Wimbledon: ವಿಂಬಲ್ಡನ್ ಟ್ವೀಟ್ಗೆ ಕನ್ನಡದಲ್ಲೇ ಧನ್ಯವಾದ ಹೇಳಿದ ರೋಹನ್ ಬೋಪಣ್ಣ; ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದ ಕನ್ನಡಿಗರು
Rohan Bopanna: ಭಾರತದ ಸೂಪರ್ ಸ್ಟಾರ್ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದ ವಿಂಬಲ್ಡನ್ ಟ್ವೀಟ್ಗೆ ಭಾರತದ ವೃತ್ತಿಪರ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಕನ್ನಡದಲ್ಲೇ ಪ್ರತಿಕ್ರಿಯಿಸಿ ಗಮನ ಸೆಳೆದಿದ್ದಾರೆ.
ಭಾರತದ ಹಿರಿಯ ಆಟಗಾರ ರೋಹನ್ ಬೋಪಣ್ಣ ಅವರು (Rohan Bopanna) ವಿಂಬಲ್ಡನ್ ಪುರುಷರ ಡಬಲ್ಸ್ ವಿಭಾಗದ 16ನೇ ಸುತ್ತಿನಲ್ಲೂ ಗೆದ್ದು ಕ್ವಾರ್ಟರ್ ಫೈನಲ್ಗೆ ಕಾಲಿಟ್ಟಿದ್ದಾರೆ. ಆದರೆ, 2ನೇ ಸುತ್ತಿನಲ್ಲಿ ಜಯಿಸಿದ ಬಳಿಕ ಈ ಬೆನ್ನಲ್ಲೇ ವಿಂಬಲ್ಡನ್ (Wimbledon) ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ರೋಹನ್ ಬೋಪಣ್ಣರನ್ನು ಭಾರತದ ಸೂಪರ್ ಸ್ಟಾರ್ ಎಂದು ಟ್ವೀಟ್ ಮಾಡುವ ಮೂಲಕ ವಿಶೇಷ ಗೌರವ ಸೂಚಿಸಿತ್ತು. ಇದು ಕನ್ನಡಿಗರ ಮನಗೆದ್ದಿದೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಮ್ಯಥ್ಯೂ ಎಬ್ಡೆನ್ (Matthew Ebden) ಮತ್ತು ಕನ್ನಡಿಗ ರೋಹನ್ ಬೋಪಣ್ಣ ಜೋಡಿ 3ನೇ ಸುತ್ತಿಗೆ ಪ್ರವೇಶಿಸಿದೆ. 2ನೇ ಸುತ್ತಿನ ಹಣಾಹಣಿಯಲ್ಲಿ ಯುನೈಟೆಡ್ ಕಿಂಗ್‌ಡಮ್ ಜೋಡಿಯನ್ನು 7-5, 6-3ರ ನೇರ ಸೆಟ್‌ಗಳ ಅಂತರದಲ್ಲಿ ಮಣಿಸಿತ್ತು. ಈ ಸಂದರ್ಭದಲ್ಲಿ ವಿಂಬಲ್ಡನ್ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬೋಪಣ್ಣರನ್ನು ಕನ್ನಡದಲ್ಲೇ ಹಾಡಿಹೊಗಳಿದೆ. ಈಗಲೂ ಸಹ ಪೋಸ್ಟ್ಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡದಲ್ಲೇ ಪ್ರತಿಕ್ರಿಯಿಸಿದ ಬೋಪಣ್ಣ
ಮತ್ತೊಂದು ವಿಶೇಷ ಅಂದರೆ, ರೋಹನ್ ಬೋಪಣ್ಣ ಅವರು ಟ್ವಿಟರ್ನಲ್ಲಿ ವಿಂಬಲ್ಡನ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಕನ್ನಡಗಿರ ಮನ ಗೆದ್ದಿರುವ ಭಾರತದ ಸೂಪರ್ ಸ್ಟಾರ್ ಎಂಬ ಟ್ವೀಟ್ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೋಹನ್ ಬೋಪಣ್ಣ ಧನ್ಯವಾದ ಎಂದು ಕನ್ನಡದಲ್ಲೇ ಉತ್ತರಿಸಿದ್ದಾರೆ. ಇದು ಕೂಡ ಕನ್ನಡಿಗರ ಗಮನ ಸೆಳೆದಿದೆ. ಜಾಗತಿಕ ಟೂರ್ನಿಯಲ್ಲಿ ಕನ್ನಡ ಬಳಸಿದ್ದಕ್ಕೆ ಕನ್ನಡಿಗರು ಅತೀವ ಸಂತೋಷಕ್ಕೆ ಒಳಗಾಗಿದ್ದಾರೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದ ಕನ್ನಡಿಗರು
ವಿಂಬಲ್ಡನ್ ಮತ್ತು ರೋಹನ್ ಬೋಪಣ್ಣ ಅವರು ಜಾಗತಿಕ ಮಟ್ಟದಲ್ಲಿ ಕನ್ನಡವನ್ನು ಬಳಸುತ್ತಿದ್ದು, ಕನ್ನಡಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ನಮ್ಮ ಕನ್ನಡಿಗ ನಮ್ಮ ಹೆಮ್ಮೆ. ಜಯ ಕರ್ನಾಟಕ ಮಾತೆ ಭುವನೇಶ್ವರಿ ದೇವಿ, ಆಹ್ ಸವಿಗನ್ನಡ, ಓಹ್ ಸವಿಗನ್ನಡ!, ತುಂಬಾ ಮಂದಿ ವಿಂಡಲ್ಡನ್ ಮತ್ತು ಬೋಪಣ್ಣ ಅವರಿಗೆ ಧನ್ಯವಾದ ಹೇಳಿದ್ದಾರೆ. ಕನ್ನಡದ ಟ್ವೀಟ್ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ಕ್ವಾರ್ಟರ್ ಫೈನಲ್
ಜುಲೈ 11ರಂದು ನಡೆದ 16ನೇ ಸುತ್ತಿನಲ್ಲೂ ರೋಹನ್ ಬೋಪಣ್ಣ ಜೋಡಿ ಅಮೋಘ ಗೆಲುವು ದಾಖಲಿಸಿದೆ. ಡಚ್ನ ಡೇವಿಡ್ ಪೆಲ್ ಮತ್ತು ಅಮೆರಿಕಾದ ರೀಸ್ ಸ್ಟಾಲ್ಡರ್ (Griekspoor T & Stevens B) ಜೋಡಿಯ ವಿರುದ್ಧ ಮ್ಯಥ್ಯೂ ಎಬ್ಡೆನ್ ಮತ್ತು ಭಾರತದ ರೋಹನ್ ಬೋಪಣ್ಣ 7-5, 6-4, 7-6ರ ಸೆಟ್‌ಗಳ ಅಂತರದಿಂದ ಸೋಲಿಸಿದೆ. ಆ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಇಂದು ನಡೆಯಲಿರುವ ಕ್ವಾರ್ಟರ್ ಫೈನಲ್ನಲ್ಲಿ ನೆದರ್ಲೆಂಡ್ನ ಬಾರ್ಟ್ ಸ್ಟೀವನ್ಸ್ ಮತ್ತು ಟಿ. ಗ್ರೀಕ್ಸ್ಪೂರ್ ಜೋಡಿಯನ್ನು ಎದುರಿಸಲಿದೆ.
ಬೋಪಣ್ಣ ಹುಟ್ಟಿದ್ದು ಬೆಂಗಳೂರಿನಲ್ಲೇ
ರೋಹನ್ ಬೋಪಣ್ಣ ಒಬ್ಬ ಭಾರತೀಯ ವೃತ್ತಿಪರ ಟೆನಿಸ್ ಆಟಗಾರ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bengaluru) 1980ರ ಮಾರ್ಚ್ 4ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಂಜಿ ಬೋಪಣ್ಣ, ತಾಯಿ ಮಲ್ಲಿಕಾ ಬೋಪಣ್ಣ, ಪತ್ನಿ ಸುಪ್ರೀಯಾ ಅಣ್ಣಯ್ಯ. ಅವರ ಶಿಕ್ಷಣ ವಿವಿ ಪುರಂನ ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) , ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಪದವಿ ಮುಗಿಸಿದರು. 1995ರ ಜೂನಿಯರ್ ಕಪ್ನಿಂದಲೇ ಅವರ ವೃತ್ತಿಜೀವನ ಆರಂಭವಾಗಿದೆ. ಈವರೆಗೂ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.