Rahul Dravid: ವಿಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯಕ್ಕೂ ಪ್ರಯೋಗ; ರೋಹಿತ್, ಕೊಹ್ಲಿ ಬೆಂಚ್ ಕುರಿತು ಕೋಚ್ ರಾಹುಲ್ ದ್ರಾವಿಡ್ ಹೇಳಿದಿಷ್ಟು
ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಕಣಕ್ಕೆ ಇಳಿಸದಿರುವುದು ಹಾಗೂ ಪಂದ್ಯ ತಂತ್ರಗಾರಿಕೆ ಬಗ್ಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ.
Rahul Dravid: ಬ್ರಿಡ್ಜ್‌ಟೌನ್‌ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡಿಸಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ 40.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಇದಕ್ಕೆ ಪ್ರತಿಯಾಗಿ ವಿಂಡೀಸ್ 36.4 ಓವರ್‌ಗಳಲ್ಲಿ 182 ರನ್ ಗಳಿಸುವ ಮೂಲಕ 6 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಭಾರತ ತಂಡದ ಪರ ವಿಕೆಟ್ ಕೀಪರ್ ಇಶಾನ್ ಕಿಶನ್ (55) ಅರ್ಧ ಶತಕ ಹೊರತು ಪಡಿಸಿ ಉಳಿದ ಯಾವೊಬ್ಬ ಆಟಗಾರರು ತಂಡವನ್ನು ಗೆಲ್ಲಿಸುವಂತಹ ಆಟವಾಡಿಲ್ಲ. ಹೀಗಾಗಿ ಯುವ ಆಟಗಾರರ ವಿರುದ್ಧ ಮಾಜಿ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಪಂದ್ಯದ ನಂತರ ಮಾತನಾಡಿರುವ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ವಿಶ್ವಕಪ್ ಮತ್ತು ಏಷ್ಯಾ ಕಪ್‌ನಿಂದಾಗಿ ಮುಂಬರುವ ಪಂದ್ಯಗಳಲ್ಲಿ ತಂಡದ ಆಯ್ಕೆಯ ವಿಚಾರಕ್ಕೆ ಬಂದಾಗ ಭಾರತವು ಇದೇ ತಂತ್ರಗಾರಿಕೆಯನ್ನು ಅನುಸರಿಸುತ್ತದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ನಾವು ಯಾವಾಗಲೂ ದೊಡ್ಡ ಚಿತ್ರಣವನ್ನು ನೋಡುತ್ತೇವೆ ಎಂದು ನಾನು ಭಾವಿಸುತ್ತೇನೆ. ಏಷ್ಯಾ ಕಪ್, ಆ ನಂತರ ವಿಶ್ವಕಪ್ ನಮ್ಮ ಮುಂದಿರುವ ಸವಾಲುಗಳು. ಮಹತ್ವದ ಟೂರ್ನಿಗಳ ವೇಳೆ ಆಟಗಾರರ ಗಾಯದ ಸಮಸ್ಯೆಗಳು ಎದುರಾಗುತ್ತದೆ. ಅದನ್ನೂ ಗಮನದಲ್ಲಿ ಇಟ್ಟುಕೊಂಡು ಇಂತಹ ಪ್ರಯೋಗ ಮಾಡಿದ್ದೇವೆ. ಟೀಂ ಇಂಡಿಯಾಗೆ ಸ್ಟ್ಯಾಂಡ್ ಇನ್ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಸುಧಾರಿಸಲಿದೆ. ವಿಶ್ವಕಪ್ ವೇಳೆಗೆ ಎಲ್ಲವೂ ಸರಿ ಹೋಗುತ್ತದೆ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಕೆಲವು ಆಟಗಾರರನ್ನು ಪರೀಕ್ಷಿಸಲಾಗುತ್ತಿದೆ. ಸದ್ಯ ವಿಸ್ಟ್ ಇಂಡೀಸ್ ವಿರುದ್ಧದ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಆಗಸ್ಟ್ 1 ರಂದು ನಡೆಯಲಿದೆ. ಈ ಪಂದ್ಯಕ್ಕೆ ನಾಯಕ ರೋಹಿತ್ ಮತ್ತು ವಿರಾಟ್ ಕೊಹ್ಲಿ ಆಡುವ 11ರ ಬಳಗವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ. ಇಲ್ಲವೇ ಈ ಪಂದ್ಯದಲ್ಲೂ ಪ್ರಯೋಗ ಮುಂದುವರಿದರೂ ಅಚ್ಚರಿ ಪಡಬೇಕಾಗಿಲ್ಲ.
ಟ್ರೆನಿಡಾಡ್‌ನಲ್ಲಿ ಆಗಸ್ಟ್ 1 ರಂದು ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಇದಾಗ ಬಳಿಕ ಐದು ಪಂದ್ಯಗಳ ಟಿ20 ಸರಣಿ ಆಗಸ್ಟ್ 3 ರಿಂದ ಆರಂಭವಾಗಲಿದೆ.
-----------------------------------------------------------------------------------
ಸಂಬಂಧಿತ ಲಖನ