Viral Video: ನಾನು ಓಡಿಸ್ತೀನಿ ಬಿಡೋ, ವಂದೇ ಭಾರತ್ ಡ್ರೈವರ್‌ಗಳ ನಡುವೆ ಹೊಡೆದಾಟ, ಪ್ಯಾಸೆಂಜರ್ಸ್ ಕಥೆ ಏನು ಎಂದ ಜನ
Viral Video: ಉದಯಪುರ-ಆಗ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಯಾರು ಓಡಿಸಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿ ಲೊಕೊ ಪೈಲಟ್‌ಗಳ ನಡುವೆ ಗಲಾಟೆ ನಡೆದಿದೆ.
ನವದೆಹಲಿ: ಆಗ್ರಾ ಮತ್ತು ಉದಯಪುರ ಮಾರ್ಗದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚಲಾಯಿಸಲು ಚಾಲಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಘಟನೆ ಇತ್ತೀಚೆಗೆ ರಾಜಸ್ಥಾನದ ಗಂಗಾಪುರ ಸಿಟಿ ಜಂಕ್ಷನ್‌ನಲ್ಲಿ ನಡೆದಿದೆ. ತಾ ಮುಂದು ನಾ ಮುಂದು ಎನ್ನುವಂತೆ ಪೈಪೋಟಿ ನಡೆಸಿರುವ ಚಾಲಕರು, ಡ್ರೈವ್ ಮಾಡುವ ಸಲುವಾಗಿ ಬಡಿದಾಡಿಕೊಂಡು ಗಮನ ಸೆಳೆದಿದ್ದಾರೆ. ಲೊಕೊ ಪೈಲಟ್‌ಗಳ ಜಗಳದ ವಿಡಿಯೋ ವೈರಲ್ ಆಗಿದೆ.
ಆಗ್ರಾ ಮತ್ತು ಕೋಟಾ ವಿಭಾಗದ ಸಿಬ್ಬಂದಿ ಜಗಳ ನಡೆದಿದ್ದು, ಲೊಕೊ ಪೈಲಟ್ ಮತ್ತು ಅವರ ಸಹಾಯಕರ ಮೇಲೆ ಹಲ್ಲೆ ನಡೆಸಲಾಗಿದೆ. ಎಕ್ಸ್ ಖಾತೆಯಲ್ಲಿ ಸಚಿನ್ ಗುಪ್ತಾ ಎಂಬವರು ವಿಡಿಯೋ ಪೋಸ್ಟ್ ಮಾಡಿದ್ದು ವಂದೇ ಭಾರತ್ ಟ್ರೈನ್ ಚಾಲನೆ ಮಾಡಲು ಲೊಕೊ ಪೈಲಟ್ಸ್ ಪರಸ್ಪರ ತಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಿರಿದಾದ ಬಾಗಿಲಿನ ಮೂಲಕ ಒಳನುಗ್ಗಲು ಹರಸಾಹಸಪಡುತ್ತಿದ್ದಾರೆ.
ರೈಲಿನ ನಿಯಂತ್ರಣದಲ್ಲಿದ್ದ ಲೊಕೊ ಪೈಲಟ್ ಮತ್ತು ಅವರ ಸಹಾಯಕರನ್ನು ಬಲವಂತವಾಗಿ ಕ್ಯಾಬ್‌ನಿಂದ ಹೊರಕ್ಕೆ ನೂಕಿ ಹಲ್ಲೆ ನಡೆಸಿದ್ದಾರೆ. ಇದು ಪರಿಸ್ಥಿತಿ ವಿಕೋಪಕ್ಕೆ ತಿರುಗುವಂತೆ ಮಾಡಿತು. ಆದರೆ ಈ ಘಟನೆಯನ್ನು ಪೊಲೀಸ್ ಅಧಿಕಾರಿಗಳು ನಿಭಾಯಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು, ಪ್ರಯಾಣಿಕರ ಪರಿಸ್ಥಿತಿ ಏನಾಗಿರ್ಬೇಡ ಎನ್ನುತ್ತಿದ್ದಾರೆ.
ಲೊಕೊ ಪೈಲಟ್‌ಗಳ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ಕೆಲ ನೌಕರರು ಗಾಯಗೊಂಡಿದ್ದು, ಕೆಲ ರೈಲ್ವೆ ಆಸ್ತಿಗಳಿಗೂ ಹಾನಿಯಾಗಿದೆ. ರೈಲನ್ನು ಓಡಿಸಲು ಸಿಬ್ಬಂದಿಗೆ ಆದೇಶ ನೀಡಿದ ನಂತರ ಕೋಟಾ ಮತ್ತು ಆಗ್ರಾ ರೈಲ್ವೆ ವಿಭಾಗದ ಪಶ್ಚಿಮ-ಮಧ್ಯ ರೈಲ್ವೆ, ವಾಯುವ್ಯ ರೈಲ್ವೆ ಮತ್ತು ಉತ್ತರ ರೈಲ್ವೆಯ ನೌಕರರ ನಡುವೆ ವಾಗ್ವಾದ ನಡೆದಿದೆ.
ಮೊದಲಿಗೆ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದ್ದು, ಸ್ವಲ್ಪ ಹೊತ್ತಿನಲ್ಲೇ ಮಾರಾಮಾರಿ ನಡೆಯಿತು. ರೈಲಿನ ಚಾಲಕ, ಸಹ ಚಾಲಕ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಯಿತು. ಇದಲ್ಲದೇ ಸಿಟ್ಟಿಗೆದ್ದ ನೌಕರರು ಗಾರ್ಡ್ ರೂಮ್ ಬೀಗ ಮುರಿದು ಕ್ಯಾಬಿನ್ನ ಗಾಜು ಒಡೆದು ಹಾಕಿದ್ದಾರೆ. ಒಬ್ಬ ಲೋಕೋ ಪೈಲಟ್ ಗಾಯಗೊಂಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ರೈಲ್ವೆ ಮಂಡಳಿಗೆ ಮಾಹಿತಿ ನೀಡಲಾಯಿತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಬೆನ್ನಲ್ಲೇ ರೈಲ್ವೆ ಅಧಿಕಾರಿಗಳು ವಿಷಯ ತಿಳಿದು ಗಮನ ಸೆಳೆದಿದ್ದಾರೆ. ಗಲಾಟೆಯಲ್ಲಿ ತೊಡಗಿರುವ ನೌಕರರನ್ನು ಗುರುತಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ನಿರೀಕ್ಷೆ ಇದೆ. ಆಗ್ರಾ ಗಾರ್ಡ್ ರಾಘವೇಂದ್ರ ಸಾರಸ್ವತ್ ಅವರ ದೂರಿನ ಆಧಾರದ ಮೇಲೆ ಅಪರಿಚಿತ ರೈಲ್ವೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಆರ್‌ಪಿ ಗಂಗಾಪುರ ಸಿಟಿ ಎಸ್‌ಎಚ್‌ಒ ದಲ್ಬೀರ್ ಸಿಂಗ್ ಹೇಳಿದ್ದಾರೆ.