ಕನಸು ನನಸಾದ ಕ್ಷಣ; ಟೆನಿಸ್ ದಿಗ್ಗಜ ರೋಜರ್ ಫೆಡರರ್ ಭೇಟಿಯಾದ ಚಿನ್ನದ ಹುಡುಗ ನೀರಜ್ ಚೋಪ್ರಾ
Neeraj Chopra meet Roger Federer: ರೋಜರ್ ಫೆಡರರ್ ಅವರು ನೀರಜ್ ಚೋಪ್ರಾಗೆ ತಾವು ಸಹಿ ಮಾಡಿದ ಟೆನಿಸ್ ರಾಕೆಟ್ ಅನ್ನು ಉಡುಗೊರೆಯಾಗಿ ನೀಡಿದರು. ಟೆನಿಸ್ ಆಟಗಾರನಿಗೆ ಏಷ್ಯನ್ ಗೇಮ್ಸ್‌ನಲ್ಲಿ ಧರಿಸಿದ್ದ ಭಾರತದ ಜರ್ಸಿಗೆ ಸಹಿ ಮಾಡಿ ನೀರಜ್ ಚೋಪ್ರಾ ಗಿಫ್ಟ್ ಮಾಡಿದರು.
ಕ್ರೀಡಾಲೋಕದ ಇಬ್ಬರು ಮೇರು ಪ್ರತಿಭೆಗಳು ಪರಸ್ಪರ ಭೇಟಿಯಾದಾಗ, ಅಲ್ಲಿ ಮಾತುಕತೆ, ಹೊಗಳಿಗೆ ಹಾಗೂ ಪರಸ್ಪರ ಗೌರವಾದರಗಳು ಇದ್ದಿದ್ದೇ. ಟೆನಿಸ್ ಲೋಕದ ದಿಗ್ಗಜ ಹಾಗೂ ಭಾರತದ ಖ್ಯಾತ ಅಥ್ಲೀಟ್ ಪರಸ್ಪರ ಭೇಟಿಯಾದಾಗಲೂ ಇಂತಹದೇ ಸನ್ನಿವೇಶ ನಡೆಯಿತು. ಟೆನಿಸ್ ತಾರೆ ರೋಜರ್ ಫೆಡರರ್ (Roger Federer) ಮತ್ತು ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra) ಇತ್ತೀಚೆಗೆ ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿ ಮುಖಾಮುಖಿ ಭೇಟಿಯಾದರು.
ಸ್ವಿಟ್ಜರ್ಲೆಂಡ್ ಪ್ರವಾಸೋದ್ಯಮವು 20 ಬಾರಿಯ ಗ್ರ್ಯಾಂಡ್ ಸ್ಲಾಮ್ ವಿಜೇತ ಮತ್ತು ಭಾರತದ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಅವರ ಭೇಟಿಗೆ ವೇದಿಕೆ ಕಲ್ಪಿಸಿತು. ಇಬ್ಬರೂ ಮುಕ್ತವಾಗಿ ಸಂಭಾಷಣೆ ನಡೆಸಲು ಅವಕಾಶ ಒದಗಿಸಿತು. ತಮ್ಮ ತಮ್ಮ ಕ್ರೀಡಾ ಕ್ಷೇತ್ರಗಳಲ್ಲಿ ದೇಶ ಮಾತ್ರವಲ್ಲದೇ ವಿಶ್ವವೇ ಮೆಚ್ಚುವಂಥಾ ಸಾಧನೆ ಮಾಡಿ ತಮ್ಮ ದೇಶಕ್ಕೆ ಹೆಮ್ಮೆ ತಂದ ಆಟಗಾರರನ್ನು ಒಂದೇ ಸ್ಥಳದಲ್ಲಿ ನೋಡುವುದು ಅಭಿಮಾನಿಗಳಿಗೆ ಹೆಮ್ಮೆ.
ಚೋಪ್ರಾ ಬಗ್ಗೆ ನನಗೆ ಹೆಮ್ಮೆ ಇದೆ
“ಧೈರ್ಯ ಮತ್ತು ದೃಢಸಂಕಲ್ಪದೊಂದಿಗೆ ನೀರಜ್ ಚೋಪ್ರಾ ವೈಯಕ್ತಿಕವಾಗಿ ಮತ್ತು ತಮ್ಮ ದೇಶಕ್ಕಾಗಿ ಎಂಥಾ ಸಾಧನೆ ಮಾಡಿದ್ದಾರೆ ಎಂಬುದನ್ನು ನೋಡಿ ನನಗೆ ಅಚ್ಚರಿ ಮತ್ತು ಖುಷಿಯಾಗಿದೆ. ಜ್ಯೂರಿಚ್‌ನಲ್ಲಿ ಅವರನ್ನು ಭೇಟಿಯಾಗಿರುವುದು ನಗಗೆ ತುಂಬಾ ಸಂತೋಷವಾಗಿದೆ” ಎಂದು ಸ್ವಿಟ್ಜರ್ಲೆಂಡ್ ಪ್ರವಾಸೋದ್ಯಮದ ಜಾಗತಿಕ ರಾಯಭಾರಿ ಆಗಿರುವ ಫೆಡರರ್ ಹೇಳಿದ್ದಾರೆ.
ಇದನ್ನೂ ಓದಿ | Padma Shri 2024: ರೋಹನ್ ಬೋಪಣ್ಣ ಸೇರಿ 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿ; ಇಲ್ಲಿದೆ ಪಟ್ಟಿ
ಟೆನಿಸ್ ಮೈದಾನದಲ್ಲಿ ತಮ್ಮ ಪರಾಕ್ರಮಕ್ಕೆ ಹೆಸರುವಾಸಿಯಾಗಿರುವ ಸ್ವಿಸ್ ತಾರೆ ಫೆಡರರ್, ಸ್ವಿಟ್ಜರ್ಲೆಂಡ್ ಪ್ರವಾಸೋದ್ಯಮದ ಸ್ನೇಹಪರ ರಾಯಭಾರಿಯೂ ಆಗಿರುವ ಚೋಪ್ರಾ ಅವರನ್ನು ತಮ್ಮ ತಾಯ್ನಾಡಿಗೆ ಆತ್ಮೀಯವಾಗಿ ಸ್ವಾಗತಿಸಿದರು. 26 ವರ್ಷದ ಯುವ ಭಾರತೀಯನಿಗೆ ಇದು ನಿಜಕ್ಕೂ ಕನಸು ನನಸಾದ ಕ್ಷಣವಾಗಿದೆ.
“ರೋಜರ್ ಫೆಡರರ್ ಅವರನ್ನು ಭೇಟಿಯಾಗುವ ಮೂಲಕ ನನ್ನ ಕನಸು ನನಸಾಗಿದೆ. ಅವರ ಕೌಶಲ್ಯ, ನೈಜ ಕ್ರೀಡಾ ಮನೋಭಾವ ಮತ್ತು ವಿಶ್ವದ ಲಕ್ಷಾಂತರ ಜನರಿಗೆ ಅವರು ನೀಡಿರುವ ಸ್ಫೂರ್ತಿಯನ್ನು ನಾನು ಮೆಚ್ಚಿದ್ದೇನೆ. ಇಂದು, ನನಗೆ ಹೆಚ್ಚು ಸ್ಫೂರ್ತಿ ನೀಡಿದ್ದು ಅವರ ನಮ್ರತೆ. ಸರಳ ನಡೆಯು ಅವರೊಂದಿಗಿನ ಉಪಸ್ಥಿತಿ ವೇಳೆ ಆರಾಮದಾಯಕ ಭಾವನೆ ಕೊಟ್ಟಿತು,” ಎಂದು ಚಿನ್ನದ ಹುಡುಗ ಹೇಳಿಕೊಂಡಿದ್ದಾರೆ.
“ಮೈದಾನದ ಒಳಗೆ ಮತ್ತು ಹೊರಗೆ ನಮ್ಮ ಜೀವನದ ಅನುಭವಗಳ ಬಗ್ಗೆ ಪರಸ್ಪರ ಮಾತನಾಡಿದೆವು” ಎಂದು ಚೋಪ್ರಾ ಹೇಳಿದ್ದಾರೆ.
ಅಮೂಲ್ಯ ಉಡುಗೊರೆ ವಿನಿಮಯ
ಫೆಡರರ್ ಅವರು ನೀರಜ್ ಚೋಪ್ರಾಗೆ ತಾವು ಸಹಿ ಮಾಡಿದ ಟೆನಿಸ್ ರಾಕೆಟ್ ಅನ್ನು ಉಡುಗೊರೆಯಾಗಿ ನೀಡಿದರು. ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರನಿಗೆ ಏಷ್ಯನ್ ಗೇಮ್ಸ್‌ನಲ್ಲಿ ಧರಿಸಿದ್ದ ಭಾರತದ ಜರ್ಸಿಗೆ ಸಹಿ ಮಾಡಿ ಚೋಪ್ರಾ ಗಿಫ್ಟ್ ಮಾಡಿದರು.
ಇದನ್ನೂ ಓದಿ | ಹೇಳಿದ್ದೇ ಬೇರೆ ಉಲ್ಲೇಖಿಸಿದ್ದೇ ಬೇರೆ, ನಾನಿನ್ನೂ ನಿವೃತ್ತಿ ಘೋಷಿಸಿಲ್ಲ; ಬಾಕ್ಸರ್ ಮೇರಿಕೋಮ್ ಸ್ಪಷ್ಟನೆ
2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಚೋಪ್ರಾ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬಂಗಾರದ ಸಾಧನೆಯನ್ನು ಪುನರಾವರ್ತಿಸುವ ಭರವಸೆಯಲ್ಲಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಚಿನ್ನದ ಹುಡುಗ ಇತಿಹಾಸ ಬರೆದಿದ್ದಾರೆ. ಕಳೆದ ವರ್ಷ ಚೀನಾದ ಹ್ಯಾಂಜ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿಯೂ ಚಿನ್ನದ ಪದಕವನ್ನು ಉಳಿಸಿಕೊಂಡಿದ್ದರು.