ಫ್ರೆಂಚ್ ಓಪನ್ 2024: ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ರಾಫೆಲ್ ನಡಾಲ್; 14 ಬಾರಿಯ ಚಾಂಪಿಯನ್ ಮಣಿಸಿದ ಅಲೆಕ್ಸಾಂಡರ್
ಫ್ರೆಂಚ್ ಓಪನ್ 2024ರ ಮೊದಲ ಸುತ್ತಿನಲ್ಲಿಯೇ ಸ್ಪೇನ್ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಸೋತಿದ್ದಾರೆ. ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, 14 ಬಾರಿಯ ಚಾಂಪಿಯನ್ ಆಟಗಾರನನ್ನು ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಅಚ್ಚರಿಯ ಸೋಲು ಕಂಡ ರಾಫೆಲ್ ನಡಾಲ್ (Rafael Nadal), ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮೇ 27ರ ಸೋಮವಾರ ಫಿಲಿಪ್-ಚಾಟ್ರಿಯರ್‌ನಲ್ಲಿ ನಡೆದ ಫ್ರೆಂಚ್ ಓಪನ್ 2024ರ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 4ನೇ ಶ್ರೇಯಾಂಕದ ಆಟಗಾರ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಸ್ಪೇನ್‌ನ ನಡಾಲ್ ಮುಗ್ಗರಿಸಿದ್ದಾರೆ. ದಾಖಲೆಯ 14 ಬಾರಿಯ ಚಾಂಪಿಯನ್ ನಡಾಲ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಅಲೆಕ್ಸಾಂಡರ್ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ. ನಡಾಲ್ ವಿರುದ್ಧದ ಸ್ಮರಣೀಯ ಗೆಲುವಿನೊಂದಿಗೆ, ಫ್ರೆಂಚ್ ಓಪನ್ ಇತಿಹಾಸದಲ್ಲಿ ಚಾಂಪಿಯನ್ ಆಟಗಾರನನ್ನು ಪುರುಷರ ಸಿಂಗಲ್ಸ್‌ನಲ್ಲಿ ಸೋಲಿಸಿದ ವಿಶ್ವದ ಕೇವಲ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಅಲೆಕ್ಸಾಂಡರ್ ಪಾತ್ರರಾಗಿದ್ದಾರೆ.
ರಾಫೆಲ್ ನಡಾಲ್ ವಿರುದ್ಧ ಜ್ವೆರೆವ್ 6-3, 7-6 (5) ಹಾಗೂ 6-3 ನೇರ ಸೆಟ್‌ಗಳಿಂದ ಜಯಭೇರಿ ಬಾರಿಸಿದರು. 14 ಬಾರಿಯ ಫ್ರೆಂಚ್ ಓಪನ್ ಕಿರೀಟ ಗೆದ್ದ ದಿಗ್ಗಜ ಆಟಗಾರ ಅಚ್ಚರಿಯ ಸೋಲು ಕಂಡು ಟೂರ್ನಿಯಿಂದ ಹೊರನಡೆದಿದ್ದಾರೆ. ಇದು ಹಿರಿಯ ಆಟಗಾರನ ಕೊನೆಯ ಪಂದ್ಯ ಎಂದು ಹೇಳಲಾಗುತ್ತಿದೆ.
ತಮ್ಮ ಫೇವರೆಟ್ ಟೆನಿಸ್ ಟೂರ್ನಿಯಲ್ಲಿ ನಡಾಲ್ ಸೋಲು ಅಭಿಮಾನಿಗಳಿಗೂ ಅಚ್ಚರಿ ಮೂಡಿಸಿದೆ. ಸುದೀರ್ಘ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಮಣ್ಣಿನ ಕೋರ್ಟ್ ಪಂದ್ಯದಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಇದೇ ವೇಳೆ ಫ್ರೆಂಚ್ ಓಪನ್‌ನಲ್ಲಿ ನಾಲ್ಕನೇ ಸುತ್ತಿಗಿಂತ ಮುಂಚಿತವಾಗಿ ಪಂದ್ಯ ಸೋತಿರುವುದು ಇದೇ ಮೊದಲು. ಆದರೂ ಕ್ಲೇ-ಕೋರ್ಟ್ ಗ್ರ್ಯಾನ್ ಸ್ಲಾಮ್ ಪಂದ್ಯಾವಳಿಯಲ್ಲಿ ಅವರ ವೃತ್ತಿಜೀವನದ ಗೆಲುವಿನ ದಾಖಲೆಯು 112-4 ಆಗಿದೆ. ಕೇವಲ ನಾಲ್ಕು ಪಂದ್ಯಗಳಲ್ಲಿ ಸೋಲಿನೊಂದಿಗೆ ನಡಾಲ್ ಪಾರುಪತ್ಯ ಹೇಗಿದೆ ಎಂಬುದು ಅರ್ಥವಾಗುತ್ತಿದೆ.
ಇದನ್ನೂ ಓದಿ | IPL 2024: ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಆಟಗಾರರು; ಅಗ್ರಪಂಕ್ತಿಯಲ್ಲಿ ಎಸ್‌ಆರ್‌ಎಚ್-ಆರ್‌ಸಿಬಿ ದಾಂಡಿಗರು
ಫಿಲಿಪ್ ಚಾಟ್ರಿಯರ್‌ನಲ್ಲಿ ನಡೆದ ಪಂದ್ಯದಲ್ಲಿ ನಡಾಲ್ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸುಮಾರು 15,000 ಪ್ರೇಕ್ಷಕರು ಸೇರಿದ್ದ ಕ್ರೀಡಾಂಗಣದಲ್ಲಿ ನಡಾಲ್ ಪರ ಜೋರಾಗಿ ಹರ್ಷೋದ್ಘಾರಗಳು ಪ್ರತಿಧ್ವನಿಸಿದವು. ಸೋಲಿನ ಬಳಿಕ ಕೋರ್ಟ್‌ನಿಂದ ಹೊರನಡೆಯುತ್ತಿದ್ದಾಗ, ನಡಾಲ್ ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ಸಲ್ಲಿಸಿದರು.
ನನಗೆ 100 ಪ್ರತಿಶತ ಖಚಿತವಿಲ್ಲ
ಇದೇ ಕೊನೆಯ ಬಾರಿ ನಾನು ಆಡುತ್ತಿದ್ದೇನೆ ಎಂಬುದು ನನಗೆ 100ರಷ್ಟು ಖಚಿತವಿಲ್ಲ. ಆದರೆ ಆಟವನ್ನು ನಾನು ಆನಂದಿಸಿದೆ. ಇಡೀ ವಾರದ ತಯಾರಿ ವೇಳೆ ಮತ್ತು ಇಂದು ಪ್ರೇಕ್ಷಕರ ಬೆಂಬಲ ಅದ್ಭುತವಾಗಿತ್ತು. ಇಂದಿನ ಭಾವನೆಯನ್ನು ಪದಗಳಲ್ಲಿ ವಿವರಿಸಲು ಕಷ್ಟ. ಆದರೆ ಅಭಿಮಾನಿಗಳ ಪ್ರೀತಿಯನ್ನು ಅನುಭವಿಸುವುದು ತಂಬಾ ವಿಶೇಷ, ಎಂದು ಪಂದ್ಯದ ಬಳಿಕ ನಡಾಲ್ ಮಾತನಾಡಿದ್ದಾರೆ.
ಸೊಂಟ ಮತ್ತು ಕಿಬ್ಬೊಟ್ಟೆಯ ಗಾಯಗಳಿಂದ ಬಳಲುತ್ತಿರುವ ನಡಾಲ್
ಫ್ರೆಂಚ್ ಓಪನ್ ಮೊದಲ ಸುತ್ತಿನಿಂದ ಹೊರಬಿದ್ದ ನಡಾಲ್, 2023ರ ಜನವರಿ ತಿಂಗಳಿಂದಲೂ ಸೊಂಟ ಮತ್ತು ಕಿಬ್ಬೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶ್ವದ ಮಾಜಿ ನಂಬರ್ 1 ಆಟಗಾರ, 2024 ತಮ್ಮ ಕೊನೆಯ ಋತುವಾಗಲಿದೆ ಎಂದು ಹೇಳುವ ಮೂಲಕ ನಿವೃತ್ತಿಯ ಸುಳಿವು ನೀಡಿದ್ದರು. 37ರ ಹರೆಯದ ನಡಾಲ್, ಪ್ಯಾರಿಸ್‌ನಲ್ಲಿ ನಡೆಯುವ ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಮ್ ಟೂರ್ನಿಯನ್ನು ಬರೋಬ್ಬರಿ ಎರಡು ದಶಕಗಳ ಕಾಲ ಆಳಿದ್ದರು. 22 ಬಾರಿ ಪ್ರಮುಖ ಪಂದ್ಯಾವಳಿಯ ಚಾಂಪಿಯನ್ ಪಟ್ಟ ಅಲಂಕರಿಸಿರುವ ಅವರು, ಕೊನೆಯ ಬಾರಿಗೆ 2022ರಲ್ಲಿ ಫ್ರೆಂಚ್ ಓಪನ್ ಗೆದ್ದಿದ್ದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)