ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್ ಮೇಲೆ ಐಪಿಎಲ್‌ ಪ್ರಭಾವಗಳೇನು; 2 ತಿಂಗಳ ಅಭ್ಯಾಸ ಆಟಗಾರರ ಕೈಹಿಡಿಯುತ್ತಾ?

ಟಿ20 ವಿಶ್ವಕಪ್ ಮೇಲೆ ಐಪಿಎಲ್‌ ಪ್ರಭಾವಗಳೇನು; 2 ತಿಂಗಳ ಅಭ್ಯಾಸ ಆಟಗಾರರ ಕೈಹಿಡಿಯುತ್ತಾ?

ಭಾರತೀಯ ಕ್ರಿಕೆಟ್‌ ತಂಡದ ಮೊದಲ ಬ್ಯಾಚ್‌ ಅಮೆರಿಕ ತಲುಪಿದೆ. ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಲು ರೋಹಿತ್‌ ಶರ್ಮಾ ಬಳಗ ಸಜ್ಜಾಗಿದ್ದು, ದಶಕಗಳ ಐಸಿಸಿ ಟ್ರೋಫಿ ಬರ ನೀಗಿಸಲು ಸಜ್ಜಾಗಿದೆ. 2 ತಿಂಗಳ ಕಾಲ ಐಪಿಎಲ್‌ನಲ್ಲಿ ಆಡಿದ ಆಟಗಾರರು ಸೂಕ್ತ ಅಭ್ಯಾಸ ನಡೆಸಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಟಿ20 ವಿಶ್ವಕಪ್ ಮೇಲೆ ಐಪಿಎಲ್‌ ಪ್ರಭಾವಗಳೇನು
ಟಿ20 ವಿಶ್ವಕಪ್ ಮೇಲೆ ಐಪಿಎಲ್‌ ಪ್ರಭಾವಗಳೇನು

ಐಪಿಎಲ್‌ನ 17ನೇ ಆವೃತ್ತಿಗೆ ಅದ್ಧೂರಿ ತೆರೆ ಬಿದ್ದಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಋತುವಿನ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (KKR vs SRH) ಗೆಲುವಿನೊಂದಿಗೆ, ಟೂರ್ನಿ ಮುಕ್ತಾಯಗೊಂಡಿದೆ. ಇದೀಗ ಕ್ರಿಕೆಟ್‌ ಅಭಿಮಾನಿಗಳ ಚಿತ್ತವು ಐಸಿಸಿ ಟಿ20 ವಿಶ್ವಕಪ್‌ನತ್ತ ಹರಿದಿದೆ. ಚುಟುಕು ಸಮರದಲ್ಲಿ ಆಡಲು ಈಗಾಗಲೇ ಭಾರತ ತಂಡ ಅಮೆರಿಕಕ್ಕೆ ಹಾರಿದೆ. ಹೊಸ ವಾತಾವರಣದಲ್ಲಿ ಆಡಿ ದೇಶಕ್ಕೆ ವಿಶ್ವಕಪ್‌ ಗೆಲ್ಲುವ ಸವಾಲು ರೋಹಿತ್‌ ಶರ್ಮಾ ಬಳಗದ ಮೇಲಿದೆ.

ಟ್ರೆಂಡಿಂಗ್​ ಸುದ್ದಿ

ಕೆಲವೇ ದಿನಗಳ ಹಿಂದಷ್ಟೇ ಐಪಿಎಲ್‌ನಲ್ಲಿ ಆಡಿರುವ ಆಟಗಾರರು, ವಿಶ್ವಕಪ್‌ ಮೂಡ್‌ಗೆ ಬದಲಾಗಿದ್ದಾರೆ. ವಿಶ್ವಕಪ್‌ ಟೂರ್ನಿಗೂ ಐಪಿಎಲ್‌ಗೂ ಹೆಚ್ಚೇನೂ ವ್ಯತ್ಯಾಸವಿಲ್ಲದಿದ್ದರೂ, ಮಿಲಿಯನ್‌ ಡಾಲರ್‌ ಟೂರ್ನಿಗಿಂತ ಐಸಿಸಿ ಪಂದ್ಯಾವಳಿ ಸಂಪೂರ್ಣ ಭಿನ್ನವಾಗಿದೆ. ಇವೆರಡೂ ಟಿ20 ಸ್ವರೂಪದ ಪಂದ್ಯಾವಳಿಯಾದರೂ, ನಿಯಮಗಳಲ್ಲಿ ಕೆಲವೊಂದು ವ್ಯತ್ಯಾಸವಿದೆ. ಐಪಿಎಲ್‌ಗೆ ಬಿಸಿಸಿಐ ಅಂತಿಮ ನಿಯಮಗಳನ್ನು ರೂಪಿಸಿದರೆ, ವಿಶ್ವಕಪ್‌ ಅಂತಾರಾಷ್ಟ್ರೀಯ ಪಂದ್ಯಾವಳಿಯಾಗಿದ್ದು ಐಸಿಸಿ ನಿಯಮಗಳು ಅನ್ವಯವಾಗುತ್ತವೆ. ಹಾಗಿದ್ದರೆ, ಐಪಿಎಲ್‌ಗಿಂತ ಟಿ20 ವಿಶ್ವಕಪ್‌ ಹೇಗೆ ಭಿನ್ನ? ಐಪಿಎಲ್‌ ಆಡಿದ ಅನುಭವ ಆಟಗಾರರಿಗೆ ಕೈ ಹಿಡಿಯುತ್ತಾ? ಈ ಕುರಿತು ತಿಳಿಯೋಣ.

ಐಪಿಎಲ್ ಮತ್ತು ಐಸಿಸಿ ಟಿ20 ವಿಶ್ವಕಪ್‌ ನಡುವಿನ ನಿಯಮಗಳಲ್ಲಿನ ವ್ಯತ್ಯಾಸಗಳೇನು?

ಜೂನ್ 2ರಂದು ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಒಂಬತ್ತನೇ ಆವೃತ್ತಿಯ ಪುರುಷರ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಚಾಲನೆ ಸಿಗುತ್ತಿದೆ. ಐಪಿಎಲ್‌ ಆಡಿ ಅಮೆರಿಕ ವಿಮಾನ ಹತ್ತಿರುವ ಆಟಗಾರರು, ಹೊಸ ವಾತಾವರಣದಲ್ಲಿ ಐಸಿಸಿ ಪಂದ್ಯಾವಳಿಗೆ ಸಜ್ಜಾಗುವ ಸವಾಲು ಹೊಂದಿದ್ದಾರೆ.

ಓವರ್‌ಗೆ 2 ಬೌನ್ಸರ್‌ ಇಲ್ಲ

ಐಪಿಎಲ್‌ನಲ್ಲಿ ಇರುವ ಹಾಗೆ, ಟಿ20 ವಿಶ್ವಕಪ್‌ನಲ್ಲಿ ಪ್ರತಿ ಓವರ್‌ಗೆ 2 ಬೌನ್ಸರ್‌ ಎಸೆಯಲು ಅವಕಾಶ ಇಲ್ಲ. ಐಪಿಎಲ್‌ನಲ್ಲಿ ವೇಗದ ಬೌಲರ್‌ಗಳು ಪ್ರತಿ ಓವರ್‌ಗೆ ಒಂದರ ಬದಲಿಗೆ ಎರಡು ಬೌನ್ಸರ್‌ಗಳನ್ನು ಬೌಲ್ ಮಾಡಲು ಅನುಮತಿ ಇದೆ. ಆದರೆ, ಈ ನಿಯಮವು ಅಂತಾರಾಷ್ಟ್ರೀಯ ಕ್ರಿಕೆಟ್ ಅಥವಾ ಟಿ20 ವಿಶ್ವಕಪ್‌ಗೆ ಅನ್ವಯಿಸುವುದಿಲ್ಲ. ವೇಗಿಗಳು ಪ್ರತಿ ಓವರ್‌ನಲ್ಲಿ ಒಂದು ಬೌನ್ಸರ್ ಮಾತ್ರ ಎಸೆಯಬಹುದು. ಆದರೆ, ಈಗಾಗಲೇ ಎರಡು ತಿಂಗಳ ಕಾಲ ಐಪಿಎಲ್‌ ಆಡಿ ಅಭ್ಯಾಸವಾಗಿರುವ ಆಟಗಾರರು ಜಾಗತಿಕ ಟೂರ್ನಿಗೆ ಹೊಂದಿಕೊಳ್ಳಬೇಕಾಗಿದೆ. ಭಾರತದ ಕ್ರಿಕೆಟಿಗರು ಮಾತ್ರವಲ್ಲದೆ ಐಪಿಎಲ್‌ನಲ್ಲಿ ಆಡಿರುವ ಎಲ್ಲಾ ಆಟಗಾರರು ಈ ಸಮಸ್ಯೆ ಎದುರಿಸಲಿದ್ದಾರೆ.

ಇಂಪ್ಯಾಕ್ಸ್‌ ಆಟಗಾರ ನಿಯಮವೂ ಇಲ್ಲ

ಐಪಿಎಲ್‌ ಮತ್ತು ಟಿ20 ವಿಶ್ವಕಪ್ ನಡುವಿನ ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಐಪಿಎಲ್‌ನಲ್ಲಿ ಪ್ರತಿ ತಂಡಗಳು ಪಂದ್ಯದ ನಡುವೆ ಒಬ್ಬ ಬದಲಿ ಆಟಗಾರನಿಗೆ ಆಡುವ ಅವಕಾಶವಿದೆ. ಅದು ಇಂಪ್ಯಾಕ್ಟ್‌ ಸಬ್ಸ್‌ಟಿಟ್ಯೂಷನ್. ಆದರೆ ಈ ನಿಯಮವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಾರಿಯಲ್ಲಿಲ್ಲ. ಐಪಿಎಲ್‌ನಲ್ಲಿ ಅಗತ್ಯಕ್ಕೆ ತಕ್ಕಂತೆ ಒಬ್ಬ ಹೆಚ್ಚುವರಿ ಆಟಗಾರಿನಿಗೆ ಆಡುವ ಅವಕಾಶ ನೀಡಿ ಅಭ್ಯಾಸವಾಗಿರುವ ತಂಡಕ್ಕೆ ಸೀಮಿತ 11 ಆಟಗಾರರೊಂದಿಗೆ ಆಡುವುದು ತುಸು ಕಷ್ಟವಾಗಬಹುದು. ಇದು ಟೂರ್ನಿಯುದ್ದಕ್ಕೂ ಹೆಚ್ಚಿನ ತಂಡಗಳಿಗೆ ಕಷ್ಟವಾಗಲಿದೆ. ಆದರೆ, ತಂಡಗಳಲ್ಲಿರುವ‌ ಎಲ್ಲಾ ಆಲ್‌ರೌಂಡರ್‌ಗಳಿಗೆ ಮಾತ್ರ ಸೂಕ್ತ ಅವಕಾಶ ಸಿಗಲಿದೆ. ಬ್ಯಾಟಿಂಗ್‌ ಜೊತೆಗೆ ಬೌಲಿಂಗ್‌ ಕೂಡಾ ಮಾಡಬಹುದಾಗಿದೆ.

ಅಂಪೈರ್‌ಗಳು ತೀರ್ಮಾನಿಸುವ ವೈಡ್ ಅಥವಾ ನೋಬಾಲ್ ನಿರ್ಧಾರಗಳನ್ನು ಮರುಪರಿಶೀಲಿಸಲು ಡಿಆರ್‌ಎಸ್ (ಡಿಸಿಷನ್ ರಿವ್ಯೂ ಸಿಸ್ಟಮ್) ಕೇಳುವ ಅವಕಾಶ ವಿಶ್ವಕಪ್‌ನಲ್ಲಿ ಇಲ್ಲ. ಇದು ಕೂಡಾ ಚುಟುಕು ವಿಶ್ವಸಮರದಲ್ಲಿ ಆಟಗಾರರ ಮೇಲೆ ಪ್ರಭಾವ ಬೀರಲಿದೆ.

ಆಟಗಾರರ ಕೈಹಿಡಿಯಲಿದೆ ಐಪಿಎಲ್‌ ಅನುಭವ

ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತದ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಆಡಿದ್ದಾರೆ. ಯಾವೊಬ್ಬ ಆಟಗಾರ ಕೂಡಾ ಫೈನಲ್‌ ಪಂದ್ಯದಲ್ಲಿ ಆಡಿಲ್ಲವಾದರೂ. ಕೀಗ್‌ ಹಂತದಲ್ಲಿ ಎಲ್ಲರೂ ಆಡಿದ್ದಾರೆ. ವಿಶ್ವಕಪ್‌ನಲ್ಲಿ ಆಡುತ್ತಿರುವ ವಿವಿಧ ದೇಶಗಳ ಪ್ರಮುಖ ಆಟಗಾರರನ್ನು ಎದುರಿಸಿದ್ದಾರೆ. ವಿದೇಶಗಳ ಹೆಚ್ಚಿನ ಪ್ರಬಲ ಆಟಗಾರರು ಟೂರ್ನಿಯಲ್ಲಿ ಆಡಿ ಜಾಗತಿಕ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಸುದೀರ್ಘ ಅವಧಿಯ ಸಿದ್ಧತೆ ಸಿಕ್ಕಿದೆ. ಈ ಎರಡೂ ಟೂರ್ನಿಗಳು 20 ಓವರ್‌ ಸ್ವರೂಪದ್ದಾಗಿದ್ದು, ಕಾರ್ಯತಂತ್ರಗಳು ಬಹುತೇಕ ಒಂದೇ ಆಗಿರುತ್ತದೆ. ಆಟಗಾರರ ಫಾರ್ಮ್‌, ಪ್ರದರ್ಶನ, ಪವರ್‌ಪ್ಲೇ ಸಾಮರ್ಥ್ಯಗಳು ನಾಯಕನಿಗೆ ಸುಲಭವಾಗಿ ಅರ್ಥವಾಗುತ್ತದೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ ಟೀಮ್‌ ಇಂಡಿಯಾ ನಾಯಕ ಹಾಗೂ ಉಪನಾಯಕರಾದ ರೋಹಿತ್‌ ಶರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯ ಕಳಪೆ ಫಾರ್ಮ್‌ನಲ್ಲಿದ್ದರು. ಇದೀಗ ಇವರಿಬ್ಬರ ಪ್ರದರ್ಶನವು ತಂಡಕ್ಕೆ ಕಾಳಜಿಯಾಗಿದೆ. ಉಳಿದಂತೆ ಜೈಸ್ವಾಲ್‌ ಎರಡನೇ ಹಂತದಲ್ಲಿ ಲಯ ಕಂಡುಕೊಂಡಿದ್ದಾರೆ. ವಿರಾಟ್‌, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್‌ ಯಾದವ್‌ ಉತ್ತಮ ಪ್ರದರ್ಶನ ನೀಡಿದ್ದಾರೆ. ಬೌಲರ್‌ಗಳೆಲ್ಲಾ ಉತ್ತಮ ಲಯದಲ್ಲಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024