India vs West Indies: ಮೂರೇ ದಿನಕ್ಕೆ ಮೊದಲ ಟೆಸ್ಟ್ ಮುಕ್ತಾಯ, ಅಶ್ವಿನ್ ಸ್ಪಿನ್ ಮೋಡಿಗೆ ವಿಂಡೀಸ್ ಉಡೀಸ್; ಭಾರತಕ್ಕೆ ಇನ್ನಿಂಗ್ಸ್ ಜಯ
India vs West Indies 1st Test Highlights: ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಇನ್ನಿಂಗ್ಸ್ ಮತ್ತು 141 ರನ್ಗಳಿಂದ ಅಮೋಘ ಜಯ ಸಾಧಿಸಿದ ರೋಹಿತ್ ಪಡೆ, ಸರಣಿಯಲ್ಲಿ ಮುನ್ನಡೆ ಪಡೆದಿದೆ.
ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಿನ ಮೊದಲ ಟೆಸ್ಟ್ ಪಂದ್ಯವು ಮೂರೇ ದಿನಕ್ಕೆ ಮುಕ್ತಾಯಗೊಂಡಿದೆ. ಎರಡನೇ ಇನ್ನಿಂಗ್ಸ್ನಲ್ಲೂ ಘರ್ಜಿಸಿದ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರ ಸ್ಪಿನ್ ದಾಳಿಗೆ ಅತಿಥೇಯ ವಿಂಡೀಸ್ ಇನ್ಸಿಂಗ್ಸ್ ಮತ್ತು 141 ರನ್ಗಳ ಸೋಲು ಅನುಭವಿಸಿದೆ. ಬ್ಯಾಟಿಂಗ್-ಬೌಲಿಂಗ್ ಎರಡಲ್ಲೂ ದರ್ಬಾರ್ ನಡೆಸಿದ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ 3ನೇ ಆವೃತ್ತಿಯ ತಮ್ಮ ಆರಂಭಿಕ ಪಂದ್ಯದಲ್ಲೇ ದಾಖಲೆಯ ಗೆಲುವು ಸಾಧಿಸಿದ್ದಲ್ಲದೆ, 2 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತವು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 271 ರನ್ಗಳ ಮುನ್ನಡೆ ಪಡೆದಿತ್ತು. ಕೆರಿಬಿಯನ್ನರ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದ್ದ ಕಾರಣ, 3ನೇ ದಿನದಾಟದಲ್ಲಿ ಭಾರತ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 152.2 ಓವರ್‌ಗಳಿಗೆ 5 ವಿಕೆಟ್ ಕಳೆದುಕೊಂಡು 421 ರನ್‌ಗಳನ್ನು ಕಲೆ ಹಾಕಿತ್ತು. ಈ ವೇಳೆ ಡಿಕ್ಲೆರ್ ಮಾಡಿಕೊಂಡಿತು. ಹಾಗಾಗಿ ಭಾರತ ಪಡೆದಿದ್ದ 271 ರನ್ಗಳ ಮುನ್ನಡೆಯನ್ನು ಹಿಂಬಾಲಿಸಿದ ವೆಸ್ಟ್ ಇಂಡೀಸ್, 3ನೇ ದಿನ ಮುಗಿಯುವಷ್ಟರಲ್ಲಿ ಶರಣಾಗಿದೆ.
3ನೇ ದಿನದಾಟ ಆರಂಭ
ಭಾರತ 2ನೇ ದಿನದಾಟದಲ್ಲಿ 2 ವಿಕೆಟ್ ನಷ್ಟಕ್ಕೆ 312 ರನ್ಗಳಿಸಿತ್ತು. 162 ರನ್ಗಳ ಮುನ್ನಡೆ ಪಡೆದಿತ್ತು. ಜೈಸ್ವಾಲ್ 143 ರನ್, ವಿರಾಟ್ ಕೊಹ್ಲಿ 36 ರನ್ ಗಳಿಸಿ ಅಜೇಯರಾಗಿದ್ದರು. ಇಲ್ಲಿಂದ 3ನೇ ದಿನವನ್ನು ಆರಂಭಿಸಿದ ಈ ಜೋಡಿ, ಉತ್ತಮ ಆರಂಭ ಪಡೆಯಿತು. ಒಟ್ಟು 283 ಎಸೆತಗಳಲ್ಲಿ 110 ರನ್ಗಳ (2ನೇ ದಿನದಾಟದ್ದೂ ಸೇರಿ) ಜೊತೆಯಾಟವಾಡಿದರು. ಜೈಸ್ವಾಲ್ ಚೊಚ್ಚಲ ಪಂದ್ಯದಲ್ಲೇ 150 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ, ಜೈಸ್ವಾಲ್, 171 ರನ್, ಕೊಹ್ಲಿ 76 ರನ್ ಸಿಡಿಸಿ ಔಟಾದರು. ಅಜಿಂಕ್ಯ ರಹಾನೆ ನಿರಾಸೆ ಮೂಡಿಸಿದರು.
ವಿರಾಟ್ ಕೊಹ್ಲಿ ಜೊತೆಗೂಡಿ 49 ರನ್ಗಳ ಜೊತೆಯಾಟ ಕಟ್ಟಿದ ರವೀಂದ್ರ ಜಡೇಜಾ ಅಜೇಯ 37 ರನ್ ಕಲೆ ಹಾಕಿದರು. ಇಶಾನ್ ಕಿಶನ್ ಅಜೇಯ 1 ರನ್ ಗಳಿಸಿದ್ದರು. ಈ ವೇಳೆ 271 ರನ್ಗಳ ಮುನ್ನಡೆ ಪಡೆದಿದ್ದ ಭಾರತ ಡಿಕ್ಲೇರ್ ಘೋಷಿಸಿತ್ತು. ಬಳಿಕ ದ್ವಿತೀಯ ಇನಿಂಗ್ಸ್ ಪ್ರಾರಂಭಿಸಿದ ವೆಸ್ಟ್ ಇಂಡೀಸ್ ಆರಂಭಿಕ ಆಘಾತಕ್ಕೆ ಒಳಗಾಯಿತು. ಮೊದಲ ಇನ್ನಿಂಗ್ಸ್ನಂತೆ, ದ್ವಿತಿಯ ಇನ್ನಿಂಗ್ಸ್ನಲ್ಲೂ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಸ್ಪಿನ್ ಮೋಡಿಗೆ ವಿಂಡೀಸ್ ನಲುಗಿತು. 50.3 ಓವರ್ಗಳಲ್ಲಿ 130 ರನ್ ಗಳಿಸುವಷ್ಟರಲ್ಲಿ ಸರ್ವಪತನವಾಯಿತು. ಇದರೊಂದಿಗೆ ಇನ್ನಿಂಗ್ಸ್ ಜೊತೆ 141 ರನ್ಗಳಿಂದ ಸೋಲು ಕಂಡಿತು.
ಅಶ್ವಿನ್ಗೆ 7 ವಿಕೆಟ್
ಪ್ರಥಮ ಇನ್ನಿಂಗ್ಸ್ನಲ್ಲಿ ವಿಂಡೀಸ್ ಅಲ್ಪಮೊತ್ತಕ್ಕೆ ಕುಸಿಯಲು ಕಾರಣವಾಗಿದ್ದ ಅಶ್ವಿನ್ ಮತ್ತು ಜಡೇಜಾ, ದ್ವಿತೀಯ ಇನ್ನಿಂಗ್ಸ್ನಲ್ಲೂ ಕಾಡಿದರು. ಅದರಲ್ಲೂ ಅಶ್ವಿನ್ ಎರಡೂ ಇನ್ನಿಂಗ್ಸ್ನಲ್ಲೂ ಮತ್ತೊಮ್ಮೆ 5 ವಿಕೆಟ್ಗಳ ಗುಚ್ಛ ಪಡೆದರು. 7 ವಿಕೆಟ್ ಉರುಳಿಸಿದ ಆಫ್ ಸ್ಪಿನ್ನರ್ ವಿಂಡೀಸ್ ಮಹಾ ಕುಸಿತಕ್ಕೆ ಮತ್ತೊಮ್ಮೆ ಕಾರಣರಾದರು. ಜಡ್ಡು 2, ಸಿರಾಜ್ 1 ವಿಕೆಟ್ ಕಬಳಿಸಿದರು. ಈ ಪಂದ್ಯದಲ್ಲಿ ಒಟ್ಟು 15 ವಿಕೆಟ್ ಪಡೆದು ಗಮನ ಸೆಳೆದರು. 2ನೇ ಇನ್ನಿಂಗ್ಸ್ನಲ್ಲಿ ಅಲಿಕ್ ಅಥನಾಜೆ 28 ರನ್ ಗಳಿಸಿದ್ದೇ ವಿಂಡೀಸ್ ಪರ ಗರಿಷ್ಠ ಸ್ಕೋರ್. ಯಾರೂ ಕೂಡ ಕ್ರೀಸ್ ಕಚ್ಚಿ ನಿಂತು ಕೆಚ್ಚೆದೆಯ ಹೋರಾಟ ನಡೆಸಲು ಮುಂದಾಗಿಲ್ಲ. ವೆಸ್ಟ್ ಇಂಡೀಸ್ ಆಟಗಾರರು ದಯನೀಯ ವೈಫಲ್ಯ ಕಂಡರು. ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಜೈಸ್ವಾಲ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ವಿಭಾಗ