Year in review 2022: ಕುಸ್ತಿ ಖಲಿಗಳ ದರ್ಬಾರ್, ಲಾನ್ ಬೌಲ್ಸ್ ವನಿತೆಯರ ಕಮಾಲ್; ಇಲ್ಲಿದೆ ವರ್ಷದ ಕ್ರೀಡಾ ಸಾಧಕರ ಡಿಟೇಲ್
ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆ ಅಪಾರ. ಪ್ರತಿವರ್ಷವೂ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ, ಒಂದಷ್ಟು ದಾಖಲೆಗಳು ಕೂಡಾ ನಿರ್ಮಾಣವಾಗುತ್ತಿದೆ. ಈ ವರ್ಷ ಕ್ರೀಡಾ ಕ್ಷೇತ್ರದಲ್ಲಿ ನಡೆದ ಪ್ರಮುಖ ಕ್ರೀಡಾಕೂಟಗಳು ಹಾಗೂ ಪ್ರಮುಖ ಸಾಧಕರ ವಿವರ ಇಲ್ಲಿದೆ.
ಭಾರತದ ಕ್ರೀಡಾ ಪ್ರೇಮಿಗಳಿಗೆ 2022ರ ಪೂರ್ತಿ ಕ್ರೀಡಾಜಾತ್ರೆ ನಡೆದ ಅನುಭವ. ವರ್ಷದುದ್ದಕ್ಕೂ ಒಂದಲ್ಲಾ ಒಂದು ಕ್ರೀಡಾಹಬ್ಬ ನಡೆಯುತ್ತಲೇ ಇತ್ತು. ಹೀಗಾಗಿ ಈ ವರ್ಷ ಕ್ರೀಡೆಯ ವಿಚಾರವಾಗಿ ಸಂಪೂರ್ಣ ಕ್ರಿಯಾಶೀಲ ವರ್ಷ. ಅದಕ್ಕೆ ತಕ್ಕನಾಗಿ ಭಾರತದ ಕ್ರೀಡಾಪಟುಗಳು ದೇಶ ವಿದೇಶಗಳಲ್ಲಿ ಅಮೋಘ ಸಾಧನೆಯನ್ನು ಕೂಡಾ ಮಾಡಿದ್ದಾರೆ. ಐಪಿಎಲ್, ಏಷ್ಯಾಕಪ್ ಕ್ರಿಕೆಟ್ ಮತ್ತು ಟಿ20 ವಿಶ್ವಕಪ್ ಕ್ರೀಡಾಕೂಟದೊಂದಿಗೆ ಕ್ರಿಕೆಟ್ ಪ್ರಮುಖ ಆಕರ್ಷಣೆಯಾಗಿದ್ದರೆ, ಕಾಮನ್‌ವೆಲ್ತ್ ಗೇಮ್ಸ್ ಅಥ್ಲೀಟ್‌ಗಳ ಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ನೀಡಿ ಬಂಗಾರ ಸೇರಿದಂತೆ ಅನೇಕ ಪದಕಗಳನ್ನು ದೇಶಕ್ಕಾಗಿ ಗೆದ್ದುತಂದರು. ಕೆಲವು ಐತಿಹಾಸಿಕ ಘಟನೆಗಳು ನಡೆದವು, ಹಲವು ಕ್ರೀಡಾಪಟುಗಳು ದಾಖಲೆ ಬರೆದರು. ದೇಶದ ಹಾಗೂ ಅಂತಾರಾಷ್ಟ್ರೀಯ ನಾಯಕರ ಮೆಚ್ಚುಗೆಗೆ ನಮ್ಮ ದೇಶದ ಹೆಮ್ಮೆಯ ಅಥ್ಲೀಟ್‌ಗಳು ಪಾತ್ರರಾದರು. ಈ ವರ್ಷದ ದೇಶದ ಕ್ರೀಡಾಪಟುಗಳ ವಿಶೇಷ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಸಣ್ಣ ವರದಿ ಇಲ್ಲಿದೆ.
ನೀರಜ್ ಚೋಪ್ರಾ
ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರದ ಸಾಧನೆ ಮಾಡಿದ ಚಿನ್ನದ ಹುಡುಗ ನೀರಜ್. ಅದಾದ ಬಳಿಕ ಹೊಸ ಹೊಸ ನಿರೀಕ್ಷೆಗಳೊಂದಿಗೆ ಕಣಕ್ಕಿಳಿದು, ಹಲವು ದಾಖಲೆಗಳನ್ನು ಬರೆದಿದ್ದಾರೆ. ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೋ ನುರ್ಮಿ ಗೇಮ್ಸ್‌ನಲ್ಲಿ 89.30 ಮೀಟರ್‌ಗಳಷ್ಟು ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ, ಹೊಸ ರಾಷ್ಟ್ರೀಯ ದಾಖಲೆ ಬರೆದರು. ವೈಯಕ್ತಿಕ ಅತ್ಯುತ್ತಮ ದೂರ 89.83 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದಾಖಲಿಸಿದ್ದ ತಮ್ಮದೇ 87.58 ಮೀಟರ್ ದಾಖಲೆಯನ್ನು ತಾವೇ ಮುರಿದರು.
ಕುರ್ಟಾನೆ ಗೇಮ್ಸ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ನೀರಜ್ 86.69 ಮೀಟರ್ ದೂರ ಎಸೆದು ಈ ಋತುವಿನ ಮೊದಲ ಬಂಗಾರ ಗೆದ್ದರು. ಎರಡು ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಚಿನ್ನದ ಹುಡುಗನನ್ನು ಡೈಮಂಡ್ ಲೀಗ್‌ಗೆ ಸಿದ್ಧಪಡಿಸಲಾಯಿತು. 90 ಮೀಟರ್ ಎಸೆತದ ನಿರೀಕ್ಷೆ ಬಂಗಾರದ ಹುಡುಗನ ಮೇಲಿತ್ತು. ಪಾಣಿಪತ್ ಮೂಲದ 24 ವರ್ಷದ ನೀರಜ್, 89.94 ಮೀಟರ್ ಎಸೆಯುವ ಮೂಲಕ ಗುರಿ ಸಮೀಪ ಬಂದರು. ಆದರೆ, ಅವರ ಪ್ರತಿಸ್ಪರ್ಧಿ ಆಂಡರ್ಸನ್ ಪೀಟರ್ಸ್ 90.31 ಮೀಟರ್ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಟ್ಟರು.
ಜುಲೈನಲ್ಲಿ ಒರೆಗಾನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿಯೂ ನೀರಜ್ ಪೈಪೋಟಿ ಮುಂದುವರೆಯಿತು. ಅಲ್ಲಿ ನೀರಜ್ ಅರ್ಹತಾ ಸುತ್ತಿನಲ್ಲಿ 88.39 ಮೀ ಮತ್ತು ಫೈನಲ್‌ನಲ್ಲಿ 88.13 ಮೀ ಎಸೆದು ಐತಿಹಾಸಿಕ ಬೆಳ್ಳಿ ಪದಕ ಪಡೆದರು. ಆ ಮೂಲಕ ಈ ಸ್ಪರ್ಧೆಯಲ್ಲಿ ಭಾರತದ 19 ವರ್ಷಗಳ ಗೆಲುವಿನ ಬರ ನೀಗಿಸಿದರು. ಇಲ್ಲಿಯೂ, 90.54 ಮೀಟರ್ ದೂರ ಎಸೆಯುವ ಮೂಲಕ ಪೀಟರ್ಸ್ ವಿಶ್ವ ಚಾಂಪಿಯನ್ ಕಿರೀಟವನ್ನು ಪಡೆದರು.
ಕಾಮನ್‌ವೆಲ್ತ್‌ಗೆ ನೀರಜ್ ಗೈರು; ಭಾರತಕ್ಕೆ ನಿರಾಸೆ
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನೀರಜ್ ಮೇಲೆ ಭಾರಿ ನಿರೀಕ್ಷೆಯಿತ್ತು. ಜಾವೆಲಿನ್ ಎಸೆತದಲ್ಲಿ ಇವರು ಚಿನ್ನ ಗೆದ್ದೇ ಗೆಲ್ಲುತ್ತಾರೆ ಎಂದು ಭಾರತೀಯರು ಕಾಯುತ್ತಿದ್ದರು. ಆದರೆ, ಸೊಂಟದ ಗಾಯದ ಕಾರಣ ಚೋಪ್ರಾ ಆಗಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಮಿಸ್ ಮಾಡಿಕೊಂಡರು. ಹೀಗಾಗಿ ನೀರಜ್ ಜತೆಗೆ ಭಾರತೀಯರ ಪದಕದ ಆಸೆಗೂ ನಿರಾಸೆ ಆಗುವಂತಾಯ್ತು.
ಗಾಯದಿಂದ ಕಂಬ್ಯಾಕ್ ಮಾಡಿದ ನೀರಜ್, ಡೈಮಂಡ್ ಲೀಗ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲೂಸಾನ್ನೆಯಲ್ಲಿ ನಡೆದ ಕ್ರೀಡಾಕೀಟದಲ್ಲಿ 89.08 ಮೀ ಎಸೆಯುವ ಮೂಲಕ ಈ ಸಾಧನೆ ಮಾಡಿದರು. ಈ ಗೆಲುವು ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಗ್ರ್ಯಾಂಡ್ ಫೈನಲ್‌ನಲ್ಲಿ ಅವರ ಐತಿಹಾಸಿಕ ಸ್ಥಾನವನ್ನು ದೃಢಪಡಿಸಿತು. ಕ್ರೀಡಾಕೂಟಕ್ಕೆ ಪ್ರಬಲ ಪ್ರತಿಸ್ಪರ್ಧಿ ಪೀಟರ್ಸ್ ಗೈರುಹಾಜರಾಗಿದ್ದರು. ನೀರಜ್ 88.14 ಮೀಟರ್ ಎಸೆದು ಡೈಮಂಡ್ ಲೀಗ್ ಚಾಂಪಿಯನ್ ಆದರು.
ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಗೆದ್ದ 'ಚಿನ್ನ' ಚಾನು
ಟೋಕಿಯೊ ಒಲಿಂಪಿಕ್ ತಾರೆ ಮೀರಾಬಾಯಿ ಚಾನು ಕೂಡ 2022ರಲ್ಲಿ ಕೆಲವು ಪ್ರಮುಖ ಸಾಧನೆಗಳೊಂದಿಗೆ ದೇಶದ ಪ್ರಮುಖ ಅಥ್ಲೀಟ್ ಆಗಿ ಹೊರಹೊಮ್ಮಿದರು.
28 ವರ್ಷ ವಯಸ್ಸಿನ ವೇಟ್‌ಲಿಫ್ಟರ್, ಈ ಋತುವಿನಲ್ಲಿ ಕೇವಲ ಎರಡು ಪ್ರಮುಖ ಈವೆಂಟ್‌ಗಳಲ್ಲಿ ಸ್ಪರ್ಧಿಸಿದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಸ್ಪಷ್ಟ ಉದ್ದೇಶದಿಂದ ಭಾಗವಹಿಸಿದ್ದ ಚಾನು, ಬಂಗಾರ ಗೆಲ್ಲುವ ನೆಚ್ಚಿನ ಆಟಗಾರ್ತಿಯೂ ಆಗಿದ್ದರು. ಟೋಕಿಯೊ ಬೆಳ್ಳಿ ಪದಕ ವಿಜೇತೆ, 201 ಕೆಜಿ(ಸ್ನ್ಯಾಚ್: 88 ಕೆಜಿ + ಕ್ಲೀನ್ ಮತ್ತು ಜರ್ಕ್ 113 ಕೆಜಿ) ಎತ್ತುವ ಮೂಲಕ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ಬರೆದರು. ನಿಸ್ಸಂದೇಹವಾಗಿ ಬಂಗಾರಕ್ಕೆ ಕೊರಳೊಡ್ಡಿದರು. ಚತುರ್ವಾರ್ಷಿಕ ಕ್ರೀಡಾಕೂಟದಲ್ಲಿ ಇದು ಅವರ ಮೂರನೇ ಪದಕ ಮತ್ತು ಎರಡನೇ ಚಿನ್ನವಾಗಿದೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಾನು ಮಾತ್ರವಲ್ಲದೆ ಭಾರತೀಯ ಲಿಫ್ಟರ್‌ಗಳ ಪದಕ ಬೇಟೆಯೇ ನಡೆಯಿತು. ಅಚಿಂತಾ ಶೆಯುಲಿ ಮತ್ತು ಜೆರೆಮಿ ಲಾಲ್ರಿನ್ನುಂಗಾ ಕೂಡಾ ಚಿನ್ನದ ಸಾಧನೆ ಮಾಡಿದರು. ಬಿಂದ್ಯಾರಾಣಿ ದೇವಿ, ಸಂಕೇತ್ ಸರ್ಗರ್ ಮತ್ತು ವಿಕಾಶ್ ಠಾಕೂರ್ ತಮ್ಮ ಹೆಸರಿಗೆ ಬೆಳ್ಳಿ ಪದಕಗಳನ್ನು ಖಚಿತಪಡಿಸಿದರು. ಮತ್ತೂ ನಾಲ್ವರು ವೇಟ್‌ಲಿಫ್ಟರ್‌ಗಳು ಕಂಚಿಗೆ ತೃಪ್ತಿಪಟ್ಟರು.
ಭಾರತೀಯ ಬಾಕ್ಸಿಂಗ್‌ನ ಉದಯೋನ್ಮುಖ ತಾರೆ ನಿಖತ್ ಜರೀನ್
ಮೇರಿ ಕೋಮ್ ನಂತರ ಭಾರತೀಯ ಬಾಕ್ಸಿಂಗ್ ಕ್ಷೇತ್ರದ ಭರವಸೆಯ ಕ್ರೀಡಾಪಟು ನಿಖತ್ ಜರೀನ್. ನಿಜಾಮಾಬಾದ್‌ನ 26 ವರ್ಷದ ಯುವತಿ, ತನ್ನ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕವನ್ನು ಗೆದ್ದು ಭಾರತೀಯರ ಮನಗೆದ್ದಳು. ಆ ಮೂಲಕ ಐದನೇ ಭಾರತೀಯ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು. 2018ರಲ್ಲಿ ಮೇರಿ ಕೋಮ್ ಅವರ ದಿಗ್ವಿಜಯದ ಬಳಿಕ ಭಾರತಕ್ಕೊಲಿದ ಮೊದಲ ಚಾಂಪಿಯನ್ ಪಟ್ಟ ಇದಾಗಿತ್ತು.
ಜರೀನ್ ತನ್ನ ಚೊಚ್ಚಲ ಕಾಮನ್ವೆಲ್ತ್ ಗೇಮ್ಸ್ ಯಶಸ್ಸಿಗಾಗಿ ಬರ್ಮಿಂಗ್‌ಹ್ಯಾಮ್‌ಗೆ ತೆರಳಿದರು. ಇವರ ಮೇಲೆ ಅಪಾರ ನಿರೀಕ್ಷೆಯೂ ಇತ್ತು. ಕೊನೆಗೂ ಆ ನಿರೀಕ್ಷೆ ಹುಸಿಯಾಗಲಿಲ್ಲ. ದೇಶಕ್ಕೆ ಬಂಗಾರ ಗೆದ್ದ ಸಾಧನೆ ಮಾಡಿದರು. ಹೀಗಾಗಿ ಇವರಿಗೆ ಭಾರತೀಯ ಬಾಕ್ಸಿಂಗ್‌ನ ರಾಣಿ ಎಂಬ ಗೌರವ ನೀಡಲಾಯ್ತು.
ನಿತು ಘಂಘಾಸ್ ಕೂಡಾ ಚಿನ್ನವನ್ನು ಗೆದ್ದರು. ಪುರುಷರ ವಿಭಾಗದಲ್ಲಿ, ಅಮಿತ್ ಪಂಗಲ್ ಕೂಡಾ ಚಿನ್ನ ಗೆದ್ದು, 2018ರ ಗೋಲ್ಡ್ ಕೋಸ್ಟ್ ಕ್ರೀಡಾಕೂಟದ ಸೋಲನ್ನು ಮರೆತರು. ಮತ್ತೊಂದೆಡೆ ರೋಹಿತ್ ಟೋಕಾಸ್ ಮತ್ತು ಮೊಹಮ್ಮದ್ ಹುಸಾಮುದ್ದೀನ್ ಕಂಚು ಗೆದ್ದರು.
ಕುಸ್ತಿಯಲ್ಲಿ ಭಾರತಕ್ಕೆ ಸರಿಸಾಟಿ ಯಾರು?
ಭಾರತೀಯ ಕುಸ್ತಿಪಟುಗಳು ಏಷ್ಯನ್ ಚಾಂಪಿಯನ್‌ಶಿಪ್, ಕಾಮನ್‌ವೆಲ್ತ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಸೇರಿದಂತೆ ವಿವಿಧ ಪ್ರಮುಖ ಕ್ರೀಡಾಕೂಟದಲ್ಲಿ ಪಾಲ್ಗೊಂಡರು.
ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ರವಿ ದಹಿಯಾ, 57 ಕೆಜಿ ವಿಭಾಗದಲ್ಲಿ ಭಾರತೀಯರ ಪೈಕಿ ಕೇವಲ ಮೂರು ಬಾರಿ ಏಷ್ಯನ್ ಚಾಂಪಿಯನ್ ಆಗುವುದರೊಂದಿಗೆ ಚಿನ್ನದ ಪದಕವನ್ನು ಗೆದ್ದರು. ಉಳಿದಂತೆ, ಬಜರಂಗ್ ಪುನಿಯಾ (65 ಕೆಜಿ), ದೀಪಕ್ ಪುನಿಯಾ (86 ಕೆಜಿ) ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ವಿಶೇಷವೆಂದರೆ, ಈ ಈವೆಂಟ್‌ನಲ್ಲಿ ಬಜರಂಗ್ ಅವರ ನಾಲ್ಕನೇ ಬೆಳ್ಳಿ ಪದಕವಾಗಿದೆ. ಈ ಹಿಂದೆ ಎರಡು ಬಾರಿ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಮಹಿಳೆಯರ ವಿಭಾಗದಲ್ಲಿ, ಅಂಶು ಮಲಿಕ್ ಚಿನ್ನವನ್ನು ಬಿಟ್ಟುಕೊಟ್ಟರೂ, ಕಠಿಣ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದರು.
ಆಗಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕುಸ್ತಿಪಟುಗಳು ಪದಕ ಬೇಟೆ ಮುಂದುವರೆಸಿದರು. ಅಗ್ರ ಕುಸ್ತಿ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. ನಿರೀಕ್ಷೆಯಂತೆಯೇ, ಭಾರತ ಆರು ಚಿನ್ನ ಸೇರಿದಂತೆ ಎಲ್ಲಾ 12 ವಿಭಾಗಗಳಲ್ಲಿ ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿತು. ಪುರುಷರ ವಿಭಾಗದಲ್ಲಿ ತ್ರಿವಳಿ ಹೀರೋಗಳಾದ ಬಜರಂಗ್, ದೀಪಕ್ ಮತ್ತು ರವಿ ಚಿನ್ನ ಗೆದ್ದರು. ಇವರೊಂದಿಗೆ ನವೀನ್ ಮಲಿಕ್ ಮತ್ತು ಫೋಗತ್ ಕೂಡಾ 53 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದರು. ಮತ್ತೊಂದೆಡೆ, 2016ರ ರಿಯೊ ಒಲಿಂಪಿಕ್ಸ್ ಕಂಚಿನ ಪದಕದ ನಂತರ ಹಲವಾರು ವರ್ಷಗಳ ಹೋರಾಟ ನಡೆಸಿದ ಸಾಕ್ಷಿ ಮಲಿಕ್, 62 ಕೆಜಿ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಡುವುದರೊಂದಿಗೆ ಗೆಲುವಿನ ನಗಾರಿ ಬಾರಿಸಿದರು.
ಲಕ್ಷ್ಯ ಸೇನ್ ಬಂಗಾರದ ಸಾಧನೆ
ಭಾರತೀಯ ಬ್ಯಾಡ್ಮಿಂಟನ್‌ನ ಭವಿಷ್ಯ ಎಂದೇ ಬಿಂಬಿತರಾಗಿರುವ ಲಕ್ಷ್ಯ, ಸಣ್ಣ ವಯಸ್ಸಿನಲ್ಲೂ ಅಮೋಘ ಸಾಧನೆ ಮಾಡಿದ್ದಾರೆ. ತಮಗಿಂತ ದೊಡ್ಡ ವಯಸ್ಸಿನ ಶಟ್ಲರ್‌ಗಳೊಂದಿಗೂ ಉತ್ತಮ ಪೈಪೋಟಿ ನಿಡದ ಲಕ್ಷ್ಯ, ಗೆಲ್ಲುವಲ್ಲಿ ವಿಫಲರಾಗುತ್ತಿದ್ದರು. ಆದರೆ, ಮಾರ್ಚ್‌ನಲ್ಲಿ ನಡೆದ ಇಂಡಿಯನ್ ಓಪನ್‌ನಲ್ಲಿ ಸೇನ್ ತನ್ನ ಮೊದಲ BWF ಪ್ರಶಸ್ತಿ ಗೆದ್ದು ಅಚ್ಚರಿ ಮೂಡಿಸಿದರು. ನಂತರ ಜರ್ಮನ್ ಓಪನ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ವಿಕ್ಟರ್ ಆಕ್ಸೆಲ್‌ಸೆನ್ ಅವರನ್ನು ಸೋಲಿಸಿ ಫೈನಲ್ ತಲುಪಿದರು. 22 ವರ್ಷದ ಶಟ್ಲರ್, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಚಿನ್ನ ಗೆದ್ದು ಮಿಂಚಿದರು. ತರುಣರ ಹುರುಪಿನ ಶರತ್ ಕಮಲ್
ಒಲಿಂಪಿಕ್ ಚಾಂಪಿಯನ್ ಮಾ ಲಾಂಗ್ ವಿರುದ್ಧ ತಮ್ಮ 39ನೇ ವಯಸ್ಸಿನಲ್ಲಿಯೂ ಉತ್ಸಾಹಭರಿತ ಪ್ರದರ್ಶನ ನೀಡಿದ ಅಚಂತ ಶರತ್ ಕಮಲ್, ಟೇಬಲ್ ಟೆನ್ನಿಸ್‌ನಲ್ಲಿ ಚಿನ್ನದ ಬೇಟೆಯಾಡಿದರು. ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಡದಲ್ಲಿ ಮೂರು ಚಿನ್ನ ಮತ್ತು ಒಂದು ಬೆಳ್ಳಿಯೊಂದಿಗೆ ಉನ್ನತ ಮಟ್ಟದ ಟೇಬಲ್ ಟೆನಿಸ್ ಆಡಿದರು. ಪುರುಷರ ಸಿಂಗಲ್ಸ್ ಪ್ರಶಸ್ತಿಗಾಗಿ ಉನ್ನತ ಶ್ರೇಯಾಂಕದ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಸೋಲಿಸಿದ ಶರತ್, ಆಟದ ಹುರುಪನ್ನು ಪ್ರದರ್ಶಿಸಿದರು.
ಭಾರತದ ಟೇಬಲ್ ಟೆನಿಸ್ ರಾಣಿ ಮಣಿಕಾ ಬಾತ್ರಾ
ಏಷ್ಯನ್ ಕಪ್‌ನಲ್ಲಿ ವೈಯಕ್ತಿಕ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ 27 ವರ್ಷದ ಆಟಗಾರ್ತಿ ಪಾತ್ರರಾದರು. ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದತಹ ಬಲಿಷ್ಠ ಟೇಬಲ್ ಟೆನಿಸ್ ಪಟುಗಳು ಪಾಲ್ಗೊಳ್ಳುವ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಮೂಲಕ, ವಿಶೇಷ ಸಾಧನೆ ಮಾಡಿದರು. ವಿಶ್ವ ನಂ. 44 ಶ್ರೇಯಾಂಕದ ಆಟಗಾರ್ತಿಯಾದ ಮಣಿಕಾಗೆ ಈ ಕಂಚಿನ ಪದಕ ಚಿನ್ನಕ್ಕಿಂತ ಹೆಚ್ಚು.
ಕಂಚಿನ ಪದಕ ಗಳಿಸುವ ಹಾದಿಯಲ್ಲಿ ಸಾಗಿದ ಬಾತ್ರಾ, ರೋಚಕ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ನಂ. 23 ಆಟಗಾರ್ತಿ ಚೈನೀಸ್ ತೈಪೆಯ ಚೆನ್ ಸ್ಜು ಯು ಅವರನ್ನು ಸೋಲಿಸಿ ಸೆಮೀಸ್ ತಲುಪಿದರು. ಆ ಮೂಲಕ ನಾಲ್ಕರ ಸುತ್ತು ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆಯಾಗಿ ಹೊರಹೊಮ್ಮಿದರು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ವಿಶ್ವದ ನಂ.6ನೇ ಶ್ರೇಯಾಂಕದ ಜಪಾನ್ ಆಟಗಾರ್ತಿ ಹಿನಾ ಹಯಾಟಾ ಅವರನ್ನು ಎದುರಿಸಿದ ಭಾರತದ ಆಟಗಾರ್ತಿ ಅವರನ್ನು 11-6, 6-11, 11-7, 12-10, 4-11, 11-2 ಸೆಟ್‌ಗಳಿಂದ ಸೋಲಿಸಿದರು.
ಐತಿಹಾಸಿಕ ಥಾಮಸ್ ಕಪ್ ಗೆಲುವು; ಕಾಮನ್‌ವೆಲ್ತ್‌ನಲ್ಲಿ ಚಿನ್ನ
ಒಂದು ದಶಕದ ಕಾಲ ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರವನ್ನು ಆಳಿದವರು ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್. ಈ ನಡುವೆ ಪುರುಷರ ಬ್ಯಾಡ್ಮಿಂಟನ್ ತಂಡವು ಐತಿಹಾಸಿಕ ಥಾಮಸ್ ಕಪ್ ಫೈನಲ್‌ನಲ್ಲಿ 3-0 ಅಂತರದಿಂದ, ಹಲವು ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಸೋಲಿಸುವ ಮೂಲಕ ದಾಖಲೆ ನಿರ್ಮಿಸಿತು. ಸೇನ್, ಕಿಡಂಬಿ ಶ್ರೀಕಾಂತ್, ಹೆಚ್ ಎಸ್ ಪ್ರಣಯ್, ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇದರಲ್ಲಿ ಪಾಲ್ಗೊಂಡಿದ್ದರು.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಿಶ್ರ ತಂಡವು ಬೆಳ್ಳಿ ಗೆದ್ದರೆ, ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಮತ್ತು ಪಿವಿ ಸಿಂಧು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಸಾತ್ವಿಕ್-ಚಿರಾಗ್ ಜೋಡಿಯು ಪುರುಷರ ಡಬಲ್ಸ್‌ನಲ್ಲಿ ಅಗ್ರ ಗೌರವವನ್ನು ಪಡೆದರೆ, ಕಿಡಂಬಿ ಕಂಚಿನ ಪದಕಕ್ಕೆ ತೃಪ್ತರಾದರು.
ಲಾನ್ ಬೌಲ್ಸ್‌ನಲ್ಲಿ ವನಿಯತೆಯರ ಐತಿಹಾಸಿಕ ಸಾಧನೆ
ಲಾನ್ ಬೌಲ್‌ನಲ್ಲಿ ಭಾರತಕ್ಕೆ ಪದಕ ಬರುತ್ತದೆ ಎಂಬ ಊಹೆ ಕೂಡಾ ಭಾರತೀಯರಿಗೆ ಇರಲಿಲ್ಲ. ಇನ್ನೂ ಕೆಲವರಿಗೆ ಇಂತಹದೊಂದು ಕ್ರೀಡೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಇಂತಹ ಕ್ರೀಡೆಯಲ್ಲಿ ಚಿನ್ನದ ಸಾಧನೆ ಮಾಡಿದ ಭಾರತೀಯ ವನಿತೆಯರು ಕಾಮನ್‌ವೆಲ್ತ್ ಕ್ರೀಡೆಯಲ್ಲಿ ಇತಿಹಾಸ ನಿರ್ಮಿಸಿದರು. ಈ ಕ್ರೀಡೆಯಲ್ಲಿ 1930ರಿಂದಲೂ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೇಲ್ಸ್‌ನಂತಹ ದೇಶಗಳು ಪ್ರಾಬಲ್ಯ ಹೊಂದಿವೆ. ಈ ನಡುವೆ ಭಾರತದ ರೂಪಾ ರಾಣಿ ಟಿರ್ಕಿ, ಪಿಂಕಿ, ನಯನ್ಮೋನಿ ಸೈಕಿಯಾ ಮತ್ತು ಲವ್ಲಿ ಚೌಬೆ ಅವರ ನಾಲ್ವರು ವನಿತೆಯರ ತಂಡ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತದ ತ್ರಿವರ್ಣಧ್ವಜ ಹಾರುವಂತೆ ಮಾಡಿದರು.
ಕ್ವಾರ್ಟರ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಹಾಗೂ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ನಿಜಾರ್ಥದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಅನಿರೀಕ್ಷಿತ ಪದಕ. ಹೀಗಾಗಿ ಈ ನಾಲ್ವರು ದಿಟ್ಟೆಯರ ಹೆಸರು ಇತಿಹಾಸ ಪುಸ್ತಕದಲ್ಲಿ ಅಜರಾಮರವಾಗಲಿದೆ. ಭಾರತದ ಲಾನ್ ಬೌಲ್ ಆಟಗಾರ್ತಿಯರ ಐತಿಹಾಸಿಕ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಒಟ್ಟು 61 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಆಸ್ಟ್ರೇಲಿಯಾ ಮೊದಲ ಹಾಗೂ ಅತಿಥೇಯ ಇಂಗ್ಲೆಂಡ್ ಎರಡನೇ ಸ್ಥಾನ ಪಡೆಯಿತು. ವೇಟ್‌ಲಿಫ್ಟಿಂಗ್, ಕುಸ್ತಿ ಮತ್ತು ಬಾಕ್ಸಿಂಗ್‌ನಲ್ಲಿ ಭಾರತವು ಪ್ರಾಬಲ್ಯ ಮೆರೆಯಿತು. ಕುಸ್ತಿಯಲ್ಲಿ 12 ಪದಕಗಳನ್ನು ಗೆಲ್ಲುವ ಮೂಲಕ, ಭಾರತದ ಪಾಲಿಗೆ 2022ರಲ್ಲಿ ಕುಸ್ತಿ ಅತ್ಯಂತ ಯಶಸ್ವಿ ಕ್ರೀಡೆಯಾಗಿದೆ.
ಇವು ಈ ವರ್ಷದ ಕೆಲ ಪ್ರಮುಖ ವಿದ್ಯಮಾನಗಳ ಪಟ್ಟಿ. ಭಾರತದ ಪಾಲಿಗೆ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಕೆಲ ಕ್ರೀಡಾಕೂಟಗಳು ಹಾಗೂ ಸಾಧಕರು ಹೊರಹೊಮ್ಮಿದ್ದಾರೆ. ಇಲ್ಲಿ ಆಯ್ದ ಕೆಲ ಅಂಶಗಳನ್ನು, ಮಾತ್ರನೀಡಲಾಗಿದೆ.