ಕನ್ನಡ ಸುದ್ದಿ  /  Sports  /  Cricket News Suresh Raina Started A Restaurant In The Netherlands All Indian Cricketers Are Running This Business Prs

Suresh Raina: ನೆದರ್ಲೆಂಡ್​ನಲ್ಲಿ ರೆಸ್ಟೊರೆಂಟ್ ಆರಂಭಿಸಿದ ಸುರೇಶ್ ರೈನಾ; ಶೀಘ್ರದಲ್ಲೇ ರೆಸ್ಟೋರೆಂಟ್​ಗೆ ಭೇಟಿ ಮಾಡ್ತೇನೆಂದ ಕೊಹ್ಲಿ

ನೆದರ್ಲೆಂಡ್​ನಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಅವರು, ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದಾರೆ. ಇಲ್ಲಿ ಯಾವ ಶೈಲಿಯ ಆಹಾರ ಸಿಗಲಿದೆ ಎಂಬುದರ ಕುರಿತು ರೈನಾ ಹಂಚಿಕೊಂಡಿದ್ದಾರೆ.

ನೆದರ್ಲೆಂಡ್​ನಲ್ಲಿ ರೆಸ್ಟೊರೆಂಟ್ ಆರಂಭಿಸಿದ ಸುರೇಶ್ ರೈನಾ
ನೆದರ್ಲೆಂಡ್​ನಲ್ಲಿ ರೆಸ್ಟೊರೆಂಟ್ ಆರಂಭಿಸಿದ ಸುರೇಶ್ ರೈನಾ

ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ರೆಸ್ಟೋರೆಂಟ್ (Suresh Raina started a Restaurant)​ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಅದ್ಭುತ ಆಟ ಮತ್ತು ಫೀಲ್ಡಿಂಗ್​ ಮೂಲಕ ಎಲ್ಲರ ಮನ ಗೆದ್ದಿದ್ದ ರೈನಾ ಇದೀಗ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅಡುಗೆ ಮಾಡುತ್ತಿದ್ದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ರೈನಾ, ದೂರದ ದೇಶ ನೆದರ್ಲೆಂಡ್​ನ ರಾಜಧಾನಿ ಆಮ್‌ಸ್ಟರ್‌ಡಮ್‌ನಲ್ಲಿ ಹೊಸ ರೆಸ್ಟೋರೆಂಟನ್ನೇ ಪ್ರಾರಂಭಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ದೂರ ಸರಿದಿರುವ ಎಡಗೈ ಆಟಗಾರ, ಈ ಖುಷಿಯ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್​ಗೆ 'ರೈನಾ ಇಂಡಿಯನ್ ರೆಸ್ಟೋರೆಂಟ್' ಎಂದು ಹೆಸರಿಡಲಾಗಿದೆ.

ಸುರೇಶ್​ ರೈನಾ ಪೋಸ್ಟ್​

ರೆಸ್ಟೋರೆಂಟ್​​ ಪ್ರಾರಂಭಿಸಿರುವ ಖುಷಿಯ ವಿಚಾರವನ್ನು ರೈನಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆಮ್‌ಸ್ಟರ್‌ಡಮ್‌ನಲ್ಲಿ 'ರೈನಾ ಇಂಡಿಯನ್ ರೆಸ್ಟೋರೆಂಟ್' ಪ್ರಾರಂಭಿಸಲು ಸಂಪೂರ್ಣ ಭಾವಪರವಶಗೊಂಡಿದ್ದೇನೆ ಮತ್ತು ತುಂಬಾ ಸಂತೋಷವಾಗಿದೆ. ನನಗೆ ಫುಡ್​ ಅಂದರೆ ಯಾವ ರೀತಿ ಇಷ್ಟವೋ ಅಡುಗೆ ಮಾಡುವುದು ಕೂಡ ಅಷ್ಟೇ ಇಷ್ಟ. ತುಂಬಾ ವರ್ಷಗಳಿಂದ ನಾನು ಅಡುಗೆ ಮಾಡುವುದನ್ನು ನೋಡುತ್ತಾ ಬಂದಿದ್ದೀರಾ. ಈಗ ನನ್ನ ಅಭಿರುಚಿಗೆ ತಕ್ಕಂತೆ ರೆಸ್ಟೋರೆಂಟ್ ಪ್ರಾರಂಭಿಸಿದ್ದೇನೆ ಎಂದು ಟ್ವೀಟ್​​ನಲ್ಲಿ ಹೇಳಿದ್ದಾರೆ.

ನನಗೆ ರುಚಿಕರ ಭೋಜನವೆಂದರೆ ಎಷ್ಟು ಇಷ್ಟ ಎಂಬುದು ನಿಮ್ಮೆಲ್ಲರಿಗೂ ಗೊತ್ತಿದೆ. ನಾನು ಆಹಾರವನ್ನು ಅಭಿಮಾನಿಸುತ್ತೇನೆ. ಪ್ರೀತಿಸುತ್ತೇನೆ. ಅಡುಗೆಯಲ್ಲಿ ನನ್ನ ವಿಚಿತ್ರ ಮತ್ತು ವಿಚಿತ್ರ ಪ್ರಯೋಗಗಳನ್ನು ಅನೇಕ ಜನರು ನೋಡಿದ್ದಾರೆ. ಅವೆಲ್ಲದರ ಜೊತೆಗೆ ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಉತ್ತರ ಭಾರತದ ಅತ್ಯಂತ ಜನಪ್ರಿಯ ರುಚಿಕರ ಆಹಾರವನ್ನು ನೇರವಾಗಿ ಯುರೋಪಿನ ಹೃದಯ ಭಾಗಕ್ಕೆ ತರುವ ಗುರಿ ಹೊಂದಿದ್ದೇವೆ. ನೈಜ ರುಚಿ ಒಳಗೊಂಡಿರುವ ಆಹಾರ ಸವಿಯಲು ಸಿಗಲಿದೆ ಎಂದಿದ್ದಾರೆ.

ಶುಭ ಕೋರಿದ ವಿರಾಟ್​ ಮತ್ತು ಹರ್ಭಜನ್

ರೈನಾ ರೆಸ್ಟೋರೆಂಟ್ ಆರಂಭಿಸಿದ ಸುದ್ದಿ ತಿಳಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಒಳಗಿನ ಆಹಾರ ಪ್ರೇಮಿಯನ್ನು ಬಡಿದೆಬ್ಬಿಸಿದೆ. ರೈನಾಗೆ ಕೊಹ್ಲಿ ಶುಭ ಕೋರಿದ್ದು, ಮುಂದಿನ ಬಾರಿ ನಗರಕ್ಕೆ ಭೇಟಿ ನೀಡಿದಾಗ ರೆಸ್ಟೋರೆಂಟ್​ಗೆ ಬರುವುದಾಗಿ ಭರವಸೆ ನೀಡಿದ್ದಾರೆ. ಇನ್​ಸ್ಟಾ ಸ್ಟೋರಿಯಲ್ಲಿ ಪೋಸ್ಟ್​ ಮಾಡಿರುವ ಕೊಹ್ಲಿ, ‘ಒಳ್ಳೆಯದಾಗಲಿ ಸಹೋದರ ಸುರೇಶ್ ರೈನಾ. ಅಭಿನಂದನೆಗಳು. ಮುಂದಿನ ಬಾರಿ ಆಮ್‌ಸ್ಟರ್‌ಡಮ್​ಗೆ ಬಂದಾಗ ನಾವು ಖಂಡಿತವಾಗಿಯೂ ಭೇಟಿ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಸುರೇಶ್ ರೈನಾಗೆ ಶುಭ ಕೋರಿದ್ದಾರೆ. ಅಭಿನಂದನೆಗಳು ಸಹೋದರ. ನಾನೂ ಸದ್ಯದಲ್ಲೇ ಊಟ ಮಾಡಲು ಅಲ್ಲಿಗೆ ಬರುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ವಿದೇಶದಲ್ಲಿ ರೆಸ್ಟೋರೆಂಟ್

ವಿದೇಶದಲ್ಲಿ ರೆಸ್ಟೋರೆಂಟ್ ಪ್ರಾರಂಭಿಸಿದ ಜನಪ್ರಿಯ ವ್ಯಕ್ತಿಗಳಲ್ಲಿ ಸುರೇಶ್ ರೈನಾ ಅವರೇ ಮೊದಲೇನಲ್ಲ. ಈ ಹಿಂದೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನ್ಯೂಯಾರ್ಕ್‌ ನಗರದಲ್ಲಿ ಹಾಗೂ ಆಶಾ ಭೋಸ್ಲೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತೀಯ ಶೈಲಿಯ ರೆಸ್ಟೋರೆಂಟ್ ಪ್ರಾರಂಭಿಸಿ ಯಶಸ್ಸು ಕಂಡಿದ್ದಾರೆ.

ಯಾವೆಲ್ಲಾ ಕ್ರಿಕೆಟರ್ಸ್​​​ ಹೊಂದಿದ್ದಾರೆ ರೆಸ್ಟೋರೆಂಟ್​​?

ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ರವೀಂದ್ರ ಜಡೇಜಾ, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಕಪಿಲ್ ದೇವ್ ಅವರಂತಹ ಕ್ರಿಕೆಟಿಗರು ಈಗಾಗಲೇ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ಆದರೆ, ಎಲ್ಲರೂ ಭಾರತದಲ್ಲಿ ಹೋಟೆಲ್ ವ್ಯವಹಾರ ಪ್ರಾರಂಭಿದ್ದಾರೆ. ಆದರೆ ಮಿಸ್ಟರ್ ಐಪಿಎಲ್ ಸುರೇಶ್ ರೈನಾ ನೆದರ್​ಲೆಂಡ್​ನಲ್ಲಿ ತಮ್ಮ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿ ಗಮನ ಸೆಳೆದಿದ್ದಾರೆ.

2020ರ ಆಗಸ್ಟ್ 15ರಂದು ಭಾರತ ತಂಡದ ಮಾಜಿ ನಾಯಕ ಮತ್ತು ಆತ್ಮೀಯ ಸ್ನೇಹಿತ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ದಿನದಂದೇ, ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. 2022ರಲ್ಲಿ ಐಪಿಎಲ್​ಗೂ ವಿದಾಯ ಹೇಳಿದ್ದರು. ನಿವೃತ್ತಿಯ ನಂತರ ಕಾಮೆಂಟೇಟರ್ ಆಗಿರುವ ಸುರೇಶ್ ರೈನಾ, ಈಗ ಉದ್ಯಮ ಜಗತ್ತಿಗೆ ಕಾಲಿಟ್ಟಿದ್ದಾರೆ.