KL Rahul Biopic: ತೆರೆಗೆ ಅಪ್ಪಳಿಸಲು ಸಿದ್ಧವಾಗ್ತಿದ್ಯಾ ಕೆಎಲ್ ರಾಹುಲ್ ಬಯೋಪಿಕ್; ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ ಕಿರಿಕ್ et 11 ಟೈಟಲ್
KL Rahul Biopic: ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಇದು ಕ್ರಿಕೆಟ್ಗೆ ಸಂಬಂಧಿಸಿದ ಸಿನಿಮಾವಾಗಿದ್ದು, ಕ್ರಿಕೆಟಿಗ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಜೀವನದ ಅಂಶಗಳು ಈ ಚಿತ್ರದಲ್ಲಿ ಇರಲಿವೆ ಎಂದು ವರದಿಯಾಗಿದೆ.
ಎಂಎಸ್ ಧೋನಿ, ಮಿಥಾಲಿ ರಾಜ್, ಸೈನಾ ನೆಹ್ವಾಲ್, ಸಂದೀಪ್ ಸಿಂಗ್, ಮಿಲ್ಖಾ ಸಿಂಗ್, ಗೀತಾ ಫೊಗಾಟ್, ಮೇರಿ ಕೋಮ್... ಹೀಗೆ ಹಲವು ಕ್ರೀಡಾಪಟುಗಳ ಜೀವನ ಚರಿತ್ರೆ ತೆರೆಗೆ ಅಪ್ಪಳಿಸಿ ಯಶಸ್ಸು ಕಂಡಿವೆ. ಕ್ರೀಡೆ ಮತ್ತು ಕ್ರೀಡಾಪಟುಗಳ ಕುರಿತು ಸಿನಿಮಾಗಳು ಪ್ರೇಕ್ಷಕರ ಮನ ಗೆದ್ದಿವೆ. ಬಾಲಿವುಡ್ ನಿರ್ದೇಶಕರೇ (Bollywood Directors) ಇಂತಹ ಕಥೆಗಳ ಮೇಲೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ವಿಶೇಷ.
ಆದರೆ, ಕ್ರೀಡೆ ಮತ್ತು ಕ್ರೀಡಾಪಟುಗಳ ಕುರಿತಾದ ಸಿನಿಮಾ ಸದ್ದು ದಕ್ಷಿಣ ಭಾರತದಲ್ಲಿ ಇರುವುದಿಲ್ಲ. ಇದೀಗ ಕನ್ನಡ ಚಿತ್ರರಂಗದಲ್ಲಿ ಕ್ರಿಕೆಟ್ ಕುರಿತ ಸಿನಿಮಾವೊಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಕನ್ನಡ ಚಿತ್ರರಂಗದಲ್ಲಿ (Kannada Film Industry) ಅದ್ಭುತ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಕೆಆರ್ಜಿ ಸ್ಟುಡಿಯೋಸ್ (KRG studios) ಈ ಸಿನಿಮಾಗೆ ಬಂಡವಾಳ ಹೂಡಲಿದೆ. ಕ್ರಿಕೆಟ್ ಕುರಿತಾದ ಸಿನಿಮಾ ಮಾಡಲು ಆಸಕ್ತಿ ತೋರಿದ್ದು, ಈ ಚಿತ್ರಕ್ಕೆ 'ಕಿರಿಕ್ et 11' ಎಂದು ಹೆಸರು ಇಡಲಾಗಿದೆ.
ಮತ್ತೊಂದು ಈ ಸಿನಿಮಾ ಭಾರತೀಯ ಕ್ರಿಕೆಟಿಗ ಹಾಗೂ ಕನ್ನಡಿಗ ಕೆಎಲ್ ರಾಹುಲ್ (KL Rahul) ಜೀವನಾಧಾರಿತ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತು KL ರಾಹುಲ್ ಆಗಲಿ, ಚಿತ್ರ ತಂಡವಾಗಲಿ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ. ಬೆಂಗಳೂರಿನ ಸುಮನ್ ಕುಮಾರ್ (Suman Kumar) ಈ ಚಿತ್ರಕ್ಕೆ ನಿರ್ದೇಶಕನ ಕ್ಯಾಪ್ ತೊಡಲಿದ್ದಾರೆ. ಇದಕ್ಕೂ ಮೊದಲು ಅವರು ಫರ್ಜಿ, ಫ್ಯಾಮಿಲಿ ಮ್ಯಾನ್ ಮತ್ತು ಗೇಮ್ ಓವರ್ ವೆಬ್ ಸಿರೀಸ್ಗಳಿಗೆ ರೈಟರ್ ಆಗಿದ್ದರು.
ಫ್ಯಾಮಿಲಿ ಮ್ಯಾನ್ ಮತ್ತೊಬ್ಬ ಬರಹಗಾರ ಮನೋಜ್ಕುಮಾರ್ ಕಲೈವಣ್ಣನ್ ಅವರು ಈ ಸಿನಿಮಾಕ್ಕೆ ಚಿತ್ರ ಕತೆಯ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರದಲ್ಲಿ 'ಕಿರಿಕ್ et 11' ಡ್ಯಾನಿಶ್ ಸೇಠ್ (Danish Sait) ಹಾಗೂ ನವೀನ್ ಶಂಕರ್ (Naveen Shankar) ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡ್ಯಾನಿಸ್ ಸೇಠ್ ಅವರು ಕ್ರಿಕೆಟ್ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಹೆಸರೇ ಸೂಚಿಸುವಂತೆ ಕಿರಿಕ್ ಸನ್ನಿವೇಶಗಳು, ಹಾಸ್ಯ ಮತ್ತು ಕ್ರಿಕೆಟ್ ಕತಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆ.
ನವೀನ್ ಶಂಕರ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ರೋಚಕ ಪಂದ್ಯವೊಂದಕ್ಕೆ ಸಜ್ಜಾಗಿ. ಕ್ರಿಕೆಟ್ ಆಡೋದು ಆಡ್ಸೋದು ಅಷ್ಟು ಸುಲಭ ಅಲ್ಲ. ಬಹಳ ಕಿರಿಕ್ ಮಾಡ್ಬೇಕು! ಪ್ರಸ್ತುತ ಪಡಿಸುತ್ತಿದ್ದೇವೆ ‘ಕಿರಿಕ್ et 11’ , ಕೆಆರ್ಜಿಯ ಮುಂದಿನ ಚಿತ್ರ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ. ಈ ಚಿತ್ರದಲ್ಲಿ ಕೆಎಲ್ ರಾಹುಲ್ ಅವರ ಬದುಕಿನ ಕೆಲವು ಅಂಶಗಳು ಇರಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಚಿತ್ರದ ಪೋಸ್ಟರ್ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಪ್ರಕ್ರಿಯೆಗಳು ಇನ್ನಷ್ಟೇ ಪ್ರಾರಂಭವಾಗಬೇಕಿದೆ.
ಕೆಎಲ್ ರಾಹುಲ್ ಧರ್ಮಸ್ಥಳಕ್ಕೆ ಭೇಟಿ
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀಮಂಜುನಾಥನ ದರ್ಶನ ಪಡೆದಿದ್ದಾರೆ. ನಂತರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಐಪಿಎಲ್ ಟೂರ್ನಿಯ ವೇಳೆ ಗಾಯಗೊಂಡಿದ್ದ ರಾಹುಲ್ ಸರ್ಜರಿಯಾಗಿದ್ದು, ಎನ್ಸಿಎನಲ್ಲಿ ಪುನಃಶ್ಚೇತನ ತರಬೇತಿಗೆ ಒಳಗಾಗಿದ್ದಾರೆ. ಆದರೆ ಏಷ್ಯಾಕಪ್ ಟೂರ್ನಿಯೊಳಗೆ ಚೇತರಿಸಿಕೊಳ್ಳುವುದು ಕಷ್ಟ ಎಂದು ಹೇಳಲಾಗುತ್ತಿದೆ. ನೇರವಾಗಿ ಏಕದಿನ ವಿಶ್ವಕಪ್ಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.