ಕನ್ನಡ ಸುದ್ದಿ  /  Sports  /  Next Season We Will Make You Stand Tall And Proud Bengaluru Bulls Ceo Kirthi Muralikrishnan Speaks Of Hope Pkl 2024 Prs

ಮುಂದಿನ ಸಲ ನಿಮ್ಮನ್ನು ತಲೆ ಎತ್ತಿ ಹೆಮ್ಮೆಯಿಂದ ಇರುವಂತೆ ಮಾಡುತ್ತೇವೆ; ಬೆಂಗಳೂರು ಬುಲ್ಸ್ ಸಿಇಒ ಕೀರ್ತಿ ಭರವಸೆಯ ಮಾತು

Bengaluru Bulls : ಪ್ರೊ ಕಬಡ್ಡಿ ಲೀಗ್​​​ ಪ್ಲೇ ಆಫ್​ಗೆ ಪ್ರವೇಶಿಸಿದ ಹಿನ್ನೆಲೆ ಅಭಿಮಾನಿಗಳಿಗಾಗಿ ಬೆಂಗಳೂರು ಬುಲ್ಸ್​ ಸಿಇಒ ಕೀರ್ತಿ ಮುರಳೀಕೃಷ್ಣನ್ ಅವರು ಭರವಸೆಯ ಸಂದೇಶ ರವಾನಿಸಿದ್ದಾರೆ.

ಬೆಂಗಳೂರು ಬುಲ್ಸ್ ಸಿಇಒ ಕೀರ್ತಿ ಭರವಸೆಯ ಮಾತು
ಬೆಂಗಳೂರು ಬುಲ್ಸ್ ಸಿಇಒ ಕೀರ್ತಿ ಭರವಸೆಯ ಮಾತು

ಪ್ರೊ ಕಬಡ್ಡಿ ಲೀಗ್-10 (PKL 2024)​ ಮುಕ್ತಾಯದ ಹಂತಕ್ಕೆ ತಲುಪಿದೆ. ಮೂರು ತಿಂಗಳ ನಾನ್​​ಸ್ಟಾಪ್​ ಮನರಂಜನೆಗೆ ಮಾರ್ಚ್​ 1ಕ್ಕೆ ತೆರೆ ಬೀಳಲಿದೆ. ಪ್ಲೇ ಆಫ್​ಗೆ ಆರು ತಂಡಗಳು ಪ್ರವೇಶಿಸಿದ್ದು ಟ್ರೋಫಿಗಾಗಿ ಕಾದಾಟ ನಡೆಸಲಿವೆ. ಸದ್ಯ ಎರಡು ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶ ಮಾಡಿವೆ. ಉಳಿದ 4 ತಂಡಗಳು ಎಲಿಮಿನೇಟರ್​ ಪಂದ್ಯದ ಮೂಲಕ ಸೆಮೀಸ್​ಗೆ ಅರ್ಹತೆ ಪಡೆಯಲಿವೆ. ಆದರೆ ಬೆಂಗಳೂರು ಬುಲ್ಸ್​ ತಂಡ (Bengaluru bulls) ಪ್ಲೇ ಆಫ್​ಗೆ ಕ್ವಾಲಿಫೈ ಆಗದೆ ಇರುವುದು ಕನ್ನಡಿಗರನ್ನು ಹೆಚ್ಚು ಕಾಡುವಂತೆ ಮಾಡಿದೆ.

ಫೆಬ್ರವರಿ 21ರಂದು ನಡೆದ ಲೀಗ್​ನ ಹಾಗೂ ತನ್ನ ಕೊನೆ ಪಂದ್ಯದಲ್ಲಿ ಗೆದ್ದು ಬೀಗಿದ ಬೆಂಗಳೂರು ಬುಲ್ಸ್​​ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಭಿಮಾನಿಗಳು ಇಟ್ಟುಕೊಂಡಿದ್ದ ನಿರೀಕ್ಷೆ ಮಣ್ಣು ಪಾಲಾಯಿತು. ಘಟಾನುಘಟಿ ಆಟಗಾರರೇ ಇದ್ದರೂ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಇದು ಬೆಂಗಳೂರು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತು. ಸದ್ಯ ಬುಲ್ಸ್ ತಂಡದ ಸಿಇಒ ಕೀರ್ತಿ ಮುರಳೀಕೃಷ್ಣನ್ ಅವರು ಫ್ಯಾನ್ಸ್​ಗೆ ಧನ್ಯವಾದ ತಿಳಿಸಿದ್ದು, ಮುಂದಿನ ಸಲ ಕಂಬ್ಯಾಕ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳಿಗೆ ನಾವು ಎಂದೆಂದಿಗು ಚಿರಋಣಿ ಎಂದ ಸಿಇಒ

ಕೀರ್ತಿ ಮುರಳೀಕೃಷ್ಣನ್ ಅವರು ಧನ್ಯವಾದ ಸಲ್ಲಿಸಿರುವ ಪೋಸ್ಟ್​ ಅನ್ನು ಬೆಂಗಳೂರು ಬುಲ್ಸ್ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ‘ನಮ್ಮ ಅಭಿಮಾನಿಗಳಿಗೆ ನಾವು ಎಂದೆಂದಿಗೂ ಚಿರಋಣಿ. ಈ ಸೀಸನ್ ನಮಗೆ ಅಂದುಕೊಂಡ ಫಲಿತಾಂಶ ದೊರಕದಿದ್ದರೂ ನಮ್ಮ ದೃಢ ವಿಶ್ವಾಸ ಅಚಲ. ಮುಂದಿನ ಸೀಸನ್ ಇನ್ನೂ ಬಲಿಷ್ಠವಾಗಿ ಮರಳುತ್ತೇವೆ. ನಿಮ್ಮನ್ನು ತಲೆ ಎತ್ತಿ ಹೆಮ್ಮೆಯಿಂದ ಇರುವಂತೆ ಮಾಡುತ್ತೇವೆ. ಮೇಲು-ಬೀಳುಗಳ ನಡುವೆಯ ಈ ನಿಮ್ಮ ಬೆಂಬಲಕ್ಕಿಂತ ಮಿಗಿಲಾದು ನಮಗೇನಿಲ್ಲ. ನಮ್ಮ ಬುಲ್ಸ್​ ಸೇನೆಗಾಗಿ ನಾವು ಮತ್ತೆ ಬಂದು ಹೋರಾಡುತ್ತೇವೆ ಎಂದು ಕೀರ್ತಿ, ಅಭಿಮಾನಿಗಳಿಗೆ ಭರವಸೆ ಕೊಟ್ಟಿದ್ದಾರೆ.

ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿ

ಬೆಂಗಳೂರು ಬುಲ್ಸ್ ಟೂರ್ನಿ ಆರಂಭಕ್ಕೂ ಮುನ್ನವೇ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಲೀಗ್​ ಆರಂಭದಲ್ಲೇ ಸತತ ಸೋಲುಗಳಿಂದ ಅಭಿಮಾನಿಗಳನ್ನು ನಿರಾಸೆಗೊಳಿಸಿತು. ಒಂದು ಹಂತದಲ್ಲಿ ಸತತ ಗೆಲುವು ದಾಖಲಿಸಿ ಪ್ಲೇ ಆಫ್​ ಪ್ರವೇಶಿಸುವ ಭರವಸೆ ಮೂಡಿಸಿತ್ತು. ಆದರೆ, ಮತ್ತೆ ಸೋಲಿನ ಹಳಿಗೆ ಮರಳಿ ಪ್ಲೇ ಆಫ್​ರೇಸ್​ನಿಂದ ಹೊರ ಬಿತ್ತು. ಲೀಗ್​ನ ಕೊನೆಯ ಪಂದ್ಯದಲ್ಲಿ ಜಯದ ನಗೆ ಬೀರಿದ ಬೆಂಗಳೂರು ಒಟ್ಟಾರೆ 22 ಪಂದ್ಯಗಳಲ್ಲಿ 8 ಗೆಲುವು, 12 ಸೋಲು, 2 ಟೈ ಆಯಿತು. ಒಟ್ಟು 53 ಅಂಕ ಪಡೆದು ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿ ಪಡೆಯಿತು.

ಪ್ಲೇ ಆಫ್ ಪ್ರವೇಶಿಸಿರುವ ಟಾಪ್​-6 ತಂಡಗಳು

1. ಪುಣೇರಿ ಪಲ್ಟನ್ - 22 ಪಂದ್ಯ, 17 ಗೆಲುವು, 2 ಸೋಲು, 3 ಟೈ, 96 ಅಂಕ

2. ಜೈಪುರ ಪಿಂಕ್ ಪ್ಯಾಂಥರ್ಸ್ - 22 ಪಂದ್ಯ, 16 ಗೆಲುವು, 3, ಸೋಲು, 3 ಟೈ, 92 ಅಂಕ

3. ದಬಾಂಗ್ ಡೆಲ್ಲಿ - 22 ಪಂದ್ಯ, 13 ಗೆಲುವು, 6 ಸೋಲು, 3 ಟೈ, 79 ಅಂಕ.

4. ಗುಜರಾತ್ ಜೈಂಟ್ಸ್ - 22 ಪಂದ್ಯ, 13 ಗೆಲುವು, 9 ಸೋಲು, 70 ಅಂಕ

5. ಹರಿಯಾಣ ಸ್ಟೀಲರ್ಸ್ - 22 ಪಂದ್ಯ, 13 ಗೆಲುವು, 8 ಸೋಲು, 1 ಟೈ, 70 ಅಂಕ

6. ಪಾಟ್ನಾ ಪೈರೇಟ್ಸ್ - 22 ಪಂದ್ಯ, 11 ಗೆಲುವು, 8 ಗೆಲುವು, 3 ಟೈ, 69 ಅಂಕ.