Ind vs Pak: ವಿಶ್ವಕಪ್ಗೆ ಭಾರತಕ್ಕೆ ಪಾಕಿಸ್ತಾನ ತಂಡವನ್ನು ಕಳುಹಿಸಲು ಕೊನೆಗೂ ಒಪ್ಪಿದ ಪಾಕ್ ಸರ್ಕಾರ; ಹುಷಾರಾಗಿ ನೋಡ್ಕೊಳ್ಳಿ ಎಂದ ಸಚಿವಾಲಯ
ODI World Cup 2023: ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತಕ್ಕೆ ಪ್ರಯಾಣಿಸಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪಾಕ್ ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಏಕದಿನ ವಿಶ್ವಕಪ್ ಟೂರ್ನಿಗಾಗಿ (ODI World Cup 2023) ಭಾರತಕ್ಕೆ ಪ್ರಯಾಣಿಸಲು ಪಾಕಿಸ್ತಾನ ಸರ್ಕಾರ (Pakistan Government) ಕೊನೆಗೂ ಒಪ್ಪಿಗೆ ಸೂಚಿಸಿದೆ. ಮೆಗಾ ಟೂರ್ನಿಯಲ್ಲಿ ಆಡಲು ಪಾಕಿಸ್ತಾನ ತಂಡಕ್ಕೆ ವಿದೇಶಾಂಗ ಸಚಿವಾಲಯ ಅನುಮತಿ ನೀಡಿದೆ. ಆ ಮೂಲಕ ಹಲವು ದಿನಗಳಿಂದ ಇದ್ದ ಗೊಂದಲಕ್ಕೆ ಪೂರ್ಣ ವಿರಾಮ ಹಾಕಿದೆ. ಆದರೆ ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board), ನಮ್ಮ ಸರ್ಕಾರ ಒಪ್ಪಿಗೆ ಕೊಟ್ಟರೆ ಮಾತ್ರ, ಭಾರತ ಪ್ರಯಾಣ ಬೆಳೆಸುತ್ತೇವೆ ಎಂದು ಹೇಳಿತ್ತು.
ಏಷ್ಯಾಕಪ್ 2023 ಟೂರ್ನಿಗೆ ಆತಿಥ್ಯದ ಜವಾಬ್ದಾರಿ ಹೊಂದಿರುವ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ನಿರಾಕರಿಸಿತ್ತು. ಇದೇ ವಿಚಾರಕ್ಕೆ ಪಾಕಿಸ್ತಾನ ಮೊಂಡುತನ ಪ್ರದರ್ಶಿಸಿತ್ತು. ಅವರು ಬರದಿದ್ದರೆ, ಐಸಿಸಿ ಟೂರ್ನಿಗೆ ನಾವು ಕೂಡ ಹೋಗಲ್ಲ ಎಂದು ಬೆದರಿಕೆ ಹಾಕಿತ್ತು. ಉಭಯ ದೇಶಗಳ ನಡುವೆ ರಾಜಕೀಯ ಉದ್ವಿಗ್ನತೆಯ ಕಾರಣ, ಯಾರೇ ಪ್ರಯಾಣ ಬೆಳೆಸಬೇಕಿದ್ದರೂ, ಅವರು ಸರ್ಕಾರದ ಅನುಮತಿ ಪಡೆಯಬೇಕು.
ಆರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ನಾವು ಹೇಳುವ ಮೈದಾನಗಳಲ್ಲಿ ಪಂದ್ಯ ಆಯೋಜಿಸಬೇಕು ಎಂದಿತ್ತು. ನಂತರ ತಟಸ್ಥ ಸ್ಥಳಗಳಲ್ಲಿ ನಮ್ಮ ಪಂದ್ಯಗಳನ್ನು ಆಯೋಜಿಸಿ ಎಂದು ಬೊಬ್ಬೆ ಹಾಕಿತ್ತು. ಏಷ್ಯಾ ಕಪ್ ಟೂರ್ನಿಗೆ ನೀವು ಬರದಿದ್ದರೆ, ನಾವ್ಯಾಕೆ ಪಾಕಿಸ್ತಾನಕ್ಕೆ ಬರಬೇಕು ಎಂದು ರಾಗಾ ಎಳೆದಿತ್ತು. ಈ ಕುರಿತು ಐಸಿಸಿ ಜೊತೆಗೆ ಮಾತುಕತೆ ಕೂಡ ನಡೆಸಿತ್ತು. ಆದರೆ, ಐಸಿಸಿ ಇದ್ಯಾವುದಕ್ಕೂ ಕೇರ್ ಮಾಡಿರಲಿಲ್ಲ. ಕೊನೆಯದಾಗಿ ಪಾಕ್ ಸರ್ಕಾರ ಅನುಮತಿ ನೀಡಿದರೆ, ಭಾರತಕ್ಕೆ ಪ್ರಯಾಣಿಸುತ್ತೇವೆ ಎಂದಿತ್ತು.
ಸಚಿವಾಲಯದ ಪ್ರಕಟಣೆ ಹೀಗಿದೆ!
ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂಬ ಉದ್ದೇಶದಿಂದ ಮುಂಬರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಳುಹಿಸಲು ನಿರ್ಧರಿಸಲಾಗಿದೆ. ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಯು ಕ್ರೀಡಾ ಸಂಬಂಧಿತ ಜವಾಬ್ದಾರಿಗಳಿಗೆ ಅಡ್ಡಿಯಾಗಬಾರದೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸುರಕ್ಷತೆ ನೀಡಿ ಎಂದ ಪಾಕ್ ಸಚಿವಾಲಯ
ಪಾಕಿಸ್ತಾನವು ತನ್ನ ಕ್ರಿಕೆಟ್ ತಂಡದ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮತ್ತು ಭಾರತೀಯ ಅಧಿಕಾರಿಗಳಿಗೆ ತಿಳಿಸುವುದು ಏನೆಂದರೆ, ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸಂಪೂರ್ಣ ಸುರಕ್ಷತೆ ಮತ್ತು ಭದ್ರತೆ ಖಾತ್ರಿಪಡಿಸುವುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಐಸಿಸಿ ಸೊಪ್ಪು ಹಾಕಲಿಲ್ಲ
ಭಾರತ ವಿರುದ್ದ ಒತ್ತಡ ಹೇರುವ ತಂತ್ರ, ಕುತಂತ್ರವು ಪಾಕಿಸ್ತಾನಕ್ಕೆ ನಡೆಯಲಿಲ್ಲ. ಏಷ್ಯಾಕಪ್ಗೆ ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸಿದ ಕಾರಣ, ಇದೇ ತಂತ್ರ ಉಪಯೋಗಿಸಿ ಏಕದಿನ ವಿಶ್ವಕಪ್ಗೆ ಹೋಗದ ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ, ಪಾಕಿಸ್ತಾನದ ಮಾತಿಗೆ ಬಿಸಿಸಿಐ, ಐಸಿಸಿ ಸೊಪ್ಪು ಹಾಕಲಿಲ್ಲ. ಕೊನೆಗೂ ತನ್ನ ವರಸೆ ಬದಲಿಸಿದ ಪಾಕಿಸ್ತಾನ, ಭಾರತಕ್ಕೆ ಬರಲು ನಿರ್ಧರಿಸಿದೆ. ಏಷ್ಯಾಕಪ್ ಟೂರ್ನಿ ಆಗಸ್ಟ್ 30ರಿಂದ ಆರಂಭವಾಗಲಿದೆ. ವಿಶ್ವಕಪ್ ಅಕ್ಟೋಬರ್ 5ರಂದು ಆರಂಭವಾಗಲಿದೆ.
2016ರ ಬಳಿಕ ಭಾರತಕ್ಕೆ
ಅಂತಿಮವಾಗಿ ಪಾಕ್ ಸರ್ಕಾರ, ಭಾರತಕ್ಕೆ ಪ್ರಯಾಣಿಸಲು ಅನುಮತಿ ಕೊಟ್ಟಿದೆ. ಆ ಮೂಲಕ 2016ರ ನಂತರ ಪಾಕಿಸ್ತಾನ ತಂಡವು, ಭಾರತ ನೆಲವನ್ನು ಸ್ಪರ್ಶಿಸಲಿದೆ. 2016ರಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ನಡೆದಿತ್ತು. ಸದ್ಯ ಐಸಿಸಿ ಟೂರ್ನಿ, ಏಷ್ಯಾಕಪ್ನಲ್ಲಿ ಮುಖಾಮುಖಿ ಆಗುತ್ತಿರುವ ಉಭಯ ತಂಡಗಳು, ಸುಮಾರು 10 ವರ್ಷಗಳಿಂದ ದ್ವಿಪಕ್ಷೀಯ ಸರಣಿಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಇಂಡೋ-ಪಾಕ್ ನಡುವೆ ಕೊನೆಯದಾಗಿ 2013ರಲ್ಲಿ ದ್ವಿಪಕ್ಷೀಯ ಸರಣಿ ನಡೆದಿತ್ತು.
ಅಕ್ಟೋಬರ್ 14ರಂದು ಪಂದ್ಯ
ಈಗಾಗಲೇ ಪ್ರಕಟಗೊಂಡಿರುವ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 15ರಂದು ಇಂಡೋ-ಪಾಕ್ ಪಂದ್ಯವು ಗುಜರಾತ್ನ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೀಗ ಅಹ್ಮದಾಬಾದ್ನಲ್ಲಿ ನವರಾತ್ರಿ ಪೂಜೆ ನಡೆಯುವ ಕಾರಣ, ಭದ್ರತಾ ಸಮಸ್ಯೆ ಹಿನ್ನೆಲೆ ಅಕ್ಟೋಬರ್ 14ರಂದು ಪಂದ್ಯ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲವಾದರೂ, ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.
ವಿಭಾಗ