Bill Gates Firm: ಮಹಿಳಾ ಅಭ್ಯರ್ಥಿಗೆ ಉದ್ಯೋಗ ಸಂದರ್ಶನದಲ್ಲಿ ಅನುಚಿತ ಅಶ್ಲೀಲ ಲೈಂಗಿಕ ಪ್ರಶ್ನೆಗಳನ್ನು ಕೇಳಿದ ಬಿಲ್ ಗೇಟ್ಸ್ ಕಂಪನಿ
Bill Gates firm comes under fire: ಉದ್ಯೋಗ ಸಂದರ್ಶನವೊಂದರಲ್ಲಿ ಬಿಲ್ ಗೇಟ್ಸ್ ಕಂಪನಿಯೊಂದು ಮಹಿಳಾ ಅಭ್ಯರ್ಥಿಗಳಿಗೆ ಅನುಚಿತ ಅಶ್ಲೀಲ ಲೈಂಗಿಕ ಪ್ರಶ್ನೆಗಳನ್ನು ಕೇಳಿದ ಘಟನೆ ನಡೆದಿದೆ. ಅಭ್ಯರ್ಥಿಗಳ ಡ್ರಗ್ಸ್ ಸೇವನೆ ಇತಿಹಾಸ, ಅಶ್ಲೀಲ ಚಿತ್ರಗಳ ವೀಕ್ಷಣೆಯ ಅಭ್ಯಾಸದ ಕುರಿತು ಕೇಳಲಾಗಿತ್ತು.
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಖಾಸಗಿ ಆಫೀಸ್‌ವೊಂದರಲ್ಲಿ ನಡೆದ ಉದ್ಯೋಗ ಸಂದರ್ಶನದಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರಿಗೆ ಲೈಂಗಿಕ ಅಂಶವುಳ್ಳ ಅಶ್ಲೀಲ ಪ್ರಶ್ನೆ ಕೇಳಿರುವುದು ಬೆಳಕಿಗೆ ಬಂದಿದೆ. ಕಾನ್ಸೆಂಟ್ರಿಕ್ ಅಡ್ವೈಸರ್ಸ್ ಎಂಬ ಭದ್ರತಾ ಸಲಹಾ ಸಂಸ್ಥೆಯು ಬಿಲ್ ಗೇಟ್ಸ್ ಕಂಪನಿಗಾಗಿ ಉದ್ಯೋಗ ಸಂದರ್ಶನ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಅಶ್ಲೀಲ ಪ್ರಶ್ನೆ ಕೇಳಲಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಈ ಕಂಪನಿಯು ಅಭ್ಯರ್ಥಿಗಳ ಹಿನ್ನೆಲೆ ಪರಿಶೀಲಿಸುವ ಸಂದರ್ಭದಲ್ಲಿ ಅನುಚಿತ ಪ್ರಶ್ನೆಗಳನ್ನು ಕೇಳಿತ್ತು. ಈ ರೀತಿಯ ಪ್ರಶ್ನೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಕೇಳಲಾಗಿತ್ತು ಎಂದು ವರದಿ ತಿಳಿಸಿದೆ.
ಏನು ಪ್ರಶ್ನೆ ಕೇಳಲಾಗಿತ್ತು?
ಮಹಿಳಾ ಅಭ್ಯರ್ಥಿಗಳಿಗೆ ತಮ್ಮ ಹಿಂದಿನ ಲೈಂಗಿಕ ಅನುಭವಗಳ ಕುರಿತು ಮಾಹಿತಿ ನೀಡುವಂತೆ ಪ್ರಶ್ನೆ ಕೇಳಲಾಗಿತ್ತು. ಅಂದರೆ, ಅಭ್ಯರ್ಥಿಗಳ ಡ್ರಗ್ಸ್ ಸೇವನೆ ಇತಿಹಾಸ, ಅಶ್ಲೀಲ ಚಿತ್ರಗಳ ವೀಕ್ಷಣೆಯ ಅಭ್ಯಾಸ ಮತ್ತು ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಫೋಟೊಗಳನ್ನು ಇಟ್ಟುಕೊಂಡಿದ್ದಾರೆಯೇ ಇತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಕೆಲವು ಮಹಿಳಾ ಅಭ್ಯರ್ಥಿಗಳು ತಿಳಿಸಿದ ಪ್ರಕಾರ ಅವರಲ್ಲಿ "ನೀವು ಡಾಲರ್‌ಗಾಗಿ ಡ್ಯಾನ್ಸ್ ಮಾಡಿದ್ದೀರಾ?" "ಮದುವೆಯಾಗಿದ್ದರೂ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀರಾ?" ಇತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಕೆಲವು ಮಹಿಳಾ ಅಭ್ಯರ್ಥಿಗಳು ತಿಳಿಸಿದ್ದಾರೆ.
ಬಿಲ್ ಗೇಟ್ಸ್ ವಕ್ತಾರರ ಪ್ರತಿಕ್ರಿಯೆ
ಈ ಕುರಿತು ಬಿಲ್ ಗೇಟ್ಸ್ ಕಂಪನಿಯ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ. "ಪ್ರತಿ ಅಭ್ಯರ್ಥಿಗೆ ಅತ್ಯಂತ ಗೌರವದಿಂದ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಕುರಿತು ಸಂಸ್ಥೆಯು ಸೇವಾ ಪೂರೈಕೆದಾರರು ಸೇರಿದಂತೆ ಎಲ್ಲರಿಗೂ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ. ಈ ನೀತಿಯನ್ನು, ತತ್ತ್ವವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಈ ನಿಯಮ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಒಂದೇ ಆಗಿರುತ್ತದೆ" ಎಂದು ಬಿಲ್ ಗೇಟ್ಸ್ ವಕ್ತಾರರು ತಿಳಿಸಿದ್ದಾರೆ.
ಗೇಟ್ಸ್ ವೆಂಚರ್‌ನ ಪ್ರತಿಕ್ರಿಯೆ
"ಈ ರೀತಿ ಪ್ರಶ್ನೆ ಕೇಳಿದ್ದು ನಮ್ಮ ಅರಿವಿಗೆ ಬಂದಿಲ್ಲ. ಆದರೆ, ಈ ರೀತಿ ಪ್ರಶ್ನೆ ಕೇಳುವುದು ತಪ್ಪು. ಈ ರೀತಿ ಪ್ರಶ್ನೆ ಅಲ್ಲ, ಒಂದು ಲೈನ್, ಪದ ಹೇಳುವುದು ಕೂಡ ಅನುಚಿತ. ಅದಕ್ಕೆ ಕಂಪನಿ ಅವಕಾಶ ನೀಡುವುದಿಲ್ಲ. ಅದು ಗೇಟ್ಸ್ ವೆಂಚರ್ಸ್‌ನ ನಿಯಮಗಳ ಉಲ್ಲಂಘನೆ. ಇದು ಗುತ್ತಿಗೆದಾರರ ಜತೆ ಮಾಡಿರುವ ಒಪ್ಪಂದದ ಉಲ್ಲಂಘನೆಯಾಗಿರುತ್ತದೆ" ಎಂದು ಗೇಟ್ಸ್ ವೆಂಚರ್‌ನ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ.
"ನಮ್ಮ ಹದಿನೈದು ವರ್ಷಗಳ ಇತಿಹಾಸದಲ್ಲಿ ಯಾವುದೇ ವೆಂಡರ್ ಅಥವಾ ಸಂದರ್ಶಕರು ಈ ರೀತಿ ಪ್ರಶ್ನೆ ಕೇಳಿರಲಿಲ್ಲ. ನಾವು ನಮ್ಮ ದಾಖಲೆಗಳ ಪರಿಶೀಲನೆ ನಡೆಸುತ್ತೇವೆ, ಈ ರೀತಿ ನಡೆದ ಘಟನೆಯ ಕುರಿತು ತನಿಖೆ ನಡೆಸುತ್ತೇವೆ" ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂದರ್ಶನಕರ ಪ್ರತಿಕ್ರಿಯೆ
ಗೇಟ್ಸ್ ಕಂಪನಿಯ ಸಂದರ್ಶನದ ಹೊಣೆ ಹೊತ್ತಿದ್ದ ಕಾನ್‌ಸೆಂಟ್ರಿಕ್ ಅಡ್ವೈಸರ್ ಈ ದೂರನ್ನು ಅಲ್ಲಗೆಳೆದಿದೆ. "ನಮ್ಮ ಉದ್ಯೋಗ ನೇಮಕಾತಿಯ ಸಂದರ್ಭದ ಹಿನ್ನೆಲೆ ಪರಿಶೀಲನೆಯು ಶೂನ್ಯ ಸಹಿಷ್ಣುತೆ ಹೊಂದಿರುತ್ತದೆ. ಇದೇ ಸಂದರ್ಭದಲ್ಲಿ ಉದ್ಯೋಗಿಗಳು ಸರಿಯಾದ ಮಾಹಿತಿಯನ್ನು ನೀಡದೆ ಇರುವ ಸಂದರ್ಭದಲ್ಲಿ ಅಭ್ಯರ್ಥಿಗಳ ಗೌರವಕ್ಕೆ ಧಕ್ಕೆಯಾಗದಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ" ಎಂದು ಕಂಪನಿ ಪ್ರತಿಕ್ರಿಯೆ ನೀಡಿದೆ.