ಪಶ್ಚಿಮ ಬಂಗಾಳ ಲೋಕಸಭಾ ಫಲಿತಾಂಶ; ತೃಣಮೂಲ ಕಾಂಗ್ರೆಸ್‌ vs ಬಿಜೆಪಿ ನಡುವೆ ನೇರ ಹಣಾಹಣಿಯ ಚಿತ್ರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಶ್ಚಿಮ ಬಂಗಾಳ ಲೋಕಸಭಾ ಫಲಿತಾಂಶ; ತೃಣಮೂಲ ಕಾಂಗ್ರೆಸ್‌ Vs ಬಿಜೆಪಿ ನಡುವೆ ನೇರ ಹಣಾಹಣಿಯ ಚಿತ್ರಣ

ಪಶ್ಚಿಮ ಬಂಗಾಳ ಲೋಕಸಭಾ ಫಲಿತಾಂಶ; ತೃಣಮೂಲ ಕಾಂಗ್ರೆಸ್‌ vs ಬಿಜೆಪಿ ನಡುವೆ ನೇರ ಹಣಾಹಣಿಯ ಚಿತ್ರಣ

ಲೋಕಸಭಾ ಚುನಾವಣೆ ಎದುರಾದಾಗ ಸಹಜವಾಗಿ ಪಕ್ಷಗಳ ಗಮನ ಬಹುತೇಕ ಹೆಚ್ಚು ಸ್ಥಾನಗಳಿರುವ ರಾಜ್ಯಗಳ ಮೇಲಿರುತ್ತವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹೀಗೆ. ಪಶ್ಚಿಮ ಬಂಗಾಳದಲ್ಲಿ ಗೆಲ್ಲಲೇ ಬೇಕು ಎಂಬ ಹಟದೊಂದಿಗೆ ಬಿಜೆಪಿ ಮುನ್ನುಗ್ಗುತ್ತಿದ್ದು, ಈ ಸಲದ ಫಲಿತಾಂಶದ ವಿವರ ಹೀಗಿದೆ ನೋಡಿ.

ಪಶ್ಚಿಮ ಬಂಗಾಳ ಲೋಕಸಭಾ ಫಲಿತಾಂಶ; ತೃಣಮೂಲ ಕಾಂಗ್ರೆಸ್‌ vs ಬಿಜೆಪಿ ನಡುವೆ ನೇರ ಹಣಾಹಣಿ,
ಪಶ್ಚಿಮ ಬಂಗಾಳ ಲೋಕಸಭಾ ಫಲಿತಾಂಶ; ತೃಣಮೂಲ ಕಾಂಗ್ರೆಸ್‌ vs ಬಿಜೆಪಿ ನಡುವೆ ನೇರ ಹಣಾಹಣಿ,

ಕೋಲ್ಕತ: ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗುತ್ತಿರುವ ಈ ಹೊತ್ತಿನಲ್ಲಿ, ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಫಲಿತಾಂಶ ಸಹಜವಾಗಿಯೇ ಕುತೂಹಲ ಕೆರಳಿಸುವಂಥದ್ದು. ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿದ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಮೂರನೇ ಸ್ಥಾನದಲ್ಲಿದೆ. 42 ಸ್ಥಾನಗಳ ಪೈಕಿ ಈ ಬಾರಿ ತೃಣಮೂಲ ಕಾಂಗ್ರೆಸ್ ಪಕ್ಷ 29 ಗಳಲ್ಲಿ, ಬಿಜೆಪಿ 12, ಕಾಂಗ್ರೆಸ್ 1ರಲ್ಲಿ ಗೆಲುವು ದಾಖಲಿಸಿವೆ.

ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳಿಗೆ ಏಳು ಹಂತಗಳಲ್ಲಿ ಅಂದರೆ ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 20, ಮೆ 25 ಮತ್ತು ಜೂನ್ 1 ರಂದು ಮತದಾನ ನಡೆಯಿತು. ಈಶಾನ್ಯ ರಾಜ್ಯಗಳಂತೆ ಹಿಂದೊಮ್ಮೆ ಎಡಪಕ್ಷ ಪ್ರಾಬಲ್ಯವಿದ್ದ, ಈಗ ತೃಣಮೂಲ ಕಾಂಗ್ರೆಸ್ ಪ್ರಾಬಲ್ಯದ ಪಶ್ಚಿಮ ಬಂಗಾಳದಲ್ಲಿ ಪಕ್ಷ ಸಂಘಟಿಸಬೇಕು ಎಂಬುದು ಬಿಜೆಪಿಯ ಮಹತ್ವಾಕಾಂಕ್ಷೆಯಾಗಿತ್ತು. ಇದಕ್ಕಾಗಿ ಸಾಕಷ್ಟು ವಿರೋಧಗಳ ನಡುವೆ ತಳಮಟ್ಟದಲ್ಲಿ ಕೆಲಸ ಮಾಡಿದ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ತಂಡ ಅದರ ಫಲವನ್ನು ಕಳೆದ 10 ವರ್ಷಗಳ ಅವಧಿಯಲ್ಲಿ ಕಾಣತೊಡಗಿದೆ. ಇದು ತೃಣಮೂಲ ಕಾಂಗ್ರೆಸ್‌ ಸಂಕಟ ಮತ್ತು ಕಳವಳಕ್ಕೆ ಕಾರಣ. ಶಾರದಾ ಚಿಟ್ ಫಂಡ್ ಸೇರಿ ಹಲವು ಹಗರಣ, ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳು ಬಿಜೆಪಿಗೆ ಪಕ್ಷ ಸಂಘಟಿಸಲು ಅನುವು ಮಾಡಿಕೊಟ್ಟವು. ಈ ಸಲದ ಚುನಾವಣೆಯ ಫಲಿತಾಂಶದಲ್ಲೂ ಅದು ಕಾಣಸಿಕ್ಕಿದೆ.

ಪಶ್ಚಿಮ ಬಂಗಾಳದ ಹೈಪ್ರೊಫೈಲ್‌ ಕ್ಷೇತ್ರಗಳು

ಬಹರಾಂಪುರ - ಯೂಸುಫ್ ಪಠಾಣ್ (ಎಐಟಿಸಿ)

ಬಹರಾಂಪುರ - ಅಧೀರ್ ರಂಜನ್ ಚೌಧರಿ (ಕಾಂಗ್ರೆಸ್)

ಕೂಛ್ ಬೆಹರ್ - ನಿಶಿತ್ ಪ್ರಾಮಾಣಿಕ್ (ಬಿಜೆಪಿ)

ಕೃಷ್ಣ ನಗರ - ಮಹುವಾ ಮೊಹಿತ್ರಾ (ಎಐಟಿಸಿ)

ತಮ್ಲುಕ್ - ಅಭಿಜಿತ್ ಗಂಗೋಪಾಧ್ಯಾಯ (ಬಿಜೆಪಿ)

ಅಸನ್‌ಸೋಲ್ - ಶತ್ರುಘ್ನ್ ಸಿನ್ಹಾ (ಎಐಟಿಸಿ)

ಡೈಮಂಡ್ ಹಾರ್ಬರ್ - ಅಭಿಷೇಕ್ ಬ್ಯಾನರ್ಜಿ (ಎಐಟಿಸಿ)

ಲೋಕಸಭಾ ಚುನಾವಣಾ ಪ್ರಚಾರದ ಮುಖ್ಯ ವಿ‍ಷಯಗಳ ಕಡೆಗೆ ಗಮನಹರಿಸಿದರೆ, ಪಶ್ಚಿಮ ಬಂಗಾಳದ ಚುನಾವಣೆಗಳಲ್ಲಿ ಭ್ರಷ್ಟಾಚಾರದ ವಿಷಯವು ಎಂದಿಗೂ ನಿರ್ಣಾಯಕ ಅಂಶವಾಗಿರಲಿಲ್ಲ. ಈ ಬಾರಿ ಚುನಾವಣಾ ಭಾಷಣಗಳಲ್ಲಿ ಭ್ರಷ್ಟಾಚಾರ ಮತ್ತು ಸಂದೇಶಖಲಿ ಪ್ರಕರಣ ಪ್ರಾಬಲ್ಯ ಹೊಂದಿದ್ದವು. ಲಕ್ಷ್ಮೀರ್ ಭಂಡಾರ್‌ನಂತಹ ಕಲ್ಯಾಣ ಯೋಜನೆಗಳು ಇನ್ನೂ ತೃಣಮೂಲ ಕಾಂಗ್ರೆಸ್‌ಗೆ ಲಾಭಾಂಶವನ್ನು ನೀಡುತ್ತವೆ ಎಂದು ನಿರೀಕ್ಷಿಸಲಾಗಿದೆ. ರಾಷ್ಟ್ರೀಯ ಸಮಸ್ಯೆಗಳು ಚುನಾವಣಾ ಭಾಷಣಗಳಲ್ಲಿ ಅಷ್ಟಾಗಿ ಬಳಕೆಗೆ ಬರಲಿಲ್ಲ.

ಲೋಕಸಭಾ ಚುನಾವಣೆ ಮತ್ತು ಪಶ್ಚಿಮ ಬಂಗಾಳದ ರಾಜಕೀಯ ಚಿತ್ರಣ

ಪಶ್ಚಿಮ ಬಂಗಾಳದಲ್ಲಿ ಎಡರಂಗದ ಪ್ರಭಾವ ಕುಸಿದ ಬಳಿಕ ಮೇಲೆದ್ದ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್‌ ಈಗ ಮೂರನೇ ಅವಧಿಗೆ ಆಡಳಿತ ನಡೆಸುತ್ತಿದೆ. ಮೊದಲ ಅವಧಿಯ ಆಡಳಿತದವೇಳೆ ತೃಣಮೂಲ ಕಾಂಗ್ರೆಸ್‌ಗೆ 2014ರ ಲೋಕಸಭಾ ಚುನಾವಣೆಯಲ್ಲಿ 34 ಸ್ಥಾನಗಳು ಬಂದಿದ್ದವು. ನಾಲ್ಕು ಕಾಂಗ್ರೆಸ್‌ಗೆ ಎರಡು ಬಿಜೆಪಿ ಮತ್ತು ಎರಡು ಸಿಪಿಐ(ಎಂ)ಗೆ ಹೋಗಿತ್ತು. 2019 ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 12 ಸ್ಥಾನ ಕಳೆದುಕೊಂಡು 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪ್ರಬಲ ಪ್ರತಿಸ್ಪರ್ಧಿಯಾಗಿ ಬಿಜೆಪಿ ಬೆಳೆಯತೊಡಗಿದ್ದು 16 ಸ್ಥಾನಗಳನ್ನು ಹೆಚ್ಚಿಸಿಕೊಂಡು 18 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್‌ ಪಕ್ಷ ತನ್ನ ಹಿಂದಿನ 4 ಸ್ಥಾನಗಳ ಪೈಕಿ 2 ಅನ್ನು ಕಳೆದುಕೊಂಡು ಎರಡು ಸ್ಥಾನಗಳನ್ನು ಉಳಿಸಿಕೊಂಡಿತು. ಸಿಪಿಐ(ಎಂ) ಅಸ್ತಿತ್ವವನ್ನೆ ಕಳೆದುಕೊಂಡಿತು.

ಈ ಸಲದ ಲೋಕಸಭಾ ಚುನಾವಣೆ ಗಮನಿಸಿದರೆ ಪಶ್ಚಿಮ ಬಂಗಾಳದಲ್ಲಿ ಯಾವುದೇ ಅಲೆ ಸ್ಪಷ್ಟವಾಗಿ ಗೋಚರವಾಗಿಲ್ಲ. ಮತದಾರರ ಆಯ್ಕೆ ನಿಗೂಢವಾಗಿ ಉಳಿದಿತ್ತು. ಬಿಜೆಪಿ ಪ್ರಭಾವಿಯಾಗಿ ಹೊರಹೊಮ್ಮುತ್ತಿರುವುದು ಎರಡು ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿರುವ ಕಾರಣ, ಈ ಸಲದ ಚುನಾವಣೆ ಬಿಜೆಪಿ ಮಹತ್ವದ್ದಾಗಿತ್ತು. ಅದೇ ರೀತಿ ಪ್ರಾಬಲ್ಯ ಉಳಿಸಿಕೊಳ್ಳಲು ತೃಣಮೂಲ ಕಾಂಗ್ರೆಸ್‌ಗೆ ಕೂಡ ಅಷ್ಟೇ ಮಹತ್ವದ್ದಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆ ಪೂರ್ವದ ಅಭಿಪ್ರಾಯ ಸಮೀಕ್ಷೆ ಅಥವಾ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶಗಳ ವಿಚಾರದಲ್ಲಿ ರಾಜಕೀಯ ವೀಕ್ಷಕರು ಮತ್ತು ಭವಿಷ್ಯಶಾಸ್ತ್ರಜ್ಞರ ಭವಿಷ್ಯ ಮತ್ತು ವಿಶ್ಲೇಷಣೆಯಲ್ಲಿ ಯಾವುದೇ ಏಕರೂಪತೆ ಕಂಡುಬರಲಿಲ್ಲ. ಈ ಸಂಖ್ಯೆಗಳು ಎರಡು ವಿಪರೀತ ಸಾಧ್ಯತೆಗಳ ನಡುವೆ ಇದ್ದವು. ಕೆಲವರು ಬಿಜೆಪಿ ಸ್ವೀಪ್, ಇತರರು ಸೋಲಿನ ಬಗ್ಗೆ ಮನವರಿಕೆ ಮಾಡುತ್ತಾರೆ; ಉತ್ತಮ ಅನೇಕರು ಯಾವುದೇ ರೀತಿಯಲ್ಲಿ ಹೋಗಬಹುದಾದ ನಿಕಟ ಸ್ಪರ್ಧೆಯನ್ನು ಊಹಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆ ಚಿತ್ರಣ

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲಕ ಕಾಂಗ್ರೆಸ್ (ಎಐಟಿಸಿ) ಮತ್ತು ಕೇಂದ್ರದ ಆಡಳಿತಾರೂಢ ಬಿಜೆಪಿ ಎಲ್ಲ 42 ಸ್ಥಾನಗಳಲ್ಲೂ ಸ್ಪರ್ಧಿಸಿದ್ದವು. ಇಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ಹೆಚ್ಚು. ಎಡಪಕ್ಷಗಳ ಪ್ರಾಬಲ್ಯ ಕಡಿಮೆಯಾದಂತೆ, ತೃಣಮೂಲ ಕಾಂಗ್ರೆಸ್ ಪಕ್ಷ ಇಲ್ಲಿ ಪ್ರಾಬಲ್ಯ ಸಾಧಿಸಿ ಆಡಳಿತ ನಡೆಸುತ್ತಿದೆ.

ಇಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಎಡ ರಂಗ ಪಕ್ಷಗಳು ಸೇರಿ ಸೆಕ್ಯುಲರ್ ಡೆಮಾಕ್ರಟಿಕ್ ಅಲಯನ್ಸ್ ಮಾಡಿಕೊಂಡು ಲೋಕಸಭೆಗೆ ಸ್ಪರ್ಧಿಸಿವೆ. ಇಂಡಿಯಾ ಗುಂಪು ಇಲ್ಲಿಲ್ಲ. ಸೆಕ್ಯುಲ್ ಡೆಮಾಕ್ರಟಿಕ್ ಅಲಯನ್ಸ್‌ನಲ್ಲಿರುವ ಸಿಪಿಐ(ಎಂ) 23, ಕಾಂಗ್ರೆಸ್‌ 12, ರೆವೊಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 3, ಸಿಪಿಐ 2, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್‌ 2 ರಲ್ಲಿ ಸ್ಪರ್ಧಿಸಿವೆ.

ಇದಲ್ಲದೆ, ಸೋಷಿಯಲಿಷ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್‌) 42, ಇಂಡಿಯನ್ ಸೆಕ್ಯೂಲರ್ ಫ್ರಂಟ್‌ 17, ಬಿಎಸ್‌ಪಿ 5, ಎಐಎಂಐಎಂ 4 ಸ್ಥಾನಗಳಲ್ಲಿ ಸ್ಪರ್ಧಿಸಿವೆ.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.