ಸಂಜಯ್ ಸಿಂಗ್ ಆಯ್ಕೆ ವಿರೋಧ; ಪದ್ಮಶ್ರೀ ಮರಳಿಸುವುದಾಗಿ ಪ್ರಧಾನಿಗೆ ಪತ್ರ ಬರೆದ ಬಜರಂಗ್ ಪುನಿಯಾ
Bajrang Punia: ಭಾರತೀಯ ಕುಸ್ತಿ ಫೆಡರೇಷನ್ಗೆ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಆಯ್ಕೆ ವಿರೋಧಿಸಿ ಖ್ಯಾತ ಕುಸ್ತಿಪಟು ಬಜರಂಗ್ ಪೂನಿಯಾ ಪದ್ಮಶ್ರೀ ಪದಕ ವಾಪಸ್ ನೀಡುವುದಾಗಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Singh) ಅವರ ನಿಷ್ಠಾವಂತ ಆಪ್ತ ಸಂಜಯ್ ಸಿಂಗ್ರನ್ನು (Sanjay Singh) ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ (Bajrang Punia), ಶುಕ್ರವಾರ ತಮ್ಮ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಲು ನಿರ್ಧರಿಸಿದ್ದಾರೆ.
ಸಂಜಯ್ ಸಿಂಗ್ ಆಯ್ಕೆಯಾದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕುಸ್ತಿಪಟುಗಳ ಬಣವೊಂದು ತಿರುಗಿ ಬಿದ್ದಿದೆ. ಮಾಜಿ ಒಲಿಂಪಿಯನ್ ಸಾಕ್ಷಿ ಮಲಿಕ್ ನಿವೃತ್ತಿ ಘೋಷಿಸಿದರೆ, ವಿಶ್ವ ಚಾಂಪಿಯನ್ ಬಜರಂಗ್ ಪುನಿಯಾ ತಮಗೆ ಸಿಕ್ಕ ಪದ್ಮಶ್ರೀ ಮರಳಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿಗೆ ಹಿಂದಿರುಗಿಸುತ್ತಿದ್ದೇನೆ. ಇದನ್ನು ನಾನು ಹೇಳಲು ಬರೆದ ಪತ್ರವಷ್ಟೇ. ಇದು ನನ್ನ ಹೇಳಿಕೆ ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಜಯ್ ಸಿಂಗ್ ನೇಮಕದ ಬೆನ್ನಲ್ಲೇ ಕ್ರೀಡಾ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ.
ಸಂಜಯ್ ಅವರ ಆಯ್ಕೆಯ ನಂತರ ಸಾಕ್ಷಿ ಮಲಿಕ್, ಬಜರಂಗ್ ಮತ್ತು ವಿನೇಶ್ ಫೋಗಟ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಇದರಲ್ಲಿ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸಾಕ್ಷಿ, ಪ್ರತಿಭಟನೆಯ ಸಂಕೇತವಾಗಿ ಕ್ರೀಡೆಯನ್ನು ತ್ಯಜಿಸುವುದಾಗಿ ಘೋಷಿಸಿದರು. ಇದೀಗ ಬಜರಂಗ್ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಆತ್ಮೀಯ ಪ್ರಧಾನಿ ಮೋದಿ ಜೀ, ನಿಮ್ಮ ಆರೋಗ್ಯ ಚೆನ್ನಾಗಿರಲಿ. ನೀವು ಅನೇಕ ಕೆಲಸಗಳಲ್ಲಿ ನಿರತರಾಗಿರಬೇಕು. ಆದರೆ ನಿಮ್ಮ ಗಮನವನ್ನು ದೇಶದ ಕುಸ್ತಿಪಟುಗಳತ್ತ ಸೆಳೆಯಲು ನಾನು ಇದನ್ನು ಬರೆಯುತ್ತಿದ್ದೇನೆ. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದು ನಿಮಗೆ ತಿಳಿದಿರಬೇಕು ಎಂದು ಹೇಳಿದ್ದಾರೆ.
ಈ ವರ್ಷದ ಜನವರಿಯಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸಿದೆವು. ಅವರ ಪ್ರತಿಭಟನೆಗೆ ನಾನೂ ಕೈಜೋಡಿಸಿದ್ದೆ. ಸರ್ಕಾರ ಕಠಿಣ ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು. ಮೂರು ತಿಂಗಳ ನಂತರವೂ ಬ್ರಿಜ್ ಭೂಷಣ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್‌ನಲ್ಲಿ ನಾವು ಮತ್ತೆ ಬೀದಿಗಿಳಿದೆವು. ಆಗ ಮಾತ್ರ ಪೊಲೀಸರು ಕನಿಷ್ಠ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರಷ್ಟೆ. ಆದರೆ ಕ್ರಮ ಮಾತ್ರ ಜರುಗಿಸಿಲ್ಲ. ಜನವರಿಯಲ್ಲಿ 19 ದೂರುದಾರರಿದ್ದರು. ಏಪ್ರಿಲ್ ವೇಳೆಗೆ ಸಂಖ್ಯೆ 7ಕ್ಕೆ ಇಳಿದಿದೆ. ಇದರರ್ಥ ಬ್ರಿಜ್ ಭೂಷಣ್ 12 ಮಹಿಳಾ ಕುಸ್ತಿಪಟುಗಳ ಮೇಲೆ ತಮ್ಮ ಪ್ರಭಾವ ಬೀರಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಭೇಟಿಗೆ ಅನುಮತಿಯೇ ನೀಡಲಿಲ್ಲ
ಸಂಜಯ್ ಸಿಂಗ್ ಅವರ ಆಯ್ಕೆ ವಿರೋಧಿಸಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಲು ಮತ್ತು ಪತ್ರವನ್ನು ಹಸ್ತಾಂತರಿಸಲು ಸಂಸತ್ತನ್ನು ತಲುಪಲು ಬಜರಂಗ್ ಪ್ರಯತ್ನಿಸಿದರು. ಆದರೆ, ದೆಹಲಿ ಪೊಲೀಸ್ ಅಧಿಕಾರಿಗಳು ಕರ್ತವ್ಯ ಪಥದಲ್ಲಿ ಅವರನ್ನು ತಡೆದರು. ಈ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ ಬಜರಂಗ್.
ಪತ್ರ ನೀಡಲು ಪ್ರಯತ್ನಿಸಿದಾಗ ನನಗೆ ಅನುಮತಿ ನೀಡಲಿಲ್ಲ. ನೀವು ದಯವಿಟ್ಟು ಪ್ರಧಾನಿ ಅವರಿಗೆ ಈ ಪತ್ರವನ್ನು ಕಳುಹಿಸಿಕೊಡಿ. ನಾನು ಒಳಗೆ ಹೋಗಲು ಅನುಮತಿ ನೀಡುವುದಿಲ್ಲ. ನಾನು ಪ್ರತಿಭಟಿಸುತ್ತಿಲ್ಲ ಅಥವಾ ಆಕ್ರಮಣಕಾರಿಯಾಗಿ ವರ್ತಿಸುತ್ತಿಲ್ಲ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಡೆದ ಸಂದರ್ಭದಲ್ಲಿ ಹೇಳಿದ್ದೆ ಎಂದಿದ್ದಾರೆ.