆಯಬಹುದು. ಈ ಪಟ್ಟಿಯನ್ನು ಎಷ್ಟು ಸಾಧ್ಯವೋ ಅಷ್ಟೂ ಬೆಳೆಸಿದ ನಂತರ ಯೋಚಿಸಿ, ಕೊನೆಗೆ ಅನ್ನಿಸುವುದು ಇಷ್ಟೇ; 'ನಮ್ಮ ಸುತ್ತಲೂ ಇರುವವರು ನೆಮ್ಮದಿಯಾಗಿದ್ದರೆ ಮಾತ್ರ ನಮಗೂ ನೆಮ್ಮದಿ ಸಿಗಲು ಸಾಧ್ಯ'. ಆರ್ಥಿಕ ಸ್ವಾತಂತ್ರ್ಯ ಇಂಥ ನೆಮ್ಮದಿಯನ್ನು ಕಲ್ಪಿಸುವ ಮೆಟ್ಟಿಲುಗಳಲ್ಲಿ ಒಂದು. ಹೀಗಾಗಿಯೇ ಈ ಸ್ನೇಹಿತರ ದಿನದಂದು ನಿಮ್ಮ ಫ್ರೆಂಡ್ಸ್‌ ಜೊತೆಗೆ ಮಾತನಾಡಿದಾಗ ಈ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ.

1) ಸ್ನೇಹದಲ್ಲಿ ಸಾಲ, ವ್ಯವಹಾರ: ಎಷ್ಟೋ ವರ್ಷಗಳಷ್ಟು ಹಳೆಯದಾದ ಸ್ನೇಹ ಸಂಬಂಧಗಳು ಹಣಕಾಸಿನ ಕಾರಣಕ್ಕೆ ಮುರಿದುಹೋಗಿವೆ. ನಿಮ್ಮ ಗೆಳತಿ / ಗೆಳೆಯರ ಹಣಕಾಸಿನ ಪರಿಸ್ಥಿತಿ ನೀವು ಅರಿತುಕೊಳ್ಳುವುದು ಬಹಳ ಮುಖ್ಯ. ಆದರೆ ಅವರ ಉಳಿತಾಯದ ಹಣವನ್ನು ಎಂದಿಗೂ ನಿಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳಲು ಮುಂದಾಗಬೇಡಿ. ಒಂದು ವೇಳೆ ನೀವು ಕಷ್ಟದಲ್ಲಿದ್ದಾಗ ಅವರಾಗಿಯೇ ನಿಮಗೆ ಆರ್ಥಿಕ ಸಹಾಯ ಮಾಡಿದರೆ, ಅದನ್ನು ಮರುಪಾವತಿಸುವುದು ಬೇಡ ಎಂದು ಅವರೇನಾದರೂ ಹೇಳಿದರೆ, ಸಹಾಯ ಪಡೆದು ಸುಮ್ಮನಾಗಬೇಡಿ. ತಡವಾದರೂ ಸರಿ ಅವರು ಕೊಟ್ಟ ಹಣವನ್ನು ವಾಪಸ್ ಕೊಟ್ಟು ಥ್ಯಾಂಕ್ಸ್ ಹೇಳಿ. 'ನೀನು ಸಹಾಯ ಮಾಡದಿದ್ದರೆ ನನ್ನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು. ತುಂಬಾ ಬಡ್ಡಿ ತೆರಬೇಕಾಗುತ್ತಿತ್ತು. ನಿನಗೆ ಬಡ್ಡಿ ಕೊಡುತ್ತಿಲ್ಲ. ಆದರೆ ಅಸಲನ್ನಾದರೂ ಕೊಡ್ತೀನಿ' ಎಂದು ಮನಃಪೂರ್ವಕ ಥ್ಯಾಂಕ್ಸ್ ಹೇಳಿ. ಇದು ನಿಮ್ಮಿಬ್ಬರ ಸ್ನೇಹ ಬಂಧವನ್ನು ಇನ್ನಷ್ಟು ಬಿಗಿಯಾಗಿಸುತ್ತದೆ.

2) ವಿಮೆ ಬಗ್ಗೆ ಗೊತ್ತಿರಲಿ: ತೀರಾ ಹತ್ತಿರದ ಕುಚಿಕು ಗೆಳೆಯರಿದ್ದರೂ ಅವರ ವಿಮೆಯ ವಿಚಾರ ಇನ್ನೊಬ್ಬರಿಗೆ ಗೊತ್ತಿರುವುದಿಲ್ಲ. ತುರ್ತು ಸಂದರ್ಭದಲ್ಲಿ ಇವೆಲ್ಲವೂ ಬೇಕಾಗುತ್ತದೆ ಎನ್ನುವುದು ನೆನಪಿರಲಿ. ಉದಾಹರಣೆಗೆ ನಿಮ್ಮ ಹತ್ತಿರದ ಗೆಳೆಯನಿಗೆ ಅಪಘಾತ ಅಥವಾ ತೀವ್ರ ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಿಸಬೇಕಾದಾಗ ವೈದ್ಯಕೀಯ ವಿಮೆಯ ವಿವರ ಬೇಕಾಗುತ್ತದೆ. ಅಕಸ್ಮಾತ್ ಪ್ರಾಣಾಪಾಯದ ಸಂದರ್ಭ ಒದಗಿದರೆ ನಿಮ್ಮ ಗೆಳೆಯರ ಮನೆಯ ಆರ್ಥಿಕತೆ ಕುಸಿದು ಹೋಗಬಹುದು. ಒಂದು ವೇಳೆ ಅವರು ವೈದ್ಯಕೀಯ ವಿಮೆ, ಜೀವವಿಮೆ, ಟರ್ಮ್ ಇನ್ಷುರೆನ್ಸ್ ಮಾಡಿದ್ದರೂ ಅದರ ಬಗ್ಗೆ ಯಾರಿಗೂ ಮಾಹಿತಿ ಇರದಿದ್ದರೆ ಅವೆಲ್ಲವೂ ಇದ್ದೂ ವ್ಯರ್ಥ. ಎಲ್‌ಐಸಿ ಬಳಿ ಇಂಥ ಕ್ಲೇಮ್ ಮಾಡದ ಮೊತ್ತವೇ ಸಾವಿರಾರು ಕೋಟಿಗಳಷ್ಟು ಇದೆ. ಹೀಗಾಗಿ ನಿಮ್ಮ ಕ್ಲೋಸ್‌ಫ್ರೆಂಡ್‌ಗೆ ಮುಜುಗರವಾದರೂ ಪರವಾಗಿಲ್ಲ, ಅವರ ವೈದ್ಯಕೀಯ, ಜೀವ ವಿಮೆಯ ವಿವರ ತಿಳಿದುಕೊಂಡಿರಿ. ನಿಮ್ಮ ವಿಮೆಯ ವಿವರಗಳನ್ನೂ ಕೊಟ್ಟಿರಿ. ಅಂಥ ವಿವರಗಳನ್ನು ಹೇಗೆ ಸುರಕ್ಷಿತವಾಗಿ ಇರಿಸಿಕೊಳ್ಳಬೇಕು ಎಂಬುದನ್ನೂ ತಿಳಿದುಕೊಳ್ಳಿ.

3) ಉಳಿತಾಯ, ಹೂಡಿಕೆ ವಿಚಾರಗಳನ್ನೂ ಚರ್ಚಿಸಿ: ಬೆಂಗಳೂರಿನಲ್ಲಿ 'ಗುರುರಾಘವೇಂದ್ರ ಸಹಕಾರ ಬ್ಯಾಂಕ್' ಮುಳುಗಿದಾಗ ಹಲವರು, ತಮ್ಮ ಗೆಳೆಯರೊಂದಿಗೆ 'ನಿನ್ನ ಡೆಪಾಸಿಟ್ ಅಲ್ಲಿದೆ ಎನ್ನುವುದೇ ಗೊತ್ತಿರಲಿಲ್ಲ. ಗೊತ್ತಿದ್ದರೆ ಎಚ್ಚರ ಹೇಳಬಹುದಿತ್ತು' ಎಂದು ಎಲ್ಲವೂ ಮುಗಿದ ಮೇಲೆ ಪ್ರತಿಕ್ರಿಯಿಸಿದ್ದರು. ತುಂಬಾ ಸಲ ಹೀಗೆಯೇ ಆಗುತ್ತದೆ, ಹಣಕಾಸಿನ ವಿಚಾರದಲ್ಲಿ ಗುಟ್ಟಾಗಿ ಇರಬೇಕು ಎನ್ನುವ ಮುನ್ನೆಚ್ಚರಿಕೆಯೇ ಹಲವು ಅನಾಹುತಗಳಿಗೂ ಕಾರಣವಾಗುತ್ತವೆ. ನೀವು ಯಾವ ಬ್ಯಾಂಕಿನಲ್ಲಿ ವ್ಯವಹಾರ ಮಾಡುತ್ತಿದ್ದೀರಿ? ಚೀಟಿ ಇತ್ಯಾದಿ ಅಸುರಕ್ಷಿತ ಹಣಕಾಸು ಉಳಿತಾಯ ಯೋಜನೆಗಳಲ್ಲಿ ತೊಡಗಿಸಿದ್ದರೆ ಅದರ ವಿವರ, ನಿಮ್ಮ ಡಿಮ್ಯಾಟ್ ಖಾತೆ, ಮ್ಯೂಚುವಲ್ ಫಂಡ್ ಫೋಲಿಯೊ ಮಾಹಿತಿಯನ್ನೂ ಹತ್ತಿರದ ಗೆಳೆಯರಿಗೆ ತಿಳಿಸಿರಿ. ಉಳಿತಾಯ, ಹೂಡಿಕೆಯ ಬಗ್ಗೆಯೂ ಆಗಾಗ ಚರ್ಚಿಸಿ. ಒಬ್ಬರಿಗೆ ಗೊತ್ತಿರುವ ಜ್ಞಾನ, ಎಚ್ಚರಿಕೆಯು ಮತ್ತೊಬ್ಬರು ಆಪತ್ತಿಗೆ ಸಿಲುಕುವುದನ್ನು ತಪ್ಪಿಸಬಹುದು.

4) ಸ್ಟಡಿ ಸರ್ಕಲ್: ಐಎಎಸ್, ಕೆಎಎಸ್‌ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವವರು ಸ್ಪಡಿ ಸರ್ಕಲ್‌ಗಳನ್ನು ರೂಪಿಸಿಕೊಳ್ಳುವುದು ನಿಮಗೆ ಗೊತ್ತಿರುತ್ತೆ. ಆದರೆ ಷೇರುಪೇಟೆ, ಹೂಡಿಕೆ, ಉಳಿತಾಯಗಳಲ್ಲಿ ಆಸಕ್ತಿಯಿರುವವರು ಇಂಥ ಸ್ಟಡಿ ಸರ್ಕಲ್‌ಗಳನ್ನು ಮಾಡಿಕೊಳ್ಳುವ ಮನಸ್ಸಿದ್ದರೂ ಹಿಂಜರಿಯುತ್ತಿರುತ್ತಾರೆ. 'ನನ್ನ ಸಲಹೆಯಿಂದ ನಷ್ಟವಾದರೆ, ನನ್ನ ಆಲೋಚನೆ ಅವರಿಗೆ ಚೀಪ್ ಅನ್ನಿಸಿದರೆ' ಇತ್ಯಾದಿ ಹಿಂಜರಿಕೆಗಳು ಇದಕ್ಕೆ ಕಾರಣ. ಅದರ ಬದಲು ವಿಷಯ ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ಪರಸ್ಪರರ ಒಪ್ಪಿಗೆಯ ಮೇರೆಗೆ ಸ್ಟಡಿ ಸರ್ಕಲ್‌ಗಳನ್ನು ರೂಪಿಸಿಕೊಂಡರೆ ಎಲ್ಲರಿಗೂ ಲಾಭವಾಗುತ್ತೆ. ಮುಕ್ತ ಚರ್ಚೆಗೆ ಅವಕಾಶವೂ ಇರುತ್ತೆ. ಆಪ್ತರಿಗೆ ಒಳಿತು ಮಾಡುವ ದೃಷ್ಟಿಯಿಂದ ನಿಮ್ಮ ಜ್ಞಾನ ಹಂಚಿಕೊಳ್ಳಲು, ನೀವು ಜ್ಞಾನ ಸಂಪಾದಿಸಲು ಇಂಥ ಸ್ಟಡಿ ಸರ್ಕಲ್‌ಗಳು ಉತ್ತಮ ವೇದಿಕೆ ಆಗಬಹುದು.

5) ಬದುಕಿನ ಗುರಿಗಳನ್ನು ಒಟ್ಟಿಗೆ ಪ್ಲಾನ್ ಮಾಡಿ: ನಿಮ್ಮ ಆಸಕ್ತಿ, ಅಭಿರುಚಿ, ಅಗತ್ಯಗಳು ಬೇರೆ ಇರಬಹುದು. ಆದರೆ ಮನಃಪೂರ್ಕವಾಗಿ ನಿಮಗೆ ಒಳಿತಾಗಲಿ ಎಂದು ಹಾರೈಸುವ ಗೆಳೆಯರೊಂದಿಗೆ ಬದುಕಿನ ಗುರಿಗಳನ್ನು ಹಂಚಿಕೊಳ್ಳುವುದರಲ್ಲಿ ಇರುವ ಖುಷಿಯೇ ಖುಷಿ. ಎಷ್ಟೋ ಸಲ ಹೀಗೆ ಹಂಚಿಕೊಳ್ಳುವುದೇ ಗುರಿಗಳಾಗಿ, ಕನಸುಗಳಾಗಿ, ಸಾಕಾರವೂ ಆಗಿಬಿಡುತ್ತದೆ. ಉದಾ: ಮಗನ ವಿದ್ಯಾಭ್ಯಾಸಕ್ಕೆ ಉಳಿತಾಯ, ಮನೆ ಖರೀದಿ, ದೂರದ ಊರಿಗೆ ಪ್ರವಾಸ, ನಿವೃತ್ತಿಯ ನಂತರ ಹೇಗಿರಬೇಕು ಇತ್ಯಾದಿ ವಿಚಾರಗಳನ್ನು ಹಂಚಿಕೊಳ್ಳಲು ಎಂದಿಗೂ ಹಿಂಜರಿಯಬೇಡಿ.

'ಫ್ರೆಂಡ್‌ಶಿಪ್ ಡೇ' ಎನ್ನುವುದು ಔಪಚಾರಿಕೆ ಶುಭಾಶಯ ಕೋರುವುದಕ್ಕಷ್ಟೇ ಸೀಮಿತವಾಗದೆ ಬದುಕು ಬೆಳಗುವ ಮಾರ್ಗವನ್ನೂ ತೋರಿಸುವಂತಾಗಲಿ.