MI vs RR: ಐಪಿಎಲ್ನ ಐತಿಹಾಸಿಕ 1000ನೇ ಪಂದ್ಯ; ಟಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಆಯ್ಕೆ; ತಂಡಗಳಿಗೆ ಮರಳಿದ ಬೋಲ್ಟ್, ಆರ್ಚರ್
ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಲಿದೆ. ಹಾಗಾದರೆ ಆಡುವ 11ರ ಬಳಗದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎಂಬುದನ್ನು ನೋಡೋಣ ಬನ್ನಿ.
16ನೇ ಆವೃತ್ತಿಯ ಐಪಿಎಲ್ (IPL 2023) ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಶ್ರೀಮಂತ ಲೀಗ್ನ 1000ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅದರಂತೆ ಬೌಲಿಂಗ್ ನಡೆಸಲಿರುವ ಮುಂಬೈ ಇಂಡಿಯನ್ಸ್ (Mumbai Indians) ಎದುರಾಳಿಯನ್ನು ಕಟ್ಟಿಹಾಕಲು ಯೋಜನೆ ರೂಪಿಸಿದೆ. ಈ ಮೈಲಿಗಲಿನ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನವು ಸಜ್ಜಾಗಿದೆ.
ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆಯಾಗಿದೆ. ಮುಂಬೈ ತಂಡಕ್ಕೆ ಜೋಫ್ರಾ ಆರ್ಚರ್ ಮತ್ತು ಅರ್ಷದ್ ಖಾನ್ ಸೇರಿದ್ದು, ಜೇಸನ್ ಬೆಹ್ರಂಡಾರ್ಫ್ ಮತ್ತು ಅರ್ಜುನ್ ತೆಂಡೂಲ್ಕರ್ ಜಾಗ ಬಿಟ್ಟುಕೊಟ್ಟಿದ್ದಾರೆ. ಮತ್ತು ರಾಜಸ್ಥಾನ್ ತಂಡಕ್ಕೆ ಟ್ರೆಂಟ್ ಬೋಲ್ಟ್ ವಾಪಾಸ್ ಆಗಿದ್ದಾರೆ. ಆ್ಯಡಂ ಜಂಪಾ ಅವರನ್ನು ಡ್ರಾಪ್ ಮಾಡಲಾಗಿದೆ.
ರೋಹಿತ್ ಜನ್ಮದಿನಕ್ಕೆ ಗೆಲುವಿನ ಉಡುಗೊರೆ?
ಕಳೆದ ವರ್ಷದ ಆವೃತ್ತಿಯಲ್ಲೂ ಕಾಕತಾಳೀಯ ಎಂಬಂತೆ ರೋಹಿತ್ ಶರ್ಮಾ ಅವರ ಹುಟುಹಬ್ಬದ ದಿನದಂದೇ ಮುಂಬೈಗೆ ಎದುರಾಳಿ ರಾಜಸ್ಥಾನವೇ ಆಗಿತ್ತು. 36ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ರೋಹಿತ್ಗೆ ಈ ಬಾರಿಯೂ ರಾಜಸ್ಥಾನ ತಂಡವೇ ಎದುರಾಳಿಯಾಗಿದೆ. ಇದೀಗ ಈ ಮಹತ್ವದ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ಬರ್ತ್ಡೇ ಗಿಫ್ಟ್ ನೀಡಲು ಮುಂಬೈ ತಂಡವು ಯೋಜನೆ ಹಾಕಿಕೊಂಡಿದೆ.
ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ
ಹಾಲಿ ಆವೃತ್ತಿಯಲ್ಲಿ ರಾಜಸ್ಥಾನ್ ಅದ್ಭುತ ಪ್ರದರ್ಶನ ತೋರಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದಿರುವ ಸಂಜು ಪಡೆ, ಅದೇ ಗೆಲುವು ಮುಂದುವರೆಸುವ ವಿಶ್ವಾಸದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದೆ. 2 ಸೋಲು ಕಂಡಿದೆ. ಒಟ್ಟು 10 ಅಂಕ ಪಡೆದಿರುವ ರಾಜಸ್ಥಾನ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತಿರುವ ಮುಂಬೈ ಗೆಲುವಿನ ಹಳಿಗೆ ಮರಳಲು ಕಸರತ್ತು ನಡೆಸುತ್ತಿದೆ. ಆಡಿದ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 4ರಲ್ಲಿ ಸೋತಿರುವ ಮುಂಬೈ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಪಿಚ್ ರಿಪೋರ್ಟ್
ಮುಂಬೈನ ವಾಂಖೆಡೆ ಮೈದಾನವು ಬ್ಯಾಟಿಂಗ್ಗೆ ಹೆಚ್ಚು ಅನುಕೂಲಕರವಾಗಿದೆ. ಬ್ಯಾಟ್ಸ್ಮನ್ಗಳಿಗೆ ಸ್ವರ್ಗವೂ ಆಗಿದೆ. ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 186 ಆಗಿದೆ. ಹಾಗೆಯೇ ಫಾಸ್ಟ್ ಬೌಲರ್ಗಳೂ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಟಾಸ್ ಗೆದ್ದ ತಂಡವು ಚೇಸಿಂಗ್ ಆಯ್ಕೆ ಮಾಡುವ ಸಾಧ್ಯತೆ ಇದೆ. ಪಂದ್ಯ ಮುಂದುವರೆದಂತೆ ಇಬ್ಬನಿ ಕಾಡಲಿದೆ.
ಉಭಯ ತಂಡಗಳ ಮುಖಾಮುಖಿ
ಮುಂಬೈ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಒಟ್ಟು 27 ಬಾರಿ ಪರಸ್ಪರ ಎದುರಾಗಿವೆ. ಅದರಲ್ಲಿ ಅಂಬಾನಿ ಬ್ರಿಗೇಡ್, ಹೆಚ್ಚು ಬಾರಿ ಜಯ ಸಾಧಿಸಿದೆ. ರೋಹಿತ್ ಪಡೆ 14 ಬಾರಿ ಗೆದ್ದಿದ್ದರೆ, 12 ಸಲ ರಾಜಸ್ಥಾನ್ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ.
ಮುಂಬೈ ಇಂಡಿಯನ್ಸ್ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ರಿಲೆ ಮೆರೆಡಿತ್, ಅರ್ಷದ್ ಖಾನ್
ರಾಜಸ್ಥಾನ್ ರಾಯಲ್ಸ್ ತಂಡ
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಲ್