GOAT ಭರ್ಜರಿ ಯಶಸ್ಸಿನ ನಡುವೆ ದಳಪತಿ ವಿಜಯ್​ಗೆ ಮತ್ತೊಂದು ಗುಡ್​ನ್ಯೂಸ್; 2026ರ ಅಖಾಡಕ್ಕೆ ಸಿದ್ಧ, ಏನದು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Goat ಭರ್ಜರಿ ಯಶಸ್ಸಿನ ನಡುವೆ ದಳಪತಿ ವಿಜಯ್​ಗೆ ಮತ್ತೊಂದು ಗುಡ್​ನ್ಯೂಸ್; 2026ರ ಅಖಾಡಕ್ಕೆ ಸಿದ್ಧ, ಏನದು?

GOAT ಭರ್ಜರಿ ಯಶಸ್ಸಿನ ನಡುವೆ ದಳಪತಿ ವಿಜಯ್​ಗೆ ಮತ್ತೊಂದು ಗುಡ್​ನ್ಯೂಸ್; 2026ರ ಅಖಾಡಕ್ಕೆ ಸಿದ್ಧ, ಏನದು?

Thalapathy Vijay: ನಟ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ರಾಜಕೀಯ ಪಕ್ಷವಾಗಿ ಅಧಿಕೃತವಾಗಿ ನೋಂದಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ.

ನಟ ವಿಜಯ್
ನಟ ವಿಜಯ್

ನವದೆಹಲಿ: ಬಹು ನಿರೀಕ್ಷಿತ ಚಿತ್ರ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT) ಉತ್ತಮ ಪ್ರತಿಕ್ರಿಯೆಯೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ದೋಚುತ್ತಿರುವುದರ ಮಧ್ಯೆ ನಟ ದಳಪತಿ ವಿಜಯ್ ಮತ್ತು ತನ್ನ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ವಿಜಯ್ ಅವರು ಕಟ್ಟಿದ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಇನ್ಮುಂದೆ ಚುನಾವಣಾ ಕಣದಲ್ಲಿ ಸ್ಪರ್ಧಿಸಬಹುದು ಎಂದು ಭಾರತದ ಚುನಾವಣಾ ಆಯೋಗ (ಇಸಿಐ) ಅನುಮತಿ ನೀಡಿದೆ. ಟಿವಿಕೆ ಪಕ್ಷವು ಅಧಿಕೃತವಾಗಿ ನೋಂದಾಯಿಸಿದೆ. ಇನ್ಮುಂದೆ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಬಹುದು ಎಂದು ಘೋಷಿಸಿದೆ.

ತಮಿಳು ಸೂಪರ್‌ಸ್ಟಾರ್ ವಿಜಯ್ ಅವರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ತಮ್ಮ ಪಕ್ಷ ಇದೀಗ ಅಧಿಕೃತವಾಗಿ ಯುದ್ಧಕ್ಕೆ ಸಿದ್ಧವಾಗಿದ್ದು, ತಮಿಳುನಾಡಿನ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ನಟ ಘೋಷಿಸಿದ್ದಾರೆ. ತಮಿಳುನಾಡು ವೆಟ್ರಿ ಕಳಗಂ ಅನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಲು ಇದೇ ವರ್ಷ ಫೆಬ್ರವರಿ 2ರಂದು ಭಾರತದ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೆ. ಅದನ್ನು ಚುನಾವಣಾ ಆಯೋಗ ಕಾನೂನುಬದ್ಧವೆಂದು ಪರಿಗಣಿಸಿ ಅಧಿಕೃತವಾಗಿ ರಾಜಕೀಯದಲ್ಲಿ ಭಾಗವಹಿಸಲು ಅನುಮತಿ ನೀಡಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ ಎಂದಿರುವ ವಿಜಯ್, ಮುಂದಿನ ಸವಾಲುಗಳತ್ತ ಆರಂಭಿಕ ಹೆಜ್ಜೆಯಾಗಿ ಪಕ್ಷಕ್ಕೆ ಈಗ ಮೊದಲ ಬಾಗಿಲು ತೆರೆದಿದೆ. ಈ ಹಿನ್ನೆಲೆಯಲ್ಲಿ ಪಕ್ಷವು ರಾಜ್ಯ ಸಮ್ಮೇಳನಕ್ಕೆ ಸಿದ್ಧತೆ ಪ್ರಾರಂಭಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಗೆ ಕಾಯಿರಿ ಎಂದು ಸೂಚಿಸಿದ್ದಾರೆ. ಅಡೆತಡೆಗಳನ್ನು ಮುರಿಯೋಣ, ಧ್ವಜವನ್ನು ಎತ್ತೋಣ, ನೀತಿಯ ಜ್ಯೋತಿಯನ್ನು ಹೊತ್ತೊಯ್ಯೋಣ ಮತ್ತು ತಮಿಳುನಾಡಿನ ಜನರ ಪ್ರಮುಖ ರಾಜಕೀಯ ಪಕ್ಷವಾಗಿ ತಮಿಳಗ ವೆಟ್ರಿ ಕಳಗಂಗೆ ಬರೋಣ ಎಂದು ನಟ ಕಂ ರಾಜಕಾರಣಿ ಹೇಳಿದ್ದಾರೆ.

ಚಿತ್ರವೊಂದಕ್ಕೆ 100 ಕೋಟಿಗೂ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ವಿಜಯ್ ಅವರಿಗೆ ತಮ್ಮ ಪಕ್ಷ ನೋಂದಾವಣಿಯಾದರ ಜೊತೆಗೆ ಮತ್ತೊಂದು ಗುಡ್​ನ್ಯೂಸ್ ಕೂಡ ಸಿಕ್ಕಿದೆ. ಈ ರೋಚಕ ಸನ್ನಿವೇಶದಲ್ಲಿ ವಿಕ್ರವಾಂಡಿಯಲ್ಲಿ ನಡೆಯಲಿರುವ ಪಕ್ಷದ ಮೊದಲ ಸಮಾವೇಶಕ್ಕೆ ಪೊಲೀಸರು ಅನುಮತಿ ನೀಡಿದ್ದಾರೆ. ಈ ಬೃಹತ್ ಕಾರ್ಯಕ್ರಮ ಸೆಪ್ಟೆಂಬರ್​ 23ರಂದು ನಡೆಯಲಿದ್ದು, ಷರತ್ತುಬದ್ಧ ಅನುಮತಿ ನೀಡಲಾಗಿದೆ. ಆ ಮೂಲಕ ಒಂದೇ ಏಟಿಗೆ ಎರಡು ಹಣ್ಣು ಉದುರಿಸಿದ್ದಾರೆ.

ಪಕ್ಷ ಆರಂಭಿಸಿದ್ದು ಯಾವಾಗ? ಇತ್ತೀಚೆಗೆ ಪಕ್ಷದ ಧ್ವಜ ಬಿಡುಗಡೆ

ಜೋಸೆಫ್ ವಿಜಯ್ ಫೆಬ್ರವರಿ 2ರಂದು ತಮ್ಮ ರಾಜಕೀಯ ಪಕ್ಷವನ್ನು ಘೋಷಿಸಿದರು. 2024ರ ಲೋಕಸಭಾ ಚುನಾವಣೆಯ ಬದಲಿಗೆ 2026ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅವರು ಹೇಳಿದ್ದರು. ಅವರು ಇದೇ ಆಗಸ್ಟ್ 22 ರಂದು ರಾಜಕೀಯ ಪಕ್ಷಕ್ಕೆ ಧ್ವಜ ಮತ್ತು ಚಿಹ್ನೆಯನ್ನು ಅನಾವರಣಗೊಳಿಸಿದರು. ನಂತರ ಅದನ್ನು ಪನೈಯೂರ್ ಪಕ್ಷದ ಕಚೇರಿಯಲ್ಲಿ ಹಾರಿಸಿದರು. ರಾಜಕೀಯ ಪಕ್ಷಕ್ಕಾಗಿ ಅಧಿಕೃತ ಹಾಡನ್ನು ಬಿಡುಗಡೆ ಮಾಡಿದರು. 2 ಬಣ್ಣದ ಮರೂನ್​​ ಮತ್ತು ಹಳದಿ ಧ್ವಜವು ಎರಡೂ ಬದಿಗಳಲ್ಲಿ ಆನೆಗಳನ್ನು ಮತ್ತು ಮಧ್ಯದಲ್ಲಿ ನಕ್ಷತ್ರಗಳಿಂದ ಸುತ್ತುವರೆದಿರುವ ನವಿಲನ್ನು ಹೊಂದಿದೆ. ತಮಿಳುನಾಡಿನ ಕಲ್ಯಾಣಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ ನಟ, ‘ಇನ್ನು ಮುಂದೆ ತಮಿಳುನಾಡು ಉತ್ತಮವಾಗಿರುತ್ತದೆ. ಗೆಲುವು ನಿಶ್ಚಿತ’ ಎಂದಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.