Indonesia Open 2023: ಚಿರಾಗ್​ ಶೆಟ್ಟಿ-ಸಾತ್ವಿಕ್‌ ರಾಂಕಿರೆಡ್ಡಿ ಚಾರಿತ್ರಿಕ ಸಾಧನೆ; ಇಂಡೊನೇಷ್ಯಾ ಓಪನ್ ಪ್ರಶಸ್ತಿ ಗೆದ್ದ ಭಾರತದ ಜೋಡಿ
ಕನ್ನಡ ಸುದ್ದಿ  /  ಕ್ರೀಡೆ  /  Indonesia Open 2023: ಚಿರಾಗ್​ ಶೆಟ್ಟಿ-ಸಾತ್ವಿಕ್‌ ರಾಂಕಿರೆಡ್ಡಿ ಚಾರಿತ್ರಿಕ ಸಾಧನೆ; ಇಂಡೊನೇಷ್ಯಾ ಓಪನ್ ಪ್ರಶಸ್ತಿ ಗೆದ್ದ ಭಾರತದ ಜೋಡಿ

Indonesia Open 2023: ಚಿರಾಗ್​ ಶೆಟ್ಟಿ-ಸಾತ್ವಿಕ್‌ ರಾಂಕಿರೆಡ್ಡಿ ಚಾರಿತ್ರಿಕ ಸಾಧನೆ; ಇಂಡೊನೇಷ್ಯಾ ಓಪನ್ ಪ್ರಶಸ್ತಿ ಗೆದ್ದ ಭಾರತದ ಜೋಡಿ

Indonesia Open 2023: ಇಂಡೋನೇಷ್ಯಾದ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ಮಲೇಷ್ಯಾವನ್ನು ಮಣಿಸುವ ಮೂಲಕ ಭಾರತದ ಸಾತ್ವಿಕ್–ಚಿರಾಗ್ ಜೋಡಿ ಐತಿಹಾಸಿಕ ದಾಖಲೆ ಬರೆದಿದೆ.

ಚಿರಾಗ್​ ಶೆಟ್ಟಿ-ಸಾತ್ವಿಕ್‌ ರಾಂಕಿರೆಡ್ಡಿ ಚಾರಿತ್ರಿಕ ಸಾಧನೆ
ಚಿರಾಗ್​ ಶೆಟ್ಟಿ-ಸಾತ್ವಿಕ್‌ ರಾಂಕಿರೆಡ್ಡಿ ಚಾರಿತ್ರಿಕ ಸಾಧನೆ

ಭಾರತದ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಯುವ ಬ್ಯಾಡ್ಮಿಂಟನ್ ತಾರೆಗಳಾದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ (Chirag Shetty) ಜೋಡಿ ಚರಿತ್ರೆಯ ಪುಟಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದೆ. ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಬ್ಯಾಡ್ಮಿಂಟನ್ ಸೂಪರ್-1000 ಫೈನಲ್​ ಪಂದ್ಯದಲ್ಲಿ (Indonesia Open 2023) ಅಮೋಘ ಜಯ ಸಾಧಿಸಿ, ಚಾರಿತ್ರಿಕ ಸಾಧನೆ ಮಾಡಿದೆ.

ಮಲೇಷ್ಯಾ ಜೋಡಿಯನ್ನು ಸೋಲಿಸಿದ ಭಾರತದ ಜೋಡಿ

ಇಂಡೋನೇಷ್ಯಾ ಓಪನ್​​ ಬ್ಯಾಡ್ಮಿಂಟನ್​ ಟೂರ್ನಿಯ ಡಬಲ್ಸ್​ ವಿಭಾಗದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತದ ಮೊದಲ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆಗೆ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಪಾತ್ರರಾಗಿದ್ದಾರೆ. ಫೈನಲ್​​ನಲ್ಲಿ 2 ನೇರ ಗೇಮ್​​ಗಳಿಂದ ಮಲೇಷ್ಯಾದ ಆ್ಯರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕಾ ಜೋಡಿ (Aaron Chia and Wooi Yik Soh) ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು.

2022ರಿಂದ ಪದಕಗಳ ಬೇಟೆ

ಇಂಡೋನೇಷ್ಯಾ ಓಪನ್​​​ ಫೈನಲ್​​ನಲ್ಲಿ ವಿಶ್ವದ 6ನೇ ಶ್ರೇಯಾಂಕದಲ್ಲಿ ಇರುವ ಭಾರತದ ಈ ಜೋಡಿ, 2022ರಿಂದ ಪದಕಗಳ ಬೇಟೆಯಾಡಿದೆ. 2022ರಲ್ಲಿ ಜರುಗಿದ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಈ ಜೋಡಿ, ಅದೇ ವರ್ಷ ನಡೆದ ವಿಶ್ವ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ ಕಂಚಿಗೆ ಮುತ್ತಿಕ್ಕಿತ್ತು. ಕಳೆದ ವರ್ಷವೇ ನಡೆದ ಥಾಮಸ್​ ಕಪ್​ ಟೂರ್ನಿಯಲ್ಲೂ ಜಯಿಸಿದ ಭಾರತ ತಂಡದಲ್ಲಿ ಈ ಜೋಡಿಯೂ ಇತ್ತು.

ಅಲ್ಲದೆ, ಇತ್ತೀಚೆಗೆ ಏಷ್ಯನ್​ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​​​​ನಲ್ಲೂ ಗೋಲ್ಡ್​ ಜಯಿಸಿದ್ದರು ಇವರು ಎಂಬುದು ವಿಶೇಷ. ಇಂಡೋನೇಷ್ಯಾ ಓಪನ್‌ನ ಸೂಪರ್-1000 ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿ ಎನಿಸಿದೆ. ಇದಕ್ಕೂ ಮೊದಲು 2010, 2012ರಲ್ಲಿ ಸೈನಾ ನೆಹ್ವಾಲ್ ಮತ್ತು 2017ರಲ್ಲಿ ಕಿಡಂಬಿ ಶ್ರೀಕಾಂತ್ ಈ ಹಿಂದೆ ಜಕಾರ್ತಾದಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು.

ಆಕ್ರಮಣಕಾರಿ ಆಟ

ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಚಿರಾಗ್​​-ಸಾತ್ವಿಕ್​, ನಿಧಾನ ಆರಂಭ ಒದಗಿಸಿದರು. ಆರಂಭಿಕ ಸಮಸ್ಯೆಯಿಂದ ಹೊರ ಬಂದ ಇವರು, ಅಗ್ರೆಸ್ಸಿವ್​ ಆಟದತ್ತ ಹೆಜ್ಜೆ ಹಾಕಿದರು. ಪರಿಣಾಮ ಎದುರಾಳಿ ಜೋಡಿ, ಉಸಿದೆತ್ತದಂತೆ ಮಾಡಿದರು. ಇದರೊಂದಿಗೆ ಕೇವಲ 43 ನಿಮಿಷಗಳಲ್ಲಿ ಹಾಲಿ ವಿಶ್ವ ಚಾಂಪಿಯನ್ಸ್ ಆಗಿದ್ದ ಮಲೇಷ್ಯಾದ ಆ್ಯರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕಾ ಶರಣಾದರು.

ಮೊದಲ ಗೇಮ್‌ನ ಪ್ರಾರಂಭದಲ್ಲಿ ಚಿರಾಗ್​​ ಮತ್ತು ಸಾತ್ವಿಕ್ ಎಡವಿದರು. ಇದರಿಂದ ಎಚ್ಚೆತ್ತ ಇಬ್ಬರು ಆಟದ ವೇಗವನ್ನು ಬದಲಿಸಿದರು. ಆಟದ ಮಧ್ಯದ ವಿರಾಮಕ್ಕೆ 11-9 ಅಂತರದ ಮುನ್ನಡೆ ಪಡೆದರು. ಬ್ರೇಕ್​ ನಂತರೂ ಮೇಲುಗೈ ಸಾಧಿಸಿದರು. ಇದರೊಂದಿಗೆ ಮೊದಲ ಗೇಮ್​ 21-17 ಅಂತರದಲ್ಲಿ ಜಯಿಸಿತು. 2ನೇ ಸೆಟ್​ನಲ್ಲೂ ಇದೇ ಪ್ರಾಬಲ್ಯ ಮುಂದುವರೆಸಿದರು. ಎದುರಾಳಿಗೆ ಎಲ್ಲೂ ಆಟವನ್ನು ಬಿಟ್ಟು ಕೊಡದೆ 21-18 ರಲ್ಲಿ ಗೆದ್ದು ಚರಿತ್ರೆ ಬರೆದರು.

ಸೆಮೀಸ್​ನಲ್ಲಿ ಕೊರಿಯಾ ವಿರುದ್ದ ಗೆಲುವು

ಸಾತ್ವಿಕ್-ಚಿರಾಗ್ ಸೂಪರ್ 1000 ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಜೋಡಿಯು, ಇದೇ ಮೊದಲ ಬಾರಿಗೆ ಫೈನಲ್​​ ಪ್ರವೇಶಿಸಿತ್ತು. ಸೆಮಿಫೈನಲ್‌ ಪಂದ್ಯದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಕೊರಿಯಾದ ಸಿಯೊ ಸೆಂಗ್ ಜೇ ಮತ್ತು ಕಾಂಗ್ ಮಿನ್ ಯೂಕ್ ಅವರ ಎದುರು ಅಮೋಘ ಗೆಲುವು ದಾಖಲಿಸಿ ಫೈನಲ್​ ಪ್ರವೇಶಿಸಿದ್ದರು. ಇವರ ವಿರುದ್ಧ ಮೊದಲ ಗೇಮ್​ ಸೋತಿದ್ದರೂ, ಉಳಿದೆರಡು ಗೇಮ್​​ಗಳನ್ನು ವಶಪಡಿಸಿಕೊಂಡು ದಾಖಲೆಯ ಫೈನಲ್​​ಗೇರಿದ್ದರು.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.