Glenn McGrath: ವಿಶ್ವಕಪ್ ಸೆಮಿಫೈನಲ್ ತಲುಪುವ 4 ತಂಡಗಳನ್ನು ಹೆಸರಿಸಿದ ಗ್ಲೇನ್ ಮೆಗ್ರಾಥ್; ಪಾಕಿಸ್ತಾನ ಕಪ್ ಗೆಲ್ಲುವ ಫೇವರಿಟ್ ಎಂದ ದಿಗ್ಗಜ
Glenn McGrath: ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೇನ್ ಮೆಗ್ರಾಥ್ (Glenn McGrath), ಸೆಮಿಫೈನಲ್ ಪ್ರವೇಶಿಸಲಿರುವ 4 ತಂಡಗಳನ್ನು ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತ ತಂಡವೂ ಸ್ಥಾನ ಪಡೆದಿದೆ.
12 ವರ್ಷಗಳ ನಂತರ ತವರಿನಲ್ಲಿ ಏಕದಿನ ವಿಶ್ವಕಪ್ ಟೂರ್ನಿಯನ್ನು (ODI World Cup 2023) ಆಡಲು ಟೀಂ ಇಂಡಿಯಾ (Team India) ಸಜ್ಜಾಗಿದೆ. 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ, ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2015 ಮತ್ತು 2019ರ ವಿಶ್ವಕಪ್ ಟೂರ್ನಿಗಳಲ್ಲಿ ಸೆಮಿಫೈನಲ್ನಿಂದ ಹೊರ ಬಿದ್ದಿತ್ತು. ಏಕದಿನ ವಿಶ್ವಕಪ್ ಅಕ್ಟೋಬರ್ 5ರಿಂದ ಆರಂಭವಾಗಲಿದೆ.
ಟೂರ್ನಿ ಆರಂಭಕ್ಕೂ ಮುನ್ನವೇ ಸೆಮಿಫೈನಲ್, ಫೈನಲ್ಗೇರುವ ತಂಡಗಳ ಲೆಕ್ಕಾಚಾರ ಜೋರಾಗಿದೆ. ಮಾಜಿ ಕ್ರಿಕೆಟರ್ಸ್, ಕ್ರಿಕೆಟ್ ತಜ್ಞರು, ಪಂಡಿತರು, ಅಭಿಮಾನಿಗಳು ಸೇರಿದಂತೆ ಹಲವರು ತಮ್ಮ ನೆಚ್ಚಿನ ತಂಡಗಳನ್ನು ಪ್ರಕಟಿಸುತ್ತಿದ್ದಾರೆ. ಯಾವ ತಂಡಗಳು ಅದ್ಭುತ ಪ್ರದರ್ಶನ ನೀಡಲಿವೆ ಎಂಬುದರ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ಇದೀಗ ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೇನ್ ಮೆಗ್ರಾಥ್ (Glenn McGrath), ಸೆಮಿಫೈನಲ್ ಪ್ರವೇಶಿಸಲಿರುವ 4 ತಂಡಗಳನ್ನು ಹೆಸರಿಸಿದ್ದಾರೆ.
ತಂಡಗಳಿಗಿಲ್ಲ ಹೆದರಿಕೆ
ತವರಿನಲ್ಲೇ ವಿಶ್ವಕಪ್ ನಡೆಯುತ್ತಿರುವ ಕಾರಣ ಆ ತಂಡಕ್ಕೆ ನಿರ್ದಿಷ್ಟ ಲಾಭವಿದೆ. ಆದರೆ, ಐಪಿಎಲ್‌ನಿಂದಾಗಿ (IPL) ಈಗ ಯಾವುದೇ ತಂಡಗಳು ಭಾರತದಲ್ಲಿ ಆಡಲು ಹೆದರುತ್ತಿಲ್ಲ. ಅವರಿಗೆ ಭಾರತದ ಪಿಚ್‌ಗಳ ಮರ್ಮ ಏನೆಂಬುದು ಸಂಪೂರ್ಣ ತಿಳುವಳಿಕೆ ಸಿಕ್ಕಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರು ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಅನುಭವದಿಂದ ಏಕದಿನ ವಿಶ್ವಕಪ್ನಲ್ಲಿ ಉತ್ತಮ ಸೇವೆ ನೀಡಲಿದ್ದಾರೆ ಎಂದು ಮೆಗ್ರಾಥ್ ಅಭಿಪ್ರಾಯ ಹೊರ ಹಾಕಿದ್ದಾರೆ.
ಯಾವ ತಂಡಗಳು ಸೆಮೀಸ್ ಸೇರಲಿವೆ?
ಇದೇ ಕಾರಣಕ್ಕೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ 2023 ಟೂರ್ನಮೆಂಟ್ ಪ್ರಶಸ್ತಿಗೆ ನೆಚ್ಚಿನ ತಂಡಗಳಾಗಿವೆ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಪಾಕಿಸ್ತಾನ, ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಆ ತಂಡದ ಬ್ಯಾಟಿಂಗ್ ಲೈನ್ ಅಪ್ ಮತ್ತು ವೇಗದ ಬೌಲಿಂಗ್ ಘಟಕ ಅದ್ಭುತವಾಗಿದೆ. ನನ್ನ ಪ್ರಕಾರ, ಪಾಕಿಸ್ತಾನ ಗೆಲ್ಲುವ ಅವಕಾಶ ಹೆಚ್ಚಿದೆ. ಪಾಕಿಸ್ತಾನ (Pakistan), ಭಾರತ (India), ಆಸ್ಟ್ರೇಲಿಯಾ (Australia), ಇಂಗ್ಲೆಂಡ್ (England) ತಂಡಗಳು ಏಕದಿನ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಿವೆ ಎಂದು ತಮ್ಮ ನೆಚ್ಚಿನ ನಾಲ್ಕು ತಂಡಗಳನ್ನು ಬಹಿರಂಗಪಡಿಸಿದ್ದಾರೆ.
‘ಭಾರತದ ಯೋಜನೆ ಬದಲಾಗಿದೆ’
ಭಾರತದಲ್ಲಿ ವೇಗದ ಬೌಲರ್ಗಳಿಗೆ ಹೆಚ್ಚಿನ ಸಹಕಾರ ಸಿಗುವುದಿಲ್ಲ. ಇಲ್ಲಿನ ಪಿಚ್ಗಳು ಸ್ಪಿನ್ನರ್ಗಳಿಗೆ ಪ್ರತ್ಯೇಕವಾಗಿ ಹೇಳಿ ಮಾಡಿಸಿದಂತೆ ಇವೆ. ಹಾಗಾಗಿ ಯುವ ಸ್ಪಿನ್ನರ್ಗಳು ಭಾರತ ತಂಡ ಸೇರುವ ಸಾಧ್ಯತೆ ಇದೆ. ಈ ಹಿಂದೆ ವೇಗದ ಬೌಲರ್ ಘಟಕದತ್ತ ಟೀಮ್ ಇಂಡಿಯಾ ಹೆಚ್ಚು ಗಮನ ಹರಿಸಲಿಲ್ಲ. ಈಗ ತಂಡದ ಯೋಜನೆ ಬದಲಾಗಿದೆ. ಭಾರತದಲ್ಲಿ ವೇಗದ ಬೌಲರ್ಗಳೂ ಯಶಸ್ಸು ಕಾಣುತ್ತಿದ್ದಾರೆ. ಜಗತ್ತಿನ ಯಾವುದೇ ದೇಶದಲ್ಲಿ ಬೇಕಾದರೂ ವಿಕೆಟ್ ಪಡೆಯುತ್ತಾರೆ ಎಂದು ಭಾರತದ ವೇಗದ ಬೌಲಿಂಗ್ ವಿಭಾಗವನ್ನು ಹಾಡಿ ಹೊಗಳಿದ್ದಾರೆ.
ಭಾರತ ತಂಡದಲ್ಲಿ ಗೊಂದಲ ಹೆಚ್ಚು
ಆದರೆ ಭಾರತ ತಂಡಕ್ಕೆ ಹೋಲಿಸಿದರೆ, ಪಾಕಿಸ್ತಾನ ತಂಡವು ಸ್ಪಷ್ಟವಾಗಿದೆ. ಟೀಮ್ ಕಾಂಬಿನೇಷನ್ ವಿಷಯದಲ್ಲಿ ಸಂಪೂರ್ಣ ಸ್ಪಷ್ಟತೆಯೊಂದಿಗೆ ಕಣಕ್ಕಿಳಿಯಲಿದೆ. ಆದರೆ, ಭಾರತವು ಈ ವಿಚಾರದಲ್ಲಿ ಕೊಂಚ ಗೊಂದಲದಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾರು ಇನ್, ಯಾರು ಔಟ್ ಆಗುತ್ತಾರೆ ಎಂಬ ಸ್ಪಷ್ಟತೆ ಭಾರತ ತಂಡಕ್ಕೇ ಇಲ್ಲ. ಹಾಗಾಗಿ ಯಾರನ್ನು ಆಯ್ಕೆ ಮಾಡಬೇಕು? ಯಾರನ್ನು ಆಡುವ 11ರ ಬಳಗದಲ್ಲಿ ಆಡಿಸಬೇಕು ಎಂಬ ಗೊಂದಲ ತಂಡಕ್ಕೆ ಕಾಡುತ್ತಿದೆ.
ವಿಭಾಗ