Rahul Dravid: ನನ್ನ ಜೀವನದಲ್ಲಿ ಆ ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದೆ; ತಾಯಿಗೂ ಮುಖ ತೋರಿಸಲು ನಾಚಿಕೆ ಪಟ್ಟಿದ್ದೆ ಎಂದ ದ್ರಾವಿಡ್
ಕನ್ನಡ ಸುದ್ದಿ  /  ಕ್ರೀಡೆ  /  Rahul Dravid: ನನ್ನ ಜೀವನದಲ್ಲಿ ಆ ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದೆ; ತಾಯಿಗೂ ಮುಖ ತೋರಿಸಲು ನಾಚಿಕೆ ಪಟ್ಟಿದ್ದೆ ಎಂದ ದ್ರಾವಿಡ್

Rahul Dravid: ನನ್ನ ಜೀವನದಲ್ಲಿ ಆ ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದೆ; ತಾಯಿಗೂ ಮುಖ ತೋರಿಸಲು ನಾಚಿಕೆ ಪಟ್ಟಿದ್ದೆ ಎಂದ ದ್ರಾವಿಡ್

Rahul Dravid: ಲೆಜೆಂಡರಿ ಆಟಗಾರನಾಗಿ ಬಿಸಿಸಿಐನಲ್ಲಿ ಟೀಮ್​ ಇಂಡಿಯಾದ ಹೆಡ್​ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ದ್ರಾವಿಡ್ ಅತ್ಯಂತ ಸರಳ ಜೀವನ ನಡೆಸುತ್ತಾರೆ. ಇಂತಹ ವ್ಯಕ್ತಿ ಆ ಒಂದು ಘಟನೆಯಿಂದ ತನ್ನ ತಾಯಿಗೂ ಮುಖ ತೋರಿಸಲಾಗದೆ, ಮುಜುಗರಕ್ಕೆ ಒಳಗಾಗಿದ್ದರಂತೆ.

ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್.
ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್.

ಟೀಮ್​ ಇಂಡಿಯಾದ (Team India) ಮಾಜಿ ಕ್ರಿಕೆಟಿಗ, ಸದ್ಯ ಹೆಡ್​ ಕೋಚ್​ ರಾಹುಲ್​ ದ್ರಾವಿಡ್ (Rahul dravid), ಸದಾ ​ಶಾಂತವಾಗಿರುತ್ತಾರೆ. ಈ ನಡೆಯಿಂದಲೇ ಎಲ್ಲರ ಅಚ್ಚುಮೆಚ್ಚಿನ ಕ್ರಿಕೆಟಿಗನಾಗಿದ್ದಾರೆ. ಜಂಟಲ್​ಮನ್​ ಎಂದೇ ಕರೆಸಿಕೊಳ್ಳುವ ದ್ರಾವಿಡ್​, ಎಂತಹದ್ದೇ ಒತ್ತಡದ ಸನ್ನಿವೇಶ ಎದುರಾದರೂ ಮೈದಾನದೊಳಗೆ ಅಥವಾ ಹೊರಗೆ ತಾಳ್ಮೆ ಕಳೆದುಕೊಂಡವರೇ ಅಲ್ಲ.

ಲೆಜೆಂಡರಿ ಆಟಗಾರನಾಗಿ ಬಿಸಿಸಿಐನಲ್ಲಿ ಟೀಮ್​ ಇಂಡಿಯಾದ ಹೆಡ್​ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ದ್ರಾವಿಡ್ ಅತ್ಯಂತ ಸರಳ ಜೀವನ ನಡೆಸುತ್ತಾರೆ. ಇಂತಹ ವ್ಯಕ್ತಿ ಆ ಒಂದು ಘಟನೆಯಿಂದ ತನ್ನ ತಾಯಿಗೂ ಮುಖ ತೋರಿಸಲಾಗದೆ, ಮುಜುಗರಕ್ಕೆ ಒಳಗಾಗಿದ್ದರಂತೆ. ಈ ಘಟನೆಯನ್ನು ಭಾರತ ತಂಡದ ಬ್ಯಾಟಿಂಗ್​ ಗೋಡೆ ದ್ರಾವಿಡ್​ ಈಗ ಹಂಚಿಕೊಂಡಿದ್ದಾರೆ.

ಇವರ ಕೋಪ ಕಂಡು ಬೆಚ್ಚಿಬಿದ್ದಿತ್ತು ಕ್ರಿಕೆಟ್ ಲೋಕ

ಕ್ರೀಸ್​​​ನಲ್ಲಿ ಬ್ಯಾಟಿಂಗ್​ ನಡೆಸುವಾಗ ಎದುರಾಳಿಗಳ ವಿರುದ್ಧವೂ ಅಪರೂಪಕ್ಕೊಮ್ಮೆ ಆಕ್ರಮಣಕಾರಿ ಪ್ರದರ್ಶನ ನೀಡುತ್ತಿದ್ದ ರಾಹುಲ್​ ದ್ರಾವಿಡ್, ವ್ಯಕ್ತಿಗತವಾಗಿ ಎಂದೂ ಆ ರೀತಿ ನಡೆದುಕೊಂಡವರೇ ಅಲ್ಲ. ಆದರೆ, ಅವರ ಒಂದು ಜಾಹೀರಾತು ಇಡೀ ಕ್ರಿಕೆಟ್​ ಲೋಕವನ್ನೇ ಬೆಚ್ಚಿ ಬೀಳಿಸಿತು. ಯಪ್ಪಾ ದ್ರಾವಿಡ್​ಗೆ ಈ ಪಾಟಿ ಕೋಪನಾ ಎನ್ನುವಷ್ಟರ ಮಟ್ಟಿಗೆ ಜನರು ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯಪಟ್ಟಿದ್ದರು.

ಕೂಗಾಡಿದರು, ಅವಾಜ್ ಹಾಕಿದರು

ಅದು ಕ್ರೆಡ್​ ಆ್ಯಪ್​ಗೆ (Cread App) ಸಂಬಂಧಿಸಿದ ಜಾಹೀರಾತು. ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಳ್ಳುವ ಈ ಶಾಂತ ಜೀವಿ, ಒಮ್ಮೆಲೆ ಕೋಪಗೊಳ್ಳುತ್ತಾರೆ. ದ್ರಾವಿಡ್ ಹತಾಶೆಗೆ ಒಳಗಾಗುವ, ಹಿಂದೆಂದೂ ನೋಡಿರದ ದೃಶ್ಯವನ್ನು ಕಾಣಬಹುದು. ನಾನು ಇಂದಿರಾನಗರ ಕಾ ಗೂಂಡಾ ಎಂದು ಬ್ಯಾಟ್​ ಹಿಡಿದು ಪಕ್ಕದಲ್ಲಿದ್ದ ಕಾರಿನ ಗಾಜು ಹೊಡೆದು ಹಾಕುತ್ತಾರೆ. ಹಾರ್ನ್​ ಹೊಡೆದವರಿಗೆ ಅವಾಜ್​ ಹಾಕುತ್ತಾರೆ. ಈ ಜಾಹೀರಾತು ಬಿಡುಗಡೆಯಾದಾಗ ಸಂಚಲನ ಸೃಷ್ಟಿಸಿತ್ತು.

ಇದೊಂದು ನಾಚಕೀಯ ಘಟನೆ ಎಂದ ದ್ರಾವಿಡ್

ಆದರೆ, ದ್ರಾವಿಡ್ ಕಾರಿನಲ್ಲಿದ್ದುಕೊಂಡು ಅಕ್ಕಪಕ್ಕ ಜನರ ಮೇಲೆ ಕೂಗಾಡಿ, ಕಾರಿನ ಗಾಜು ಒಡೆದ ದೃಶ್ಯಗಳನ್ನು ಕಂಡು ಅವರ ತಾಯಿಯೇ ಆಶ್ಚರ್ಯಕ್ಕೆ ಒಳಗಾಗಿದ್ದರಂತೆ. ಅವರು ನಂಬಿಯೇ ಇರಲಿಲ್ಲವಂತೆ. ಈ ಜಾಹೀರಾತನ್ನು ಅವರ ತಾಯಿ ಇಷ್ಟಪಟ್ಟಿರಲಿಲ್ಲ ಎನ್ನುವ ಸತ್ಯವನ್ನು ದ್ರಾವಿಡ್​ ಹೇಳಿದ್ದಾರೆ. ನನ್ನಮ್ಮ ಇಂದಿರಾನಗರದ ಗೂಂಡಾ ಜಾಹಿರಾತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರಲಿಲ್ಲ. ನೀನು ಹಾಗೆ ಗಾಜು ಹೊಡೆಯಬಾರದಿತ್ತು ಎಂದು ಅಮ್ಮ ಈಗ ಹೇಳುತ್ತಾರೆ. ಈ ಘಟನೆ ನನ್ನ ಜೀವನದ ಅತ್ಯಂತ ನಾಚಕೀಯ ಘಟನೆಗಳಲ್ಲಿ ಒಂದು ಎಂದು ಹೇಳಿದ್ದಾರೆ.

ಮುಜುಗರದಿಂದ ಮುಖ ತೋರಿಸಿಲಿಲ್ಲ

ಈ ಜಾಹೀರಾತನ್ನು ಮುಂಬೈ ನಗರದ ರಸ್ತೆಯಲ್ಲಿ ಶೂಟ್​ ಮಾಡಲಾಗಿತ್ತು. ನನ್ನ ಅಕ್ಕಪಕ್ಕದಲ್ಲಿ ಇದ್ದವರಿಗೆ ನಾನು ನಟಿಸುತ್ತಿದ್ದೇನೆ ಎಂಬುದು ಮೊದಲೇ ಗೊತ್ತಿತ್ತು. ಇಷ್ಟಾದರೂ ನನಗೆ ಸರಿ ಕಾಣಲಿಲ್ಲ. ಕೂಗಾಡಿದ್ದು, ಒಂದು ರೀತಿ ನಾಚಿಕೆ ಉಂಟು ಮಾಡಿತು. ಈ ಮುಜುಗರ ಸನ್ನಿವೇಶದಿಂದ ಹೊರಬರುವುದೇ ಸವಾಲಾಗಿತ್ತು. ಮುಜುಗರಿಂದ ಮನೆಯಲ್ಲೂ ಮುಖ ತೋರಿಸಿರಲಿಲ್ಲ ಎಂದು ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್‌ ಹೇಳಿದ್ದಾರೆ.

ರಾಹುಲ್ ದ್ರಾವಿಡ್ 2012ರಲ್ಲಿ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ನಂತರ ಭಾರತ ಅಂಡರ್ 19 ತಂಡದ ಹೆಡ್‌ ಕೋಚ್ ಆಗಿ ಕಾರ್ಯನಿರ್ವಹಿಸಿ ಟ್ರೋಫಿ ಗೆದ್ದುಕೊಟ್ಟರು. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ದ್ರಾವಿಡ್​ ಅವರನ್ನು 2021ರಲ್ಲಿ ಭಾರತ ಸೀನಿಯರ್ಸ್‌ ಕ್ರಿಕೆಟ್ ತಂಡದ ಹೆಡ್‌ ಕೋಚ್‌ ಆಗಿ ನೇಮಕಗೊಂಡರು. ಪ್ರಸ್ತುತ ವಿಂಡೀಸ್​ ಸರಣಿಯಲ್ಲಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.